ಭಾನುವಾರ, ಏಪ್ರಿಲ್ 2, 2023
33 °C

ಉತ್ತರ ಪ್ರದೇಶ: 17 ವರ್ಷದ ಯುವತಿ ಮೇಲೆ ಮೂವರಿಂದ ಅತ್ಯಾಚಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಹೋಬಾ (ಉತ್ತರ ಪ್ರದೇಶ): 17 ವರ್ಷದ ಯುವತಿಯನ್ನು ಕೊಠಡಿಯೊಂದರಲ್ಲಿ ದಿನಪೂರ್ತಿ ಕೂಡಿಹಾಕಿ ಮೂವರು ವ್ಯಕ್ತಿಗಳು ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ಉತ್ತರ ಪ್ರದೇಶದ ಮಹೋಬಾದಲ್ಲಿ ನಡೆದಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.

ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಯುವತಿಯು ಗುರುವಾರ ಲೈಂಗಿಕ ದೌರ್ಜನ್ಯಕ್ಕೊಳಗಾಗಿದ್ದಳು. ಆರೋಪಿಗಳು ಶುಕ್ರವಾರ ಆಕೆಯನ್ನು ಅಲ್ಲಿಂದ ಬೇರೆ ಸ್ಥಳಕ್ಕೆ ಕರೆದೊಯ್ಯುತ್ತಿದ್ದಾಗ ಆಕೆ ತಪ್ಪಿಸಿಕೊಂಡಿದ್ದಾಳೆ. ಸದ್ಯ ಪರಾರಿಯಾಗಿರುವ ಆರೋಪಿಗಳನ್ನು ಹಿಡಿಯಲು ಪ್ರಯತ್ನಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಗುರುವಾರ ಆಕೆಯನ್ನು ವ್ಯಕ್ತಿಯೊಬ್ಬ ನಿರ್ಜನ ಪ್ರದೇಶದಲ್ಲಿದ್ದ ಕೋಣೆಗೆ ಕರೆದೊಯ್ದಿದ್ದಾನೆ. ಅಲ್ಲಿ ಆತ ಮತ್ತು ಆತನ ಇಬ್ಬರು ಸ್ನೇಹಿತರು ಸೇರಿ ಯುವತಿಯ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಮಹೋಬಾದ ಕೊತ್ವಾಲಿ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಆಫೀಸರ್ ಬಲರಾಮ್ ಸಿಂಗ್ ತಿಳಿಸಿದ್ದಾರೆ.

ಅತ್ಯಾಚಾರ ಎಸಗುವ ವೇಳೆ ವಿಡಿಯೊ ಮಾಡಿಕೊಂಡಿದ್ದಾರೆ ಎಂದು ಯುವತಿ ಆರೋಪಿಸಿದ್ದಾಳೆ. ಯುವತಿ ಮೇಲೆ ಅತ್ಯಾಚಾರ ಎಸಗಿದ ನಂತರ ಆಕೆಯನ್ನು ಕೊಠಡಿಯೊಳಗೆ ಬಿಟ್ಟು ಬೀಗ ಹಾಕಿ ಹೊರಗೆ ಹೋಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಶುಕ್ರವಾರ ಮೂವರು ಮರಳಿ ಬಂದಿದ್ದಾರೆ. ಅವರಲ್ಲೊಬ್ಬ ಆಕೆಯನ್ನು ಮೋಟಾರ್ ಸೈಕಲ್‌ನಲ್ಲಿ ಇನ್ನೊಂದು ಸ್ಥಳಕ್ಕೆ ಕರೆದುಕೊಂಡು ಹೋಗುತ್ತಿರುವಾಗ, ಆಕೆ ಬೈಕ್ ಮೇಲಿಂದ ಜಿಗಿದು ಸಹಾಯಕ್ಕಾಗಿ ಕೂಗಿಕೊಂಡಿದ್ದಾಳೆ.

ಯುವತಿ ಮತ್ತು ಆಕೆಯ ಕುಟುಂಬ ಸದಸ್ಯರ ದೂರಿನ ಮೇಲೆ ಪೊಲೀಸರು ಶುಕ್ರವಾರ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸದ್ಯ ಯುವತಿಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಸಿಂಗ್ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು