ತಿಪ್ಪಗೊಂಡನಹಳ್ಳಿ ಜಲಾಶಯ: ‘ಎಂಪ್ರಿ’ ವರದಿ ಶಿಫಾರಸು ಜಾರಿ

7

ತಿಪ್ಪಗೊಂಡನಹಳ್ಳಿ ಜಲಾಶಯ: ‘ಎಂಪ್ರಿ’ ವರದಿ ಶಿಫಾರಸು ಜಾರಿ

Published:
Updated:

ಬೆಂಗಳೂರು: ‘ತಿಪ್ಪಗೊಂಡನಹಳ್ಳಿ ಜಲಾಶಯದ ಅಚ್ಚುಕಟ್ಟು ಪ್ರದೇಶ ಸಂರಕ್ಷಣೆ ಕುರಿತಂತೆ ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆಯ (ಎಂಪ್ರಿ) ತಜ್ಞರ ಸಮಿತಿ ನೀಡಿರುವ ಶಿಫಾರಸುಗಳ ಜಾರಿ ಕುರಿತಂತೆ ನಮ್ಮ ನಿಲುವು ತಿಳಿಸಲು ಇನ್ನಷ್ಟು ಕಾಲಾವಕಾಶ ಬೇಕು’ ಎಂದು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ಮನವಿ ಮಾಡಿದೆ.

ಈ ಸಂಬಂಧ ಸಲ್ಲಿಸಲಾಗಿರುವ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ದಿನೇಶ್ ಮಾಹೇಶ್ವರಿ ಹಾಗೂ ನ್ಯಾಯ
ಮೂರ್ತಿ ಎಸ್.ಸುಜಾತ ಅವರಿದ್ದ ವಿಭಾಗೀಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಅಡ್ವೊಕೇಟ್ ಜನರಲ್ ಉದಯ್ ಹೊಳ್ಳ ಅವರು, ‘ಬೆಳಗಾವಿಯಲ್ಲಿ ವಿಧಾನಮಂಡಲದ ಅಧಿವೇಶನ ನಡೆಯುತ್ತಿದೆ, ಬಹುತೇಕ ಆಡಳಿತಯಂತ್ರ ಅಲ್ಲಿಗೆ ವರ್ಗಾವಣೆಗೊಂಡಿದೆ. ಹೀಗಾಗಿ ಸರ್ಕಾರದ ನಿಲುವು ತಿಳಿಸಲು ಇನ್ನೊಂದು ವಾರ ಕಾಲಾವಕಾಶಬೇಕು’ ಎಂದರು.

ಇದನ್ನು ಮಾನ್ಯ ಮಾಡಿದ ನ್ಯಾಯಪೀಠ ವಿಚಾರಣೆಯನ್ನು ಇದೇ 17ಕ್ಕೆ ಮುಂದೂಡಿದೆ.

ವಿಜಯ್‌ ಟಾಟಾ ಅರ್ಜಿ ವಜಾ: ಬೆಂಗಳೂರು: ‘ಆ್ಯಂಬಿಡೆಂಟ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಿಯಲ್ ಎಸ್ಟೇಟ್ ಉದ್ಯಮಿ ವಿಜಯ್ ಟಾಟಾ ಅವರನ್ನು ಬಂಧಿಸುವ ಮುನ್ನ ಸುಪ್ರೀಂಕೋರ್ಟ್ ಮಾರ್ಗಸೂಚಿಗಳನ್ನು ಪಾಲಿಸುವಂತೆ ಸಿಸಿಬಿಗೆ ನಿರ್ದೇಶನ ನೀಡಬೇಕು’ ಎಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.

ಈ ಕುರಿತ ಅರ್ಜಿಯನ್ನು ನ್ಯಾಯಮೂರ್ತಿ ಬಿ.ವೀರಪ್ಪ ಅವರಿದ್ದ ಏಕಸದಸ್ಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.

ಅರ್ಜಿದಾರರ ಪರ ವಕೀಲರು, ‘ತನಿಖಾಧಿಕಾರಿಗಳು ನಿಯಮ ಪಾಲನೆ ಮಾಡುತ್ತಿಲ್ಲ. ಅರ್ಜಿದಾರರಿಗೆ ಹಣದ ಬೇಡಿಕೆ ಇಟ್ಟಿದ್ದಾರೆ, ಇಲ್ಲವಾದರೆ ಕ್ರಮ ಕೈಗೊಳ್ಳುವ ಬೆದರಿಕೆ ಹಾಕಿದ್ದಾರೆ’ ಎಂದು ಆಕ್ಷೇಪಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಹೆಚ್ಚುವರಿ ಅಡ್ವೊಕೇಟ್ ಜನರಲ್ ಹಾಗೂ ವಿಶೇಷ ಪ್ರಾಸಿಕ್ಯೂಟರ್ ಎ.ಎಸ್.ಪೊನ್ನಣ್ಣ, ‘ವಂಚನೆ ಪ್ರಕರಣಗಳಲ್ಲಿ ಸುಪ್ರೀಂಕೋರ್ಟ್ ನೀಡಿರುವ ಮಾರ್ಗಸೂಚಿಗಳನ್ನು ಚಾಚೂ ತಪ್ಪದೆ ಪಾಲಿಸಲಾಗುತ್ತಿದೆ. ಅದರಲ್ಲಿ ಯಾವುದೇ ಲೋಪವಾಗುತ್ತಿಲ್ಲ . ಅರ್ಜಿದಾರರು ವೃಥಾ ಆರೋಪ ಮಾಡುತ್ತಿದ್ದಾರೆ, ಅವರ ಆರೋಪಗಳಿಗೆ ಯಾವುದೇ ಆಧಾರವಿಲ್ಲ’ ಎಂದರು.

ಇದನ್ನು ಮಾನ್ಯ ಮಾಡಿದ ನ್ಯಾಯಪೀಠ ಅರ್ಜಿ ವಜಾಗೊಳಿಸಿತು. ಬಹುಕೋಟಿ ಆ್ಯಂಬಿಡೆಂಟ್ ವಂಚನೆ ಪ್ರಕರಣದಲ್ಲಿ ವಿಜಯ್ ಟಾಟಾ ವಿರುದ್ಧವೂ ದೂರು ಬಂದಿರುವ ಕಾರಣ ಸಿಸಿಬಿ ಅವರಿಗೆ ನೋಟಿಸ್ ನೀಡಿ ವಿವರಣೆ ಕೇಳಿದೆ.

‘ದಾದಾಗಳಂತೆ ವರ್ತಿಸಬೇಡಿ’

‘ದಾದಾಗಳಂತೆ ವರ್ತಿಸಬಾರದು. ಮೊದಲು ಕಾನೂನು ಪಾಲಿಸುವುದನ್ನು ಕಲಿಯಬೇಕು’ ಎಂದು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಗೆ (ಬಿಬಿಎಂಪಿ) ಹೈಕೋರ್ಟ್‌ ಚಾಟಿ ಬೀಸಿದೆ.

‘ಹೈಕೋರ್ಟ್ ತಡೆಯಾಜ್ಞೆ ಇದ್ದರೂ ಲಿ ಮೆರಿಡಿಯನ್ ಹೋಟೆಲ್ ಆವರಣದಲ್ಲಿನ ಹೋರ್ಡಿಂಗ್ ಅನ್ನು ಬಿಬಿಎಂಪಿ ತೆರವುಗೊಳಿಸಿ ಎಫ್‌ಐಆರ್ ದಾಖಲಿಸಿದೆ’ ಎಂದು ಆಕ್ಷೇಪಿಸಿ ಸಲ್ಲಿಸಲಾಗಿರುವ ಅರ್ಜಿಯನ್ನು ನ್ಯಾಯಮೂರ್ತಿ ಪಿ.ಎಸ್.ದಿನೇಶ್ ಕುಮಾರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಅರ್ಜಿದಾರರ ಆಕ್ಷೇಪ ಆಲಿಸಿದ ನ್ಯಾಯಪೀಠ, ಬಿಬಿಎಂಪಿ ಕ್ರಮಕ್ಕೆ ಬೇಸರ ವ್ಯಕ್ತಪಡಿಸಿತು.

‘ಲಿ ಮೆರಿಡಿಯನ್ ಆವರಣದಲ್ಲಿದ್ದ ಹೋರ್ಡಿಂಗ್ ತೆರವಿಗೆ 2016ರಲ್ಲಿ ಹೈಕೋರ್ಟ್ ತಡೆ ನೀಡಿದೆ. ಆದರೂ, ಅದನ್ನು ತೆರವುಗೊಳಿಸಿ ಎಫ್‌ಐಆರ್ ದಾಖಲಿಸಲಾಗಿದೆ. ಆದ್ದರಿಂದ ಬಿಬಿಎಂಪಿ ವಿರುದ್ಧ ಕ್ರಮ ಜರುಗಿಸಬೇಕು’ ಎಂಬುದು ಅರ್ಜಿದಾರರ ಕೋರಿಕೆ.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !