ಬುಧವಾರ, ಸೆಪ್ಟೆಂಬರ್ 22, 2021
21 °C

156 ತಾಲ್ಲೂಕುಗಳಲ್ಲಿ ಗೋಶಾಲೆ ತೆರೆಯಲು ಹೈಕೋರ್ಟ್‌ ಆದೇಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಬರಪೀಡಿತ 156 ತಾಲ್ಲೂಕುಗಳಲ್ಲಿ ಗೋಶಾಲೆಗಳನ್ನು ಆರಂಭಿಸಿ. ಮೇವು, ಕುಡಿಯುವ ನೀರು ಮತ್ತು ಔಷಧಗಳ ವ್ಯವಸ್ಥೆ ಮಾಡಿ’ ಎಂದು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿರುವ ಹೈಕೋರ್ಟ್, ‘ಒಂದು ವೇಳೆ ತೆರೆಯಲು ಆಗದೇ ಇದ್ದರೆ ಅದಕ್ಕೆ ಸೂಕ್ತ ಕಾರಣ ನೀಡಬೇಕು’ ಎಂದು ಪಶುಸಂಗೋಪನಾ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ತಾಕೀತು ಮಾಡಿದೆ.

ಈ ಕುರಿತಂತೆ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ತುಮಕೂರು ಜಿಲ್ಲೆಯ ಎ. ಮಲ್ಲಿಕಾರ್ಜುನ ಸಲ್ಲಿಸಿರುವ ಎರಡು ಪ್ರತ್ಯೇಕ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ನ್ಯಾಯಮೂರ್ತಿ ಬಿ. ವೀರಪ್ಪ ಹಾಗೂ ನ್ಯಾಯಮೂರ್ತಿ ಆರ್. ದೇವದಾಸ್ ಅವರಿದ್ದ ರಜಾ ಕಾಲದ ವಿಭಾಗೀಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು.

‘ಗೋಶಾಲೆ ಆರಂಭಿಸುವ ಕುರಿತು ವ್ಯಾಪಕ ಪ್ರಚಾರ ಮಾಡಬೇಕು. ಈ ದಿಸೆಯಲ್ಲಿ ಆಯಾ ತಾಲ್ಲೂಕುಗಳ ತಹಶೀಲ್ದಾರ್ ಹಾಗೂ ಸಂಬಂಧಪಟ್ಟ ಜಿಲ್ಲಾಧಿಕಾರಿಗಳಿಗೆ ಅದರ ಜವಾಬ್ದಾರಿ ವಹಿಸಬೇಕು’ ಎಂದು ನಿರ್ದೇಶಿಸಿದೆ. 

ವರದಿಗೆ ಅತೃಪ್ತಿ: ವಿಚಾರಣೆ ವೇಳೆ ಸರ್ಕಾರದ ಪರ ವಕೀಲ ಡಿ.ನಾಗರಾಜ ಅವರು ವಸ್ತುಸ್ಥಿತಿ ವರದಿ ಸಲ್ಲಿಸಿದರು. ಆದರೆ, ಇದಕ್ಕೆ ಅತೃಪ್ತಿ ವ್ಯಕ್ತಪಡಿಸಿದ ನ್ಯಾಯಪೀಠ, ‘ವಾಸ್ತವ ಸಂಗತಿ ಏನಿದೆ ಎಂಬುದನ್ನು ನಮಗೆ ನೋಡಲು ಸಾಧ್ಯವಿಲ್ಲ. ಆದ್ದರಿಂದ ಈ ನಿಟ್ಟಿನಲ್ಲಿ ಸರ್ಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ದಾಖಲೆ ಸಮೇತ ವಿವರವಾದ ವರದಿ ಸಲ್ಲಿಸಿ’ ಎಂದು ನ್ಯಾಯಪೀಠ ಹೇಳಿತು.

ಕಾರ್ಯಪಡೆ ರಚನೆ: ‘ಬರಪೀಡಿತ ಪ್ರದೇಶಗಳಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣೆ ಅನುದಾನ ಬಳಸಿಕೊಂಡು ಮೇವು, ಕುಡಿಯುವ ನೀರು, ಔಷಧಿ ಪೂರೈಕೆ ಮಾಡಲಾಗುತ್ತಿದೆ. ಮೇವು ಖರೀದಿಗೆ ಜಿಲ್ಲಾಧಿಕಾರಿಗಳಿಂದ ಟೆಂಡರ್ ಕರೆಯಲಾಗುತ್ತಿದೆ. ತಾತ್ಕಾಲಿಕ ಪಶು ಚಿಕಿತ್ಸಾಲಯಗಳನ್ನು ತೆರೆಯಲಾಗುತ್ತಿದೆ’ ಎಂದು ನಾಗರಾಜ ಅವರು ಮಾಹಿತಿ ನೀಡಿದರು.‘ಈಗಾಗಲೇ ಕೊಪ್ಪಳ, ಬಳ್ಳಾರಿ ಹಾಗೂ ಚಿತ್ರದುರ್ಗ ಜಿಲ್ಲೆಗಳಲ್ಲಿ ಗೋಶಾಲೆ ತೆರೆಯಲಾಗಿದೆ. ಶಾಸಕರ ನೇತೃತ್ವದಲ್ಲಿ ಜಿಲ್ಲಾಧಿಕಾರಿ, ತಹಶೀಲ್ದಾರ್ ಒಳಗೊಂಡ ಕಾರ್ಯಪಡೆ ರಚಿಸಲಾಗಿದೆ’ ಎಂದರು. ವಿಚಾರಣೆಯನ್ನು ಇದೇ 21ಕ್ಕೆ ಮುಂದೂಡಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು