ಇನ್ನೇನು ಸಭೆ ಪ್ರಾರಂಭವಾಗಬೇಕು. ಎಲ್ಲೆಡೆ ಗುಜು ಗುಜು. ಆಗ ಭಕ್ತಿಭಾವದಲ್ಲಿ ಮಧುರಕಂಠದಿಂದ ಯುವತಿಯೊಬ್ಬಳಿಂದ ಪ್ರಾರ್ಥನೆ. ತನ್ನಿಂದ ತಾನೇ ಎಲ್ಲೆಡೆ ಸ್ತಬ್ಧತೆ, ಗಂಭೀರ ವಾತಾವರಣ. ಸಭೆಗೊಂದು ಶಿಸ್ತು!

ಬೆಳಗ್ಗೆ 10 ಗಂಟೆ. ಶಾಲೆಯ ದೊಡ್ಡ ಮೈದಾನದಲ್ಲಿ ಸಾವಿರಾರು ಮಕ್ಕಳು, ಅಧ್ಯಾಪಕವೃಂದ ಸೇರಿದೆ. ಈಗ ಎಲ್ಲರೂ ಸೇರಿ ಪ್ರಾರ್ಥನೆ ಮಾಡುತ್ತಿದ್ದಾರೆ. ಈ ಸಾಮೂಹಿಕ ಪ್ರಾರ್ಥನೆಯಿಂದ ಶಾಲೆಯ ವಾತಾವರಣಕ್ಕೊಂದು ಪಾವಿತ್ರತೆ.

ಮುಸ್ಸಂಜೆಯ ಹೊತ್ತು. ಮಕ್ಕಳು ಅಂಗಳದಲ್ಲಿ ಆಡುತ್ತಿದ್ದಾರೆ. ಆಗ ಅಜ್ಜಿ ಕೂಗುತ್ತಿದ್ದಾಳೆ. ‘ಮಕ್ಕಳೇ ಆಟ ಸಾಕು. ಕೈ ಕಾಲು ತೊಳೆದುಕೊಂಡು ದೇವರ ಮುಂದೆ ಕುಳಿತು ಪ್ರಾರ್ಥನೆ ಮಾಡಿ. ಭಜನೆ ಹಾಡಿ. ಬಾಯಿಪಾಠ ಹೇಳಿಕೊಳ್ಳಿ.’ ಮನೆ ಮಕ್ಕಳೆಲ್ಲಾ ಸೇರಿ ಪ್ರಾರ್ಥನೆ ಮಾಡುತ್ತಿದ್ದಾರೆ. ಅಂದರೆ ಅಲ್ಲೊಂದು ದೈವಿಕ ವಾತಾವರಣ ಸೃಷ್ಟಿಯಾಗುತ್ತದೆ.

ಮಂದಿರ, ಮಸೀದಿ, ಚರ್ಚು, ಗುರುದ್ವಾರ – ಯಾವುದೇ ದೇವಮಂದಿರವಿರಲಿ, ಭಕ್ತರಿಗೆ ಅದು ಪ್ರಾರ್ಥನೆಯ ತಾಣ. ಪ್ರಾರ್ಥನೆಯಿಂದ ಅಲ್ಲೆಲ್ಲ ದೈವೀಭಾವ ತನ್ನಿಂದ ತಾನೇ ನಮ್ಮ ಅನುಭವಕ್ಕೆ ಬರುತ್ತದೆ. ಹಾಗಾದರೆ ಪ್ರಾರ್ಥನೆ ಅಂದರೆ ಏನು? ಪ್ರಾರ್ಥನೆ ಅಂದರೆ ಬೇಡುವುದು, ಮೊರೆ ಇಡುವುದು, ದೇವತಾಸ್ತುತಿಯನ್ನು ಮಾಡುವುದು.

ನಮ್ಮನ್ನೂ ಸೇರಿದಂತೆ, ಸಂಪೂರ್ಣ ಜಗತ್ತನ್ನು ನಿಯಂತ್ರಿಸುವ ಒಂದು ಪರಾಶಕ್ತಿ ಇದೆ ಎಂದು ನಂಬುವುದು, ಅದರ ಕೃಪೆಗಾಗಿ ಬೇಡುವುದು. ಹೀಗೆ ಬೇಡುವುದು ಮಾನವ ಸಹಜಸ್ವಭಾವ ತಾನೆ? ಮನುಷ್ಯಪ್ರಯತ್ನವನ್ನು ಮೀರಿದ ಘಟನೆಗಳು ಸಂಭವಿಸಿದಾಗ, ನಮ್ಮ ಅರಿವಿಗೆ ನಿಲುಕದ ಸಂಗತಿಗಳನ್ನು ನೋಡಿದಾಗ ಆ ಚೈತನ್ಯಸ್ವರೂಪಿಗೆ ಶರಣು ಹೋಗುವುದು ಅತ್ಯಂತ ಸಹಜ ಪ್ರಕ್ರಿಯೆ.

ನಾವು ನಂಬುವ ಈ ಚೈತನ್ಯರೂಪಿ ಪರಿಪೂರ್ಣ, ಸರ್ವಶಕ್ತಿ, ನಮ್ಮೆಲ್ಲ ಸಂಕಷ್ಟಗಳನ್ನು ಪರಿಹರಿಸುತ್ತಾನೆ, ನಮಗೆ ದಾರಿ ತೋರುತ್ತಾನೆ ಎಂದು ಭಾವಿಸಿ ಪ್ರಾರ್ಥನೆ ಸಲ್ಲಿಸುತ್ತೇವೆ. ನಾವು ಸನ್ಮಾರ್ಗದಲ್ಲಿ ನಡೆಯುವಂತೆ ಮಾಡು ಎಂದು ಬೇಡುತ್ತೇವೆ. ಸಾಮಾನ್ಯಜನರು ತಮ್ಮ, ತಮ್ಮ ವೈಯಕ್ತಿಕ ಕಷ್ಟ-ನಷ್ಟ-ರೋಗ-ರುಜಿನಗಳನ್ನು ದೂರ ಮಾಡು ಎಂದು ಪ್ರಾರ್ಥಿಸಿದರೆ, ಮಹಾತ್ಮರು, ಸಾಧು-ಸಜ್ಜನರು ಲೋಕಕಲ್ಯಾಣಕ್ಕಾಗಿ ಮೊರೆ ಇಡುತ್ತಾರೆ.

ದೇವತಾರಾಧನೆಯಲ್ಲಿ ಬಳಸುವ ಎಲ್ಲ ಮಂತ್ರ, ಸ್ತೋತ್ರಗಳೂ ದೇವನನ್ನು ಸ್ತುತಿಸುವ, ತನ್ಮೂಲಕ ಅವನ ಕೃಪೆ ಪಡೆಯುತ್ತೇವೆ ಎಂಬ ನಂಬಿಕೆಯಿಂದಲೇ ರಚನೆಗೊಂಡಿವೆ. ಭಕ್ತಿಯೇ ಇಲ್ಲಿ ಸ್ಥಾಯೀಭಾವ. ಭಕ್ತನು ದೇವನನ್ನು ತಾಯಿ, ತಂದೆ, ಸಖ, ಒಡೆಯ, ಮಗು – ಹೀಗೆ ನಾನಾ ರೀತಿ ಭಾವಿಸಿ ಪ್ರಾರ್ಥಿಸುತ್ತಾನೆ. ಕೆಲವೊಮ್ಮೆ ದೇವನನ್ನು ನಿಂದಿಸುವುದೂ ಇದೆ. ಅಂಥವು ನಿಂದಾಸ್ತುತಿ ಎಂದೇ ಪ್ರಸಿದ್ಧವಾಗಿವೆ.

ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರು ತಮ್ಮ ಜೀವನದುದ್ದಕ್ಕೂ ಉಪವಾಸ, ಪ್ರಾರ್ಥನೆಗಳನ್ನು ಸಾಧನಾಮಾರ್ಗದ ಅಸ್ತ್ರಗಳನ್ನಾಗಿ ಬಳಸಿದರು. ತಮ್ಮ ವೈಯಕ್ತಿಕ ಮತ್ತು ರಾಜಕೀಯ ಜೀವನದಲ್ಲಿ ಎಂತಹುದೇ ಕಠಿಣ ಪ್ರಸಂಗ ಎದುರಾದಾಗ ಉಪವಾಸ ಮತ್ತು ಪ್ರಾರ್ಥನೆಗಳಿಂದ ಅಂತರಂಗದ ಶಕ್ತಿಯನ್ನು ಜಾಗೃತಗೊಳಿಸಿಕೊಳ್ಳುತ್ತಿದ್ದರು; ಅಂತರಾತ್ಮನ ಧ್ವನಿ ಹೇಳಿದಂತೆಯೇ ಅವರು ನಡೆದುಕೊಳ್ಳುತ್ತಿದ್ದರು.

ಅವರ ಈ ಶಕ್ತಿಗೆ ಇಡೀ ಮನುಕುಲವೇ ತಲೆ ಬಾಗುವಂತೆ ಆಯಿತಲ್ಲವೇ? ಗಾಂಧೀಜಿಯವರ ಪ್ರಾರ್ಥನಾಸಭೆಗಳಿಗೆ ಐತಿಹಾಸಿಕ ಮಹತ್ವವಿದೆ. ಮಹಾತ್ಮರಿಗೆ ಪ್ರಿಯವಾದ ಪ್ರಾರ್ಥನಾಗೀತೆ ‘ವೈಷ್ಣವ ಜನತೋ ತೇನ ಕಹಿಯೇ’; ಹಾಗೆಯೇ ‘ರಘುಪತಿ ರಾಘವ ರಾಜಾರಾಮ್’.

‘ಈಶ್ವರ್ ಅಲ್ಲಾ ತೇರೋ ನಾಮ, ಸಬಕೋ ಸನ್ಮತಿ ದೇ ಭಗವಾನ್’ – ಎನ್ನುವ ಮಹಾತ್ಮರ ಪ್ರಾರ್ಥನೆ ಎಷ್ಟು ಉದಾತ್ತ ಮತ್ತು ಅರ್ಥಪೂರ್ಣವಲ್ಲವೇ?

ಪ್ರಾರ್ಥನೆಯೆಂದರೆ ಆತ್ಮ-ಪರಮಾತ್ಮನ ನಡುವಿನ ಸಂಭಾಷಣೆ ಎಂದು ತಿಳಿದ ಮಹಾಮಹಿಮರಿದ್ದಾರೆ. ಮೌನವಾಗಿಯೇ ಪ್ರಾರ್ಥಿಸುವ ಸಾಧಕರಿದ್ದಾರೆ. ತಮ್ಮ ಕಲೆಯ ಕುರಿತಾದ ಸಾಧನೆಯೇ ಪರಮಾತ್ಮನ ಪ್ರಾರ್ಥನೆ ಎಂದು ನಂಬಿದ ಕಲಾವಿದರಿದ್ದಾರೆ.

ಕನ್ನಡದ ಕಣ್ವ ಬಿ.ಎಂ. ಶ್ರೀಯವರು ಭಾವಾನುವಾದ ಮಾಡಿರುವ ‘ಪ್ರಾರ್ಥನೆ’ ಕವನ ಸರ್ವಕಾಲಕ್ಕೂ ಪ್ರಸ್ತುತವಾಗಿದ್ದು ಶ್ರೀನಿವಾಸ ಉಡುಪರು ಹೇಳುವಂತೆ ‘ಬದುಕಿನ ಅಗ್ನಿದಿವ್ಯದ ಕ್ಷಣಗಳಲ್ಲಿ ಈ ಕವಿತೆ ನಮಗೆ ಒದಗಿಸುವ ಸಾಂತ್ವನವನ್ನು ಅನುಭವಿಸಿಯೇ ತಿಳಿಯಬೇಕು’.

ಕುವೆಂಪುರವರು ಹಲವಾರು ಭಾವಗೀತೆಗಳು ಅಂತರಾತ್ಮನ ಕುರಿತು ಪ್ರಾರ್ಥಿಸುವ, ಆತ್ಮ ನಿವೇದನೆಯ ಗೀತೆಗಳಾಗಿವೆ. ಗುರುವನ್ನೇ ದೇವನೆಂದು ಭಾವಿಸುವ, ದೇವನನ್ನೇ ಗುರುವೆಂದು ತಿಳಿದು ಪ್ರಾರ್ಥಿಸುವ ಗೀತೆಗಳನ್ನು ಹಾಡಿದಾಗ ಶಾಂತಿ-ಸಮಾಧಾನಗಳು ಒದಗುತ್ತವೆ.
ಪ್ರಾರ್ಥನೆಗೆ ಮಡಿ ಹೇಗಿರಬೇಕು, ಮೈಲಿಗೆಯೆಂದರೆ ಯಾವುದು ಎಂಬುದನ್ನು ಕುವೆಂಪು ಹೀಗೆನ್ನುತ್ತಾರೆ:

ಮನಸಿಗೆ ಮೈಲಿಗೆಯಾಗಿದೆ, ಗುರುವೇ
ಬಿದ್ದಿತು ಕೋಪದ ಕೊಚ್ಚೆಯಲಿ
ಪಶ್ಚಾತ್ತಾಪದ ಸೀಗೆಯೊಳುಜ್ಜಿ
ಮಡಿ ಮೀಯಿಸೋ ತೀರ್ಥೇಚ್ಛೆಯಲಿ

ಪ್ರಾರ್ಥನೆ ಮಾಡುವ ಮೊದಲು ಮನಸ್ಸನ್ನು ಹೇಗೆ ಅಣಿಯಾಗಬೇಕು ಎಂಬ ಸೂಚನೆ ಇದೆಯಲ್ಲವೇ?
ಅವರ ಇನ್ನೊಂದು ಬಹುಜನ ಪ್ರಿಯವೂ ಆದ ಭಾವಗೀತೆ:

ಮುಚ್ಚುಮರೆ ಇಲ್ಲದೆ ನಿನ್ನ ಮುಂದೆಲ್ಲವನು
ಬಿಚ್ಚಿಡುವೆವೋ ಗುರುವೇ ಅಂತರಾತ್ಮ
ಪಾಪವಿದೆ, ಪುಣ್ಯವಿದೆ ನರಕವಿದೆ ನಾಕವಿದೆ

ಪ್ರಾರ್ಥನೆ ಎಂದರೆ ನಮ್ಮೆಲ್ಲ ಪಾಪ-ಪುಣ್ಯವನೆಲ್ಲವನ್ನೂ ಆ ಪರಾಶಕ್ತಿಯ ಮುಂದೆ ಹೇಳಿಕೊಂಡು ಶುದ್ಧರಾಗುವುದು; ನಮ್ಮನ್ನು ಕೈ ಹಿಡಿದು ಸರಿದಾರಿಯಲ್ಲಿ ನಡೆಸು ಎಂದು ಅರ್ತಭಾವದಿಂದ ಬೇಡುವುದು.
ಪುರಂದರದಾಸರು ಹಾಡುವಂತೆ
ಮನವ ಶೋಧಿಸಬೇಕು ನಿಚ್ಚ ದಿನ
ದಿನದಿ ಮಾಡುವ ಪಾಪ-ಪುಣ್ಯದ ವೆಚ್ಚ
ಧರ್ಮ-ಅಧರ್ಮ ವಿಂಗಡಿಸಿ
ದುಷ್ಕರ್ಮತೆ ಏರಿದ ಬೇರೆ ಕತ್ತರಿಸಿ
ನಿರ್ಮಲಾಚಾರದಿ ಆಚರಿಸಿಪ
ಬೊಮ್ಮ ಮೂರುತಿ ಪಾದಕಮಲದ ಭಜನೆ
– ಮಾಡುವುದರಿಂದ ನಮ್ಮ ಬಾಳು ಹಸನಾಗುವುದರಲ್ಲಿ ಸಂಶಯವಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.