ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಯಾದರ್ಪಣ

Last Updated 22 ಮಾರ್ಚ್ 2013, 19:59 IST
ಅಕ್ಷರ ಗಾತ್ರ

ವಸ್ತು ಪ್ರದರ್ಶನಗಳು, ಜಾತ್ರೆಗಳು, ಮೇಳಗಳಲ್ಲಿ ಮನರಂಜನೆಗೆಂದು ವಿವಿಧ ಆಟಿಕೆ ಪ್ರದರ್ಶನಗಳು ಇರುತ್ತವೆ. ಇವುಗಳಲ್ಲಿ ವಿವಿಧ ಬಗೆಯ ಕನ್ನಡಿಗಳನ್ನು ಒಳಗೊಂಡ ಒಂದು ಕೋಣೆ ಸಾಮಾನ್ಯವಾಗಿ ಇರುತ್ತದೆ. ಸಣ್ಣ ಮೂಗನ್ನು ದಪ್ಪ ಮಾಡಿ ತೋರಿಸುವ, ಗಿಡ್ಡ ದೇಹವನ್ನು ಉದ್ದವಾದಂತೆ ತೋರುವ, ಸಾಧಾರಣ ಶರೀರವನ್ನು ದಢೂತಿಯಾಗಿ ಕಾಣಿಸುವ ಕನ್ನಡಿಗಳ ಕೋಣೆಯನ್ನು ಹೊಕ್ಕರೆ ನಗುವಿನ ಜಾಲ ಹರಡುತ್ತದೆ.

ನಮ್ಮ ಚಹರೆಯಲ್ಲಿರುವ ವಿಶಿಷ್ಟ ಅಂಗವನ್ನು ಅಥವಾ ನ್ಯೂನತೆಯನ್ನು ಹಿಗ್ಗಿಸಿ, ನೀಳ ಮೂಗನ್ನು ಇನ್ನಷ್ಟು ಉದ್ದವಾಗಿಸಿ, ದಢೂತಿ ದೇಹವನ್ನು ಆನೆ ಗಾತ್ರ ಮಾಡಿ ಒಟ್ಟಿನಲ್ಲಿ ನಮ್ಮನ್ನು ವಿರೂಪಗೊಳಿಸಿ, ನಗೆಯುಕ್ಕಿಸಿ ಹೊರಗೆ ಕಳಿಸುವ ಕನ್ನಡಿಯ ಸೊಗಸೇ ಸೊಗಸು.

ಇದೀಗ ಈ ಕನ್ನಡಿಗಳಲ್ಲಿ ಒಂದು ವಿಶೇಷವಾದ ಕನ್ನಡಿ ಇದ್ದರೆ ಅದು ಹೇಗಿರಬಹುದು? ನಮ್ಮಲ್ಲಿರುವ ವಿಶಿಷ್ಟ ಗುಣಗಳನ್ನು ವಿರೂಪಗೊಳಿಸದೆ, ಅವುಗಳನ್ನು ಇನ್ನಷ್ಟು ತಿದ್ದಿ ತೀಡಿ, ಸುಂದರಗೊಳಿಸಿ ಮುಖವನ್ನು ಆಕರ್ಷಕಗೊಳಿಸಿ, ನಗುವನ್ನು ಅಗಲಿಸಿ, ಮುಖದಲ್ಲಿನ ಆತ್ಮವಿಶ್ವಾಸವನ್ನು ಇನ್ನಷ್ಟು ಹೆಚ್ಚಿಸಿ ನಮ್ಮನ್ನು ತೋರಿಸುವ ಕನ್ನಡಿ ಅದಾಗಿದ್ದರೆ? ಈ ಎರಡೂ ಕನ್ನಡಿಗಳಲ್ಲಿ ನಮಗೆ ಯಾವುದು ಹೆಚ್ಚು ಪ್ರಿಯವಾಗುತ್ತದೆ? ಯಾವ ಕನ್ನಡಿಯ ಬಿಂಬವನ್ನು ನೋಡುತ್ತಾ ನಾವು ಹೆಚ್ಚು ಕಾಲ ನಿಲ್ಲುತ್ತೇವೆ? ಯಾವುದರಂತೆ ಆಗಬಯಸುತ್ತೇವೆ?

ಮಕ್ಕಳನ್ನು ಹೆತ್ತ ತಂದೆ ತಾಯಂದಿರೇ, ಪೋಷಕರೇ, ನಮ್ಮ ಮಕ್ಕಳು ಬಹಳಷ್ಟು ಸಲ ನಮ್ಮ ಮುಂದೆ ಅವರ ನ್ಯೂನತೆಗಳನ್ನು, ಅಪೂರ್ಣತೆಯನ್ನು ಹೊತ್ತು ನಿಲ್ಲುತ್ತಾರೆ. ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆದಿರುವ, ಶಾಲೆಯಲ್ಲಿ ಸ್ನೇಹಿತರೊಡನೆ ಜಗಳ ಮಾಡಿ ಹಿಂತಿರುಗುವ, ತಂದೆ ತಾಯಿಯರಲ್ಲಿ ಸುಳ್ಳು ಹೇಳಿರುವ ಇನ್ನೂ ಅನೇಕ ನ್ಯೂನತೆಗಳನ್ನು ಹೊತ್ತು ನಮ್ಮ ಮುಂದೆ ನಿಲ್ಲುತ್ತಾರೆ. ಆ ತಪ್ಪುಗಳನ್ನು ಹಿಗ್ಗಿಸಿ, ಅಗಲಿಸಿ, ವಿಶೇಷ ಎನಿಸುವಂತೆ ಪ್ರತಿಬಿಂಬಿಸುವ ಕನ್ನಡಿಗಳು ನೀವಾಗಬೇಕೇ? ಅಂದರೆ, ಅವರು ಮಾಡಿದ ತಪ್ಪುಗಳನ್ನೇ ಸದಾ ಎತ್ತಿ ಆಡುವ, ಟೀಕಿಸುವ ಪೋಷಕರಾಗಲು ನಿಮಗೆ ಇಷ್ಟವೇ ಅಥವಾ ಅವರಲ್ಲಿರುವ ಸಣ್ಣ ಸಣ್ಣ (ಆದರೆ ಬೆಳೆಯಬಲ್ಲ) ಒಳ್ಳೆಯ ಗುಣಗಳನ್ನು ಬೆಳಕಿಗೆ ತಂದು, ಅವುಗಳನ್ನು ಪ್ರೋತ್ಸಾಹಿಸಿ, ಪ್ರತಿಬಿಂಬಿಸುವ ಕನ್ನಡಿ ಆಗಬೇಕೋ ಯೋಚಿಸಿ.

ನಾವು ನೀರೆರೆದು, ಕಾಳಜಿ ತೋರಿ ಯಾವ ಗಿಡವನ್ನು ಬೆಳೆಸುತ್ತೇವೋ ಆ ಗಿಡ ಸೊಂಪಾಗಿ, ದೊಡ್ಡದಾಗಿ ಬೆಳೆಯುತ್ತದೆ. ನಿರ್ಲಕ್ಷಿಸಿದ, ಪೋಷಣೆ ಇಲ್ಲದ ಗಿಡ ತನ್ನಿಂದ ತಾನೇ ಸೊರಗುತ್ತದೆ. ನಮ್ಮ ಮಕ್ಕಳಲ್ಲಿ ಬೆಳೆಸಬೇಕಾದ ಗುಣಗಳಿಗೂ ಪ್ರಕೃತಿಯ ಈ ತತ್ವವನ್ನು ಅಳವಡಿಸಬಹುದಲ್ಲವೇ? ಅಗತ್ಯವಾದ ಗುಣಗಳನ್ನು, ಉತ್ತಮವಾದ ಅಂಶಗಳನ್ನು ಗುರುತಿಸಿ, ಉತ್ತೇಜನ ನೀಡಿ ಒಳ್ಳೆಯ ಮಾತುಗಳಿಂದ ಅವುಗಳನ್ನು ದ್ವಿಗುಣಗೊಳಿಸುತ್ತಾ, ಅನವಶ್ಯಕ ಗುಣಗಳನ್ನು, ಸಣ್ಣಪುಟ್ಟ ತಪ್ಪುಗಳನ್ನು ನಿರ್ಲಕ್ಷಿಸಿದರೆ ಅವುಗಳು ತನ್ನಿಂದತಾನೇ ಕುಗ್ಗಲಾರವೇ? ಆತ್ಮವಿಶ್ವಾಸದಿಂದ ಕೂಡಿದ, ಸಂತಸ ತುಂಬಿದ ಮಕ್ಕಳ ಪ್ರತಿಬಿಂಬಗಳನ್ನು ನಾವು ಪ್ರತಿಬಿಂಬಿಸಬಾರದೇಕೆ? ಮಕ್ಕಳ ಬೆಳವಣಿಗೆಗೆ ಸೂಕ್ತ ಪರಿಸರವನ್ನು ನೀಡಿ ಉತ್ತಮವಾದುದನ್ನು ಪ್ರತಿಫಲಿಸುವ ದರ್ಪಣಗಳು ನಾವಾಗೋಣವೇ?

ಪ್ರತಿಕ್ರಿಯೆ

ಮುದ ನೀಡಿತು
ಸಂಕ್ರಾಂತಿ ಪ್ರಬಂಧ ಸ್ಪರ್ಧೆಯಲ್ಲಿ ಮೂರನೇ ಬಹುಮಾನ ಪಡೆದ ತಾರಿಣಿ ಶುಭದಾಯಿನಿ ಅವರ `ಗೋಡೆ ಗೋಚರ' (ಮಾರ್ಚ್ 9ರ ಸಂಚಿಕೆ) ಪ್ರಬಂಧ ಮುದ ನೀಡಿತು. ಲೇಖಕಿಗೆ ಅನಂತ ಶುಭ ಕಾಮನೆಗಳು.
-ಎಂ.ಮೃತ್ಯುಂಜಯಪ್ಪ, ಚಿತ್ರದುರ್ಗ

`ಗೋಡೆ ಗೋಚರ' ಚೆನ್ನಾಗಿತ್ತು. ನಟನೆಗೆ ಗೌರವ ನೀಡುತ್ತಿದ್ದ ಯಮುನಾ ಮೂರ್ತಿ ಅವರ ಮಾತನ್ನು ರೇಡಿಯೊದಲ್ಲಿ ಕೇಳಿದ್ದೆ. ಅವರ ಬಗೆಗಿನ ಲೇಖನ ಈ ಕಲಾವಿದೆಯ ಬಗ್ಗೆ ಇನ್ನಷ್ಟು ಮಾಹಿತಿ ಒದಗಿಸಿಕೊಟ್ಟಿತು. `ಹೆರಿಗೆ ಜೊತೆಗೆ ಸ್ವಾರಸ್ಯವೂ ಇದೆ' (ಸುಭಾಸ ಯಾದವಾಡ) ಓದಿ ಆಶ್ಚರ್ಯವಾಯಿತು. `ಆರೋಗ್ಯ ಗಳಿಸಿ ಸಂಪತ್ತು ಉಳಿಸಿ' (ಡಾ. ಅಶ್ವಿನಿ ಮತ್ತು ಡಾ. ಅಲೋಕ್) ಟಿಪ್ಸ್‌ಗಳು ಸಂಗ್ರಹ ಯೋಗ್ಯವಾಗಿವೆ.
-ಅ.ಮೃತ್ಯುಂಜಯ, ಪಾಂಡವಪುರ

ಅಪೂರ್ವ ಅಭಿನೇತ್ರಿ ಯಮುನಾ ಮೂರ್ತಿ ಅವರ ಅರ್ಥಪೂರ್ಣ ಸಂದರ್ಶನ ಯುವ ರಂಗನಟಿಯರಿಗೆ ಸ್ಫೂರ್ತಿ ತುಂಬುವಂತಿತ್ತು.
-ದೀಪಾ ಕೆ. ವಿಭೂತಿ, ಹರಿಹರ

ಯಮುನಾ ಮೂರ್ತಿ ತಮ್ಮ ಕಂಚಿನ ಕಂಠ, ಸ್ಪಷ್ಟ ಮಾತುಗಾರಿಕೆಯಿಂದ ಪಾತ್ರಗಳ ಪರಕಾಯ ಪ್ರವೇಶ ಮಾಡುತ್ತಾರೆ ಎಂಬುದರಲ್ಲಿ ಎರಡು ಮಾತಿಲ್ಲ. ಮೊತ್ತ ಮೊದಲ ಹವ್ಯಾಸಿ ನಟಿಯಾಗಿ ಇಂದಿಗೂ ರಂಗದಲ್ಲೂ ಕಿರುತೆರೆಯಲ್ಲೂ ಪ್ರಸ್ತುತತೆಯನ್ನು ಉಳಿಸಿಕೊಂಡಿದ್ದಾರೆ. `ಮೂಡಲಮನೆ' ಧಾರಾವಾಹಿ ನೋಡಿದವರು ಮು.ರೇಣುಕಮ್ಮ ಮತ್ತು ಇವರ ಪಾತ್ರವನ್ನು ಮರೆಯುವಂತಿಲ್ಲ. ಯಮುನಾ ಮೂರ್ತಿ ಅವರ ಅಭಿನಯ ಇಂದಿನ ಕಲಾವಿದೆಯರಿಗೆ ದಾರಿದೀಪ. ರಂಗಲೋಕದ ಈ ಧೃವತಾರೆಯನ್ನು ಪರಿಚಯಿಸಿದ ಬೃಂದಾ ಅವರಿಗೆ ಧನ್ಯವಾದ.
-ಕೊಹಿಮ, ಬಸರಕೋಡು

`ಕಿಡ್ನಿದಾನ- ಮಹಾದಾನ' (ಡಾ. ವಿ.ಆರ್.ರಾಜು) ಪ್ರಶ್ನೋತ್ತರ ಚೆನ್ನಾಗಿತ್ತು. `ಗ್ಲಾಕೋಮ: ದೃಷ್ಟಿ ಹೋದೀತು ಜೋಕೆ' (ಡಾ. ಡಿ.ಎಸ್. ವಿಜಯಕುಮಾರ್) ಸ್ಪಷ್ಟವಾಗಿ ಜನರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ.
-ಬಸಪ್ಪ ಎಸ್. ಮುಳ್ಳೂರ, ಹಲಗತ್ತಿ

`ಮೂತ್ರಕೋಶಕ್ಕೆ ಬೇಕಿದೆ ನೆರವು' (ಪ್ರಹ್ಲಾದ ತಳವಾರ್) ಲೇಖನ ಹಾಗೂ `ಕಿಡ್ನಿದಾನ ಮಹಾದಾನ' ಪ್ರಶ್ನೋತ್ತರದಲ್ಲಿ ಕಿಡ್ನಿಗೆ ಮೂತ್ರಕೋಶ ಎಂಬ ಪದವನ್ನು ಬಳಸಲಾಗಿದೆ. ಆದರೆ ಕಿಡ್ನಿಗೆ ಕನ್ನಡ ಪದ ಮೂತ್ರಪಿಂಡ. ಬ್ಲ್ಯಾಡರ್ ಎಂದರೆ ಮೂತ್ರಕೋಶ ಎಂದಾಗುತ್ತದೆ.
-ಕೆ.ಪಿ.ರಮೇಶ, ಮೈಸೂರು, ಎಸ್.ಪಿ.ಶ್ಯಾನಭಾಗ, ಬೆಂಗಳೂರು

ಜಾಗತೀಕರಣದ ಸಂದಿಗ್ಧದಲ್ಲಿ ಮಹಿಳೆ (ಯಮುನಾ ಕೋಣೇಸರ) ಬರಹ ಚಿಂತನೆ ಮೂಡಿಸುವಂತಿದೆ. ಬದಲಾವಣೆಗೆ ಒಗ್ಗಿಕೊಳ್ಳಬೇಕೆನ್ನುವ ಮನಃಸ್ಥಿತಿಯಲ್ಲಿ ಜಾಗತೀಕರಣದ ವಿಷ ವರ್ತುಲದಲ್ಲಿ ಸಿಕ್ಕಿ ಹಾಕಿಕೊಂಡ ಮಹಿಳೆಯ ಸ್ಥಿತಿಗತಿಯನ್ನು ಚೆನ್ನಾಗಿ ಬಿಡಿಸಿಟ್ಟಿದೆ.
-ಡಿ.ರಾಮಣ್ಣ, ಅಲ್ಮಸಿಕೇರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT