ಭಾನುವಾರ, 23 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಇರಾನ್: ಖಾಸಿಂ ಸುಲೇಮಾನಿ ಪುಣ್ಯಸ್ಮರಣೆ ವೇಳೆ ಸ್ಫೋಟ, 100ಕ್ಕೂ ಹೆಚ್ಚು ಜನರ ಸಾವು

Published 3 ಜನವರಿ 2024, 13:13 IST
Last Updated 3 ಜನವರಿ 2024, 14:41 IST
ಅಕ್ಷರ ಗಾತ್ರ

ತೆಹರಾನ್‌: ಇರಾನ್‌ ಸೇನಾಧಿಕಾರಿಯಾಗಿದ್ದ ಖಾಸಿಂ ಸುಲೇಮಾನಿ ಅವರ ಎರಡನೇ ವರ್ಷದ ಪುಣ್ಯಸ್ಮರಣೆಯಲ್ಲಿ ಪಾಲ್ಗೊಂಡಿದ್ದ ಜನರನ್ನು ಗುರಿಯಾಗಿರಿಸಿ ಬುಧವಾರ ನಡೆದ ಬಾಂಬ್‌ ಸ್ಫೋಟದಲ್ಲಿ ಕನಿಷ್ಠ 100 ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

ಕರ್ಮಾನ್‌ ನಗರದಲ್ಲಿರುವ ಖಾಸಿಂ ಅವರ ಸಮಾಧಿ ಸ್ಥಳದಲ್ಲಿ ಎರಡು ಬಾರಿ ಸ್ಫೋಟಗೊಂಡಿದೆ ಎಂದು ವರದಿ ಮಾಡಿರುವ ಸರ್ಕಾರಿ ಸುದ್ದಿವಾಹಿನಿ, ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದೂ ಆತಂಕ ವ್ಯಕ್ತಪಡಿಸಿದೆ.

ಖಾಸಿಂ ಸುಲೇಮಾನಿ ಅವರು ಅಮೆರಿಕ ನಡೆಸಿದ ಕ್ಷಿಪಣಿ ದಾಳಿಯಲ್ಲಿ ಮೃತಪಟ್ಟಿದ್ದರು. ಬಾಗ್ದಾದ್‌ ವಿಮಾನ ನಿಲ್ದಾಣದ ಹೊರಭಾಗದಲ್ಲಿ 2020ರ ಜನವರಿ 3ರಂದು ಈ ದಾಳಿ ಸಂಘಟಿಸಿತ್ತು.

ಖಾಸಿಂ ಅವರ ಹತ್ಯೆಗೆ ಪ್ರತಿಕಾರವಾಗಿ ಅಮೆರಿಕದ ಆಗಿನ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರನ್ನು ಕೊಲ್ಲುವುದಾಗಿ ಇರಾನ್‌ ಎಚ್ಚರಿಕೆ ನೀಡಿತ್ತು.

ಯಾರು ಸುಲೇಮಾನಿ?

ಖಾಸಿಂ ಸುಲೇಮಾನಿ ರೆವಲ್ಯೂಷನರಿ ಗಾರ್ಡ್ಸ್‌ನ ಪ್ರಧಾನ ಅಂಗವಾದ ಕುದ್ಸ್‌ ಪಡೆಯ ಮುಖ್ಯಸ್ಥನಾಗಿದ್ದ. 2011ರಲ್ಲಿ ಅರಬ್‌ ಸ್ಪ್ರಿಂಗ್‌ ಪ್ರತಿಭಟನೆ ಶುರುವಾಗಿದ್ದಾಗ ಸಿರಿಯಾ ಅಧ್ಯಕ್ಷ ಬಶರ್‌ ಅಸ್ಸಾದ್‌ ನೇತೃತ್ವದ ಸರ್ಕಾರ ಉಳಿಸುವಲ್ಲಿ ಸುಲೇಮಾನಿ ಪ್ರಮುಖ ‍ಪಾತ್ರ ವಹಿಸಿದ್ದ.

2003ರಲ್ಲಿ ಇರಾಕ್‌ ಮೇಲೆ ಅಮೆರಿಕ ಆಕ್ರಮಣ ಮಾಡುವವರೆಗೂ ಸುಲೇಮಾನಿ ಅಷ್ಟಾಗಿ ಜನಪ್ರಿಯ ವ್ಯಕ್ತಿಯಾಗಿರಲಿಲ್ಲ. ಇರಾಕ್‌ನಲ್ಲಿದ್ದ ಅಮೆರಿಕ ಪ್ರಜೆಗಳು ಹಾಗೂ ಯೋಧರನ್ನು ಗುರಿಯಾಗಿಸಿ ಬಾಂಬ್‌ ದಾಳಿಗಳು ನಡೆದು ನೂರಾರು ಮಂದಿ ಮೃತಪಟ್ಟರು. ಆಗ ಸುಲೇಮಾನಿ ಹತ್ಯೆಗೆ ಅಮೆರಿಕ ಅಧಿಕಾರಿಗಳು ಶಪಥ ಮಾಡಿದ್ದರು. 

ಕೆರ್ಮಾನ್‌ನಲ್ಲಿ ಸುಲೇಮಾನಿ ಅಂತ್ಯಕ್ರಿಯೆ ವೇಳೆ ಭಾರಿ ಜನ ಸೇರಿದ್ದರು. ಆಗ ಸಂಭವಿಸಿದ್ದ ಕಾಲ್ತುಳಿತದಲ್ಲಿ ಕನಿಷ್ಠ 56 ಮಂದಿ ಮೃತಪಟ್ಟಿದ್ದರಲ್ಲದೇ 200ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಸುಲೇಮಾನಿ ಹತ್ಯೆಗೆ ಪ್ರತೀಕಾರ ತೆಗೆದುಕೊಳ್ಳುವುದಾಗಿ ಇರಾನ್‌ ಆಗ ಹೇಳಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT