ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೇದದಿದ್ದರೂ...

Last Updated 24 ಮೇ 2013, 20:00 IST
ಅಕ್ಷರ ಗಾತ್ರ

`ನಾವಂತೂ ಸಿಗರೇಟು ಸೇದಲ್ಲಪ್ಪ, ಅವರವರಿಷ್ಟ. ಎಲ್ಲರನ್ನೂ ನಾವು ತಿದ್ದಲು ಸಾಧ್ಯವೇ?'`ಸಿಗರೇಟು ಸೇದೋದು ಬಿಡೋದು ನಮಗೆ ಬಿಟ್ಟಿದ್ದು. ಅದರಿಂದ ಅವರಿಗೇನು ನಷ್ಟ? ಹಾಳಾದ್ರೆ ಅದು ನಮ್ಮ ಆರೋಗ್ಯ ತಾನೇ?'

ಹೀಗೆ ಬೇರೆಯವರ ಧೂಮಪಾನ ಸೇವನೆಯ ಬಗ್ಗೆ ನಿರ್ಲಕ್ಷ್ಯ ತೋರಿಸುವವರು, ನಮ್ಮ ಧೂಮಪಾನ ನಮ್ಮ ಹಕ್ಕು, ಅದರ ಬಗ್ಗೆ ಬೇರೆಯವರೇಕೆ ಮೂಗು ತೂರಿಸಬೇಕು ಎಂದು ಸಿಡುಕುವ ಸಿಗರೇಟು ಪ್ರಿಯರಿಗೂ ಅವರ ಧೋರಣೆ ಸರಿಯಿಲ್ಲ ಎಂದು ಹೇಳಲೇಬೇಕಾದ ಕಾಲ ಇದು.

1981ರಷ್ಟು ಹಿಂದೆಯೇ ಜಪಾನಿನಲ್ಲಿ ನಡೆದ ಅಧ್ಯಯನವೊಂದು ಧೂಮಪಾನಿ ಪತಿಯನ್ನು ಹೊಂದಿದ ಮಹಿಳೆಯರಲ್ಲಿ ಶ್ವಾಸಕೋಶದ ಕ್ಯಾನ್ಸರ್‌ನ ಸಾಧ್ಯತೆ ಹೆಚ್ಚು ಎಂದು ತೋರಿಸಿತ್ತು. ಎಂದಿನಂತೆ ಈ ವೈಜ್ಞಾನಿಕ ಸತ್ಯದಿಂದ ತಂಬಾಕಿನ ಜನಪ್ರಿಯತೆಗೆ, ತಮ್ಮ ವ್ಯಾಪಾರಕ್ಕೆ ಕುಂದಾಗಬಹುದೆಂದು ಗಾಬರಿಗೊಂಡ ತಂಬಾಕು ಉದ್ಯಮ ಇದನ್ನು ಬಲವಾಗಿ ವಿರೋಧಿಸುವ ಜಾಹೀರಾತುಗಳನ್ನು ಲಕ್ಷಾಂತರ ಹಣ ಖರ್ಚು ಮಾಡಿ ಪ್ರಚಾರ ಮಾಡಿತು. ಆದರೆ ಕಳೆದ 30 ವರ್ಷಗಳಲ್ಲಿ ಈ ಸತ್ಯ ಹಲವು ಮೂಲಗಳಿಂದ, ಬಹಳಷ್ಟು ಸಂಶೋಧನೆಗಳಿಂದ ದೃಢಪಟ್ಟಿದೆ.

ತಂಬಾಕು ಸುಡುವುದರಿಂದ ಮತ್ತು ಅದನ್ನು ಸೇದುವುದರಿಂದ ಹಲವು ರಾಸಾಯನಿಕ ಕ್ರಿಯೆಗಳು ನಡೆಯುತ್ತವೆ. ಇಲ್ಲಿ ಉತ್ಪತ್ತಿಯಾಗುವ ವಿಷಕಾರಿ ರಾಸಾಯನಿಕಗಳು ವಾತಾವರಣದಲ್ಲಿ, ನಾವೆಲ್ಲರೂ ಉಸಿರಾಡುವ ಗಾಳಿಯಲ್ಲಿ ಸೇರಿಕೊಳ್ಳುತ್ತವೆ. ಮನೆಯಲ್ಲೇ ಒಬ್ಬ ಧೂಮಪಾನಿ ಇದ್ದರಂತೂ ಇದು ಇನ್ನೂ ಹೆಚ್ಚು. ಮನೆಯ ಮಕ್ಕಳು ಈ ದುಷ್ಪರಿಣಾಮದಿಂದ ನರಳುವ ಸಾಧ್ಯತೆ ಹೆಚ್ಚು. ನ್ಯುಮೋನಿಯಾ, ಕೆಮ್ಮು, ದಮ್ಮು, ಕಿವಿ ನೋವು, ಚರ್ಮದ ಅಲರ್ಜಿಗಳು ಈ ಮಕ್ಕಳಲ್ಲಿ ಇತರ ಮಕ್ಕಳಿಗಿಂತ ಹೆಚ್ಚಾಗಿ ಕಂಡುಬರಬಹುದು. ಹಾಗೆಯೇ ಧೂಮಪಾನಿಗಳಿರುವ ವಾತಾವರಣದಲ್ಲಿ ಇರುವ ಗರ್ಭಿಣಿಯರು ಮತ್ತು ಭ್ರೂಣದ ಆರೋಗ್ಯದ ಮೇಲೂ ಈ ಪರಿಣಾಮಗಳು ಕಂಡು ಬರಬಹುದು.

ಸಾರ್ವಜನಿಕ ಸ್ಥಳಗಳಾದ ಹೋಟೆಲ್, ಮಾರುಕಟ್ಟೆ, ಬಸ್-ರೈಲು ನಿಲ್ದಾಣಗಳಲ್ಲಿ ಜನಜಂಗುಳಿಯಿಂದಾಗಿ ಮೊದಲೇ ಆಮ್ಲಜನಕದ ಕೊರತೆ ಇರುತ್ತದೆ. ಇಂಥ ಸ್ಥಳಗಳಲ್ಲಿ ಧೂಮಪಾನ ಹೆಚ್ಚು ಅಪಾಯಕರ ಎನಿಸಬಲ್ಲದು. ಸಾವಿರಾರು ಜನರಿಗೆ ರೋಗವನ್ನು ಹರಡಬಲ್ಲದು. ಅದರಲ್ಲೂ ಧೂಮಪಾನಿ ಒಳಗೆ ಎಳೆದುಕೊಂಡು ಹೊರಬಿಡುವ ಹೊಗೆ ನಾವೇ ಧೂಮಪಾನ ಮಾಡುವುದಕ್ಕಿಂತ ಹೆಚ್ಚು ಹಾನಿಕಾರಕ. ತನ್ನ ತಪ್ಪೇ ಇಲ್ಲದೆ, ಧೂಮಪಾನದಿಂದ ಧೂಮಪಾನಿ ಹೊಂದಬಹುದಾದ `ಆನಂದ'ವನ್ನು ಸಹ ಹೊಂದದೆ ವಿಷಕಾರಿ ಅನಿಲಗಳ ಮಿಶ್ರಣವನ್ನೇ ಪರೋಕ್ಷ ಧೂಮಪಾನದಿಂದ ಇತರರೂ ಸೇವಿಸಬೇಕಾಗುತ್ತದೆ.

ಸತತವಾಗಿ ಧೂಮಪಾನದ ಹೊಗೆ ಮನೆಯ ವಾತಾವರಣದಲ್ಲಿ ಇದ್ದರೆ ತಲೆನೋವು, ಕೆಮ್ಮು, ದಮ್ಮು, ವಾಂತಿ, ತಲೆಸುತ್ತುವಿಕೆ ಇತ್ಯಾದಿ ಲಕ್ಷಣಗಳು ಧೂಮಪಾನ ಮಾಡದೆ ಇರುವವರಲ್ಲೂ ಕಾಣಿಸಬಹುದು. ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡಬಾರದೆಂಬ ಕಾನೂನಿದೆ. ಹಾಗೆಯೇ ಧೂಮಪಾನದ ಯಾವುದೇ ಜಾಹೀರಾತಿನ ಜೊತೆಗೆ `ಅದು ಆರೋಗ್ಯಕ್ಕೆ ಹಾನಿಕರ' ಎಂಬುದನ್ನು ತೋರಿಸಬೇಕೆಂಬ/ ಮುದ್ರಿಸಬೇಕೆಂಬ ನಿಯಮವೂ ಇದೆ. ಆದರೆ ತಂಬಾಕಿನ ಉದ್ಯಮದ ಲಾಬಿ ಈ ಎಲ್ಲದಕ್ಕಿಂತ ಶಕ್ತಿಶಾಲಿ.

`ತಡೆಯಬಹುದಾದ ಸಾವಿನ ಕಾರಣಗಳಲ್ಲಿ ತಂಬಾಕು ಸೇವನೆ ಪ್ರಮುಖವಾದದ್ದು. ಪ್ರತಿ ವರ್ಷ 6 ದಶಲಕ್ಷ ಜನ ತಂಬಾಕಿಗೆ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳಿಂದ ಸಾಯುತ್ತಾರೆ. ಇವರಲ್ಲಿ 6 ಲಕ್ಷ ಜನ ಪರೋಕ್ಷ ಧೂಮಪಾನಕ್ಕೆ ಒಳಪಟ್ಟವರು ಎಂಬ ಎಲ್ಲ ಸತ್ಯಗಳನ್ನೂ ತಂಬಾಕು ಉದ್ಯಮ ಬದಿಗೊತ್ತುತ್ತಿದೆ. ಈ ನಿಟ್ಟಿನಲ್ಲಿ ವಿಶ್ವ ಆರೋಗ್ಯ ಸಂಸ್ಥೆ ನಡೆಸುತ್ತಿರುವ ಎಲ್ಲ ಪ್ರಯತ್ನಗಳನ್ನೂ ವಿರೋಧಿಸುತ್ತಿದೆ.

ಹೀಗಾಗಿ ಅನಾರೋಗ್ಯ, ನರಳುವಿಕೆ, ಕೌಟುಂಬಿಕ ಅಶಾಂತಿಗಳಿಗೆ ಕಾರಣವಾದ ತಂಬಾಕು ಸೇವನೆಯ ವಿರುದ್ಧ ಪ್ರತಿಯೊಬ್ಬರೂ ದನಿ ಎತ್ತಬೇಕು. ಶಕ್ತಿಶಾಲಿ ತಂಬಾಕು ಉದ್ಯಮದ ಶಕ್ತಿ ಅಡಗಿಸಲು ಎಲ್ಲರೂ  ಕೈಜೋಡಿಸಬೇಕು.

ನೀವು ಧೂಮಪಾನಿ ಅಲ್ಲದಿದ್ದರೆ...

  1. `ಸೇದಿದ್ರೆ ಸೇದ್ತಾರೆ, ನಮಗೇನು' ಎಂಬ ಧೋರಣೆ ಬೇಡ. ಬೇರೆಯವರ ಧೂಮಪಾನದಿಂದ ನಿಮ್ಮ ಆರೋಗ್ಯಕ್ಕೂ ಹಾನಿಯಾಗುತ್ತದೆ.
     
  2. ಮನೆಯಲ್ಲಿ ಧೂಮಪಾನಿಗಳಿದ್ದರೆ ಅವರನ್ನು ತತ್‌ಕ್ಷಣ ಧೂಮಪಾನ ತ್ಯಜಿಸುವಂತೆ ಆಗ್ರಹಿಸಿ, ಚಿಕಿತ್ಸೆಗೆ ಕರೆದೊಯ್ಯಿರಿ.
     
  3. ಸಾರ್ವಜನಿಕ ಸ್ಥಳಗಳಲ್ಲಿ ಯಾರೇ ಧೂಮಪಾನ ಮಾಡಿದರೂ, ಸಂಬಂಧ ಇಲ್ಲದವರಂತೆ ಸುಮ್ಮನಿರಬೇಡಿ. ಬಲವಾಗಿ ವಿರೋಧಿಸಿ.
     
  4. ವಿಶೇಷವಾಗಿ ಮಕ್ಕಳನ್ನು ಧೂಮಪಾನಿಗಳಿಂದ ದೂರ ಇಡಿ. ಮತ್ತೆ ಮತ್ತೆ ಆರೋಗ್ಯದ ಸಮಸ್ಯೆಗಳು ಮಕ್ಕಳಲ್ಲಿ ಕಂಡುಬಂದರೆ, ಮನೆಯಲ್ಲಿರುವ ಧೂಮಪಾನಿಗಳ ಧೂಮಪಾನಕ್ಕೂ ಈ ಸಮಸ್ಯೆಗಳಿಗೂ ಸಂಬಂಧ ಇರುವ ಬಗ್ಗೆ ವೈದ್ಯರಲ್ಲಿ ಪರಿಶೀಲಿಸಿ.
     

ಧೂಮಪಾನ ಬಿಡುವುದರಿಂದ...

  1. 20 ನಿಮಿಷಗಳಲ್ಲಿ- ನಿಮ್ಮ ಎದೆಬಡಿತ, ರಕ್ತದೊತ್ತಡ ಕೆಳಗಿಳಿಯಲು ಆರಂಭ
     
  2. 12 ಗಂಟೆಗಳಲ್ಲಿ- ನಿಮ್ಮ ರಕ್ತದ ಕಾರ್ಬನ್ ಮಾನಾಕ್ಸೈಡ್ ಮಟ್ಟ ಸಹಜ ಸ್ಥಿತಿಗೆ
     
  3. 2-12 ವಾರಗಳಲ್ಲಿ- ರಕ್ತ ಸಂಚಾರ ವರ್ಧಿಸುತ್ತದೆ, ಶ್ವಾಸಕೋಶಗಳು ಬಲಗೊಳ್ಳುತ್ತವೆ
     
  4. 1-9 ತಿಂಗಳುಗಳಲ್ಲಿ- ಒಣ ಕೆಮ್ಮು, ದಮ್ಮು  ಮಾಯವಾಗುತ್ತದೆ
     
  5. 1-5 ವರ್ಷಗಳಲ್ಲಿ- ಪಾರ್ಶ್ವವಾಯು, ಹೃದಯಾಘಾತಗಳ ಸಾಧ್ಯತೆ ಕಡಿಮೆಯಾಗುತ್ತದೆ.
     
  6. ನಿಮ್ಮ ಆರೋಗ್ಯ ಸುಧಾರಿಸುವುದಷ್ಟೇ ಅಲ್ಲ ನಿಮ್ಮ ಕುಟುಂಬದವರ ಆರೋಗ್ಯವೂ ವರ್ಧಿಸುತ್ತದೆ.
     
  7. ತಂಬಾಕು ಯಾವುದೇ ರೂಪದಲ್ಲಿ ಸೇವಿಸಿದಾಗಲೂ ಅಪಾಯಕಾರಿಯೇ. ಹಾಗಾಗಿ ಅದನ್ನು ತಕ್ಷಣ ತ್ಯಜಿಸಿ.
     
  8. ತಂಬಾಕು ತ್ಯಜಿಸಲು ನಿಮಗೆ ಸಾಧ್ಯವಾಗದಿದ್ದರೆ ವೈದ್ಯಕೀಯ ಸಲಹೆ/ ಚಿಕಿತ್ಸೆ ಪಡೆಯಲು ಹಿಂಜರಿಯಬೇಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT