ಭಾನುವಾರ, 14 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ರಜ್ವಲ್‌ ಬಂದು SIT ಪೊಲೀಸರ ಮುಂದೆ ಶರಣಾಗಲಿ: ಎಚ್‌.ಡಿ. ಕುಮಾರಸ್ವಾಮಿ ಮನವಿ

Published 20 ಮೇ 2024, 11:11 IST
Last Updated 20 ಮೇ 2024, 11:11 IST
ಅಕ್ಷರ ಗಾತ್ರ

ಬೆಂಗಳೂರು: ‘ಹಾಸನ ಸಂಸದ ಪ್ರಜ್ವಲ್‌ ರೇವಣ್ಣ ಎಲ್ಲಿದ್ದರೂ 48 ಗಂಟೆಯೊಳಗೆ ಬಂದು ವಿಶೇಷ ತನಿಖಾ ತಂಡದ (ಎಸ್ಐಟಿ) ಎದುರು ಶರಣಾಗಿ ತನಿಖೆಗೆ ಸಹಕಾರ ನೀಡಬೇಕು’ ಎಂದು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ಮನವಿ ಮಾಡಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಇದೊಂದು ಅತ್ಯಂತ ಅಸಹ್ಯಕರ ಪ್ರಕರಣ. ತಪ್ಪು ಮಾಡಿದವರಿಗೆ ಶಿಕ್ಷೆಯಾಗಲಿ. ಇದರಿಂದ ಎಚ್‌.ಡಿ. ದೇವೇಗೌಡರು ನೋವು ಅನಭವಿಸುತ್ತಿದ್ದಾರೆ. ದೇಶಕ್ಕೆ ಹಿಂದಿರುಗಿ ತನಿಖೆಗೆ ಸಹಕಾರ ನೀಡಲು ಮನವಿ ಮಾಡುವಂತೆ ನಮ್ಮ ತಂದೆ ದೇವೇಗೌಡರ ಬಳಿಯೂ ಕೇಳಿಕೊಂಡಿದ್ದೇನೆ’ ಎಂದರು.

‘ಕಾನೂನಿನ ಪ್ರಕಾರ ಎಲ್ಲವೂ ಆಗುತ್ತದೆ. ಏಕೆ ಹೆದರಬೇಕು? ಕಳ್ಳ– ಪೊಲೀಸ್‌ ಆಟ ಎಷ್ಟು ದಿನ ನಡೆಯುತ್ತದೆ? ರೆಡ್‌ ಕಾರ್ನರ್‌ ನೋಟಿಸ್‌ ಜಾರಿಗೊಳಿಸುವವರೆಗೂ ಕಾಯಬಾರದು. ತಕ್ಷಣ ವಿದೇಶದಿಂದ ಹಿಂದಿರುಗಿ ಎಸ್‌ಐಟಿ ಎದುರು ಹೋಗಲಿ. ಈ ಕುರಿತು ರೇವಣ್ಣ ಬಳಿಯೂ ಮಾತನಾಡಿದ್ದೇನೆ’ ಎಂದು ಹೇಳಿದರು.

‘ಯಾರೋ ಮಾಡಿದ ತಪ್ಪಿಗೆ ಕುಟುಂಬವನ್ನು ಸರ್ವನಾಶ ಮಾಡುವುದು ಸರಿಯೆ? ಪ್ರಜ್ವಲ್ ರೇವಣ್ಣ ಮತ್ತು ಕಾರ್ತಿಕ್ ಏನೇನು ಮಾಡಿದ್ದಾರೆ ಎಂಬ ಸತ್ಯ ಹೊರಗೆ ಬರಲಿ. ಈ ವಿಷಯ ತಮಗೆ ಗೊತ್ತಿದ್ದರೆ ವಿದೇಶಕ್ಕೆ ಹೋಗಲು ಬಿಡುತ್ತಿರಲಿಲ್ಲ. ವಕೀಲರ ಸಲಹೆಯ ಮೇಲೆ ಏನೋನೋ ಮಾಡುತ್ತಿದ್ದಾರೆ’ ಎಂದು ಕುಮಾರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದರು.

‘ರಾಜೀನಾಮೆಗೆ ಮುಂದಾಗಿದ್ದ ಗೌಡರು’

‘ಪ್ರಕರಣದಿಂದ ನೊಂದಿರುವ ದೇವೇಗೌಡರು ರಾಜ್ಯಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದರು. ಯಾರದ್ದೋ ತಪ್ಪಿಗೆ ನೀವು ಏಕೆ ರಾಜೀನಾಮೆ ನೀಡಬೇಕು? ಎಂದು ನಾನೇ ತಡೆದಿದ್ದೇನೆ’ ಎಂದರು.

‘ಪ್ರಜ್ವಲ್‌ ರಕ್ಷಣೆ ಮಾಡಲು ನಾನು ಪದ್ಮನಾಭನಗರಕ್ಕೆ ಹೋಗುತ್ತಿಲ್ಲ. ತಂದೆ, ತಾಯಿ ನೋವಿನಲ್ಲಿದ್ದಾರೆ. ಅವರಿಗೆ ಆತ್ಮಸ್ಥೈರ್ಯ ತುಂಬಲು ಹೋಗುತ್ತಿದ್ದೇನೆ. ನಮ್ಮ ಕುಟುಂಬದ ಬಗ್ಗೆ ತಪ್ಪು ಅಭಿಪ್ರಾಯ ಮೂಡದಂತೆ ತಡೆಯಲು ಪ್ರಜ್ವಲ್‌ ರೇವಣ್ಣನನ್ನು ವಾಪಸ್‌ ಕರೆಸಲು ಪ್ರಯತ್ನಿಸುತ್ತಿದ್ದೇನೆ’ ಎಂದರು.

ಎಸ್‌ಐಟಿ ಎದುರು ಹಾಜರಾಗಲು ಪ್ರಜ್ವಲ್‌ ಒಂದು ವಾರ ಕಾಲಾವಕಾಶ ಕೇಳಿದ್ದ. ಅಷ್ಟು ಸಮಯ ಕೊಡಬೇಕಿತ್ತು ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT