ಶನಿವಾರ, 13 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಕ್ಕಲಿಗರ ಸಂಘ ಸಲ್ಲಿಸಿದ ಮನವಿಗೆ ನಾನು ಸಹಿ ಮಾಡಬಾರದೇ?: ಡಿಕೆಶಿ

Published 22 ನವೆಂಬರ್ 2023, 6:58 IST
Last Updated 22 ನವೆಂಬರ್ 2023, 6:58 IST
ಅಕ್ಷರ ಗಾತ್ರ

ಬೆಂಗಳೂರು: ‘ಜಾತಿ ಗಣತಿ ಮಾಡಿ ಸಾಮಾಜಿಕ ನ್ಯಾಯ ಒದಗಿಸಬೇಕು ಎಂಬುದು ನಮ್ಮ ಪಕ್ಷದ ನಿಲುವು. ಆ ನಿಲುವಿಗೆ ನಾವು ಬದ್ಧರಾಗಿದ್ದೇವೆ. ಆದರೆ, ಜಾತಿ ಗಣತಿ ಸಮೀಕ್ಷೆ ವೈಜ್ಞಾನಿಕವಾಗಿ ಆಗಬೇಕು ಎಂದು ವಿವಿಧ ಸಮುದಾಯಗಳು ಆಗ್ರಹಿಸಿವೆ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿವಾಸದ ಬಳಿ ಸುದ್ದಿಗಾರರ ಜೊತೆ ಬುಧವಾರ ಮಾತನಾಡಿದ ಅವರು, ‘ಜನಸಂಖ್ಯೆ ಆಧಾರದಲ್ಲಿ ಮೀಸಲಾತಿ ಸಿಗಬೇಕು ಎಂದು ಅನೇಕ ಸಮುದಾಯಗಳು ಆಗ್ರಹಿಸಿವೆ. ಪರಿಶಿಷ್ಟರು, ಪಂಚಮಸಾಲಿ, ವೀರಶೈವರು, ಒಕ್ಕಲಿಗರು ಸೇರಿದಂತೆ ಹಲವರು ಹೋರಾಟ ಮಾಡುತ್ತಿದ್ದಾರೆ. ಈ ಹೋರಾಟದಲ್ಲಿ ಪಕ್ಷಬೇಧ ಮರೆತು ಹೋರಾಟ ಮಾಡಲಾಗುತ್ತಿದೆ. ಕೆಲ ಸಮುದಾಯ ಹಾಗೂ ಅದರ ನಾಯಕರು ಜಾತಿ ಗಣತಿ ಸಮೀಕ್ಷೆ ವೇಳೆ ನಮ್ಮನ್ನು ಸಂಪರ್ಕಿಸಿಲ್ಲ. ಹೀಗಾಗಿ ಸಮೀಕ್ಷೆಯನ್ನು ವೈಜ್ಞಾನಿಕವಾಗಿ ಮಾಡಬೇಕು ಎಂದು ಕೇಳುತ್ತಿದ್ದಾರೆ’ ಎಂದರು.

‘ಜಾತಿ ಗಣತಿ ಸ್ವೀಕರಿಸದಂತೆ ಮುಖ್ಯಮಂತ್ರಿಗೆ ಒಕ್ಕಲಿಗರ ಸಂಘ ಸಲ್ಲಿಸಿದ ಮನವಿ ಪತ್ರಕ್ಕೆ ನೀವು ಕೂಡಾ ಸಹಿ ಹಾಕಿದ್ದೀರಲ್ಲವೇ?’ ಎಂದು  ಕೇಳಿದ ಪ್ರಶ್ನೆಗೆ, ‘ನಾನು ಸಹಿ ಮಾಡಬಾರದೇ? ಎಷ್ಟು ಜನ ಸಚಿವರು ಈ ವಿಚಾರದಲ್ಲಿ ಸಭೆ ಮಾಡಿಲ್ಲ? ಅದೇ ರೀತಿ ನಾನು ರಾಜಕೀಯ ಪಕ್ಕಕ್ಕಿಟ್ಟು ನಮ್ಮ ಸಮಾಜ, ಅದರ ಗೌರವ, ಅಭಿಮಾನ ಉಳಿಸಿಕೊಳ್ಳಬೇಕು ಎಂದು ಸಭೆಯಲ್ಲಿ ಭಾಗವಹಿಸಿದ್ದೇನೆ. ಇದು ಎಲ್ಲ ನಾಯಕರಲ್ಲೂ ಇರುತ್ತದೆ’ ಎಂದು ತಿಳಿಸಿದರು.

28ಕ್ಕೆ ಮತ್ತೊಂದು ಸುತ್ತಿನ ಸಭೆ: ‘ನಿಗಮ ಮಂಡಳಿಗಳಿಗೆ ನೇಮಕ ವಿಚಾರವಾಗಿ ಚರ್ಚೆ ಮಾಡುತ್ತಿದ್ದೇವೆ. ಹಿರಿಯ ನಾಯಕರು, ಶಾಸಕರ ಅಭಿಪ್ರಾಯವನ್ನು ಪಡೆಯುತ್ತಿದ್ದೇವೆ. ನಾನು ಮತ್ತು ಮುಖ್ಯಮಂತ್ರಿ ತೆಲಂಗಾಣ ವಿಧಾನಸಭೆ ಚುನಾವಣೆ ಪ್ರಚಾರಕ್ಕೆ ಹೋಗಬೇಕಿದೆ. 28ರಂದು ನಮ್ಮ ದೆಹಲಿ ನಾಯಕರು ಮತ್ತೆ ರಾಜ್ಯಕ್ಕೆ ಬರುತ್ತಿದ್ದು, ಆ ಸಭೆ ಬಳಿಕ ಹೈಕಮಾಂಡ್ ನಾಯಕರಿಗೆ ಪಟ್ಟಿ ಕಳುಹಿಸುತ್ತೇವೆ’ ಎಂದರು.

ನಿಗಮ ಮಂಡಳಿ ನೇಮಕ ವಿಚಾರದಲ್ಲಿ ಗೃಹ ಸಚಿವರು ಅಸಮಾಧಾನ ಹೊಂದಿದ್ದಾರೆಯೇ ಎಂದು ಕೇಳಿದಾಗ, ‘ಅವರು ಮೂರು ದಿನ ಪ್ರವಾಸದಲ್ಲಿದ್ದರು., ಅವರಿಗೆ ಅವರದೇ ಆದ ಕೆಲಸಗಳಿರುತ್ತವೆ. ಸುಮ್ಮನೆ ಯಾರೋ ಹೇಳಿದ್ದನ್ನು ನೀವು (ಮಾಧ್ಯಮಗಳು) ದೊಡ್ಡದಾಗಿ ಬಿಂಬಿಸುತ್ತೀರಿ. ಅವರು ಯಾವ ಕಾರಣಕ್ಕೆ ಅಸಮಾಧಾನಗೊಳ್ಳುತ್ತಾರೆ? ಅಸಮಾಧಾನ ಆಗುವಂಥದ್ದು ಏನಾಗಿದೆ’ ಎಂದು ಪ್ರಶ್ನಿಸಿದರು.

‘ಪರಮೇಶ್ವರ ಬೆಂಬಲಿಗರಿಗೆ ನಿಗಮ ಮಂಡಳಿ ಸ್ಥಾನದ ವಿಚಾರವಾಗಿ ಬೇಸರವಾಗಿದೆಯೇ’ ಎಂದು ಕೇಳಿದಾಗ, ‘ಇಲ್ಲಿ ಅವರ ಬೆಂಬಲಿಗರು, ನನ್ನ ಬೆಂಬಲಿಗರು ಎಂಬುದಿಲ್ಲ. ನನಗೆ, ಮುಖ್ಯಮಂತ್ರಿ, ಗೃಹ ಸಚಿವರಿಗೆ ಬೆಂಬಲಿಗರು ಇಲ್ಲ. ಇರುವವರೆಲ್ಲಾ ಕಾಂಗ್ರೆಸ್ ಬೆಂಬಲಿಗರು. ಮಂತ್ರಿಗಿರಿ ಸಿಗದ ಹಿರಿಯ ಶಾಸಕರಿಗೆ ನಿಗಮ ಮಂಡಳಿ ಸ್ಥಾನ ನೀಡುವ ಬಗ್ಗೆ ಚರ್ಚೆ ಮಾಡುತ್ತಿದ್ದೇವೆ’ ಎಂದರು.

‘ನಿಗಮ ಮಂಡಳಿ ನೇಮಕ ವಿಳಂಬ ಮಾಡುತ್ತಿರುವುದು ಕಲೆಕ್ಷನ್‌ಗಾಗಿ’ ಎಂಬ ಬಿಜೆಪಿ ಆರೋಪದ ಬಗ್ಗೆ ಕೇಳಿದಾಗ, ‘ನಾವು ಅಧಿಕಾರಕ್ಕೆ ಬಂದ ಕೆಲವೇ ತಿಂಗಳಲ್ಲಿ ನಿಗಮ ಮಂಡಳಿ ನೇಮಕ ಮಾಡುತ್ತಿದ್ದೇವೆ. ಅವರು ಅಧಿಕಾರಕ್ಕೆ ಬಂದ ಎಷ್ಟು ವರ್ಷಗಳ ನಂತರ ಮಾಡಿದರು? ಅವರಿಗೆ ನಾಲ್ಕೈದು ಸಚಿವರನ್ನು ನೇಮಕ ಮಾಡಲಾಗದೇ ಮುಖ್ಯಮಂತ್ರಿಯೇ ಎಲ್ಲ ಖಾತೆಯನ್ನು ಇಟ್ಟುಕೊಂಡಿದ್ದರು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT