ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಸಿನೀರು ಉಪಯೋಗ ಗೊತ್ತೇ?

Last Updated 11 ಆಗಸ್ಟ್ 2015, 19:31 IST
ಅಕ್ಷರ ಗಾತ್ರ

ಬೆಳಿಗ್ಗೆ ಕುದಿಸಿದ ನೀರು ರಾತ್ರಿಗೆ ಹಾಗೂ ರಾತ್ರಿ ಕುದಿಸಿದ ನೀರು ಬೆಳಿಗ್ಗೆ ಉಪಯೋಗಿಸಿದರೆ ಅದು ಜೀರ್ಣಶಕ್ತಿಗೆ ತೊಂದರೆ ಮಾಡುವುದು. ಆದ್ದರಿಂದ ಬಿಸಿನೀರನ್ನು ಅದಷ್ಟು ತಾಜಾ ಇರುವಾಗಲೇ ಉಪಯೋಗಿಸಬೇಕು. ಕುದಿಸಿ ತಣ್ಣಗಾದ ನೀರನ್ನು ಪುನ: ಕುದಿಸಿ ಕುಡಿಯಬಾರದು.

ಕುಡಿಯುವ ನೀರಿಗಾಗಿ ತಲೆಕೆಡಿಸಿಕೊಂಡವರು ಬಹಳ ಜನ. ಅದಕ್ಕಾಗಿ ಶುದ್ದ ನೀರು ಕುಡಿಸಲು ಮುಗಿಬಿದ್ದಿವೆ ನೀರು ಕಂಪೆನಿಗಳು. ಯಾರಿಗೆ ಗೊತ್ತು ಯಾವ ಕಂಪೆನಿಯ ನೀರು ಶುದ್ಧ ಎಂದು! ಕುರಿಕಾಯುವ ಮುಗ್ಧನೊಬ್ಬ ಬಾಯಾರಿದಾಗ ಕಾಡಲ್ಲಿ ಸಿಗುವ ನೀರನ್ನು, ರೈತನೊಬ್ಬ ಹೊಲದಲ್ಲಿ ಬೇಸಾಯ ಮಾಡುವಾಗ ಅಲ್ಲೇ ಗುಂಡಿಯಲ್ಲಿ ದೊರೆಯುವ ನೀರು ಕುಡಿದು ಬಾಯಾರಿಕೆ ನೀಗಿಸಿಕೊಂಡು ಬದುಕುತ್ತಿದ್ದಾರೆ. ಶರೀರದ ರೋಗ ತಡೆಗಟ್ಟುವ ಶಕ್ತಿಯನ್ನು ಹೆಚ್ಚಿಸಿಕೊಂಡಿದ್ದಾರೆ!

ಈಗ ಎಲ್ಲಾ ಕಡೆ ಮಳೆ . ಶೀತದ ವಾತಾವರಣ. ಕೆಲವು ಕಡೆಗಳಲ್ಲಿ, ಮಲೆನಾಡ ಮನೆಗಳಲ್ಲಿ ಹೋಟೆಲುಗಳಲ್ಲಿ ಕುಡಿಯಲು ಬಿಸಿನೀರು ಉಪಯೋಗಿಸುವುದು ಸಾಮಾನ್ಯವಾಗಿದೆ. ಕೆಲವರು ಕುಡಿಯಲು ಬಿಸಿನೀರು ಕೊಡಿ ಎಂದು ಕೇಳಿ ಕುಡಿಯುತ್ತಾರೆ. ಕಫ ವಿಕಾರಗಳಲ್ಲಿ ಪಥ್ಯವಾಗಿ ಬಿಸಿನೀರು ಕುಡಿಯಲು ವೈದ್ಯರೇ ಹೇಳುತ್ತಾರೆ. ವೈಜ್ಞಾನಿಕವಾಗಿ ನೋಡುವುದಾದರೆ ನೀರು ಒಂದೆ ಆದರೂ  ಬಿಸಿ ನೀರು ತಣ್ಣೀರು ಬೆರೆ ಬೆರೆ ಗುಣಗಳನ್ನು ಹೊಂದಿವೆ. ಜಗತ್ತಿನಲ್ಲಿರುವ ಪ್ರತಿಯೊಂದು ದ್ರವ್ಯಕ್ಕೂ ಔಷಧಿ ಗುಣವಿದೆ.

ವೈದ್ಯನು ತನ್ನ ಬುದ್ಧಿ ಸಾಮರ್ಥ್ಯದಿಂದ ಸರಿಯಾಗಿ ಔಷಧಿಯನ್ನು ಬಳಸಿದರೆ ವಿಷವು ಅಮೃತವಾಗುವುದು. ನಾವು ಪ್ರತಿನಿತ್ಯ ಬಳಸುವ ನೀರು ಸಹ ಔಷಧಿ. ಆದ್ದರಿಂದ ಜಾಹ್ನವಿ ಔಷಧಿ ತೋಯಂ ವೈದ್ಯೋ ನಾರಯಣ ಹರಿ: ಎಂದಿದ್ದಾರೆ. ಪ್ರಾಚೀನ ಗ್ರಂಥಗಳಲ್ಲಿ ನೀರಿನ ಬಗ್ಗೆ ಹೆಚ್ಚು ವಿವರಣೆ ಸಿಗುವುದು. ಆಯುರ್ವೇದದ ನಿಘಂಟುಗಳಲ್ಲಿ ಜಲವರ್ಗ ಎಂಬ ಶೀರ್ಷಿಕೆಯಡಿಯಲ್ಲಿ ನೀರಿನ ಮಹತ್ವವನ್ನು ವರ್ಣಿಸಿದ್ದಾರೆ. ನೀರಿಗೆ ಉದಕ, ಮೇಘಪುಷ್ಪ, ಆಪ್, ಅಂಬು, ಪಯ, ಕ್ಷೀರ, ಶಿವ, ನೀರ, ಕಮಲ ಮತ್ತು ಸಲಿಲ ಎಂಬ ಪರ್ಯಾಯ ಪದಗಳಿವೆ.

ನೈಸರ್ಗಿಕವಾಗಿ ಸಿಗುವ ನೀರನ್ನು ಶಾಸ್ತ್ರದಲ್ಲಿ ಹೇಳಿದಂತೆ ಕುದಿಸಿ ಆರಿಸಿ ಉಪಯೋಗಿಸಿದರೆ ಬಿಸಿನೀರು ಔಷಧಿಯಾಗಿ ಪರಿವರ್ತನೆಯಾಗುವುದು. ಚೆನ್ನಾಗಿ ಕುದಿಸಿದ ನೊರೆರಹಿತ ಸ್ವಚ್ಚವಾದ ನೀರಿಗೆ ಉಷ್ಣೋದಕ ಅಥವಾ ಕ್ವಥಿತ ಜಲ ಎನ್ನುವರು.

ದೋಷ ಮತ್ತು ನೀರು
ನೀರನ್ನು ಕಾಲುಭಾಗ ಆವಿಯಾಗುವರೆಗೆ ಕುದಿಸಿ ಉಳಿದ ಮುಕ್ಕಾಲು ಭಾಗದ ನೀರಿಗೆ ಪಾದಹೀನ ನೀರು ಎನ್ನುತ್ತಾರೆ. ಇದು ಪಿತ್ತರೋಗಗಳಲ್ಲಿ ಉಪಯುಕ್ತವಾಗಿದೆ. ಕುದಿಸಿ ಅರ್ಧದಷ್ಟು ಉಳಿಸಿದ ನೀರು ವಾತರೋಗಗಳನ್ನು ದೂರ ಮಾಡುವುದು. ನೀರಿನ ಮೂರು ಭಾಗದಷ್ಟು ಆವಿಯಾಗುವವರೆಗೆ ಕುದಿಸಿ ಉಳಿದ ಕಾಲುಭಾಗದ ನೀರಿಗೆ ಪಾದಾವಶೇಷ ಎನ್ನುವರು. ಈ ನೀರನ್ನು ಉಪಯೋಗಿಸುವುದರಿಂದ ಕಫ ಶಮನವಾಗುವುದು.

ಆರೋಗ್ಯ ಅಂಬು
ನೀರಿನ ಮುಕ್ಕಾಲು ಭಾಗದಷ್ಟು ಆವಿಯಾಗುವವರೆಗೆ ಕುದಿಸಿ ಉಳಿದ ಕಾಲುಭಾಗದ ನೀರಿಗೆ ಪಾದಾವಶೇಷ ನೀರು ಅಥವಾ ಆರೋಗ್ಯ ಅಂಬು ಎನ್ನುವರು. ಈ ನೀರನ್ನು ಯಾವಾಗಲು ಪಥ್ಯದಂತೆ ಉಪಯೋಗಿಸಬಹುದು. ಇದು ಉಬ್ಬಸ, ಕೆಮ್ಮು, ಬಹುದಿನದ ನೆಗಡಿ, ಊತ, ನೋವು, ಮೂಲವ್ಯಾಧಿ ರೋಗಗಳಲ್ಲಿ ಉತ್ತಮವಾಗಿದೆ. ಹಸಿವನ್ನು ಹೆಚ್ಚಿಸುವುದಲ್ಲದೆ ರಾತ್ರಿ ಹೊತ್ತು ಈ ನೀರನ್ನು ಕುಡಿಯುವುದರಿಂದ ಅಜೀರ್ಣ ಹತೋಟಿಗೆ ಬರುವುದು.

ಉಷ್ಣೋದಕದ ಉಪಯೋಗ
ಕುದಿಸಿದ ನೀರು ಕಂಠರೋಗಗಲ್ಲಿ ಹಿತವಾಗಿದೆ. ಹಸಿವನ್ನು ಹೆಚ್ಚಿಸಿ ಜೀರ್ಣಶಕ್ತಿಯನ್ನು ಉತ್ತಮಗೊಳಿಸುವುದು. ಕಫವಾತ ದೋಷಗಳಲ್ಲಿ, ಆಮವಾತ, ಆಮದೋಷ, ಕೆಮ್ಮು,ಮೂತ್ರವಿಕಾರಗಳಲ್ಲಿ ಬಹುದಿನದ ಅಲರ್ಜಿ ನೆಗಡಿ, ಹುಳಿತೇಗು, ಬಿಕ್ಕಳಿಕೆ, ಬಾಯಾರಿಕೆ, ಉಬ್ಬಸ, ಹೊಟ್ಟೆನೊವು ಮತ್ತು ಜ್ವರಕ್ಕೆ ಪಥ್ಯವಾಗಿದೆ.

ಋತುಗಳು ಮತ್ತು ಬಿಸಿನೀರು
ಜೀರ್ಣಶಕ್ತಿಗೆ ಅನುಸಾರವಾಗಿ ಋತುಗಳಿಗೆ ಅನುಗುಣವಾಗಿ ಬಿಸಿನೀರನ್ನು ಕುಡಿಯಲು ಶಾಸ್ತ್ರದಲ್ಲಿ ಹೇಳಿದೆ. ಗೀಷ್ಮ ಮತ್ತು ಶರತ್ ಋತುಗಳಲ್ಲಿ ಪಾದಾವಶೇಷ ನೀರನ್ನು ಮತ್ತು ಉಳಿದ ಹೇಮಂತ, ಶಿಶಿರ ವಸಂತ ಮತ್ತು ವರ್ಷ ಋತುಗಳಲ್ಲಿ ಅರ್ಧಶೇಷ ನೀರನ್ನು ಉಪಯೋಗಿಸಬೇಕು.

ಕೆಲವು ಲೋಹಾದಿಗಳನ್ನು ಕೆಂಪಗೆ ಕಾಯಿಸಿ ನೀರಲ್ಲಿ ಹಾಕಿ ನೀರು ತಂಪಾದ ನಂತರ ಕುಡಿಯುವುದು ಹಾಗೂ ಸೂರ್ಯಕಿರಣಗಳ ಶಾಖದಿಂದ ನೀರನ್ನು ಕಾಯಿಸಿ ಕುಡಿಯುವುದು, ನೀರಿನಲ್ಲಿ ಜೀರಿಗೆ ಹಾಕಿ ಕುದಿಸಿ ಕುಡಿಯುವುದು ಒಳ್ಳೆಯದಾಗಿದೆ. ಬಿಸಿ ನೀರೆಂದರೆ ಸುಮ್ಮನೆ ಬಿಸಿಮಾಡಿದ ನೀರಲ್ಲ. ಹದವಾಗಿ ಶಾಸ್ತ್ರೋಕ್ತವಾಗಿ ಕುದಿಸಿ ನಿರ್ದಿಷ್ಟ ಮಟ್ಟಕ್ಕೆ ಇಂಗಿಸಿದ ನೀರು ರೋಗ ನಿವಾರಕವಾಗಿದ್ದು, ಉತ್ತಮ ಔಷಧಿಯಾಗಿದೆ.

ಬೆಳಿಗ್ಗೆ ಕುದಿಸಿದ ನೀರು ರಾತ್ರಿಗೆ ಹಾಗೂ ರಾತ್ರಿ ಕುದಿಸಿದ ನೀರು ಬೆಳಿಗ್ಗೆ ಉಪಯೋಗಿಸಿದರೆ ಅದು ಜೀರ್ಣಶಕ್ತಿಗೆ ತೊಂದರೆ ಮಾಡುವುದು. ಆದ್ದರಿಂದ ಬಿಸಿನೀರನ್ನು ಅದಷ್ಟು ತಾಜಾ ಇರುವಾಗಲೇ ಉಪಯೋಗಿಸಬೇಕು. ಕುದಿಸಿ ತಣ್ಣಗಾದ ನೀರನ್ನು ಪುನ: ಕುದಿಸಿ ಕುಡಿಯಬಾರದು. ಕಾಯಿಸಿದ ನೀರಿಗೆ ತಣ್ಣೀರು ಬೆರಸಿ ಕುಡಿಯಬಾರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT