ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಂದನ ಕಣ್ಣು ಕಾಪಾಡಿ

Last Updated 25 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಸೂರ್ಯನ ಬೆಳಕಿನಲ್ಲಿ ನೇರಳಾತೀತ (ಅಲ್ಟ್ರಾವೈಲಟ್) ಎ ಮತ್ತು ಬಿ ಎಂಬ ಅಪಾಯಕಾರಿ ಕಿರಣಗಳಿರುತ್ತವೆ. ಸೂರ್ಯನ ಬೆಳಕಿನಲ್ಲಿನ ಅಪಾಯಕಾರಿ ಕಿರಣಗಳನ್ನು ಸೋಸಿ ಭೂಮಿಗೆ ರವಾನಿಸುವ ಈ–ಜೋನ್ ಪದರು ಪರಿಸರ ಮಾಲಿನ್ಯದಿಂದಾಗಿ ಈಗ ಹಾಳಾಗುತ್ತಿದೆ. ಹೀಗಾಗಿ ಸೂರ್ಯಕಿರಣದ ನೇರ ಸಂಪರ್ಕ ಹೆಚ್ಚು. ಇವುಗಳಿಗೆ ಯಾವ ರಕ್ಷಣಾತ್ಮಕ ತಡೆಗಳಿಲ್ಲದಿದ್ದರೆ ಈ ಕಿರಣಗಳು ನೇರವಾಗಿ ಎಳೆ ಮಕ್ಕಳ ಕಣ್ಣು ಪ್ರವೇಶಿಸಿ ಕಣ್ಣಿನೊಳಗಿನ ಮಸೂರ (ಲೆನ್ಸ್) ಮತ್ತು ಅಕ್ಷಿಪಟಲಕ್ಕೆ (ರೆಟಿನಾ) ಹಾನಿ ಮಾಡುತ್ತವೆ. ಇದರಿಂದ ಕಣ್ಣು ಪೊರೆ (ಕ್ಯಾಟರಾಕ್ಟ್) ಮತ್ತು ದೃಷ್ಟಿ ದೋಷ ಸಾಧ್ಯ.

*ಸೂರ್ಯನ ಝಳದಿಂದ ಕಣ್ಣಿನ ಕನೀನಿಕೆಗೆ ಗಾಯವಾಗುವ (ಕಾರ್ನಿಯಲ್ ಸನ್ ಬರ್ನ್) ಅಪಾಯವಿದೆ.

*ತಾಪಮಾನ ಏರಿದಾಗ ಪರಿಸರದಲ್ಲಿ ರೋಗಾಣುಗಳ ಸಂಖ್ಯೆಯೂ ಹೆಚ್ಚುತ್ತದೆ.  ಒಣಗಿದ ಎಲೆ, ಹೂ ಮತ್ತು ದೂಳು ಅಧಿಕ. ಇವುಗಳಿಂದಾಗಿ  ಕಣ್ಣಿನಲ್ಲಿ ತುರಿಕೆ, ಉರಿ, ಕಣ್ಣು ಕೆಂಪಗಾಗುವುದು ಸಾಮಾನ್ಯ.

* ಕಣ್ಣಿನ ಸೋಂಕು: ಕಣ್ಣು ಮತ್ತು ರೆಪ್ಪೆ ಊದಿಕೊಂಡು, ಕಣ್ಣಿನಿಂದ ಸತತ ನೀರು,    ಮುಳ್ಳಿನಿಂದ ಚುಚ್ಚಿದಂತಾಗಬಹುದು.

*ಅತೀ ಬಿಸಿಲಿನಿಂದಾಗಿ ಸಹಜವಾದ ಕಣ್ಣೀರು ಬೇಗ ಆವಿಯಾಗುವುದರಿಂದ ತೇವಾಂಶ ಕಡಿಮೆಯಾಗಿ ಕಣ್ಣಿನ ಹೊರಭಾಗ ಶುಷ್ಕಗೊಳ್ಳುತ್ತದೆ.

*ಅತೀ ಬೆವರಿನ ಮೂಲಕ ದೇಹದ ನೀರು ಮತ್ತು ಲವಣಾಂಶಗಳು ಹೆಚ್ಚು ಹರಿದುಹೋಗುತ್ತವೆ. ಇವುಗಳ ಕೊರತೆಯಿಂದಾಗಿಯೂ ದೃಷ್ಟಿದೋಷ ಉಂಟಾಗಬಹುದು.

ಬೇಸಿಗೆಯಲ್ಲಿ ಮಕ್ಕಳ ಪರೀಕ್ಷೆಗಳು ಸಾಮಾನ್ಯ. ಈ ಸಮಯದಲ್ಲಿ ಹೆಚ್ಚು ಹೊತ್ತಿನ ಓದು, ಬರಹದಿಂದ ಕಣ್ಣಿಗೆ ಬಳಲಿಕೆಯಾಗಿ ತಲೆನೋವು, ವಾಂತಿ ಆಗಬಹುದು.

ರಕ್ಷಣೆ ಹೇಗೆ?
*ದೇವರ ಶ್ರೇಷ್ಠ ಕಾಣಿಕೆ, ಕಣ್ಣು. ಇದರ ರಕ್ಷಣೆ  ಅತಿ ಮುಖ್ಯ. ಕಣ್ಣಿನ ತೊಂದರೆ ಇರುವ ಮಗುವಿನ ಕೈವಸ್ತ್ರ, ಟವೆಲ್, ಪ್ರತ್ಯೇಕವಾಗಿರಲಿ. ಕೈ ಕುಲುಕುವುದು, ಮುದ್ದು ಕೊಡುವುದು ಬೇಡ.

*ಕಣ್ಣಿನ ಯಾವುದೇ ತೊಂದರೆಗೆ ತಜ್ಞರನ್ನು ಸಂಪರ್ಕಿಸಿರಿ. ವೈದ್ಯರ ಸಲಹೆ ಇಲ್ಲದೆ ಯಾವುದೇ ಔಷಧಿ ಕಣ್ಣಿಗೆ ಹಾಕಬೇಡಿ. ಸ್ವಚಿಕಿತ್ಸೆ ಅಪಾಯಕಾರಿ.

*ಮಕ್ಕಳು ತಂಪು ಕನ್ನಡಕ ಬಳಸಲಿ: ಇದರಿಂದ ಸೂರ್ಯಕಿರಣ, ದೂಳು, ರೋಗಾಣುಗಳಿಂದ ರಕ್ಷಣೆ ಇದೆ. ಈಗ 6 ತಿಂಗಳ ಮಗುವಿಗೂ ಇಂಥ ಕನ್ನಡಕ ಲಭ್ಯ. ಎಳೆ ಮಗು ಕನ್ನಡಕ ಹಾಕಿಕೊಳ್ಳಲು ನಿರಾಕರಿಸಿದರೆ ಸೂರ್ಯಕಿರಣದಿಂದ ರಕ್ಷಿಸಲು ಹ್ಯಾಟ್ ಅಥವಾ ವಿಸರ್ ಕೊಡಿ. ಪಾಲಕರು ಸಹ ಕನ್ನಡಕ ಬಳಸಲಿ. ಮಗು ಇದನ್ನು ಅನುಸರಿಸಿ ಕನ್ನಡಕ ಇಚ್ಛಿಸಬಹುದು.

*ದುಂಡಾಕಾರದ ಹ್ಯಾಟ್ ಹಾಕಿಕೊಳ್ಳಿ, ಇದು ಮುಖ ಮತ್ತು ಕುತ್ತಿಗೆಯ ತ್ವಚೆಯನ್ನು ರಕ್ಷಿಸುತ್ತದೆ.

*ಬೆಳಿಗ್ಗೆ 11  ರಿಂದ ಮದ್ಯಾಹ್ನ 3 ಗಂಟೆಯವರೆಗೆ ಎಳೆ ಮಗು ಸಾಧ್ಯವಾದಷ್ಟು ನೆರಳಿನಲ್ಲಿಯೇ ಇರುವಂತೆ ನೋಡಿಕೊಳ್ಳಿ.

*ಸೂರ್ಯ ಕಿರಣದಲ್ಲಿನ ನೇರಳಾತೀತ ಕಿರಣಗಳ ಪ್ರಮಾಣ ಅಳೆಯಲು ಈಗ ಸನ್ ಬ್ರೇಸ್ ಲೆಟ್ ಲಭ್ಯವಿದ್ದು, ಅಪಾಯಮಟ್ಟ ತಲುಪಿದಾಗ ರಕ್ಷಣಾ ಕ್ರಮಗಳನ್ನು ಮರೆಯದಿರಿ.

ಮಕ್ಕಳ ತಂಪು ಕನ್ನಡಕ ಖರೀದಿ ಮುಂಚೆ:
*ಶೇಕಡಾ 99ರಿಂದ 100ರಷ್ಟು ನೇರಳಾತೀತ ಕಿರಣಗಳನ್ನು ಕಣ್ಣಿನೊಳಗೆ ಪ್ರವೇಶ ತಡೆಯುವ ಮತ್ತು *00 ನ್ಯಾನೋಮೀಟರ್(ಎನ್.ಎಮ್) ಪ್ರಮಾಣದ ಸೂರ್ಯಕಿರಣಗಳಿಂದ ರಕ್ಷಿಸುವಂತಿರಬೇಕು. ಇವುಗಳನ್ನು ಸೂಚಿಸುವ ಗುಣಮಟ್ಟದ ವಿವರ ಇರುವ ಮತ್ತು ಗುರುತು ಪಟ್ಟಿ ಪರೀಕ್ಷಿಸಿ, ಖಚಿತಪಡಿಸಿಕೊಳ್ಳಿ.

*ಕನ್ನಡಕದ ಕನ್ನಡಿ ಪಾಲಿಕಾರ್ಬೋನೇಟ್‌ನಿಂದ ತಯಾರಿಸಿರಬೇಕು. ಕನ್ನಡಕದ ಕೈಗಳಿಗೆ ತಿರುಗಣಿ(ಹಿಂಬ್) ಬೇಡ. ಇದರ ಬದಲಾಗಿ ಕನ್ನಡಕ ಮಗುವಿನ ತಲೆಗೆ ಗಟ್ಟಿಯಾಗಿ ಆಧಾರವಾಗಿರಲು ವೆಲ್‌ಕ್ರೋ ಪಟ್ಟಿ ಉತ್ತಮ.

*ಕನ್ನಡಕದ ಬಣ್ಣದ ಬಗ್ಗೆ ಗಮನಿಸಿ. ಏಕೆಂದರೆ ಬಣ್ಣ ಕೇವಲ ಸೂರ್ಯಕಿರಣದ ತೀಕ್ಷ್ಣ ಬೆಳಕನ್ನು ಕಡಿಮೆ ಮಾಡುತ್ತವೆ. ಅತೀ ತಿಳಿ ಬಣ್ಣ ತೀಕ್ಷ್ಣತೆಯನ್ನು ಕಡಿಮೆ ಮಾಡುವುದಿಲ್ಲ. ಹಾಗೆಯೇ ದಟ್ಟ ಬಣ್ಣದಿಂದ ಹೆಚ್ಚು ಪ್ರಮಾಣದಲ್ಲಿ ಸೂರ್ಯಕಿರಣ ಕಣ್ಣೊಳಗೆ ಪ್ರವೇಶಿಸುವ ಅಪಾಯವಿದೆ. ಆದ್ದರಿಂದ ಸಾಧಾರಣ ಬಣ್ಣದ ಹಾಗೂ ಸೋಲಾರೈಸ್ಡ್‌ ಕನ್ನಡಕ ಉತ್ತಮ.

*ಕಳಪೆ ಮಟ್ಟದ ಅಥವಾ ಆಟದ ಕನ್ನಡಕ ಮಗುವಿಗೆ ಬೇಡ. ಇಂಥವುಗಳಿಂದ  ಅಪಾಯವೇ ಹೆಚ್ಚು.
ಉತ್ತಮ ಗುಣಮಟ್ಟದ ಮಕ್ಕಳ ಕನ್ನಡಕಗಳು ಎಲ್ಲ ಕನ್ನಡಕಗಳ ಅಂಗಡಿಯಲ್ಲಿಯೂ ಲಭ್ಯ ಇರುತ್ತದೆ. ಪರೀಕ್ಷಿಸಿ ಕೊಳ್ಳುವುದು ಒಳಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT