ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೃದ್ರೋಗಕ್ಕೆ ರಹದಾರಿ

Last Updated 25 ಅಕ್ಟೋಬರ್ 2013, 19:30 IST
ಅಕ್ಷರ ಗಾತ್ರ

ವಿಶ್ವ ಆರೋಗ್ಯ ಸಂಸ್ಥೆ ಮತ್ತು ವಿಶ್ವ ಹೃದಯ ಪ್ರತಿಷ್ಠಾನದ ಸಮೀಕ್ಷೆಯ ಪ್ರಕಾರ ಜಗತ್ತಿನಲ್ಲಿ ಸುಮಾರು 40 ಕೋಟಿ ಜನ ಬೊಜ್ಜಿನಿಂದ ಬಳಲುತ್ತಿದ್ದಾರೆ. ಇವರಲ್ಲಿ 10 ಕೋಟಿಯಷ್ಟು ಮಂದಿ ಅಗತ್ಯಕ್ಕಿಂತ ಹೆಚ್ಚು ದೇಹ ತೂಕ ಹೊಂದಿದ್ದಾರೆ. ದೊಡ್ಡವರು ಮಾತ್ರವಲ್ಲದೆ ಚಿಣ್ಣರಲ್ಲೂ ಈ ಸಮಸ್ಯೆ ಕಂಡು ಬರುತ್ತಿದೆ. ಅಂದಾಜಿನ ಪ್ರಕಾರ,  ಐದು ವರ್ಷದ ಒಳಗಿನ ಸುಮಾರು  1.80 ಕೋಟಿಯಷ್ಟು  ಮಕ್ಕಳು ಬೊಜ್ಜಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ.

ಸುಮಾರು 3 ಕೋಟಿಯಷ್ಟು ಭಾರತೀಯರು ತೀವ್ರ ಸ್ವರೂಪದ ದೇಹ ತೂಕದ  ಸಮಸ್ಯೆ ಹೊಂದಿದ್ದಾರೆ ಎಂದು ಸಮೀಕ್ಷೆಯೊಂದು ತಿಳಿಸಿದೆ. ಈ ಸಂಖ್ಯೆಯು ಮುಂದಿನ ೫ ವರ್ಷಗಳಲ್ಲಿ ದ್ವಿಗುಣಗೊಳ್ಳಲಿದೆ.

ದೇಶದಲ್ಲಿ ಕರ್ನಾಟಕ ಪುರುಷರ ಬೊಜ್ಜಿನ ಪ್ರಮಾಣದಲ್ಲಿ ೧೪ ಹಾಗೂ  ಮಹಿಳೆಯರ ಬೊಜ್ಜಿನ ಪ್ರಮಾಣದಲ್ಲಿ ೯ನೇ ಸ್ಥಾನದಲ್ಲಿದೆ. ಅಂದರೆ, ಶೇಕಡಾ ೧೨ರಷ್ಟು ಪುರುಷರು ಹಾಗೂ ಶೇಕಡಾ ೧೭.೩ರಷ್ಟು ಮಹಿಳೆಯರು ಬೊಜ್ಜಿನಿಂದ ಬಳಲುತ್ತಿ­ದ್ದಾರೆ. ಮಕ್ಕಳಲ್ಲಿ ಬೊಜ್ಜಿನ ಪ್ರಮಾಣ ಗಣನೀಯವಾಗಿ ಹೆಚ್ಚುತ್ತಿದೆ.

ಕೆಟ್ಟ ಜೀವನಶೈಲಿ ಜೊತೆಗೆ ವಂಶವಾಹಿನಿಯೂ ಬೊಜ್ಜಿಗೆ ಕಾರಣ ಎಂಬುದನ್ನು ಅಲ್ಲಗಳೆ­ಯ­ಲಾಗದು. 20ನೇ ಶತಮಾನದ ದ್ವಿತೀಯಾರ್ಧದಲ್ಲಿ ಒಟ್ಟಾರೆ ಜೀವನಶೈಲಿ ಮತ್ತು ಆಹಾರ ಕ್ರಮದಲ್ಲಿ ಸಾಕಷ್ಟು ಬದಲಾವಣೆ­ಗಳಾದವು. ಕೃಷಿ ಆಧಾರಿತ ಸಮಾಜದಲ್ಲಿ ಸೇವಿಸಲಾಗುತ್ತಿದ್ದ ತರಕಾರಿ ಮತ್ತಿತರ ಆಹಾರ ಕ್ರಮಗಳಿಂದ ನಾವು ಕೊಬ್ಬಿನ ಅಂಶ ಹೆಚ್ಚಿರುವ ಆಹಾರ ಪದ್ಧತಿಯತ್ತ ವಾಲಿದೆವು. ಹಾಗೆಯೇ, ಅತ್ಯಂತ ಶಕ್ತಿ­ಶಾಲಿ ಆಹಾರ ಎಂದುಕೊಳ್ಳುವ ಪ್ರಾಣಿಜನ್ಯ ಕೊಬ್ಬಿನ ಅಂಶದ ಸೇವನೆಯತ್ತ ಸರಿದೆವು. ಇಷ್ಟು ಮಾತ್ರವಲ್ಲದೆ ಜನರಲ್ಲಿ ಆಲಸ್ಯದಿಂದ ದೈಹಿಕ ಪರಿಶ್ರಮ ಕಡಿಮೆ ಆದುದು ಬೊಜ್ಜಿನ ಸಮಸ್ಯೆಗೆ ಇಂಬು ಕೊಟ್ಟಿತು.

ಬೊಜ್ಜಿನಿಂದ ಕೂಡಿದ ದೇಹವು, ರಕ್ತದೊತ್ತಡ, ಮಧುಮೇಹ ಮತ್ತು ರಕ್ತನಾಳಗಳನ್ನು ಕಟ್ಟುವ ರೋಗಗಳಿಗೆ ಆಹ್ವಾನ ನೀಡುತ್ತದೆ. ಹೃದಯಕ್ಕೆ ರಕ್ತ­ವನ್ನು ಸರಾಗವಾಗಿ ಸರಬರಾಜು ಮಾಡಬೇಕಾದ ನಾಳಗಳು ನಿಧಾನವಾಗಿ ಬಿಗಿಗೊಳ್ಳುತ್ತಾ ಬಂದು ಕೊನೆಗೊಮ್ಮೆ ರಕ್ತನಾಳದ ಹಿಗ್ಗುವಿಕೆಗೆ ತಡೆಯೊಡ್ಡಿ ರಕ್ತ ಸರಬರಾಜನ್ನು ನಿಲ್ಲಿಸಿದಾಗ ಅಥವಾ ರಕ್ತಸರಬರಾಜಿಗೆ ಅಡ್ಡಿಪಡಿಸಿ ರಕ್ತ ಗರಣೆ ಕಟ್ಟಿದರೆ ಹೃದಯದ ಕೆಲಸ ಸ್ಥಗಿತ­ವಾಗು­ತ್ತದೆ. ಇದೇ ಹೃದಯರೋಗ. ಇದನ್ನು ಕೊರೋನರಿ ಹಾರ್ಟ್ ಡಿಸೀಸ್ (ಸಿಎಚ್‌ಡಿ) ಎಂದೂ ಹೇಳುತ್ತಾರೆ.
ದೇಶದಲ್ಲಿ ವಿಭಿನ್ನ ಬಗೆಯ ಹೃದಯ ರೋಗಗಳಲ್ಲೇ ‘ಸಿಎಚ್‌ಡಿ’ ಪ್ರಮಾಣ ಹೆಚ್ಚು. ಬೊಜ್ಜು ನಿಯಂತ್ರಿಸು­ವುದೇ ಹೃದ್ರೋಗಗಳ ತಡೆಗೆ ಮೊದಲ ಹೆಜ್ಜೆ.  ಸಿಗರೇಟ್ ಅಥವಾ ತಂಬಾಕು ಉತ್ಪನ್ನಗಳ ಸೇವನೆ ಬಿಡುವುದರ ಜೊತೆಗೆ, ನಾರಿನ ಅಂಶದ ಆಹಾರ ತಿನ್ನುವುದರಿಂದ, ವ್ಯಾಯಾಮ ಮಾಡುವುದ­ರಿಂದ ಉತ್ತಮ ಆರೋಗ್ಯ ಕಾಪಾಡಿಕೊಳ್ಳ­ಬಹುದು.

ದೇಹದ ಎತ್ತರಕ್ಕೆ ತಕ್ಕಂತೆ ತೂಕ ಮತ್ತು ಸೊಂಟದ ಸುತ್ತಳತೆ ಇರಬೇಕು. ದೇಹದ ತೂಕ ಏರುತ್ತಾ ಹೋದರೆ ಹೃದ್ರೋಗವನ್ನು ಆಹ್ವಾನಿಸಿದಂತೆಯೇ ಸರಿ. ಪುರುಷರ ದೇಹ ತೂಕದ ಸೂಚ್ಯಂಕ ೩೦ಕ್ಕಿಂತ ಹೆಚ್ಚಿದ್ದರೆ ಖಂಡಿತ­ವಾ­ಗಿಯೂ ಅದು ಬೊಜ್ಜಿನ ಸೂಚಕ ಹಾಗೂ ಹೃದ್ರೋಗಕ್ಕೆ ತುತ್ತಾಗುವ ಅಪಾಯ ಇಂತಹ ವ್ಯಕ್ತಿಗಳಲ್ಲಿ ಹೆಚ್ಚು.

ಮಹಿಳೆಯರ ದೇಹ ತೂಕದ ಸೂಚ್ಯಂಕ ೨೧ಕ್ಕಿಂತ ಹೆಚ್ಚಿದ್ದರೆ ಹೃದಯ ಸಂಬಂಧಿ ಕಾಯಿಲೆ­ಗಳು ಎದುರಾಗುತ್ತವೆ. ಜೊತೆಗೆ ಪುರುಷರ ಸೊಂಟದ ಸುತ್ತಳತೆ ೯೦ ಸೆಂಟಿ ಮೀಟರ್‌ಗಿಂತ ಹೆಚ್ಚಿದ್ದರೆ ಹಾಗೂ ಮಹಿಳೆ­ಯರ ಸೊಂಟದ ಸುತ್ತಳತೆ ೮೦ ಸೆಂಟಿ ಮೀಟರ್‌ಗಿಂತ ಹೆಚ್ಚಿದ್ದರೆ ಹೃದಯ ರೋಗಗಳು ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚು. ಆದ್ದರಿಂದ ಬೊಜ್ಜು ನಿಯಂತ್ರಿಸುವುದು ಹೃದಯ ರೋಗಗಳನ್ನು ದೂರವಿಡಲು ಸಹಕಾರಿ ಆಗುವ ಬಲು ದೊಡ್ಡ ಅಂಶ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT