ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿದ್ದೆ ಎಂಬ ಮಾಯಾಂಗನೆ

Last Updated 15 ಮಾರ್ಚ್ 2013, 19:59 IST
ಅಕ್ಷರ ಗಾತ್ರ

ಬೆಳಗಿನ ಆರು ಗಂಟೆಯ ಸಮಯ. ಒಂದೇ ಸಮನೆ ಹೊಡೆದುಕೊಳ್ಳುವ ಅಲಾರಾಂ ಒಂದು ಕಡೆಯಾದರೆ, ಅಮ್ಮನ ಸುಪ್ರಭಾತ ಇನ್ನೊಂದು ಕಡೆ. ಯಾಕಾದರೂ ಬೆಳಗಾಗುತ್ತಪ್ಪ, ಎಂಥ ನಿದ್ರೆ, ಎಂಥ ಕನಸು, ಏಳುವ ಮನಸ್ಸೇ ಇಲ್ಲ. `ಇನ್ನೊಂದು ಹತ್ತು ನಿಮಿಷ ಬಿಟ್ಟು ಏಳ್ತೀನಮ್ಮ ಪ್ಲೀಸ್' ಎಂದು ಮುಸುಕೆಳೆದು ಮಲಗಿದರೆ ಆಹ್ ಪರಮಾನಂದ!
***
ಮಹತ್ತರವಾದ ಒಂದು ಪ್ರಾಜೆಕ್ಟ್‌ನ್ನು ಒಪ್ಪಿಸಲು ನಾಳೆಯೇ ಕೊನೆಯ ದಿನ. ರಾತ್ರಿ ಒಂದು ಗಂಟೆಯಾದರೂ ತೂಕಡಿಸುತ್ತ, ಅರ್ಧಂಬರ್ಧ ಕಣ್ಣು ತೆರೆದು, ಬಾಸ್ ಅನ್ನು ಬೈಯ್ಯುತ್ತ ಲ್ಯಾಪ್‌ಟಾಪ್ ಮುಂದೆ ಕೆಲಸ ಸಾಗಿದೆ. ಆ ನಿದ್ದೆಗಣ್ಣಿನಲ್ಲಿ ಮುಗಿಸಿದ ಕೆಲಸ ಎಷ್ಟು ಸರಿಯೋ, ಅದೆಷ್ಟು ತಪ್ಪೋ ದೇವರೇ ಬಲ್ಲ.
***
ಪರೀಕ್ಷೆಗೆ ಕೆಲವೇ ದಿನಗಳು ಬಾಕಿ ಉಳಿದಿವೆ. ಓದಲು ಸಾಕಷ್ಟಿದೆ. ಹಗಲಿನಲ್ಲಿ ಓದುತ್ತಿದ್ದರೂ ಹಾಳಾದ ನಿದ್ದೆ ಬಂದು ಓದಿದ್ದೇನೂ ತಲೆಯಲ್ಲಿ ಉಳಿಯುತ್ತಲೇ ಇಲ್ಲ.
***
ಬೆಳಿಗ್ಗೆ ಬೇಗ ಎದ್ದು ಮನೆಯಲ್ಲಿ ನಡೆಯುವ ಪೂಜಾ ಕಾರ್ಯಕ್ಕೆ ತಯಾರಿ ನಡೆಸಬೇಕಿದೆ. ಬೇಗ ಮಲಗಬೇಕೆಂದು ಮಲಗಿದರೆ ಎಷ್ಟೇ ಪ್ರಯತ್ನಪಟ್ಟರೂ ನಿದ್ರಾದೇವಿ ಹತ್ತಿರವೇ ಸುಳಿಯುತ್ತಿಲ್ಲ.
***
ಮೇಲಿನ ಯಾವುದೇ ಒಂದು ಸಂದರ್ಭವಾದರೂ ನಮ್ಮೆಲ್ಲರ ಜೀವನದಲ್ಲಿ ಒಮ್ಮೆಯಾದರೂ ಬಾರದೇ ಹೋಗದು. ಬೆಳಗಿನ ಸವಿ ನಿದ್ದೆಯನ್ನು ಆಸ್ವಾದಿಸಲು ಪ್ರತಿಯೊಬ್ಬರೂ ಇಚ್ಛಿಸುತ್ತಾರೆ. ಇಂತಹ ನಿದ್ದೆ ಮಾಡಲು ಸಮಯವೇ ಇಲ್ಲ ಎಂಬುದು ಕೆಲವರ ಗೋಳಾದರೆ, ಸಮಯವಿದ್ದರೂ ನಿದ್ದೆಯೇ ಬರುವುದಿಲ್ಲ ಎನ್ನುವುದು ಇನ್ನು ಕೆಲವರ ಚಿಂತೆ. ಮತ್ತೆ ಕೆಲವರಿಗೆ ಎಲ್ಲ ಸಮಯದಲ್ಲೂ ಬರುವ ಅತಿಯಾದ ನಿದ್ದೆಯ ಬಗ್ಗೆ ಚಿಂತೆ. ಹೀಗೆ, ಪುರಾಣ ಕಥನದಲ್ಲಿ `ಮಹಾವಿಷ್ಣುವಿನ ಮಾಯಾ ಸ್ವರೂಪ' ಎನಿಸಿಕೊಳ್ಳುವ ಈ ನಿದ್ರಾದೇವಿಯ ನಾನಾ ರೂಪದ ದರ್ಶನ ನಮಗಾಗಿದೆ.

ಶರೀರವನ್ನು ಸ್ವಸ್ಥವಾಗಿ ಇರಿಸಲು ಹಿತಕರ ಆಹಾರ ಹೇಗೆ ಮುಖ್ಯವೋ ಹಾಗೆಯೇ ವಿಧಿಪೂರ್ವಕವಾಗಿ ಮಾಡಿದ ನಿದ್ದೆಯೂ ಅಷ್ಟೇ ಅವಶ್ಯಕ. ನಮ್ಮ ಸ್ಥೂಲಕಾಯ ಅಥವಾ ಕೃಶಕಾಯಕ್ಕೆ ಆಹಾರ ಮತ್ತು ನಿದ್ದೆ ವಿಶೇಷ ಕಾರಣಗಳು. ನಿದ್ದೆಯಲ್ಲೂ ಕೆಲವು ನಿಯಮಗಳನ್ನು ಪಾಲಿಸುವುದು ಅತ್ಯಗತ್ಯ. ಇಲ್ಲವಾದರೆ ನಿದ್ರಾಹೀನತೆ ಅಥವಾ ಅತಿ ನಿದ್ದೆಯಿಂದಾಗಿ ನಮ್ಮ ಆರೋಗ್ಯ ಏರುಪೇರಾಗಲು ನಾವೇ ಕಾರಣರಾಗುತ್ತೇವೆ.

ಮನಸ್ಸು ಹಾಗೂ ಶರೀರ ದಣಿದಾಗ, ಜೊತೆಗೆ ಪಂಚೇಂದ್ರಿಯಗಳಿಗೂ ಆಯಾಸವಾಗಿ ತಮ್ಮ ಕಾರ್ಯಗಳಿಂದ ನಿವೃತ್ತಿ ಹೊಂದಿ ಅವು ವಿಶ್ರಮಿಸಿದಾಗ ವ್ಯಕ್ತಿ ನಿದ್ರಿಸುತ್ತಾನೆ. ನಿದ್ದೆಯಲ್ಲಿ ಎರಡು ಭಾಗಗಳಿವೆ.

1) NREM- Non Repid Eye Movement
ನಿಧಾನ ಗತಿಯ ನಿದ್ದೆ.

2)REM- Rapid Eye Movement ಕ್ಷಿಪ್ರ ಗತಿಯ ನಿದ್ದೆ.
NREM ನಲ್ಲಿ ನಾಲ್ಕು ಹಂತಗಳಿವೆ:

ಮೊದಲ ಹಂತ: ಎಚ್ಚರ ಇರುವಿಕೆ ಹಾಗೂ ನಿದ್ದೆಯ ನಡುವಿನ ಹಂತ. ಇದು ಒಂದರಿಂದ ಏಳು ನಿಮಿಷಗಳವರೆಗೆ ಇರುತ್ತದೆ. ವ್ಯಕ್ತಿಯು ಕಣ್ಣು ಮುಚ್ಚಿ ವಿಶ್ರಾಂತಿ ಪಡೆಯುತ್ತಾ ವೇಗವಾದ ಆಲೋಚನಾ ಲಹರಿಯಲ್ಲಿ ಇರುತ್ತಾನೆ.

ಎರಡನೆಯ ಹಂತ: ಹಗುರವಾದ ನಿದ್ದೆಯು ನಿಜವಾದ ನಿದ್ದೆಯ ಪ್ರಥಮ ಹಂತ. ಕನಸಿನ ತುಣುಕುಗಳ ಅನುಭವ ಆಗಬಹುದು ಹಾಗೂ ಕಣ್ಣುಗುಡ್ಡೆ ನಿಧಾನವಾಗಿ ಒಂದು ಬದಿಯಿಂದ ಮತ್ತೊಂದು ಬದಿಗೆ ಸರಿಯುತ್ತಿರಬಹುದು.

ಮೂರನೆಯ ಹಂತ: ಇಲ್ಲಿ ಮಿತವಾದ ಆಳ ನಿದ್ದೆ ಇರುತ್ತದೆ. ಶರೀರದ ತಾಪಮಾನ ಮತ್ತು ರಕ್ತದೊತ್ತಡ ಇಳಿಕೆಯಾಗುತ್ತದೆ. ಅಲ್ಲದೆ ವ್ಯಕ್ತಿಯನ್ನು ಎಚ್ಚರಿಸುವುದು ಸ್ವಲ್ಪ ಕಷ್ಟವಾಗುತ್ತದೆ. ಇದು ನಿದ್ದೆಗೆ ಜಾರಿದ ಇಪ್ಪತ್ತು ನಿಮಿಷಗಳ ನಂತರ ಉಂಟಾಗುತ್ತದೆ.

ನಾಲ್ಕನೆಯ ಹಂತ: ಇದು ಅತಿ ಗಾಢವಾದ ನಿದ್ದೆಯ ಹಂತ. ವೆುದುಳು ತನ್ನ ಕಾರ್ಯವನ್ನು ತುಂಬಾ ಕಡಿತಗೊಳಿಸುತ್ತದೆ. ಶರೀರದ ತಾಪಮಾನ ಸ್ವಲ್ಪವೇ ತಗ್ಗಿರುತ್ತದೆ ಮತ್ತು ಮಾಂಸಪೇಶಿಗಳು ಸಡಿಲಗೊಂಡಿರುತ್ತವೆ.

ಮಕ್ಕಳು ಹಾಗೂ ಹದಿಹರೆಯದವರಿಗೆ ಹತ್ತು ಗಂಟೆಗಳ ನಿದ್ದೆ ಅವಶ್ಯಕ. 25 ರಿಂದ 55 ವರ್ಷದ ವಯಸ್ಕರಿಗೆ ಎಂಟು ಗಂಟೆಗಳ ನಿದ್ದೆ ಮತ್ತು 65 ವರ್ಷ ಮೇಲ್ಪಟ್ಟವರಿಗೆ ಆರು ಗಂಟೆಗಳ ನಿದ್ದೆಯ ಅಗತ್ಯ ಇರುತ್ತದೆ.

ನಿದ್ದೆಗೆ ಸೂಕ್ತ ಸಮಯ
ಹಿರಿಯರ ಮಾತಿನಂತೆ ಬೇಗ ಮಲಗಿ ಬೇಗ ಏಳಬೇಕೆನ್ನುವ ನಿಯಮವನ್ನು ಪಾಲಿಸಲೇಬೇಕು. ತಡರಾತ್ರಿಯವರೆಗೂ ಏನೋ ಕೆಲಸ ಮಾಡುತ್ತಾ ಅಥವಾ ಟಿ.ವಿ ನೋಡುತ್ತಾ ಕಾಲಕಳೆದು ಹಗಲಲ್ಲಿ ನಿದ್ರಿಸುವುದು ಸರಿಯಲ್ಲ. ಏಕೆಂದರೆ ರಾತ್ರಿ ಜಾಗರಣೆಯಿಂದ ರೂಕ್ಷತೆ, ಕಫ-ಪಿತ್ತದೋಷಗಳು ಹೆಚ್ಚಾಗುತ್ತವೆ.

ಗ್ರೀಷ್ಮ ಋತು ಹೊರತುಪಡಿಸಿ ಅನ್ಯ ಋತುಗಳಲ್ಲಿ ಹಗಲು ಹೊತ್ತು ನಿದ್ರಿಸಬಾರದು. ಬೊಜ್ಜಿನ ಶರೀರದವರು, ಹೆಚ್ಚು ಜಿಡ್ಡಿನ ಪದಾರ್ಥ ಸೇವಿಸುವವರು, ಕಫ ಪ್ರಕೃತಿಯವರು ಹಗಲು ನಿದ್ರಿಸಬಾರದು. ಹೊಟ್ಟೆನೋವು, ಅಜೀರ್ಣ, ಅತಿಸಾರದ ರೋಗಿಗಳು, ಮಕ್ಕಳು, ವೃದ್ಧರು, ದುರ್ಬಲರು, ಕೃಶ ಶರೀರದವರು, ಪ್ರಯಾಣದಿಂದ ಬಳಲಿದವರು, ರಕ್ತಹೀನತೆಯಿಂದ ಬಳಲುತ್ತಿರುವವರು, ಶ್ರಮದಾಯಕ ಕೆಲಸಗಳಿಂದ ದಣಿದವರು ಹಗಲು ನಿದ್ರಿಸುವುದರಿಂದ ಅಂಗಾಂಗಗಳು ಪುಷ್ಟಿಗೊಳ್ಳುತ್ತವೆ. ಉಳಿದವರು ಯಾವುದೋ ಅನಿವಾರ್ಯ ಕಾರಣದಿಂದ ರಾತ್ರಿ ಎಚ್ಚರವಿರುವ ಪರಿಸ್ಥಿತಿ ಒದಗಿದ್ದರೆ, ಎಚ್ಚರವಿದ್ದ ಸಮಯದ ಅರ್ಧ ಸಮಯ ಮಾತ್ರ ಹಗಲು ನಿದ್ರಿಸಬೇಕು.

ಸ್ವಾಭಾವಿಕವಾಗಿ ರಾತ್ರಿ ಆವರಿಸುವ ನಿದ್ದೆಯನ್ನು ತಡೆಯುವುದರಿಂದ ಪದೇ ಪದೇ ಆಕಳಿಸುವುದು, ಮೈಕೈನೋವು, ತಲೆನೋವು, ಕಣ್ಣುಗಳು ಭಾರ ಎನಿಸುವುದು, ಆಲಸ್ಯ, ಜಡತೆಯಂತಹ ತೊಂದರೆಗಳು ಉಂಟಾಗುತ್ತವೆ. ಸತತವಾಗಿ 18 ದಿನಗಳ ಕಾಲ ದಿನಾ 21 ಗಂಟೆ 40 ನಿಮಿಷ ಎಚ್ಚರ ಇದ್ದು ದಾಖಲೆ ಮಾಡಿದ ವ್ಯಕ್ತಿಯೊಬ್ಬನಿಗೆ ನಂತರ ಭ್ರಾಂತಿ, ಮತಿಭ್ರಮಣೆಯಂತಹ ಮಾನಸಿಕ ಕಾಯಿಲೆ, ಕಣ್ಣು ಮಂಜು, ಮಾತಿನಲ್ಲಿ ಅಸ್ಪಷ್ಟತೆ, ಜ್ಞಾಪಕಶಕ್ತಿ ಕುಂದುವಿಕೆ ಮುಂತಾದ ತೊಂದರೆಗಳು ಕಾಣಿಸಿಕೊಂಡವು.

ನಿದ್ರಾಹೀನತೆ ಯಾಕೆ?
ಮಲಗಿದ 10-15  ನಿಮಿಷಗಳಲ್ಲಿ ಸಾಮಾನ್ಯವಾಗಿ ನಮ್ಮನ್ನು ನಿದ್ದೆ ಆವರಿಸಿಕೊಳ್ಳುತ್ತದೆ. ನಿದ್ದೆ ಬರುವುದು ಇದಕ್ಕಿಂತ ತಡವಾದರೆ ಅಥವಾ ರಾತ್ರಿ ಹಲವು ಬಾರಿ ಎಚ್ಚರವಾಗುತ್ತಿದ್ದರೆ ಅಥವಾ ಬೆಳಿಗ್ಗೆ ತುಂಬಾ ಬೇಗ ಎಚ್ಚರವಾಗಿ ನಿದ್ದೆಯೇ ಬರದಿದ್ದರೆ ಇದನ್ನು ನಿದ್ರಾಹೀನತೆ ಎನ್ನುತ್ತಾರೆ.

ವೃದ್ಧಾಪ್ಯ, ವಾತ- ಪಿತ್ತ ಅಥವಾ ಇನ್ನಾವುದೇ ರೋಗದಿಂದ ಬಳಲುತ್ತಿದ್ದಾಗ, ಶರೀರದಲ್ಲಿ ದೌರ್ಬಲ್ಯ ಉಂಟಾದಾಗ, ಗಾಯಗಳಾದಾಗ, ಮಾನಸಿಕ ಕಾರಣಗಳು (ಚಿಂತೆ, ದುಃಖ, ಸಿಟ್ಟು, ಉನ್ಮಾದ ಮುಂತಾದವು), ರಾತ್ರಿಯೂ ಕೆಲಸ ಕಾರ್ಯಗಳಲ್ಲಿ ತೊಡಗಿದಾಗ ನಿದ್ರಾಹೀನತೆ ಕಂಡುಬರುತ್ತದೆ.

ಲಕ್ಷಣಗಳು: ಮೈಕೈ ನೋವು, ತಲೆನೋವು, ತಲೆ ಭಾರ ಎನಿಸುವುದು, ಆಕಳಿಕೆ, ಜಡತ್ವ, ಸುಸ್ತು, ತಲೆಸುತ್ತು, ಅಜೀರ್ಣ, ಆಲಸ್ಯ.

ಪರಿಹಾರ: ಪಾದಗಳಿಗೆ ಹಾಗೂ ತಲೆಗೆ ತೈಲಾಭ್ಯಂಗ ಸ್ನಾನ, ಮಾಂಸರಸ ಸೇವನೆ, ಅನ್ನ, ಎಮ್ಮೆಯ ಹಾಲು, ಮೊಸರು, ಕಫ ಹೆಚ್ಚಿಸುವಂತಹ ಆಹಾರವನ್ನು ತೆಗೆದುಕೊಳ್ಳುವುದು, ಮನಸ್ಸಿಗೆ ಮುದ ನೀಡುವಂತಹ ಸಂಗೀತ ಕೇಳುವುದು, ಅಕ್ಷಿತರ್ಪಣ ಎಂಬ ಚಿಕಿತ್ಸೆ, ನವಿರಾಗಿ ಮೈ ಮಸಾಜ್ ಮಾಡಿಸಿಕೊಳ್ಳುವುದು, ಅನುಕೂಲಕರ ಹಾಸಿಗೆಯಲ್ಲಿ ಮಲಗುವುದು ಪರಿಹಾರ ಆಗಬಲ್ಲದು. ನಿದ್ರಾಹೀನತೆಯಿಂದ ಬಳಲುತ್ತಿರುವವರು ಯಾವ ಸಮಯದಲ್ಲಿ ನಿದ್ದೆ ಬರುತ್ತದೋ ಆಗ ಅದನ್ನು ತಡೆಗಟ್ಟದೇ ನಿದ್ರಿಸಬೇಕು.

ಅತಿಯಾದರೂ ಕಷ್ಟ...
ನಿದ್ದೆ ಅತಿಯಾದರೂ ನಮ್ಮ ದೈನಂದಿನ ಕೆಲಸಗಳಿಗೆ ತೊಂದರೆ ಉಂಟಾಗುತ್ತದೆ. ಅತಿಯಾದ ನಿದ್ದೆಯಿಂದ ಕಫ ಹೆಚ್ಚುತ್ತದೆ, ಪಚನಶಕ್ತಿ ಕುಂದುತ್ತದೆ, ಆಹಾರ ಜೀರ್ಣವಾಗದೇ ಉಳಿಯುತ್ತದೆ, ಶರೀರ ಭಾರ ಎನಿಸುತ್ತದೆ, ಆಲಸ್ಯ ತಲೆದೋರುತ್ತದೆ. ಇದರಿಂದ ಪುನಃ ಅತಿಯಾದ ನಿದ್ದೆ ಬರುತ್ತದೆ.
ಪರಿಹಾರ: ಉಪವಾಸ ಮಾಡುವುದು, ಒಣ ಅಥವಾ ರೂಕ್ಷ ಆಹಾರ ಸೇವನೆ, ಮನಸ್ಸನ್ನು ಬೇರೆ ಬೇರೆ ವಿಷಯಗಳಲ್ಲಿ ತೊಡಗಿಸಿಕೊಳ್ಳುವುದು. ವಿವಿಧ ಬಗೆಯ ಆಯುರ್ವೇದ ಚಿಕಿತ್ಸೆಗಳೂ ಲಭ್ಯವಿವೆ.

ಏಳು ಬಗೆಯ ನಿದ್ದೆ
ಆಯುರ್ವೇದದಲ್ಲಿ ನಿದ್ದೆಯ ಬಗ್ಗೆ ವಿಶೇಷ ಉಲ್ಲೇಖಗಳಿದ್ದು, ಏಳು ಬಗೆಯ  ನಿದ್ದೆಯನ್ನು ವಿವರಿಸಲಾಗಿದೆ. ಅವೆಂದರೆ:

1. ತಮೋಭವ- ತಮಸ್ ಗುಣದಿಂದ ಉತ್ಪತ್ತಿಯಾಗುವ ನಿದ್ದೆ.

2) ಶ್ಲೇಷ್ಮ ಸಮುದ್ಭವ- ಕಫ ದೋಷದ ಹೆಚ್ಚಳದಿಂದ ಉಂಟಾಗುವ ನಿದ್ದೆ.

3. ಮನಃಶ್ರಮ ಸಂಭವ- ಮನಸ್ಸಿಗೆ ದಣಿವಾದಾಗ ಬರುವ ನಿದ್ದೆ.

4. ಶರೀರ ಶ್ರಮ ಸಂಭವ- ಶರೀರಕ್ಕೆ ಆಯಾಸವಾದಾಗ ಬರುವ ನಿದ್ದೆ.

5. ಆಗಂತುಕಿ- ಕೆಲಸವಿಲ್ಲದೇ ಬೇಸರದಿಂದ, ಆಲಸ್ಯದಿಂದ, ನಶೆಯಿಂದ ಉಂಟಾಗುವ ನಿದ್ದೆ.

6. ವ್ಯಾಧ್ಯಾನುವರ್ತಿನಿ- ಕಾಯಿಲೆಯ ಕಾರಣದಿಂದ ಉಂಟಾಗುವ ನಿದ್ದೆ.

7. ರಾತ್ರಿ ಸ್ವಭಾವ ಪ್ರಭವ- ರಾತ್ರಿಯಲ್ಲಿ ಸ್ವಾಭಾವಿಕವಾಗಿ ಬರುವ ನಿದ್ದೆ. ಈ ನಿದ್ದೆಯನ್ನು ಭೂತಧಾತ್ರಿ, ಜೀವಿಗಳ ರಕ್ಷಣೆ ಮಾಡುವವಳು ಎನ್ನುತ್ತಾರೆ.

ಆರೋಗ್ಯಕರ ನಿದ್ದೆಗಾಗಿ...
1. ನಿತ್ಯವೂ ತಪ್ಪದೆ ವ್ಯಾಯಾಮ ಮಾಡುವುದನ್ನು ರೂಢಿಸಿಕೊಳ್ಳಿ.

2. ಹಗಲು ನಿದ್ದೆಯನ್ನು ಕಡಿತಗೊಳಿಸಿ.

3. ಅತಿಯಾದ ಭೋಜನ ಮತ್ತು ದ್ರವಾಹಾರ ಸೇವನೆ ಮಾಡಿದ ತಕ್ಷಣ ಮಲಗದಿರಿ.

4. ಮಲಗುವ ಮುನ್ನ ಟೀ, ಕಾಫಿ ಸೇವಿಸಬೇಡಿ.

5. ನಿದ್ದೆ ಬರಲೆಂದು ಮದ್ಯಪಾನ ಮಾಡದಿರಿ.

6.ಹಾಸಿಗೆಯಲ್ಲಿ ಮಲಗಿ ಟಿ.ವಿ ನೋಡುವುದೋ ಓದುವುದೋ ಮಾಡಬೇಡಿ.

7. ಕತ್ತಲೆಯ, ಶಾಂತವಾದ ಮತ್ತು ಅನುಕೂಲಕರ ವಾತಾವರಣದಲ್ಲಿ ಮಲಗಿ.

8. ನಿತ್ಯವೂ ನಿಗದಿತ ಸಮಯಕ್ಕೆ ಮಲಗಿ ನಿಗದಿತ ಸಮಯಕ್ಕೆ ಏಳಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT