ಮಂಗಳವಾರ, ಮೇ 26, 2020
27 °C

ಕಾಂಬೋಡಿಯಾದಲ್ಲಿ ಹಿಂದೂ ಮಹಾಕಾವ್ಯ

ಟಿ.ಎಸ್. ಗೋಪಾಲ್ Updated:

ಅಕ್ಷರ ಗಾತ್ರ : | |

Prajavani

ಕಾಂಬೋಡಿಯಾದ ಆಂಗ್ ಕೋರ್ ವಾಟ್ ದೇಗುಲಗಳನ್ನು ನೋಡಬೇಕು ಎಂಬುದು ಬಹುದಿನದ ಕನಸಾಗಿತ್ತು. ಅದನ್ನು ನನಸಾಗಿಸಲು ಗೆಳೆಯರು ಸೇರಿ ಪ್ರವಾಸ ಹೋಗಲು ನಿರ್ಧರಿಸಿದೆವು. ಕಳೆದ ತಿಂಗಳು ಪ್ರವಾಸ ಮುಗಿಸಿ ಬಂದೆವು.

ಕಾಂಬೋಡಿಯಾಗೆ ಬೆಂಗಳೂರಿನಿಂದ ನೇರ ವಿಮಾನಸೌಲಭ್ಯವಿಲ್ಲ. ಬ್ಯಾಂಕಾಕ್‌ ಅಥವಾ ಕ್ವಾಲಾಲಂಪುರಕ್ಕೆ ಹೋಗಿ ಅಲ್ಲಿಂದ ವಿಮಾನ ಬದಲಿಸಿ ಕಾಂಬೊಡಿಯಾದ ರಾಜಧಾನಿ ನಾಮ್‍ಪೆನ್‍ ಅಥವಾ ಸೀಮ್‌ರೀಪ್‍ಲಿ ನಗರಕ್ಕೆ ಹೋಗಬಹುದು. ನಮ್ಮ ಪ್ರವಾಸದ ಮುಖ್ಯ ಉದ್ದೇಶ ಆಂಗ್‌ಕೋರ್‌ವಾಟ್ ದೇಗುಲಗಳನ್ನು ನೋಡುವುದಾಗಿತ್ತು. ಹಾಗಾಗಿ ಅಲ್ಲಿಗೆ ಸಮೀಪವಿರುವ ಸೀಮ್ ರೀಪ್ ನಗರಕ್ಕೆ ಇಳಿದುಕೊಂಡೆವು.

ಸೀಮ್‌ರೀಪ್ ವಿಮಾನ ನಿಲ್ದಾಣದಲ್ಲಿ  ಆನ್ ಅರೈವಲ್ ವೀಸಾ (ವಿವರಗಳಿಗೆ ಬಾಕ್ಸ್ ನೋಡಿ) ಪಡೆದು ಹೊರಬಂದೆವು. ನನ್ನ ಹೆಸರಿನ ಫಲಕ ಹೊತ್ತ ನಗುಮುಖದ ಮಾರ್ಗದರ್ಶಿ ಕಾಣಿಸಿಕೊಂಡ. ಆತ, ನಿಲ್ದಾಣದ ಕೌಂಟರುಗಳಲ್ಲೇ ಪ್ರವಾಸದ ಅವಧಿಯಲ್ಲಿ ಬಳಸಬಹುದಾದ ಸಿಮ್‍ಕಾರ್ಡ್ ಹಾಗೂ ನಮ್ಮ ರೂಪಡಾಲರ್‌ಗೆ ವಿನಿಮಯವಾಗಿ ಸ್ಥಳೀಯ ಕರೆನ್ಸಿ ರಿಯಾಲ್‌ಗಳನ್ನು ಕೊಂಡುಕೊಳ್ಳಬಹುದೆಂದು ಸೂಚಿಸಿದ. ಇಪ್ಪತ್ತು ಡಾಲರ್ ಕೊಟ್ಟು ರಿಯಾಲ್ ವಿನಿಮಯ ಕೇಳಿದರೆ ಎಪ್ಪತ್ತಾರು ಸಾವಿರವೋ ಏನೋ ಕೈತುಂಬ ನೋಟುಗಳು ಸಿಕ್ಕವು.

ಕಾಂಬೋಡಿಯಾ ನಮ್ಮನ್ನು ಆಕರ್ಷಿಸಲು ಮುಖ್ಯ ಕಾರಣ, ಅಲ್ಲಿರುವ ಪ್ರಾಚೀನ ಹಿಂದೂ ದೇವಾಲಯಗಳು. ಖ್ಮೇರ್ ಸಾಮ್ರಾಜ್ಯವನ್ನು ಆಳಿದ ಹಿಂದೂ ಅರಸರಲ್ಲಿ ಜಯವರ್ಮ(790-835) ಮೊದಲಿಗ. ಪರಮೇಶ್ವರ ಜಯವರ್ಮ(1327) ಕೊನೆಯವನು. ಅಂದರೆ, 500ಕ್ಕೂ ಹೆಚ್ಚು ವರ್ಷಗಳ ಕಾಲ ಹಿಂದೂಧರ್ಮ ಈ ನಾಡಿನಲ್ಲಿ ತನ್ನ ಹಿರಿಮೆಯನ್ನು ಬೆಳಗಿಸಿತು. ಕಾಲಕ್ರಮದಲ್ಲಿ ಹಿಂದೂ ಅರಸರ ಪ್ರಾಬಲ್ಯದೊಡನೆ ಹಿಂದೂ ಧರ್ಮವೂ ಕುಗ್ಗಿ ಬೌದ್ಧಧರ್ಮವು ಹೆಗ್ಗಳಿಕೆ ಪಡೆಯಿತು. ಪುರಾತನ ದೇವಾಲಯಗಳು ಹಾಳುಬಿದ್ದವು. ಈಗಲೂ ಇಲ್ಲಿನ ಗರ್ಭಗುಡಿಗಳಲ್ಲಿ ಮೂರ್ತಿಗಳು ಉಳಿದಿಲ್ಲ. ಅಳಿದುಳಿದ ದೇವತಾ ಶಿಲ್ಪಗಳನ್ನು ರಾಜಧಾನಿ ನಾಮ್‍ಪೆನ್‍ನಲ್ಲಿರುವ ರಾಷ್ಟ್ರೀಯ ಸಂಗ್ರಹಾಲಯದಲ್ಲಿ ರಕ್ಷಿಸಿಡಲಾಗಿದೆ. ವಿಷ್ಣು, ಶಿವ, ದುರ್ಗೆ, ಲಕ್ಷ್ಮಿ, ವಾಲಿ-ಸುಗ್ರೀವ, ಗರುಡ, ನಾಗರಾಜ ಮತ್ತಿತರ ಬೃಹತ್ ಶಿಲ್ಪಗಳನ್ನು ನೋಡುವಾಗ ಗತವೈಭವವನ್ನು ಕಿಂಚಿತ್ತಾದರೂ ಕಲ್ಪಿಸಿಕೊಳ್ಳಲು ಸಾಧ್ಯ. ಇನ್ನು ದೇವಾಲಯಗಳಲ್ಲಿ ಭಗ್ನ ಪಾಣಿಪೀಠಗಳು ಗತವೈಭವವನ್ನು ನೆನೆದು ನಿಟ್ಟುಸಿರು ಬಿಡುತ್ತಿವೆ. ವಿಶ್ವ ಪಾರಂಪರಿಕ ಸ್ಮಾರಕವೆಂಬ ಬಿರುದು ದೊರೆತ ಮೇಲೆ ಈ ದೇಗುಲಗಳ ಸಂರಕ್ಷಣೆಗೆ ವಿಶೇಷಕ್ರಮಗಳನ್ನು ಕೈಗೊಳ್ಳಲಾಗಿದೆ. ಭಾರತ, ಚೀನಾ, ಜಪಾನ್ ಮೊದಲಾದ ದೇಶಗಳು ಇಲ್ಲಿನ ಸ್ಮಾರಕಗಳ ಜೀರ್ಣೋದ್ಧಾರಕ್ಕೆ ಜೊತೆಗೂಡಿವೆ.

ಇದೀಗ, ಕಾಂಬೋಡಿಯದ ಪ್ರವಾಸೋದ್ಯಮವಂತೂ ಈ ದೇಗುಲಗಳನ್ನೇ ಅವಲಂಬಿಸಿದೆ. ನೂರು ಚದರ ಚ.ಕಿ.ಮೀಗಳಿಗೂ ಹೆಚ್ಚು ವಿಸ್ತೀರ್ಣದಲ್ಲಿ ಹರಡಿಕೊಂಡಿರುವ ಈ ದೇವಾಲಯಗಳನ್ನು ನೋಡಲು ಮೂರು ದಿನಗಳಾದರೂ ಬೇಕು. ಸೀಮ್‌ರೀಪ್ ಬಿಡುವ ಮೊದಲೇ ಪ್ರವಾಸೋದ್ಯಮದ ಕಚೇರಿಯಲ್ಲಿ ಒಮ್ಮೆ ಅರವತ್ತೆರಡು ಡಾಲರ್ ಶುಲ್ಕ ಪಾವತಿಸಿ ನಿಮ್ಮ ಫೋಟೊ ಇರುವ ಪ್ರವೇಶ ಟಿಕೆಟ್ ಪಡೆದುಕೊಂಡರೆ ಸಾಕು; ಮೂರು ದಿನಗಳ ಅವಧಿಯಲ್ಲಿ ಯಾವುದೇ ಸ್ಮಾರಕಕ್ಕೆ ಎಷ್ಟು ಸಲ ಬೇಕಾದರೂ ಭೇಟಿ ಕೊಡಬಹುದು. ನಾಲ್ವರು ಕೂಡಬಹುದಾದ ಮೋಟರ್ ಬೈಕ್ ರಿಕ್ಷಾ ಟುಕ್-ಟುಕ್ ನಿಮ್ಮನ್ನು ಬೇಕಾದಲ್ಲಿಗೆ ಒಯ್ಯಬಲ್ಲುದು. ನಗರಪ್ರದೇಶದಲ್ಲಿ ಭಾರತೀಯ ಹೋಟೆಲ್‌ಗಳಿರುವುದರಿಂದ ಸಸ್ಯಾಹಾರಿಗಳಿಗೆ ಆಹಾರದ ಚಿಂತೆಯಿಲ್ಲ.

ಇನ್ನೂರು ಹೆಕ್ಟರ್‌ಗಳಷ್ಟು ವಿಶಾಲ ಪ್ರದೇಶದಲ್ಲಿ ಹರಡಿಕೊಂಡ ಆಂಗ್‍ಕೋರ್ ವಾಟ್ ದೇಗುಲ ಸಂಕೀರ್ಣ ವಿಶ್ವದ ಅತಿ ದೊಡ್ಡ ಧಾರ್ಮಿಕ ವಾಸ್ತುನಿರ್ಮಾಣವೆನಿಸಿದೆ. ಇಲ್ಲಿನ ಶಿಖರಗಳು, ಉಬ್ಬುಶಿಲ್ಪಫಲಕಗಳು, ಅಪ್ಸರೆಯರ ಶಿಲ್ಪಗಳು ಗಮನಾರ್ಹವಾದವು. ಕಾಂಬೋಡಿಯದ ಎಲ್ಲ ದೇಗುಲಗಳೂ ಬಹುಎತ್ತರದ ಜಗಲಿಯ ಮೇಲೆ ನಿರ್ಮಾಣವಾಗಿರುವ ಕಟ್ಟಡಗಳು. ‘ಕಾಲಿದ್ದವರು ಹಂಪಿಗೆ ಹೋಗಬಹುದು’ ಎಂಬ ಗಾದೆಯಂತೆ ‘ಮೊಣಕಾಲಿದ್ದವರು ಕಾಂಬೊಡಿಯಕ್ಕೆ’ ಬನ್ನಿ ಎಂದರೂ ಸರಿಯೇ. ಏಕೆಂದರೆ ಇಲ್ಲಿ ದೇಗುಲಗಳನ್ನೂ ತಲುಪಲು ನೂರಾರು ಮೆಟ್ಟಿಲು ಹತ್ತಲೇಬೇಕು.

ಹಿಂದೂ ದೇವಾಲಯ ಶಿಲ್ಪಗಳ ಅವಶೇಷಗಳನ್ನು ನೋಡಬಯಸುವವರು ಮುಖ್ಯವಾಗಿ ಸೀಮ್ ರೀಪ್‍ ನಗರದಿಂದ 40 ಕಿ.ಮೀ ದೂರದ ಬಂತೇ ಸೆರಿ ದೇವಾಲಯವನ್ನು ನೋಡಲೇಬೇಕು. ಇಲ್ಲಿನ ಶಿಲಾಫಲಕಗಳಲ್ಲಿ ಚಿತ್ರಿತವಾಗಿರುವ ನಟರಾಜ, ನರಸಿಂಹ, ಕೃಷ್ಣ, ವಾಲಿಸುಗ್ರೀವ ಕಾಳಗ, ಕಂಸವಧೆ ಹಾಗೂ ದೇವಾಲಯ ಸಂಕೀರ್ಣದಲ್ಲಿ ಅಲ್ಲಲ್ಲಿ ಇರಿಸಿದ ಕಪಿಗಳ ಶಿಲ್ಪಗಳು ಆಕರ್ಷಕವಾಗಿವೆ. ಇಲ್ಲಿಂದ ಮುಂದಕ್ಕೆ ಅರಣ್ಯಪ್ರದೇಶದ ನಡುವೆ ಕಬಾಲ್ ಸ್ಪೀನ್ ಎಂಬಲ್ಲಿ ಹರಿಯುವ ನದಿಯೆಡೆಯಲ್ಲಿ ನೂರಾರು ಲಿಂಗಗಳೂ, ವಿಷ್ಣು, ಬ್ರಹ್ಮ ಮೊದಲಾದ ಉಬ್ಬುಶಿಲ್ಪಗಳೂ ಇವೆ. ಏಜೆನ್ಸಿ ಮೂಲಕ ಪ್ರವಾಸಕ್ಕೆ ಹೋಗುವವರು ಈ ತಾಣಗಳನ್ನೆಲ್ಲ ಪ್ರವಾಸಪಟ್ಟಿಯಲ್ಲಿ ಸೇರ್ಪಡೆ ಮಾಡುವಂತೆ ಮೊದಲೇ ಸೂಚಿಸುವುದು ಒಳ್ಳೆಯದು.

ದೇಗುಲಗಳ ಆವರಣ ಗೋಡೆಯ ಕೈಪಿಡಿಗಳ ಮೇಲೂ, ಸೇತುವೆಗಳ ಮೇಲಂಚಿನಲ್ಲೂ ಸರ್ಪ ವಿನ್ಯಾಸವಿದೆ. ಈ ಸರ್ಪ ಸಮುದ್ರಮಥನಕಾಲದ ವಾಸುಕಿಯ ಸಂಕೇತವೇ ? ಏಕೆಂದರೆ, ಈ ಸರ್ಪವನ್ನು ಹಿಡಿದ ಸುರಾಸುರರ ಬೃಹತ್ ಮೂರ್ತಿಗಳೂ ಅಲ್ಲಲ್ಲಿ ಕಂಡವು. ನಾಗರಾಜನಿಗಾಗಿ ಮೀಸಲಾದ ನಾಕ್ ಪೀನ್ ಎಂಬ ದೇವಾಲಯವೂ ಇರುವುದು ಇಲ್ಲಿನ ವಿಶೇಷ.

ಪ್ರಾಚೀನ ದೇಗುಲಗಳ ಗೋಡೆಗಳ ಮೇಲೆ ಉಬ್ಬುಶಿಲ್ಪಗಳಾಗಿರುವ ಅಪ್ಸರಸಿಯರು ತಮ್ಮ ನರ್ತನ ಕೌಶಲವನ್ನೂ ವೇಷಭೂಷಣಗಳನ್ನೂ ಕಾಂಬೋಡಿಯದ ಸಾಂಪ್ರದಾಯಿಕ ನರ್ತಕಿಯರಿಗೆ ಬಿಟ್ಟುಹೋಗಿದ್ದಾರೆ. ಈ ನೃತ್ಯ ಕಾರ್ಯಕ್ರಮ ವೀಕ್ಷಣೆಯೂ ನಿಮ್ಮ ಪ್ರವಾಸದ ಚಟುವಟಿಕೆಯಲ್ಲಿ ಸೇರಲಿ. ಅಂದಹಾಗೆ, ಕೆಲವು ದೇಗುಲಸಂಕೀರ್ಣಗಳನ್ನು ಬೇರುಗಳಿಂದ ತಬ್ಬಿಹಿಡಿದ ಬೃಹತ್ ವೃಕ್ಷಗಳನ್ನು ನೋಡಲು ಮರೆಯದಿರಿ.

**

ಅರೈವಲ್ ವೀಸಾ

ದಕ್ಷಿಣ ಏಷ್ಯಾ ಸೇರಿದಂತೆ ಕೆಲವು ರಾಷ್ಟ್ರಗಳಿಗೆ ಆಯಾ ವಿಮಾನ ನಿಲ್ದಾಣದಲ್ಲೇ ವೀಸಾ ಕೊಡುವ ವ್ಯವಸ್ಥೆ ಇರುತ್ತದೆ. ಪ್ರಯಾಣಿಕರು, ವಿಮಾನ ನಿಲ್ದಾಣದಲ್ಲಿ ಪಾಸ್‌ಪೋರ್ಟ್ ತೋರಿಸಿ, ನಿಗದಿತ ಶುಲ್ಕ ಪಾವತಿಸಿ ವೀಸಾ ಸ್ಟಾಂಪಿಂಗ್ ಮಾಡಿಸಿಕೊಳ್ಳಬೇಕು. ಅದನ್ನು ‘ವೀಸಾ ಆನ್ ಅರೈವಲ್’ ಎನ್ನುತ್ತಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.