ಸ್ಥಿರಾಸ್ತಿ ಮಾರುಕಟ್ಟೆ ಮೌಲ್ಯದಲ್ಲಿ ಭಾರಿ ಹೆಚ್ಚಳ..!

7
ವಿಜಯಪುರಕ್ಕೆ ರಿಯಾಯಿತಿ; ತಿಂಗಳಿಗೆ ₹ 1.5 ಕೋಟಿ ಹೆಚ್ಚುವರಿ ಆದಾಯದ ನಿರೀಕ್ಷೆ

ಸ್ಥಿರಾಸ್ತಿ ಮಾರುಕಟ್ಟೆ ಮೌಲ್ಯದಲ್ಲಿ ಭಾರಿ ಹೆಚ್ಚಳ..!

Published:
Updated:

ವಿಜಯಪುರ: ನೋಂದಣಿ ಮತ್ತು ಮುದ್ರಾಂಕ ಇಲಾಖೆ ಜಿಲ್ಲೆಯಲ್ಲಿನ ಸ್ಥಿರಾಸ್ತಿಗಳ ಅಂದಾಜು ಮಾರುಕಟ್ಟೆ ಮೌಲ್ಯದ ಮಾರ್ಗಸೂಚಿ ದರಗಳನ್ನು ಪರಿಷ್ಕರಿಸಿ ಆದೇಶ ಹೊರಡಿಸಿದ್ದು, ಇದೇ 10ರಿಂದ ಜಾರಿಗೆ ಬರಲಿವೆ.

ಜಿಲ್ಲೆಯ ಬಸವನಬಾಗೇವಾಡಿ, ಮುದ್ದೇಬಿಹಾಳ, ಇಂಡಿ, ಸಿಂದಗಿ ತಾಲ್ಲೂಕಿನ ವ್ಯಾಪ್ತಿಯಲ್ಲಿ ನೂತನ ಪರಿಷ್ಕೃತ ದರ ಜಾರಿಗೊಳ್ಳಲಿದ್ದು, ವಿಜಯಪುರ ನಗರ ಹಾಗೂ ವಿಜಯಪುರ ತಾಲ್ಲೂಕಿನ ವ್ಯಾಪ್ತಿಯಲ್ಲಿ ಈ ಹಿಂದಿನ ದರವೇ ಮುಂದುವರೆಯಲಿವೆ ಎಂದು ಜಿಲ್ಲಾ ನೋಂದಣಾಧಿಕಾರಿ ಕಚೇರಿ ಮೂಲಗಳು ತಿಳಿಸಿವೆ.

2017ರ ಏಪ್ರಿಲ್‌ 1ರಿಂದ ಅನ್ವಯವಾಗುವಂತೆ, ಜಿಲ್ಲೆಯಾದ್ಯಂಥ ಸ್ಥಿರಾಸ್ತಿಗಳ ಅಂದಾಜು ಮಾರುಕಟ್ಟೆ ಮೌಲ್ಯದ ಮಾರ್ಗಸೂಚಿ ದರಗಳನ್ನು ಈ ಹಿಂದೆ ಪರಿಷ್ಕರಿಸಲಾಗಿತ್ತು. ಇದೀಗ ಮತ್ತೊಮ್ಮೆ 20 ತಿಂಗಳ ಬಳಿಕ ಮಾರುಕಟ್ಟೆ ದರ ಪರಿಷ್ಕರಿಸಲಾಗಿದೆ.

‘ಈ ಹಿಂದಿನ ದರದಂತೆ ಜಿಲ್ಲೆಯಲ್ಲಿ ಪ್ರತಿ ತಿಂಗಳು ಕನಿಷ್ಠ ₹ 6.50 ಕೋಟಿ ಆದಾಯ ನೋಂದಣಿ ತೆರಿಗೆ ಮೂಲಕ ಸಂಗ್ರಹಗೊಳ್ಳುತ್ತಿತ್ತು. ಈ ಹಿಂದಿನ ನವೆಂಬರ್ ತಿಂಗಳಲ್ಲಿ ₹ 6.59 ಕೋಟಿ ತೆರಿಗೆ ಸಂಗ್ರಹವಾಗಿದೆ. ಈ ತಿಂಗಳಿಂದ ಶೇ 25ರಷ್ಟು ಆದಾಯ ಹೆಚ್ಚಲಿದ್ದು, ಪ್ರತಿ ತಿಂಗಳು ₹ 8 ಕೋಟಿ ನೋಂದಣಿ ತೆರಿಗೆ ಸಂಗ್ರಹಗೊಳ್ಳಬಹುದು’ ಎಂದು ಜಿಲ್ಲಾ ನೋಂದಣಾಧಿಕಾರಿ ಜಿ.ಆರ್‌.ನಾಡಗೌಡ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಪರಿಷ್ಕೃತ ದರ ಹೆಚ್ಚಳ
ಬಸವನಬಾಗೇವಾಡಿ ಪಟ್ಟಣ ಸೇರಿದಂತೆ ತಾಲ್ಲೂಕಿನ ವಿವಿಧ ಪಟ್ಟಣ, ಗ್ರಾಮಗಳ ವ್ಯಾಪ್ತಿಯಲ್ಲಿ ಕೃಷಿ ಭೂಮಿ ನೋಂದಣಿಗೆ ಸೊನ್ನೆಯಿಂದ 15%ವರೆಗೂ ಅಂದಾಜು ಮಾರುಕಟ್ಟೆ ಮೌಲ್ಯ ಹೆಚ್ಚಿಸಲಾಗಿದೆ. ಇದೇ ರೀತಿ ನಿವೇಶನದ ಮಾರುಕಟ್ಟೆ ಮೌಲ್ಯವನ್ನು ಶೇ 20ರಿಂದ 25ರಷ್ಟು ಹೆಚ್ಚಿಸಲಾಗಿದೆ ಎಂದು ಜಿಲ್ಲಾ ನೋಂದಣಾಧಿಕಾರಿ ಜಿ.ಆರ್.ನಾಡಗೌಡ ತಿಳಿಸಿದರು.

ಸಿಂದಗಿ ಪಟ್ಟಣ ಸೇರಿದಂತೆ ತಾಲ್ಲೂಕಿನ ಎಲ್ಲೆಡೆ ಕೃಷಿ, ನಿವೇಶನದ ಅಂದಾಜು ಮಾರುಕಟ್ಟೆ ಮೌಲ್ಯವನ್ನು 15ರಿಂದ 20%, ಇಂಡಿ ತಾಲ್ಲೂಕಿನಲ್ಲಿ 10ರಿಂದ 20%, ಮುದ್ದೇಬಿಹಾಳ ತಾಲ್ಲೂಕಿನಲ್ಲಿ 5% ಮಾರುಕಟ್ಟೆ ಮೌಲ್ಯ ಪರಿಷ್ಕರಿಸಿ ನೋಂದಣಿ ಮತ್ತು ಮುದ್ರಾಂಕ ಇಲಾಖೆ ಆದೇಶ ಹೊರಡಿಸಿದೆ. ಈ ಆದೇಶದಲ್ಲಿ ವಿಜಯಪುರ ನಗರ, ತಾಲ್ಲೂಕಿನ ಪ್ರದೇಶವನ್ನು ಕೈಬಿಟ್ಟಿದ್ದು, ಈ ಹಿಂದಿನ ದರವೇ ಯಥಾವತ್ ಮುಂದುವರೆಯಲಿದೆ ಎಂದು ಅವರು ಹೇಳಿದರು.

‘ಪ್ರತಿ ತಾಲ್ಲೂಕಿನ ಹಳ್ಳಿ, ಪಟ್ಟಣ, ನಗರ ಪ್ರದೇಶದಲ್ಲಿ ಒಂದೊಂದು ಪ್ರದೇಶದ ಅಂದಾಜು ಮಾರುಕಟ್ಟೆ ಮೌಲ್ಯ ಬೇರೆ ಬೇರೆಯಿದೆ. ಅಲ್ಲಿನ ಜಾಗದ ಬೇಡಿಕೆಗೆ ತಕ್ಕಂತೆ ಬದಲಿದೆ. ಇಲಾಖೆಯ ಆದೇಶದಂತೆ ಪ್ರತಿ ಪ್ರದೇಶದ ಅಂದಾಜು ಮಾರುಕಟ್ಟೆ ಮೌಲ್ಯದಂತೆ ಸ್ಥಿರಾಸ್ತಿ ಮಾರಾಟ–ಖರೀದಿ ಸಂದರ್ಭ ದರ ನಿಗದಿ ಪಡಿಸುತ್ತೇವೆ.

ಪ್ರತಿ ಎಕರೆ ಭೂಮಿ, ನಿವೇಶನಕ್ಕೆ ಆಯಾ ಸ್ಥಳದ ಮಾರುಕಟ್ಟೆ ಪ್ರದೇಶದ ಮಾರ್ಗಸೂಚಿ ದರ ಅನುಸರಿಸಿ, ನೋಂದಣಿ ನಡೆಸುತ್ತೇವೆ. ಈ ಸಂದರ್ಭ ಮುದ್ರಣ ಶುಲ್ಕವಾಗಿ 5.65%, ನೋಂದಣಿ ಶುಲ್ಕವಾಗಿ 1% ಸೇರಿದಂತೆ ಒಟ್ಟು 6.65% ತೆರಿಗೆ ಪಡೆಯುತ್ತೇವೆ. ₹ 1 ಲಕ್ಷ ಮೊತ್ತಕ್ಕೆ ₹ 6650 ತೆರಿಗೆ ಕಟ್ಟಿಸಿಕೊಳ್ಳುತ್ತೇವೆ’ ಎಂದು ನಾಡಗೌಡ ಮಾಹಿತಿ ನೀಡಿದರು.

ದರ ಹೆಚ್ಚಳಕ್ಕೆ ಜನಾಕ್ರೋಶ
ವಿಜಯಪುರ ನಗರದ ಸ್ಥಿರಾಸ್ತಿಗಳ ಅಂದಾಜು ಮಾರುಕಟ್ಟೆ ಮೌಲ್ಯ ದರ ಪರಿಷ್ಕರಿಸಿ, ಹೆಚ್ಚಳ ಮಾಡದಿರುವುದಕ್ಕೆ ನಗರವೂ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿ ಹರ್ಷ ವ್ಯಕ್ತವಾಗಿದೆ. ಜಮೀನು, ನಿವೇಶನ ಖರೀದಿಸಬೇಕು ಎಂಬ ಕನಸುಳ್ಳವರಿಗೆ ಇದು ಅನುಕೂಲಕಾರಿ ನಿರ್ಧಾರವಾಗಿದೆ. ಈಗಲೇ ದರ ಹೆಚ್ಚಿತ್ತು. ಮತ್ತಷ್ಟು ಹೆಚ್ಚಿಸದಿರುವುದು ಒಳ್ಳೆಯ ಬೆಳವಣಿಗೆ ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ.

ಬಸವನಬಾಗೇವಾಡಿ, ಇಂಡಿ, ಮುದ್ದೇಬಿಹಾಳ, ಸಿಂದಗಿ ತಾಲ್ಲೂಕಿನ ಸ್ಥಿರಾಸ್ತಿಗಳ ಅಂದಾಜು ಮಾರುಕಟ್ಟೆ ಮೌಲ್ಯವನ್ನು ಸೊನ್ನೆಯಿಂದ 25% ವರೆಗೂ ಹೆಚ್ಚಿಸಿರುವುದಕ್ಕೆ ಆಯಾ ತಾಲ್ಲೂಕುಗಳಲ್ಲಿ ಜನಾಕ್ರೋಶ ವ್ಯಕ್ತವಾಗಿದೆ.

‘ಮಾರುಕಟ್ಟೆ ಮೌಲ್ಯ ದರ ಪರಿಷ್ಕರಿಸಿರುವುದು ನಮ್ಮ ಗಮನಕ್ಕೆ ಬಂದಿಲ್ಲ. ಮುಂದಿನ ಸೋಮವಾರದಿಂದ ಖರೀದಿ ಕೆಲಸಕ್ಕೆ ಖರ್ಚ್‌ ಹೆಚ್ಚಿಗೆ ಬರುತ್ತದೆ ಎಂಬುದು ಗೊತ್ತಾಗಿದೆ. ರೈತರು ಬೆಳೆದ ಫಸಲು ಹೊರತುಪಡಿಸಿ, ಇನ್ನುಳಿದ ಎಲ್ಲವೂ ಗಗನಮುಖಿಯಾಗುತ್ತಿರುವುದೇ ನಮಗೆ ಆಶ್ಚರ್ಯ ತಂದಿದೆ’ ಎಂದು ಇಂಡಿ ತಾಲ್ಲೂಕಿನ ಹನಮಂತ ತಳವಾರ ಅಗರಖೇಡ ಪ್ರತಿಕ್ರಿಯಿಸಿದರು.

‘ಮುದ್ದೇಬಿಹಾಳ ತಾಲ್ಲೂಕಿನಲ್ಲಿ ದರ ಪರಿಷ್ಕರಣೆ ಮಾಡಿದ್ದು ಸರಿಯಲ್ಲ. ಬೆಂಗಳೂರಿನಲ್ಲಿ ಕುಳಿತು ಅಧಿಕಾರಿಗಳು ಲೆಕ್ಕ ಹಾಕುತ್ತಾರೆ. ಇಲ್ಲಿಯ ಜನರ ಕಷ್ಟ ಅವರಿಗೆ ಅರ್ಥವಾಗುವುದಿಲ್ಲ. ಜನರ ಮೇಲೆ ತೆರಿಗೆ ಹಾಕಿ, ರೈತರ ಸಾಲ ಮನ್ನಾ ಮಾಡುವ ವಿಚಾರ ಮಾಡುತ್ತಿರಬಹುದು’ ಎಂದು ಉದ್ಯಮಿ ಪ್ರಭುರಾಜ ಕಲಬುರ್ಗಿ ಆಕ್ರೋಶ ವ್ಯಕ್ತಪಡಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !