ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

Exit Poll: 2014, 2019ರ ಮತಗಟ್ಟೆ ಸಮೀಕ್ಷೆಗಳೆಷ್ಟು ನಿಜವಾಗಿದ್ದವು?

Published 1 ಜೂನ್ 2024, 10:24 IST
Last Updated 1 ಜೂನ್ 2024, 10:24 IST
ಅಕ್ಷರ ಗಾತ್ರ
Exit Polls: 2019 ಹಾಗೂ 2014ರ ಚುನಾವಣೋತ್ತರ ಸಮೀಕ್ಷಾ ಫಲಿತಾಂಶಗಳು ವಾಸ್ತವಿಕ ಫಲಿತಾಂಶಕ್ಕೆ ಎಷ್ಟು ದೂರ ಅಥವಾ ಎಷ್ಟು ಹತ್ತಿರವಾಗಿದ್ದವು ಎಂಬ ಮಾಹಿತಿ ಇಲ್ಲಿದೆ.

ಬೆಂಗಳೂರು: ದೇಶದ 18ನೇ ಲೋಕಸಭೆಗಾಗಿ ಮತದಾನ ಪ್ರಕ್ರಿಯೆಯ ಕೊನೆಯ ಚರಣವು ಇಂದು (01 ಜೂ. 2024) ಪೂರ್ಣಗೊಳ್ಳುತ್ತಿದ್ದು, ಜೂ.4ರಂದು ಫಲಿತಾಂಶ ಪ್ರಕಟವಾಗುವ ಮುನ್ನ ಎಲ್ಲರ ಚಿತ್ತವು ಈಗ ಮತಗಟ್ಟೆ ಸಮೀಕ್ಷೆ ಅಥವಾ ಚುನಾವಣೋತ್ತರ ಸಮೀಕ್ಷೆಗಳ (Exit Polls) ಮೇಲೆ ನೆಟ್ಟಿದೆ.

ಮತಗಟ್ಟೆಯಲ್ಲಿ ಮತದಾನ ಮಾಡಿದ ಬಳಿಕ ಕೆಲವು ಜನರನ್ನು ಸಂದರ್ಶಿಸಿ ಮಾಡಲಾಗುವ ಈ ಸಮೀಕ್ಷೆಗಳು ಖಚಿತ ಸಂಖ್ಯೆಯನ್ನು ನೀಡುವುದಿಲ್ಲ ಎಂದು ಗೊತ್ತಿದ್ದರೂ, ಜನರಿಗೆ ಕುತೂಹಲ ಇರುವುದು ಸಹಜ. ಇಂದು ಸಂಜೆ 6.30ರ ಆಸುಪಾಸಿನಲ್ಲಿ ವಿವಿಧ ಸಂಸ್ಥೆಗಳು ನಡೆಸುವ ಈ ಮತಗಟ್ಟೆ ಸಮೀಕ್ಷೆಗಳ ಮಾಹಿತಿ ಹೊರಬೀಳಲಿದ್ದು, ಕಳೆದೆರಡು ಲೋಕಸಭೆ ಚುನಾವಣೆಗಳಲ್ಲಿ ಮತಗಟ್ಟೆ ಸಮೀಕ್ಷೆಗಳು ಯಾವ ಫಲಿತಾಂಶ ನೀಡಿದ್ದವು ಮತ್ತು ವಾಸ್ತವಿಕ ಫಲಿತಾಂಶ ಏನಾಗಿತ್ತು ಎಂಬುದರ ಮಾಹಿತಿ ಇಲ್ಲಿದೆ.

2019ರ ಮತಗಟ್ಟೆ ಸಮೀಕ್ಷೆ

ಚುನಾವಣೋತ್ತರ ಸಮೀಕ್ಷೆಗಳನ್ನು ಯಾವತ್ತೂ ಖಚಿತವಾಗಿ ನಂಬಲಾಗುವುದಿಲ್ಲ ಎಂಬ ಮಾತಿದೆಯಾದರೂ, ಕೆಲವು ಸಮೀಕ್ಷೆಗಳು ವಾಸ್ತವಕ್ಕೆ ಹತ್ತಿರವಾದ ಫಲಿತಾಂಶಗಳನ್ನು ನೀಡಿದ್ದವು. ವಾಸ್ತವ ಫಲಿತಾಂಶವೇನಿತ್ತೆಂದರೆ, ಬಿಜೆಪಿ ನೇತೃತ್ವದ ಎನ್‌ಡಿಎ 353 ಲೋಕಸಭಾ ಸ್ಥಾನಗಳನ್ನು ಗೆದ್ದುಕೊಂಡಿದ್ದರೆ, ಕಾಂಗ್ರೆಸ್ ನೇತೃತ್ವದ ಯುಪಿಎ 93 ಸ್ಥಾನ ಗೆದ್ದಿತ್ತು. ಇವುಗಳಲ್ಲಿ ಬಿಜೆಪಿಯ ನೇರ ಪಾಲು 303 ಹಾಗೂ ಕಾಂಗ್ರೆಸ್ 52 ಕ್ಷೇತ್ರಗಳಲ್ಲಿ ವಿಜಯಿಯಾಗಿತ್ತು.

ಇಂಡಿಯಾ ಟುಡೇ-ಏಕ್ಸಿಸ್ ತಂಡ ನಡೆಸಿದ ಸಮೀಕ್ಷೆಯಲ್ಲಿ ಎನ್‌ಡಿಎಗೆ 339ರಿಂದ 365 ಸ್ಥಾನ, ಯುಪಿಎಗೆ 77ರಿಂದ 108 ಸ್ಥಾನ ದೊರಕಬಹುದು ಎಂಬ ಫಲಿತಾಂಶ ತೋರಿಬಂದಿತ್ತು.

ಅದೇ ರೀತಿ, ನ್ಯೂಸ್ 24-ಟುಡೇಸ್ ಚಾಣಕ್ಯ ತಂಡದ ಸಮೀಕ್ಷೆಯಲ್ಲಿ ಎನ್‌ಡಿಎ 359, ಯುಪಿಎ 95, ನ್ಯೂಸ್18-IPSOS ಸಮೀಕ್ಷೆಯಲ್ಲಿ ಎನ್‌ಡಿಎ 336, ಯುಪಿಎ 82, ಟೈಮ್ಸ್ ನೌ-ವಿಎಂಆರ್ ಸಮೀಕ್ಷೆಯಲ್ಲಿ ಎನ್‌ಡಿಎ 306, ಯುಪಿಎ 132, ಇಂಡಿಯಾ ಟಿವಿ-ಸಿಎನ್ಎಕ್ಸ್ ಸಮೀಕ್ಷೆಯಲ್ಲಿ ಎನ್‌ಡಿಎ 300 ಹಾಗೂ ಯುಪಿಎ 120, ಸುದರ್ಶನ್ ನ್ಯೂಸ್ ಸಮೀಕ್ಷೆಯಲ್ಲಿ ಎನ್‌ಡಿಎ 305 ಹಾಗೂ ಯುಪಿಎ 124 ಎಂಬ ಅಂಕಿ ಅಂಶಗಳು ದೊರಕಿದ್ದವು. ವಾಸ್ತವ ಫಲಿತಾಂಶ ಎನ್‌ಡಿಎ 353 ಹಾಗೂ ಯುಪಿಎ 93.

2014ರ ಮತಗಟ್ಟೆ ಸಮೀಕ್ಷೆಯ ಫಲಿತಾಂಶ

10 ವರ್ಷಗಳ ಆಡಳಿತ ನಡೆಸಿದ್ದ ಕಾಂಗ್ರೆಸ್ ನೇತೃತ್ವದ ಯುಪಿಎ ಅಧಿಕಾರ ಕಳೆದುಕೊಂಡು, ಬಿಜೆಪಿ ನೇತೃತ್ವದ ಎನ್‌ಡಿಎ ಕೂಟವು ನರೇಂದ್ರ ಮೋದಿ ನೇತೃತ್ವದಲ್ಲಿ ಅಧಿಕಾರಕ್ಕೇರಿದ ವರ್ಷ 2014. ಹೆಚ್ಚಿನ ಸಮೀಕ್ಷೆಗಳಲ್ಲಿ ಎನ್‌ಡಿಎ ಅಧಿಕಾರದಂಚಿಗೆ ಬರುತ್ತದೆ ಎಂಬ ಅಂಶವು ಕಂಡುಬಂದಿತ್ತಾದರೂ, ಭರ್ಜರಿ ಸ್ಥಾನಗಳನ್ನು ಪಡೆದು ಅಧಿಕಾರಕ್ಕೇರುತ್ತದೆ ಅಂತ ಯಾವುದೇ ಸಮೀಕ್ಷೆಯೂ ಊಹಿಸಿರಲಿಲ್ಲ. ಅಂದು ಬಿಜೆಪಿಯು ಏಕಾಂಗಿಯಾಗಿ 282 ಸ್ಥಾನಗಳೊಂದಿಗೆ ಬಹುಮತ ಪಡೆದಿದ್ದರೆ ಎನ್‌ಡಿಎ ಕೂಟಕ್ಕೆ 336 ಸ್ಥಾನಗಳು ದೊರೆತಿದ್ದವು. ಯುಪಿಎಗೆ 60 ಸ್ಥಾನಗಳು ದೊರೆತಿದ್ದರೆ, ಅದರಲ್ಲಿ ಕಾಂಗ್ರೆಸ್ ಪಾಲು 44.

ಇಂಡಿಯಾ ಟುಡೇ-ಸಿಸೆರೋ ಸಮೀಕ್ಷೆ ಪ್ರಕಾರ ಎನ್‌ಡಿಎ 272 ಹಾಗೂ ಯುಪಿಎ 115, ನ್ಯೂಸ್ 24-ಚಾಣಕ್ಯ ಸಮೀಕ್ಷೆ ಪ್ರಕಾರ ಎನ್‌ಡಿಎ 340 ಹಾಗೂ ಯುಪಿಎ 101, ಸಿಎನ್ಎನ್-ಐಬಿಎನ್-ಸಿಎಸ್‌ಡಿಎಸ್ ಸಮೀಕ್ಷೆ ಪ್ರಕಾರ ಎನ್‌ಡಿಎ 280 ಹಾಗೂ ಯುಪಿಎ 97, ಟೈಮ್ಸ್ ನೌ-ಒಆರ್‌ಜಿ ಸಮೀಕ್ಷೆ ಪ್ರಕಾರ ಎನ್‌ಡಿಎ 249 ಹಾಗೂ ಯುಪಿಎ 148, ಎಬಿಪಿ ನ್ಯೂಸ್-ನೀಲ್ಸನ್ ಸಮೀಕ್ಷೆ ಪ್ರಕಾರ ಎನ್‌ಡಿಎ 274 ಹಾಗೂ ಯುಪಿಎ 97 ಮತ್ತು ಎನ್‌ಡಿಟಿವಿ-ಹನ್ಸ ರಿಸರ್ಚ್ ಸಮೀಕ್ಷೆ ಪ್ರಕಾರ ಎನ್‌ಡಿಎ 279 ಹಾಗೂ ಯುಪಿಎ 103 ಸ್ಥಾನಗಳನ್ನು ಪಡೆಯಬಹುದು ಎಂಬ ಅಂದಾಜು ಸಿಕ್ಕಿತ್ತು. ವಾಸ್ತವಿಕ ಫಲಿತಾಂಶ ಎನ್‌ಡಿಎ 336 ಹಾಗೂ ಯುಪಿಎ 60.

ಇನ್ನೀಗ 2024ರಲ್ಲಿ ಈ ರೀತಿಯ ಮತಗಟ್ಟೆ ಸಮೀಕ್ಷೆಗಳು ಏನು ಹೇಳುತ್ತವೆ, ಬಿಜೆಪಿಯ 'ಚಾರ್ ಸೌ ಪಾರ್ (400 ದಾಟುತ್ತೇವೆ)' ಎಂಬ ಘೋಷಣೆ ನಿಜವಾಗಲಿದೆಯೇ ಅಥವಾ ನಾವೇ ಸರ್ಕಾರ ರಚಿಸುತ್ತೇವೆ ಎಂಬ 'ಇಂಡಿಯಾ' (ಯುಪಿಎಯ ಪರಿಷ್ಕೃತ ರೂಪ) ಮೈತ್ರಿಕೂಟದ ಆತ್ಮವಿಶ್ವಾಸವು ನಿಜವಾಗುತ್ತದೆಯೇ ಎಂಬ ಮಾಹಿತಿಗಾಗಿ www.prajavani.net ನಿರೀಕ್ಷಿಸಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT