ಉಗ್ರನ ಗುಂಡಿ ದಾಳಿ, ಇಬ್ಬರು ಪೊಲೀಸರ ಸಾವು: ಸಿಸಿ ಕ್ಯಾಮೆರಾದಲ್ಲಿ ದೃಶ್ಯ ಸೆರೆ

ಶ್ರೀನಗರ (ಜಮ್ಮು ಕಾಶ್ಮೀರ): ಶ್ರೀನಗರದ ಮಾರುಕಟ್ಟೆಯಲ್ಲಿ ಉಗ್ರನೊಬ್ಬ ಪೊಲೀಸರ ಮೇಲೆ ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದಾನೆ. ಘಟನೆಯಲ್ಲಿ ಇಬ್ಬರು ಪೊಲೀಸ್ ಪೇದೆಗಳು ಮೃತಪಟ್ಟಿದ್ದಾರೆ. ದಾಳಿಯ ದೃಶ್ಯ ಸಿಸಿಟಿವಿ ಕ್ಯಾಮೆರದಲ್ಲಿ ಸೆರೆಯಾಗಿದೆ.
ಶ್ರೀನಗರದಲ್ಲಿ ಎರಡು ದಿನಗಳ ಹಿಂದೆ ಇದೇ ಮಾದರಿಯ ದಾಳಿ ನಡೆದಿತ್ತು. ಉಪಹಾರ ಗೃಹದ ಮಾಲೀಕರೊಬ್ಬರ ಮಗನನ್ನು ಗುರಿಯಾಗಿಸಿಕೊಂಡು ಉಗ್ರರು ಗುಂಡಿನ ದಾಳಿ ನಡೆಸಿದ್ದರು. ಘಟನೆಯಲ್ಲಿ ವ್ಯಕ್ತಿ ತೀವ್ರವಾಗಿ ಗಾಯಗೊಂಡಿದ್ದರು.
#WATCH Terrorist opens fire in Baghat Barzulla of Srinagar district in Kashmir today
( CCTV footage from police sources) pic.twitter.com/FXYCvQkyAb
— ANI (@ANI) February 19, 2021
ಬಿಗಿ ಭದ್ರತೆ ಇರುವ ವಿಮಾನ ನಿಲ್ದಾಣ ರಸ್ತೆಯ ಬಾಗಾಟ್ ಎಂಬಲ್ಲಿ, ಅತೀ ಹತ್ತಿರದಿಂದ ಇಬ್ಬರು ಪೊಲೀಸರ ಮೇಲೆ ಈ ದಾಳಿ ನಡೆದಿದೆ. ಬಂದೂಕುಧಾರಿಯನ್ನು ಉಗ್ರ ಸಕೀಬ್ ಎಂದು ಗುರುತಿಸಲಾಗಿದೆ.
ಜನ ಸಂಚಾರ ಇರುವಾಗಲೇ ದಾಳಿಕೋರ ಗುಂಡಿನ ದಾಳಿ ನಡೆಸುವುದು, ನಂತರ ಅಲ್ಲಿಂದ ಪರಾರಿಯಾಗುವುದು ಸಿಸಿಟಿವಿ ಕ್ಯಾಮೆರದಲ್ಲಿ ಸ್ಪಷ್ಟವಾಗಿ ದಾಖಲಾಗಿದೆ.
'ಕೃತ್ಯ ನಡೆಸಿದ ಉಗ್ರನನ್ನು ನಾವು ಗುರುತಿಸಿದ್ದೇವೆ ಮತ್ತು ಶೀಘ್ರದಲ್ಲೇ ಆತನನ್ನು ಬಂಧಿಸುತ್ತೇವೆ,' ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಮಹಾನಿರ್ದೇಶಕ ದಿಲ್ಬಾಗ್ ಸಿಂಗ್ ಪಿಟಿಐಗೆ ತಿಳಿಸಿದ್ದಾರೆ.
ದಾಳಿಯಲ್ಲಿ ಗಾಯಗೊಂಡ ಇಬ್ಬರು ಪೊಲೀಸರನ್ನು ಎಸ್‌ಎಂಎಚ್‌ಎಸ್ ಆಸ್ಪತ್ರೆಗೆ ಸಾಗಿಸಲಾಯಿತು. ಕಾನ್‌ಸ್ಟೆಬಲ್ ಸುಹೇಲ್ ಆಸ್ಪತ್ರೆಗೆ ಸಾಗಿಸುವ ಮೊದಲೇ ಕೊನೆಯುಸಿರೆಳೆದರು. ಮತ್ತೊಬ್ಬ ಕಾನ್‌ಸ್ಟೆಬಲ್ ಮೊಹಮ್ಮದ್ ಯೂಸುಫ್ ಅವರನ್ನು ಶಸ್ತ್ರಚಿಕಿತ್ಸೆಗಾಗಿ ಆಪರೇಷನ್ ಥಿಯೇಟರ್‌ಗೆ ಸಾಗಿಸಲಾಯಿತಾದರೂ ಅವರೂ ಉಳಿಯಲಿಲ್ಲ. ಘಟನೆ ನಡೆದ ಕೂಡಲೇ ಪೊಲೀಸರ ತಂಡಗಳು ಪ್ರದೇಶಕ್ಕೆ ಧಾವಿಸಿ ಅಂಗಡಿಗಳು ಮತ್ತು ಮನೆಗಳಲ್ಲಿ ಇದ್ದ ಸಿಸಿಟಿವಿ ದೃಶ್ಯಾವಳಿಗಳನ್ನು ವಶಪಡಿಸಿಕೊಂಡಿವೆ. ಹೀಗಾಗಿ ಉಗ್ರನ ಗುರುತು ಪತ್ತೆ ಮಾಡಲು ಸಾಧ್ಯವಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.
ಮೂರು ದಿನಗಳಲ್ಲಿ ನಗರದಲ್ಲಿ ನಡೆದ ಎರಡನೇ ದಾಳಿ ಇದಾಗಿದ್ದು, ಜನ ಆತಂಕಕ್ಕೊಳಗಾಗಿದ್ದಾರೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.