ಭಾನುವಾರ, 12 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌ ಜತೆ ಮೂಡದ ಒಮ್ಮತ: ತೆಲಂಗಾಣದಲ್ಲಿ ಸಿಪಿಎಂ ಏಕಾಂಗಿ ಸ್ಪರ್ಧೆ

Published 2 ನವೆಂಬರ್ 2023, 14:01 IST
Last Updated 2 ನವೆಂಬರ್ 2023, 14:01 IST
ಅಕ್ಷರ ಗಾತ್ರ

ಹೈದರಾಬಾದ್‌:  ‘ಇಂಡಿಯಾ’ ಮೈತ್ರಿಕೂಟದ ಸದಸ್ಯ ಪಕ್ಷವಾದ ಸಿಪಿಎಂ ಕಾಂಗ್ರೆಸ್‌ನೊಂದಿಗೆ ಮುನಿಸಿಕೊಂಡಿದ್ದು ತೆಲಂಗಾಣ ವಿಧಾನಸಭಾ ಚುನಾವಣೆಯನ್ನು ಏಕಾಂಗಿಯಾಗಿ ಎದುರಿಸಲು ನಿರ್ಧರಿಸಿದೆ.

ಮೈತ್ರಿಕೂಟದ ಮತ್ತೊಂದು ಸದಸ್ಯ ಪಕ್ಷ ಸಿಪಿಐ, ಅಭ್ಯರ್ಥಿಗಳ ಅಂತಿಮ ಪಟ್ಟಿಯನ್ನು ಕಾಂಗ್ರೆಸ್‌ ಬಿಡುಗಡೆ ಮಾಡುವವರೆಗೆ ಇನ್ನೂ ಎರಡು ದಿನ ಕಾದು ನೋಡಲು ತೀರ್ಮಾನಿಸಿದೆ.

ಆಡಳಿತ ವಿರೋಧಿ ಮತಗಳು ಒಡೆದರೆ ಅದು ಬಿಆರ್‌ಎಸ್‌ಗೆ ಅನುಕೂಲ ಮಾಡಲಿರುವುದರಿಂದ ಈ ಮತಗಳನ್ನು ಒಡೆಯದಿರಲು ಎಡಪಕ್ಷಗಳು ಮತ್ತು ಕಾಂಗ್ರೆಸ್‌  ನಿರ್ಧರಿಸಿದ್ದು ಚುನಾವಣಾ ಪೂರ್ವ ಮೈತ್ರಿ ಮಾಡಿಕೊಳ್ಳ ಬಯಸಿದ್ದವು. ಸೀಟು ಹಂಚಿಕೆ ಕುರಿತು ಹಲವು ಸುತ್ತಿನ ಮಾತುಕತೆಗಳು ನಡೆದ ಬಳಿಕ ಒಮ್ಮತ ಮೂಡಿರಲಿಲ್ಲ.  ಗುರುವಾರ ಮಧ್ಯಾಹ್ನ 3ರೊಳಗೆ  ಸೀಟು ಹಂಚಿಕೆ ಅಂತಿಮಗೊಳಿಸುವಂತೆ ಸಿಪಿಎಂ ಕಾಂಗ್ರೆಸ್‌ಗೆ ಗಡುವು ನೀಡಿತ್ತು.

ಕಾಂಗ್ರೆಸ್‌ನಿಂದ ಯಾವುದೇ ಪ್ರತಿಕ್ರಿಯೆ ಬರದ ಕಾರಣ ಸಿಪಿಎಂ 24 ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಾಗಿ ಪ್ರಕಟಿಸಿತು. ರಾಜ್ಯ ಮಟ್ಟದ ಸಭೆ ನಡೆಸಿದ ಪಕ್ಷವು 17 ಸ್ಥಾನಗಳಿಗೆ ಅಭ್ಯರ್ಥಿಗಳ ಹೆಸರನ್ನೂ ಘೋಷಿಸಿತು.

ಸೀಟು ಹಂಚಿಕೆ ಸಂದರ್ಭದಲ್ಲಿ ಸಿಪಿಎಂ ಮೂರು ಸ್ಥಾನಗಳನ್ನು  ಬಿಟ್ಟುಕೊಡಲು ಕೋರಿತ್ತು. ಕಾಂಗ್ರೆಸ್‌ ಎರಡು ಸ್ಥಾನಗಳನ್ನು ಮಾತ್ರ ಬಿಟ್ಟುಕೊಡಲು ಸಿದ್ಧವಾಗಿತ್ತು. ಇದಕ್ಕೂ ಸಿಪಿಎಂ ಒಪ್ಪಿತ್ತು. ಆದರೆ ಕಾಂಗ್ರೆಸ್‌ ಈ ಎರಡು ಸ್ಥಾನಗಳ ಬಗ್ಗೆ ಇನ್ನೂ ನಿರ್ಧರಿಸಿಲ್ಲದಿರುವುದನ್ನು ಎಂದು  ಪಕ್ಷದ ರಾಜ್ಯ ಕಾರ್ಯದರ್ಶಿ ತಮ್ಮಿನೆನಿ ವೀರಭದ್ರಂ ಅವರು ಗಮನಿಸಿದರು.

 ‘ಮಾತುಕತೆ ಶುರುವಾಗಿನಿಂದಲೂ ನಾವು ಭದ್ರಾಚಲಂ ಮತ್ತು ಪಾಲೇರು ಜತೆಗೆ ವೈರಾ ಕ್ಷೇತ್ರದ ಸ್ಥಾನದ ಬಿಟ್ಟುಕೊಡುವಂತೆ ಕೇಳುತ್ತಿದ್ದೆವು. ಅವರು ವೈರಾ ಮತ್ತು ಮಿರ್‍ಯಾಲಗೂಡ ಕ್ಷೇತ್ರ ಬಿಟ್ಟುಕೊಡಲು ಸಜ್ಜಾಗಿದ್ದರು. ಈಗ ಕಾಂಗ್ರೆಸ್‌ನವರು ವೈರಾ ಕ್ಷೇತ್ರ ಬಿಟ್ಟುಕೊಡಲು ಸಾಧ್ಯವಿಲ್ಲ ಎನ್ನುತ್ತಿದ್ದಾರೆ ಅಲ್ಲದೆ ಮಿರ‍್ಯಾಲಗೂಡ ಮತ್ತು ಹೈದರಾಬಾದ್‌ನಿಂದ ಮತ್ತೊಂದು ಕ್ಷೇತ್ರ ಬಿಟ್ಟುಕೊಡುವುದಾಗಿ ಹೇಳುತ್ತಿದ್ದಾರೆ. ಈ ಎರಡು ಸ್ಥಾನಗಳ ಕುರಿತೂ ನಿರ್ಧಾರಕ್ಕೆ ಬರಲಿಲ್ಲ. ನಮ್ಮ ಜತೆ ಮೈತ್ರಿ ಮಾಡಿಕೊಳ್ಳಲು ಕಾಂಗ್ರೆಸ್‌ಗೆ ಇಷ್ಟವಿಲ್ಲ ಎನಿಸುತ್ತದೆ’ ಎಂದು ವೀರಭದ್ರಂ ಹೇಳಿದರು.

‘ಸಿಪಿಎಂ ಅಭ್ಯರ್ಥಿಗಳು ಕಣಕ್ಕಿಳಿದಿರುವ ಸ್ಥಾನಗಳು ಬಿಟ್ಟು ಉಳಿದೆಡೆ, ಬಿಜೆಪಿ ಅಭ್ಯರ್ಥಿಗಳನ್ನು ಸೋಲಿಸಲು ಸಾಧ್ಯವಿ‌ರುವಲ್ಲಿ ಕಾಂಗ್ರೆಸ್‌ಗೆ ಮತ ಹಾಕಲಾಗುವುದು. ಕಾಂಗ್ರೆಸ್ ಅಥವಾ ಬಿಆರ್‌ಎಸ್‌ ಕೂಡ ಆಗಬಹುದು. ಬಿಜೆಪಿ ಸೋಲುವಂತೆ ಮಾಡುವುದು ನಮ್ಮ ಮುಖ್ಯ ಉದ್ದೇಶ’ ಎಂದರು.

ಕೊತ್ತಗೂಡಂ ಮತ್ತು ಚೆನ್ನೂರು ಸ್ಥಾನವನ್ನು ಬಿಟ್ಟುಕೊಡುವುದಾಗಿ ಸಿಪಿಐಗೆ ಕಾಂಗ್ರೆಸ್‌ ಹೇಳಿದೆ. ಆದರೆ ಕಾಂಗ್ರೆಸ್‌ ತನ್ನ ಅಂತಿಮ ಪಟ್ಟಿ ಪ್ರಕಟಿಸುವವರೆಗೆ ಇನ್ನೂ ಎರಡು ದಿನ ಕಾದು ನೋಡಲು ಸಿಪಿಐ ನಿರ್ಧರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT