ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳಾ ಮೀಸಲಾತಿ ಗಣತಿ ನಂತರ ಅನುಷ್ಠಾನ: ಅಸಿಂಧು ಕಷ್ಟ- ಸುಪ್ರೀಂ ಕೋರ್ಟ್‌

Published 3 ನವೆಂಬರ್ 2023, 16:52 IST
Last Updated 3 ನವೆಂಬರ್ 2023, 16:52 IST
ಅಕ್ಷರ ಗಾತ್ರ

ನವದೆಹಲಿ: ಮಹಿಳಾ ಮೀಸಲಾತಿಯು ಜನಗಣತಿಯ ನಂತರದಲ್ಲಿ ಅನುಷ್ಠಾನಕ್ಕೆ ಬರುತ್ತದೆ ಎಂಬು ಹೇಳುವ ಭಾಗವನ್ನು ಅಸಿಂಧುಗೊಳಿಸುವುದು ‘ಬಹಳ ಕಷ್ಟ’ ಎಂದು ಸುಪ್ರೀಂ ಕೋರ್ಟ್‌ ಶುಕ್ರವಾರ ಹೇಳಿದೆ. ‘ಇದೊಂದು ಒಳ್ಳೆಯ ನಡೆ’ ಎಂದು ಪೀಠವು ಈ ಕಾನೂನಿನ ವಿಚಾರವಾಗಿ ಹೇಳಿದೆ.

ಮಹಿಳಾ ಮೀಸಲಾತಿ ಕಾನೂನನ್ನು ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆಗೂ ಮೊದಲೇ ಅನುಷ್ಠಾನಕ್ಕೆ ತರುವಂತೆ ಆದೇಶಿಸಬೇಕು ಎಂದು ಕೋರಿ ಕಾಂಗ್ರೆಸ್ಸಿನ ಜಯಾ ಠಾಕೂರ್ ಅವರು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರವಾಗಿ ನೋಟಿಸ್‌ ಜಾರಿಗೆ ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ಎಸ್.ವಿ.ಎನ್. ಭಟ್ಟಿ ಅವರಿದ್ದ ವಿಭಾಗೀಯ ಪೀಠವು ನಿರಾಕರಿಸಿತು.

ಇದೇ ವಿಚಾರವಾಗಿ ಅರ್ಜಿಯೊಂದು ಸುಪ್ರೀಂ ಕೋರ್ಟ್‌ನಲ್ಲೇ ಬಾಕಿ ಇದೆ. ಆ ಅರ್ಜಿಯ ಜೊತೆಯಲ್ಲೇ ಜಯಾ ಅವರ ಅರ್ಜಿಯನ್ನು ನವೆಂಬರ್ 22ರಂದು ವಿಚಾರಣೆಗೆ ಕೈಗೆತ್ತಿಕೊಳ್ಳಲಾಗುವುದು ಎಂದು ಪೀಠ ಹೇಳಿದೆ. 

ಜಯಾ ಪರವಾಗಿ ಹಾಜರಾಗಿದ್ದ ಹಿರಿಯ ವಕೀಲ ವಿಕಾಸ್ ಸಿಂಗ್ ಅವರ ವಾದವನ್ನು ಒಪ್ಪಲು ಪೀಠವು ನಿರಾಕರಿಸಿತು. ಹಿಂದುಳಿದ ಸಮುದಾಯಗಳಿಗೆ ಮೀಸಲಾತಿ ಕಲ್ಪಿಸಲು ಜನಗಣತಿಯ ದತ್ತಾಂಶದ ಅಗತ್ಯ ಇರುತ್ತದೆ. ಆದರೆ ಮಹಿಳೆಯರಿಗೆ ಮೀಸಲಾತಿ ಕಲ್ಪಿಸುವಲ್ಲಿ ಜನಗಣತಿಯ ಅಗತ್ಯದ ಪ್ರಶ್ನೆ ಬಂದಿದ್ದಾದರೂ ಹೇಗೆ ಎಂದು ಸಿಂಗ್ ಅವರು ವಾದಿಸಿದ್ದರು.

ಜನಗಣತಿಯ ನಂತರ ಈ ಕಾನೂನನ್ನು ಅನುಷ್ಠಾನಕ್ಕೆ ತರಲಾಗುತ್ತದೆ ಎಂದು ಹೇಳುವ ಭಾಗವನ್ನು ರದ್ದು ಮಾಡಬೇಕು ಎಂದು ಸಿಂಗ್ ಅವರು ಕೋರಿದ್ದರು.

‘ನಿಮ್ಮ ವಾದವನ್ನು ನಾವು ಅರ್ಥ ಮಾಡಿಕೊಂಡಿದ್ದೇವೆ. ಮಹಿಳೆಯರಿಗೆ ಮೀಸಲಾತಿ ಕಲ್ಪಿಸಲು ಜನಗಣತಿಯ ಅಗತ್ಯವಿಲ್ಲ ಎಂದು ನೀವು ಹೇಳುತ್ತಿದ್ದೀರಿ. ಆದರೆ ಇಲ್ಲಿ ಬೇರೆ ಅಂಶಗಳೂ ಇವೆ. ಮೊದಲು ಕ್ಷೇತ್ರಗಳನ್ನು ಮೀಸಲಾಗಿ ಇರಿಸಬೇಕಾಗುತ್ತದೆ ಹಾಗೂ ಇತರ ಕೆಲವು ಅಂಶಗಳಿವೆ...’ ಎಂದು ಪೀಠ ಹೇಳಿತು.

ಜಯಾ ಸಲ್ಲಿಸಿರುವ ಅರ್ಜಿಯನ್ನು ವಜಾ ಮಾಡುತ್ತಿಲ್ಲ. ಹಾಗೆಯೇ ಅರ್ಜಿಗೆ ಸಂಬಂಧಿಸಿದಂತೆ ನೋಟಿಸ್‌ ನೀಡುತ್ತಲೂ ಇಲ್ಲ. ಈಗಾಗಲೇ ವಿಚಾರಣೆಯ ಹಂತದಲ್ಲಿ ಇರುವ ಅರ್ಜಿಯೊಂದಕ್ಕೆ ಇದನ್ನು ಜೋಡಿಸಲಾಗುತ್ತಿದೆ ಎಂದು ಪೀಠ ತಿಳಿಸಿತು.

ಮಹಿಳೆಯರಿಗೆ ಲೋಕಸಭೆಯಲ್ಲಿ ಹಾಗೂ ವಿಧಾನಸಭೆಗಳಲ್ಲಿ ಮೂರನೆಯ ಒಂದರಷ್ಟು ಸ್ಥಾನಗಳನ್ನು ಮೀಸಲು ಇರಿಸುವ ಮಸೂದೆಗೆ ಸಂಸತ್ತು ಸೆಪ್ಟೆಂಬರ್ 21ರಂದು ಅನುಮೋದನೆ ನೀಡಿದೆ. ಈ ಸಂವಿಧಾನ ತಿದ್ದುಪಡಿ ಮಸೂದೆಗೆ ವಿಧಾನಸಭೆಗಳು ಬಹುಮತದೊಂದಿಗೆ ಅನುಮೋದನೆ ನೀಡಬೇಕಿದೆ. ಮಸೂದೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಈಗಾಗಲೇ ಅಂಕಿತ ಹಾಕಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT