ಭಾನುವಾರ, ಮಾರ್ಚ್ 7, 2021
29 °C
ಇದು ‘ಕಟ್ಟಿಗೇನಹಳ್ಳಿ’ಗೆ ಕುಖ್ಯಾತಿ ತಂದವರ ಕತೆ * ವೀರಪ್ಪನ್ ಸಹಚರನಿಂದ ಆಂಧ್ರ ಕಾಡಿನ ಸಂಪರ್ಕ

ಕಳ್ಳಬಟ್ಟಿ ಮಾರುತ್ತಿದ್ದವರು ಗಂಧದ ‘ರಕ್ತ’ ಹೀರಿದರು!

ಎಂ.ಸಿ.ಮಂಜುನಾಥ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಮೊದಲು ಕಳ್ಳಬಟ್ಟಿ ಸಾರಾಯಿ ಮಾರುತ್ತಿದ್ದ ಈ ಗ್ರಾಮದ ಕೆಲವರು, ಸರ್ಕಾರ ಸಾರಾಯಿ ನಿಷೇಧಿಸಿದ ಬಳಿಕ ದೇವನಗುಂದಿಯ ಲಾರಿಗಳಿಂದ ಪೆಟ್ರೋಲ್ ಕದಿಯಲು ಆರಂಭಿಸಿದರು. ಕ್ರಮೇಣ ರಾಜ್ಯದ ಅತ್ಯಮೂಲ್ಯ ಸಸ್ಯ ಸಂಪತ್ತಾದ ಶ್ರೀಗಂಧ ಮೇಲೆ ಅವರ ಕಣ್ಣು ಬಿತ್ತು. ಕಾಡುಗಳ್ಳ ವೀರಪ್ಪನ್‌ನ ಸಹಚರನೊಬ್ಬ ಊರಿಗೆ ಕಾಲಿಟ್ಟ ಬಳಿಕ ಆಂಧ್ರಪ್ರದೇಶದ ನಂಟು ಬೆಳೆಸಿಕೊಂಡು ರಕ್ತಚಂದನದ ಬೇಟೆಯೂ ಶುರುವಾಯಿತು...!

ಹೊಸಕೋಟೆ ತಾಲ್ಲೂಕಿನ ಕಟ್ಟಿಗೇನಹಳ್ಳಿಗೆ ‘ಗಂಧ ಚೋರರ ಗ್ರಾಮ’ ಎಂಬ ಕುಖ್ಯಾತಿ ತಂದಿಟ್ಟಿರುವ ಆ ಊರಿನ ಮರಗಳ್ಳರ ಹಿನ್ನೆಲೆ ಇದು. 3,000 ಜನಸಂಖ್ಯೆವುಳ್ಳ ಈ ಗ್ರಾಮದಲ್ಲಿ ಶೇ 30ರಷ್ಟು ಮಂದಿ ಆಯ್ದುಕೊಂಡಿರುವುದು ಗಂಧದ ಮರಗಳವು ದಂಧೆಯನ್ನೇ! ಉಳಿದವರು ಕೃಷಿ ಚಟುವಟಿಕೆಯ ಜತೆಗೆ, ಸಣ್ಣ ಪುಟ್ಟ ಅಂಗಡಿಗಳನ್ನು ಇಟ್ಟುಕೊಂಡು ಜೀವನ ನಡೆಸುತ್ತಿದ್ದಾರೆ.

ಎಲ್ಲರನ್ನೂ ಅನುಮಾನದಿಂದಲೇ ನೋಡುವ ಈ ಊರಿನವರು, ಹೊಸಬರ ಪ್ರವೇಶಕ್ಕೆ ಅವಕಾಶ ನೀಡುವುದಿಲ್ಲ. ಗ್ರಾಮದಲ್ಲಿರುವ ಒಗ್ಗಟ್ಟೇ ಅವರ ದಂಧೆಗಳಿಗೆ ಶಕ್ತಿ. ಕರ್ನಾಟಕ, ಆಂಧ್ರಪ್ರದೇಶ ಹಾಗೂ ತಮಿಳುನಾಡಿನ ಪೊಲೀಸರು ದಂಧೆಕೋರರ ಹೆಡೆಮುರಿ ಕಟ್ಟಲು ನಾನಾ ವೇಷಗಳಲ್ಲಿ ಹಲವು ಸಲ ಗ್ರಾಮಕ್ಕೆ ನುಗ್ಗಿದ್ದರೂ, ಇದುವರೆಗೂ ಅಲ್ಲಿಂದ ಹೊರಗೆ ಕರೆದುಕೊಂಡು ಬರಲು ಸಾಧ್ಯವಾಗಿದ್ದು ಮೂವರು ಆರೋಪಿಗಳನ್ನು ಮಾತ್ರ!

2014ರಲ್ಲಿ ಚಿತ್ತೂರಿನ ಇನ್‌ಸ್ಪೆಕ್ಟರ್ ನೇತೃತ್ವದ ತಂಡವೊಂದು, ಮರ ಕಡಿಯುವವರಂತೆ ಕಟ್ಟಿಗೇನಹಳ್ಳಿ ಗ್ರಾಮವನ್ನು ಸೇರಿತ್ತು. ತಾವೂ ದಂಧೆಕೋರರು ಎಂದು ಎಲ್ಲರನ್ನೂ ನಂಬಿಸಿ ಒಂದೂವರೆ ತಿಂಗಳು ಅಲ್ಲೇ ಇದ್ದ ತಂಡ, ರಾತ್ರೋ ರಾತ್ರಿ ಮಹಮದ್ ಅಲಿ ಎಂಬಾತನನ್ನು ಬಂಧಿಸಿ ಕರೆದೊಯ್ದಿತ್ತು. ಆನಂತರ ಗ್ರಾಮಕ್ಕೆ ನುಗ್ಗಿದ ಪೊಲೀಸರಲ್ಲಿ, ಕಲ್ಲೇಟು ತಿಂದು ಬರಿಗೈಲಿ ಆಚೆ ಬಂದವರೇ ಹೆಚ್ಚು. ಇದೇ ಜ.4ರಂದು ಬೆಂಗಳೂರು ಕೇಂದ್ರ ವಿಭಾಗದ 150ಕ್ಕೂ ಹೆಚ್ಚು ಪೊಲೀಸರು ಆ ಕೋಟೆಗೆ ನುಗ್ಗಿ ಸೈಯದ್ ರಿಯಾಜ್ (58) ಹಾಗೂ ಆತನ ಮಗ ಸೈಯದ್ ಷೇರ್ ಅಲಿಯನ್ನು (32) ಬಂಧಿಸಿ ಕರೆತಂದಿದ್ದಾರೆ. 

ಗಂಧ ಕದ್ದು ಶಾಲೆ ತೆರೆದ!: ‘80–90ರ ದಶಕದಲ್ಲಿ ಬೈಲನರಸಾಪುರ ಗ್ರಾಮದಲ್ಲಿ ಕಳ್ಳಬಟ್ಟಿ ಸಾರಾಯಿ ತಯಾರಿಸಿ ಮಾರಾಟ ಮಾಡಲಾಗುತ್ತಿತ್ತು. ಈಗ ಬಂಧಿತನಾಗಿರುವ ಸೈಯದ್, ಮೊದಲು ಅದೇ ಕೆಲಸಕ್ಕೆ ಹೋಗುತ್ತಿದ್ದ. ಆ ಕಾಲದಲ್ಲೇ ಸಾರಾಯಿಯಿಂದ ತಿಂಗಳಿಗೆ ₹ 40 ಸಾವಿರ ಸಂಪಾದಿಸುತ್ತಿದ್ದ ಆರೋಪಿ, ಅದರ ನಿಷೇಧದ ನಂತರ ಗ್ರಾಮಸ್ಥರು ಹಾಗೂ ಸಂಬಂಧಿಗಳನ್ನು ಸೇರಿಸಿಕೊಂಡು ಟ್ಯಾಂಕರ್‌ ಅಡ್ಡಗಟ್ಟಿ ಪೆಟ್ರೋಲ್ ಕದಿಯಲು ಪ್ರಾರಂಭಿಸಿದ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ದೇವನಗುಂದಿಯಲ್ಲಿರುವ ತೈಲ ಘಟಕದಿಂದಲೇ ಎಲ್ಲ ಬಂಕ್‌ಗಳಿಗೆ ಪೆಟ್ರೋಲ್ ಸರಬರಾಜಾಗುತ್ತದೆ. ತೈಲ ತುಂಬಿಕೊಂಡು ಬರುತ್ತಿದ್ದ ಟ್ಯಾಂಕರ್‌ಗಳನ್ನು ಅಡ್ಡಗಟ್ಟುತ್ತಿದ್ದ ಆರೋಪಿಗಳು, ಚಾಲಕನಿಗೆ ಬೆದರಿಸಿ ವಾಹನವನ್ನು ಅರಣ್ಯದೊಳಗೆ ನುಗ್ಗಿಸುತ್ತಿದ್ದರು. ನಂತರ ಅಲ್ಲೇ ಡ್ರಮ್‌ಗಳಿಗೆ ಪೆಟ್ರೋಲ್ ಹಾಗೂ ಡೀಸೆಲ್ ಇಳಿಸಿ, ಅಷ್ಟೇ ಪ್ರಮಾಣದ ಸೀಮೆಎಣ್ಣೆಯನ್ನು ಟ್ಯಾಂಕರ್‌ಗೆ ತುಂಬಿ ಚಾಲಕನಿಗೆ ಕಮಿಷನ್ ಕೊಟ್ಟು ಕಳುಹಿಸುತ್ತಿದ್ದರು. ಸುಲಭವಾಗಿ ಹಣ ಸಿಗುತ್ತಿದ್ದ ಕಾರಣ ಕ್ರಮೇಣ ಚಾಲಕರೂ ಅವರ ಗ್ಯಾಂಗನ್ನೇ ಸೇರಿಬಿಟ್ಟರು. ಇದರಿಂದಾಗಿ ದಂಧೆ ಇನ್ನೂ ಸುಲಭವಾಯಿತು.’

‘ಇದರ ಬೆನ್ನಲ್ಲೇ ಸೈಯದ್‌ನ ಸಂಬಂಧಿಯೊಬ್ಬ, ಶ್ರೀಗಂಧದ ಮರಗಳ ಕಳ್ಳತನ ಪ್ರಾರಂಭಿಸಿದ್ದ. ಅದೇ ಹಣದಲ್ಲಿ ಕಟ್ಟಿಗೇನಹಳ್ಳಿಯಲ್ಲೇ ಖಾಸಗಿ ಶಾಲೆಯನ್ನೂ ಪ್ರಾರಂಭಿಸಿದ. ಸಂಬಂಧಿಯ ಈ ಸಂಪಾದನೆ ಸೈಯದ್‌ನ ಕಣ್ಣು ಕುಕ್ಕಲಾರಂಭಿಸಿತ್ತು. ಆಗ ತಾನೂ ಅದೇ ಕೆಲಸಕ್ಕಿಳಿದ. ದಂಧೆಯಲ್ಲಿ ಪೈಪೋಟಿ ಶುರುವಾಗಿ ಆರಂಭದಲ್ಲಿ ಅವರಿಬ್ಬರ ನಡುವೆ ಮನಸ್ತಾಪ ಉಂಟಾಗಿತ್ತಾದರೂ, ಕ್ರಮೇಣ ಎರಡೂ ಬಣಗಳು ಒಂದಾಗಿ ಮರಕ್ಕೆ ಕೊಡಲಿ ಹಾಕಲಾರಂಭಿಸಿದವು’ ಎಂದು ವಿವರಿಸಿದರು. 

ವೀರಪ್ಪನ್ ಸಹಚರ: ‘2004ರಲ್ಲಿ ವೀರಪ್ಪನ್ ಹತನಾದ ಬಳಿಕ ಆತನ ಸಹಚರ ರಿಯಾಜ್ ಖಾನ್‌ ಎಂಬಾತ ಆಂಧ್ರದ ಶೇಷಾಚಲಂ ಅರಣ್ಯ ಪ್ರದೇಶದ ಮರಗಳ್ಳರ ಸಂಪರ್ಕ ಸಾಧಿಸಿಕೊಂಡ. ಅಲ್ಲಿಂದ ರಕ್ತಚಂದನ ಕದ್ದು ಹೊಸಕೋಟೆಯ ಸುತ್ತಮುತ್ತಲ ಗೋದಾಮುಗಳಲ್ಲಿ ಅಡಗಿಸುತ್ತಿದ್ದ ಈತ, ನಂತರ ಕಂಟೈನರ್‌ಗಳಲ್ಲಿ ಚೆನ್ನೈ ಹಾಗೂ ಮುಂಬೈಗೆ ಸಾಗಿಸಿ, ಅಲ್ಲಿಂದ ಹಡಗಿನಲ್ಲಿ ಚೀನಾ, ಬರ್ಮಾ, ಯುಎಇ ಹಾಗೂ ಜಪಾನ್‌ ರಾಷ್ಟ್ರಗಳಿಗೆ ಸಾಗಣೆ ಮಾಡುತ್ತಿದ್ದ. 2010ರವರೆಗೂ ಒಂಟಿಯಾಗಿ ಈ ಕೆಲಸದಲ್ಲಿ ತೊಡಗಿದ್ದ.’

‘ರಿಯಾಜ್‌ ಖಾನ್‌ನ ವ್ಯವಹಾರ ತಿಳಿದುಕೊಂಡ ಸೈಯದ್ ಹಾಗೂ ಆತನ ಸಂಬಂಧಿ, ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಟನ್ ರಕ್ತಚಂದನಕ್ಕೆ ₹ 60 ಲಕ್ಷ ಬೆಲೆ ಇದ್ದುದರಿಂದ ಶ್ರೀಗಂಧದ ಮರವನ್ನು ಬಿಟ್ಟು ರಕ್ತಚಂದನದ ಕಡೆಗೇ ವಾಲಿದರು. ರಿಯಾಜ್‌ ಖಾನ್‌ಗೆ ತಮ್ಮ ಊರಿನಲ್ಲೇ ಆಶ್ರಯ ಕೊಟ್ಟು, ತಾವೂ ಆತನೊಟ್ಟಿಗೆ ಸೇರಿಕೊಂಡರು.’

‘ತಮಿಳುನಾಡಿನ ತಿರುವಣ್ಣಮಲೈ, ವೆಲ್ಲೂರು, ಕೃಷ್ಣಗಿರಿ ಹಾಗೂ ಆಂಧ್ರಪ್ರದೇಶದ ಚಿತ್ತೂರು, ನೆಲ್ಲೂರಿನ ಮರಗಳ್ಳರನ್ನು ಕರೆಸಿ ಸಭೆ ನಡೆಸಿದರು. ಅವರಿಗೆ ನೀಡುತ್ತಿದ್ದ ಕಮಿಷನ್‌ ಮೊತ್ತವನ್ನು ಹೆಚ್ಚಿಸಿ, ರಕ್ತಚಂದನದ ಮರಗಳನ್ನು ಹೊಸಕೋಟೆಗೆ ಸಾಗಿಸುವಂತೆ ಸೂಚಿಸಿದರು. ಹೀಗೆ, ವ್ಯವಸ್ಥಿತ ಜಾಲ ರಚನೆಯಾಯಿತು. ಅಲ್ಲಿಂದ ಬರುತ್ತಿದ್ದ ತುಂಡುಗಳನ್ನು ಇಡುವುದಕ್ಕಾಗಿಯೇ ಗ್ರಾಮದಲ್ಲಿ 40 ಟಿಂಬರ್‌ ಯಾರ್ಡ್‌ಗಳನ್ನು ತೆರೆದರು. ಹೀಗೆ, ಅಂತರರಾಷ್ಟ್ರೀಯ ಸ್ಮಗ್ಲರ್‌ಗಳಿಗೆ ಕಟ್ಟಿಗೇನಹಳ್ಳಿ ಕೇಂದ್ರ ಸ್ಥಾನವಾಯಿತು’ ಎಂದು ಆ ಅಧಿಕಾರಿ ಮಾಹಿತಿ ನೀಡಿದರು. 

ಬಂದ್ ಆಯ್ತು ಜಲಮಾರ್ಗ: ‘ಹಡಗಿನಲ್ಲಿ ರಕ್ತಚಂದನ ಸಾಗಣೆ ಆಗುತ್ತಿರುವ ಈ ಮಾಹಿತಿ ಬೆನ್ನಲ್ಲೇ ತಮಿಳುನಾಡು ಹಾಗೂ ಮುಂಬೈ ಪೊಲೀಸರು ಭದ್ರತೆಯನ್ನು ಬಿಗಿಗೊಳಿಸಿದರು. ಇದರಿಂದ ಜಲಮಾರ್ಗ ಬಂದ್ ಆಯಿತು. ಇದರ ಬೆನ್ನಲ್ಲೇ 2015ರಲ್ಲಿ ಆಂಧ್ರಪ್ರದೇಶದ 70ಕ್ಕೂ ಹೆಚ್ಚು ಪೊಲೀಸರು ಕಟ್ಟಿಗೇನಹಳ್ಳಿ ಗ್ರಾಮಕ್ಕೆ ನುಗ್ಗಿ ಗೋದಾಮುಗಳ ಕದ ತಟ್ಟಿ ಬಂದಿದ್ದರು.  ಬೆಳವಣಿಗೆಯಿಂದ ಎಚ್ಚೆತ್ತುಕೊಂಡ ಆರೋಪಿಗಳು, ಊರ ಹೊರಗಿನ ಜಮೀನುಗಳಲ್ಲಿ ಗುಂಡಿ ತೋಡಿ ಗಂಧದ ತುಂಡುಗಳನ್ನು ಹೂತಿಡುತ್ತಿದ್ದರು’ ಎಂದು ತಿರುಮಲಾಶೆಟ್ಟಿಹಳ್ಳಿ ಪೊಲೀಸರು ಹೇಳಿದರು. 

11 ಕಾರುಗಳ ಮಾಲೀಕ: ‘ಸೈಯದ್ ಪುತ್ರ ಷೇರ್ ಅಲಿ ಬಳಿ ಹನ್ನೊಂದು ಕಾರುಗಳಿವೆ. ಅವುಗಳನ್ನು ಇಡುವುದಕ್ಕಾಗಿಯೇ ಕಟ್ಟಿಗೇನಹಳ್ಳಿಯಲ್ಲಿ ವರ್ಕ್‌ಶಾಪ್ ಮಾಡಿಕೊಂಡಿದ್ದಾನೆ. ತಂದೆ–ಮಗ ಬಳಿ ಸಿಕ್ಕ ಡೈರಿಗಳ ಮಾಹಿತಿ ಪ್ರಕಾರ 13 ಟನ್‌ ರಕ್ತಚಂದನವನ್ನು ವಿವಿಧ ಕಾರ್ಖಾನೆಗಳಿಗೆ ಸಾಗಿಸಿದ್ದಾರೆ. ಅವರನ್ನು ಕಸ್ಟಡಿಗೆ ಪಡೆದು ವಿಚಾರಣೆ ನಡೆಸುತ್ತಿದ್ದೇವೆ’ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಗುಂಡಿ ಅಗೆದು ಗಂಧ ಕಿತ್ತರು!

2016ರಲ್ಲಿ ಚಿತ್ತೂರು ಟಾಸ್ಕ್‌ಫೋರ್ಸ್‌ ಪೊಲೀಸರು ಕಟ್ಟಿಗೇನಹಳ್ಳಿ ದರ್ಗಾ ಸಮೀಪದ ಜಮೀನಿನಲ್ಲಿ ಕಾರ್ಯಾಚರಣೆ ನಡಸಿದ್ದರು. ಆರೋಪಿಗಳು ಅಲ್ಲಿ ಹೆಣಗಳನ್ನು ಹೂತಂತೆ ರಕ್ತಚಂದನದ ತುಂಡುಗಳನ್ನು ಹೂತು ಮಣ್ಣಿನ ಸ್ಮಾರಕದಂತಹ ರಚನೆಗಳನ್ನು ನಿರ್ಮಿಸಿದ್ದರು. ಎಲ್ಲ ಗುಂಡಿಗಳನ್ನು ಅಗೆದಾಗ ಎರಡು ಟನ್ ರಕ್ತಚಂದನ ಸಿಕ್ಕಿತ್ತು. ಈ ಸುಳಿವಿನ ಜಾಡು ಹಿಡಿದು ತಿರುಮಲಾಶೆಟ್ಟಿಹಳ್ಳಿ ಪೊಲೀಸರು ಗೊಣಕನಹಳ್ಳಿ ಮಾವಿನ ತೋಪಿನಲ್ಲಿ ಕಾರ್ಯಾಚರಣೆ ನಡೆಸಿ, ಮಣ್ಣಿನಲ್ಲಿ ಹೂತಿಡಲಾಗಿದ್ದ ಒಂದೂವರೆ ಟನ್ ರಕ್ತಚಂದನ ತೆಗೆದಿದ್ದರು.

ಪೂರ್ವಜರು ಸೈನಿಕರಾಗಿದ್ದರು?

‘1750–1800ನೇ ಇಸವಿಯಲ್ಲಿ ನಮ್ಮ ಪೂರ್ವಜರು ಸೈನಿಕರಾಗಿ ದುಡಿದಿದ್ದರು’ ಎಂದು ಈ ಗ್ರಾಮದವರು ಹೇಳಿಕೊಳ್ಳುತ್ತಾರೆ. ಆದರೆ, ಅದಕ್ಕೆ ಯಾವುದೇ ಕುರುಹುಗಳಿಲ್ಲ. ಊರಿನ ಇತಿಹಾಸ ತಿಳಿಯುವ ಕೆಲಸವೂ ನಡೆಯುತ್ತಿದೆ’ ಎಂದು ಪೊಲೀಸರು ಹೇಳಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.