ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರಿಗೆ ‘ಅಂತರರಾಷ್ಟ್ರೀಯ ಅಪರಾಧ ನ್ಯಾಯಮಂಡಳಿ’ (ಐಸಿಟಿ) ವಿಧಿಸಿರುವ ಮರಣದಂಡನೆಯ ಶಿಕ್ಷೆ ನಿರೀಕ್ಷಿತ ಬೆಳವಣಿಗೆಯೇ ಆಗಿದೆ. ವಿಚಾರಣೆ ಆರಂಭಗೊಂಡಾಗಲೇ ಅದು ಗರಿಷ್ಠ ಶಿಕ್ಷೆಯಲ್ಲಿ ಕೊನೆಗೊಳ್ಳುತ್ತದೆನ್ನುವುದು ಸ್ಪಷ್ಟವಾಗಿತ್ತು. 2024ರಲ್ಲಿ ಬಾಂಗ್ಲಾದೇಶದಲ್ಲಿ ನಡೆದ ಮಾರಣಹೋಮದ ನಿರ್ಮಾತೃ ಎಂದು ಹಸೀನಾ ಅವರನ್ನು ‘ಐಸಿಟಿ’ ಬಣ್ಣಿಸಿದೆ. ಆ ಹಿಂಸಾತ್ಮಕ ವಿದ್ಯಮಾನದಲ್ಲಿ ಅನೇಕ ಸಾವುಗಳು ಸಂಭವಿಸಿದ್ದವು ಹಾಗೂ ಪ್ರತಿಭಟನೆಯ ಚಂಡಮಾರುತಕ್ಕೆ ಸಿಲುಕಿ ಹಸೀನಾ ಅವರು ಪ್ರಧಾನಿ ಸ್ಥಾನದಿಂದ ಪದಚ್ಯುತಗೊಂಡಿದ್ದರು. ದೇಶದಿಂದ ಪಲಾಯನ ಮಾಡುವ ಅನಿವಾರ್ಯತೆಗೆ ಸಿಲುಕಿದ ಅವರು, ಭಾರತದಲ್ಲಿ ಆಶ್ರಯ ಪಡೆದಿದ್ದಾರೆ. ತಮ್ಮ ವಿರುದ್ಧ ಪ್ರಕಟಗೊಂಡಿರುವ ಕಠಿಣ ತೀರ್ಪನ್ನು ತಿರಸ್ಕರಿಸಿರುವ ಹಸೀನಾ, ಚುನಾಯಿತವಲ್ಲದ ಸರ್ಕಾರದಿಂದ ಸ್ಥಾಪನೆಗೊಂಡಿರುವ ನಕಲಿ ನ್ಯಾಯಮಂಡಳಿ ತೀರ್ಪು ನೀಡಿದೆ ಎಂದು ಹೇಳಿದ್ದಾರೆ. ತಮ್ಮ ಮೇಲಿನ ಆರೋಪಗಳನ್ನು ಹೇಗ್ನಲ್ಲಿರುವ ಅಂತರರಾಷ್ಟ್ರೀಯ ಅಪರಾಧಗಳ ನ್ಯಾಯಾಲಯದ (ಐಸಿಸಿ) ಮುಂದೆ ತರುವಂತೆ ಬಾಂಗ್ಲಾದ ಮಧ್ಯಂತರ ಆಡಳಿತಕ್ಕೆ ಸವಾಲು ಹಾಕಿದ್ದಾರೆ. ಪದಚ್ಯುತ ಪ್ರಧಾನಿಯ ‘ಅವಾಮಿ ಲೀಗ್’ ಪಕ್ಷ, ತನ್ನ ಕಾರ್ಯಕರ್ತರ ಮೇಲೆ ನಡೆದ ಪ್ರತೀಕಾರದ ಹಿಂಸೆಯ ಬಗ್ಗೆ ತನಿಖೆಗಾಗಿ ಒತ್ತಾಯಿಸಿ ‘ಐಸಿಸಿ’ ಮೊರೆಹೋಗಿದೆ.

ಬಾಂಗ್ಲಾದೇಶ್ ನ್ಯಾಷನಲ್ ಪಾರ್ಟಿ ಸೇರಿದಂತೆ ಹಸೀನಾ ಮತ್ತು ಅವರ ಅವಾಮಿ ಲೀಗ್ ಪಕ್ಷದ ವಿರುದ್ಧ ಸಂಘಟನೆಗೊಂಡಿರುವ ರಾಜಕೀಯ ಪಕ್ಷಗಳು, ಐಸಿಟಿ ತೀರ್ಪನ್ನು ಸ್ವಾಗತಿಸಿವೆ. ‘ಇದೊಂದು ಚಾರಿತ್ರಿಕ ತೀರ್ಪು’ ಎಂದು ಮುಹಮ್ಮದ್ ಯೂನಸ್ ನೇತೃತ್ವದ ಮಧ್ಯಂತರ ಸರ್ಕಾರ ಬಣ್ಣಿಸಿದೆ. ಆದರೆ, ಈ ತೀರ್ಪು ಪೂರ್ವಗ್ರಹ ಹಾಗೂ ದ್ವೇಷಭಾವನೆಯಿಂದ ಕೂಡಿದೆ. ಐಸಿಟಿ ಸಾಮಾನ್ಯವಾಗಿ, ಅಂತರರಾಷ್ಟ್ರೀಯ ನ್ಯಾಯಾಧೀಶರು ಹಾಗೂ ಪ್ರಾಸಿಕ್ಯೂಟರ್ಗಳನ್ನು ಒಳಗೊಂಡಿರುತ್ತದೆ. ಆದರೆ, ಹಸೀನಾ ಅವರಿಗೆ ಮರಣದಂಡನೆ ವಿಧಿಸಿರುವ ನ್ಯಾಯಮಂಡಳಿಯಲ್ಲಿ ಬಾಂಗ್ಲಾದೇಶದ ನ್ಯಾಯಾಧೀಶರಷ್ಟೇ ಇದ್ದಾರೆ. ಹಸೀನಾ ಅವರ ಪರವಾದ ಏಕೈಕ ವಕೀಲ ಕೂಡ ಸರ್ಕಾರದಿಂದ ನೇಮಕಗೊಂಡಿದ್ದರು. ಬಾಂಗ್ಲಾದೇಶದಲ್ಲೀಗ ಧ್ರುವೀಕೃತ ಹಾಗೂ ಪ್ರತೀಕಾರ ಸಂಸ್ಕೃತಿಯ ರಾಜಕಾರಣ ಮುನ್ನೆಲೆಗೆ ಬಂದಿದೆ. ವಿಷಮಯಗೊಂಡಿರುವ ಆ ರಾಜಕೀಯ ಪರಿಸರ ರೂಪುಗೊಳ್ಳುವುದರಲ್ಲಿ ಹಸೀನಾ ಅವರ ಪಾತ್ರವೂ ಇದೆ. ಹಸೀನಾ ಅವರ ಪದಚ್ಯುತಿ– ಪಲಾಯನದ ನಂತರ ಪರಿಸ್ಥಿತಿ ಮತ್ತಷ್ಟು ವಿಷಮಿಸಿದ್ದು, ಮುಸ್ಲಿಂ ಮೂಲಭೂತವಾದ ಹಾಗೂ ಅಸಹಿಷ್ಣುತೆ ರಾಜಕಾರಣದಲ್ಲಿ ಬೆರೆತಿದೆ. ಈ ಹೊಸ ಬೆಳವಣಿಗೆಗೆ ಹಸೀನಾ ಅವರು ಬಲಿಪಶುವಾಗಿದ್ದಾರೆ. ಬದಲಾದ ಸನ್ನಿವೇಶದಲ್ಲಿ, ವಿಶೇಷವಾಗಿ ಅವಾಮಿ ಲೀಗ್ ನಿಷೇಧದ ನಂತರ ಬಾಂಗ್ಲಾದೇಶದಲ್ಲಿ ಮುಕ್ತ ಚುನಾವಣೆ ನಡೆಯುವ ಸಾಧ್ಯತೆ ಇಲ್ಲವಾಗಿದೆ. ಆದರೆ, ಪ್ರತಿಕೂಲ ಸನ್ನಿವೇಶಗಳ ನಡುವೆಯೂ ಅವಾಮಿ ಲೀಗ್ ಈಗಲೂ ಪ್ರಭಾವಿ ಶಕ್ತಿಯಾಗಿ ಉಳಿದಿದೆ ಎನ್ನುವುದಕ್ಕೆ, ಹಸೀನಾ ಅವರ ವಿಚಾರಣೆಗೆ ವಿರೋಧ ವ್ಯಕ್ತಪಡಿಸಿ ಕರೆನೀಡಿದ್ದ ಬಂದ್ಗೆ ದೊರೆತ ಉತ್ತಮ ಪ್ರತಿಕ್ರಿಯೆ ನಿದರ್ಶನದಂತಿದೆ.

ಮರಣದಂಡನೆ ಶಿಕ್ಷೆ ಪ್ರಕಟಗೊಂಡ ನಂತರ ಹಸೀನಾ ಅವರನ್ನು ಹಸ್ತಾಂತರಿಸುವಂತೆ ಬಾಂಗ್ಲಾದೇಶದ ಸರ್ಕಾರ ಭಾರತವನ್ನು ಮತ್ತೆ ಮತ್ತೆ ಒತ್ತಾಯಿಸಿದೆ. ಅಮಾನವೀಯ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿಕ್ಷೆಗೊಳಗಾಗಿರುವ ವ್ಯಕ್ತಿಗೆ ಯಾವುದಾದರೂ ದೇಶ ಆಶ್ರಯ ನೀಡುವುದು ನ್ಯಾಯಕ್ಕೆ ತೋರುವ ಅಗೌರವ ಎಂದು ಅಲ್ಲಿನ ಸರ್ಕಾರ ಹೇಳಿದೆ. ಈ ಒತ್ತಾಯ ಮತ್ತು ಹೇಳಿಕೆಗೆ ಭಾರತ ಅತ್ಯಂತ ಸಂಯಮದಿಂದ ಪ್ರತಿಕ್ರಿಯಿಸಿದ್ದು, ಬಾಂಗ್ಲಾದೇಶದ ಜನರ ಹಿತೈಷಿಯಾಗಿ ಮುಂದುವರಿಯುವುದಾಗಿ ಸ್ಪಷ್ಟಪಡಿಸಿದೆ; ನೆರೆಯ ದೇಶದ ಎಲ್ಲ ಭಾಗೀದಾರರೊಂದಿಗೆ ರಚನಾತ್ಮಕವಾಗಿ ತೊಡಗಿಕೊಳ್ಳುವುದಾಗಿಯೂ ಹೇಳಿದೆ. ಹಸೀನಾ ಅವರಿಗೆ ವಿಧಿಸಲಾಗಿರುವ ಶಿಕ್ಷೆಯನ್ನು ಪ್ರಶ್ನಿಸುವ ಇಲ್ಲವೇ ವಿಮರ್ಶಿಸುವ ಪ್ರಯತ್ನಕ್ಕೂ ಭಾರತ ಮುಂದಾಗಿಲ್ಲ. ಆದರೆ, ಹಸೀನಾ ಅವರನ್ನು ಹಸ್ತಾಂತರಿಸುವಂತೆ ಬಾಂಗ್ಲಾದೇಶ ಮಾಡುತ್ತಿರುವ ತೀವ್ರ ಒತ್ತಾಯ, ಭಾರತಕ್ಕೆ ರಾಜತಾಂತ್ರಿಕ ಪರೀಕ್ಷೆಯಾಗಿ ಪರಿಣಮಿಸಿದೆ. ದಶಕಗಳಿಂದ ಸ್ನೇಹ ಹೊಂದಿರುವ ನಾಯಕಿಯನ್ನು ಭಾರತ ಹಸ್ತಾಂತರಿಸಲಾರದು. 2026ರ ಫೆಬ್ರುವರಿಯಲ್ಲಿ ನಡೆಯುವ ಚುನಾವಣೆಯ ನಂತರ ಬಾಂಗ್ಲಾದೇಶದ ಒತ್ತಾಯ ಮತ್ತಷ್ಟು ಬಲಗೊಳ್ಳುವುದು ನಿಶ್ಚಿತ. ಆ ಸೂಕ್ಷ್ಮ ಸನ್ನಿವೇಶವನ್ನು ನಿಭಾಯಿಸುವುದು ಭಾರತದ ರಾಜತಾಂತ್ರಿಕ ಜಾಣ್ಮೆಗೆ ಬಹುದೊಡ್ಡ ಸವಾಲಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.