ಶುಕ್ರವಾರ, 8 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಿಷಬ್‌ ಶೆಟ್ಟಿ ನೀಡಿದ ‘ಕಾಂತಾರ–2’ ಅಪ್‌ಡೇಟ್ಸ್‌

Published 5 ಆಗಸ್ಟ್ 2023, 7:20 IST
Last Updated 5 ಆಗಸ್ಟ್ 2023, 7:20 IST
ಅಕ್ಷರ ಗಾತ್ರ

‘ಕಾಂತಾರ’, ನಟ ರಿಷಬ್‌ ಶೆಟ್ಟಿ ಸಿನಿಪಯಣದ ದಿಕ್ಕನ್ನು ಬದಲಿಸಿದ ಸಿನಿಮಾ. ವಿಶ್ವವ್ಯಾಪಿ ಪ್ರೇಕ್ಷಕರನ್ನೂ, ಬಾಕ್ಸ್‌ ಆಫೀಸ್‌ನಲ್ಲಿ ಕೋಟಿ ಕೋಟಿ ಹಣವನ್ನೂ ಬಾಚಿದ ಈ ಸಿನಿಮಾದ ಪ್ರೀಕ್ವೆಲ್‌(ಹಿಂದಿನ ಕಥೆ) ಸಿದ್ಧವಾಗುತ್ತಿರುವುದು ತಿಳಿದ ವಿಷಯ. ಸದ್ಯ ಪ್ರೀಕ್ವೆಲ್‌ ಸಿದ್ಧತೆಯಲ್ಲೇ ತಲ್ಲೀನವಾಗಿರುವ ರಿಷಬ್‌, ಒಂದಿಷ್ಟು ಅಪ್‌ಡೇಟ್ಸ್‌ಗಳನ್ನು ಹಂಚಿಕೊಂಡಿದ್ದಾರೆ. 

ರಾಜ್‌ ಬಿ.ಶೆಟ್ಟಿ ನಟನೆಯ ‘ಟೋಬಿ’ ಚಿತ್ರದ ಟ್ರೈಲರ್‌ ಅನ್ನು ಶುಕ್ರವಾರ(ಆ.4) ರಕ್ಷಿತ್‌ ಶೆಟ್ಟಿ ಹಾಗೂ ರಿಷಬ್‌ ಶೆಟ್ಟಿ ಬಿಡುಗಡೆಗೊಳಿಸಿದರು. ಇದೇ ಕಾರ್ಯಕ್ರಮದಲ್ಲಿ ಮಾತಿಗೆ ಸಿಕ್ಕ ರಿಷಬ್‌, ‘ಸದ್ಯ ‘ಕಾಂತಾರ’ ಪ್ರೀಕ್ವೆಲ್‌ನ ಸ್ಕ್ರಿಪ್ಟ್‌ ಪೂರ್ಣಗೊಂಡಿದ್ದು, ಪ್ರಿಪ್ರೊಡಕ್ಷನ್‌ ಕೆಲಸಗಳು ನಡೆಯುತ್ತಿದೆ. ಶೂಟಿಂಗ್‌ ಯಾವಾಗಿನಿಂದ ಆರಂಭ ಎನ್ನುವುದನ್ನು ನಿರ್ಮಾಣ ಸಂಸ್ಥೆಯಾದ ಹೊಂಬಾಳೆ ಫಿಲ್ಮ್ಸ್‌ ಅಧಿಕೃತವಾಗಿ ಘೋಷಿಸಲಿದೆ. ಇನ್ನೂ ಈ ಬಗ್ಗೆ ಯಾವುದೇ ನಿರ್ಧಾರವಾಗಿಲ್ಲ. ಕಥೆಯ ಪ್ರಕ್ರಿಯೆ ಪೂರ್ಣಗೊಂಡಿದ್ದು, ಎರಡು ಮೂರು ಡ್ರಾಫ್ಟ್‌ಗಳನ್ನು ಮಾಡಿದ್ದೇವೆ. ಕಲಾವಿದರು ಹಾಗೂ ಶೂಟಿಂಗ್‌ ಸ್ಥಳಗಳ ಆಯ್ಕೆ ಈ ಕಥೆಯ ಬರವಣಿಗೆಯ ಜೊತೆ ಜೊತೆಗೇ ನಡೆದಿದೆ’ ಎಂದರು.

‘ನಾನು ವೈಯಕ್ತಿಕವಾಗಿ ಪ್ರೀಕ್ವೆಲ್‌ಗೆ ಹೇಗೆ ಸಿದ್ಧವಾಗುತ್ತಿದ್ದೇನೆ ಎನ್ನುವುದನ್ನು ಮೇಕಿಂಗ್‌ ಮೂಲಕವೇ ತಿಳಿಸುತ್ತೇನೆ. ‘ಕಾಂತಾರ–2’ ಚಿತ್ರೀಕರಣಕ್ಕೆ ಯಾವುದೇ ನಿರ್ದಿಷ್ಟ ಸಮಯದ ಮಿತಿ ಹಾಕಿಕೊಂಡಿಲ್ಲ. ಮೊದಲ ಭಾಗವು ಎಷ್ಟು ಸಮಯದ ಮಿತಿಯನ್ನು ಬಯಸಿತ್ತೋ, ಅಷ್ಟೇ ಸಮಯದಲ್ಲಿ ಅದರ ಚಿತ್ರೀಕರಣ ಮುಗಿಸಿದ್ದೆವು. ಪ್ರೀಕ್ವೆಲ್‌ ಕಥೆಯ ಬೇಡಿಕೆ ಏನಿರುತ್ತದೆಯೋ ಅಷ್ಟೇ ಸಮಯವನ್ನು ಅದಕ್ಕೆ ನೀಡುತ್ತೇವೆ’ ಎನ್ನುತ್ತಾರೆ ರಿಷಬ್‌. 

ಬೇರೆ ಭಾಷೆಯಿಂದ ಹಲವು ಆಫರ್‌ಗಳು

‘ಸದ್ಯ ನಾನು ಬೇರೆ ಯಾವ ಸಿನಿಮಾಗಳನ್ನೂ ಒಪ್ಪಿಕೊಳ್ಳುತ್ತಿಲ್ಲ. ನನ್ನ ಗಮನ ಪ್ರಸ್ತುತ ‘ಕಾಂತಾರ–2’ ಮೇಲೆಯೇ ಇದೆ. ಬೇರೆ ಭಾಷೆಗಳಿಂದ ಹಲವು ಸಿನಿಮಾ ಅವಕಾಶಗಳು ಬಂದಿದ್ದವು. ಆದರೆ ನನಗೆ ‘ಕಾಂತಾರ’ವೇ ಆದ್ಯತೆ. ‘ಕಾಂತಾರ’ದ ಯಶಸ್ಸಿಗೆ ಕನ್ನಡಿಗರು ಕಾರಣ. ಇವರು ನೀಡಿರುವ ಯಶಸ್ಸಿನ ಬೆನ್ನಲ್ಲೇ ಬೇರೆ ಭಾಷೆಯಲ್ಲಿ ಅವಕಾಶ ಬಂತೆಂದು ಓಡಿ ಹೋಗುವುದಿಲ್ಲ. ಹೊರಗಡೆಯಿಂದ ಬಂದ ತಂತ್ರಜ್ಞರು, ನಿರ್ದೇಶಕರು ಕನ್ನಡ ಸಿನಿಮಾ ಮಾಡಿ ಪ್ರಪಂಚದಾದ್ಯಂತ ತೆಗೆದುಕೊಂಡು ಹೋದರೆ ಅಭ್ಯಂತರವಿಲ್ಲ. ನನ್ನ ಆದ್ಯತೆ ಕನ್ನಡ ಸಿನಿಮಾ. ‘ಕಾಂತಾರ–2’ ಪೂರ್ಣಗೊಂಡ ಬಳಿಕ ಮುಂದಿನ ಸಿನಿಮಾಗಳ ಬಗ್ಗೆ ಯೋಚಿಸುವೆ’ ಎಂದರು ರಿಷಬ್‌. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT