ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎರಡು ಮದುವೆ ಅವಾಂತರ: ಪತಿ ಜೊತೆ ತಲಾ ಮೂರು ದಿನ ವಾಸಿಸಲು ಪತ್ನಿಯರಿಬ್ಬರ ನಿರ್ಧಾರ

Last Updated 16 ಮಾರ್ಚ್ 2023, 15:34 IST
ಅಕ್ಷರ ಗಾತ್ರ

ಗ್ವಾಲಿಯರ್‌ : ಒಬ್ಬ ಪುರುಷ ಜೊತೆ ಇಬ್ಬರು ಮಹಿಳೆಯರು ಎರಡು ಪ್ರತ್ಯೇಕ ಮನೆಗಳಲ್ಲಿ ಶಾಂತಿಯಿಂದ ವಾಸಿಸುವ ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ಗ್ವಾಲಿಯರ್‌ನ ಕುಟುಂಬ ನ್ಯಾಯಾಲಯದ ವಕೀಲರೊಬ್ಬರು ತಿಳಿಸಿದ್ದಾರೆ.

ಒಪ್ಪಂದದ ಪ್ರಕಾರ, ವ್ಯಕ್ತಿಯು ವಾರದಲ್ಲಿ ಮೂರು ದಿವಸಗಳ ಕಾಲ ಪತ್ನಿಯ ಮನೆಯಲ್ಲಿರಬೇಕು ಮತ್ತು ಮೂರು ದಿನಗಳ ಕಾಲ ತಾನು ಮದುವೆಯಾಗಿದ್ದೇನೆ ಎಂದು ಹೇಳಿಕೊಂಡಿರುವ ಮಹಿಳೆಯ ಮನೆಯಲ್ಲಿರಬೇಕು. ಭಾನುವಾರವನ್ನು ತನ್ನ ಆಯ್ಕೆಯ ಮಹಿಳೆ ಜೊತೆ ಕಳೆಯುವಂತೆ ಆ ಮೂವರ ನಡುವೆ ಒಪ್ಪಂದ ಏರ್ಪಟ್ಟಿದೆ ಎಂದು ವಕೀಲ ಹರೀಶ್‌ ದಿವಾನ್‌ ಹೇಳಿದ್ದಾರೆ. ಜೊತೆಗೆ, ಈ ಒಪ್ಪಂದವನ್ನು ಅವರು ಹಿಂದೂ ಕಾನೂನಿನ ಪ್ರಕಾರ ಅಕ್ರಮ ಎಂದು ಕೂಡಾ ಹೇಳಿದ್ದಾರೆ.

ಗುರುಗ್ರಾಮ ನಿವಾಸಿ, ವೃತ್ತಿಯಿಂದ ಎಂಜಿನಿಯರ್‌ ಆಗಿರುವ ವ್ಯಕ್ತಿಯು 2018ರಲ್ಲಿ ಗ್ವಾಲಿಯರ್‌ ಮೂಲದ ಮಹಿಳೆಯನ್ನು ಮದುವೆಯಾಗಿದ್ದನು. 2020ರಲ್ಲಿ ಕೋವಿಡ್‌–19 ಸಾಂಕ್ರಾಮಿಕ ಆರಂಭವಾದ ವೇಳೆ ಪತ್ನಿಯನ್ನು ತವರು ಮನೆಗೆ ಕಳಿಸಿದ್ದನು. ಇದೇ ವೇಳೆ ತನ್ನ ಸಹೋದ್ಯೋಗಿಯನ್ನು ಮದುವೆಯಾಗಿದ್ದನು. ಹಲವಾರು ದಿನಗಳ ಬಳಿಕವೂ ತನ್ನನ್ನು ವಾಪಸ್ಸು ಕರೆದುಕೊಂಡು ಹೋಗಲು ಆತ ಬರದೇ ಇದ್ದಾಗ ಪತ್ನಿಗೆ ಅನುಮಾನ ಮೂಡಿದೆ. ಆಕೆ ಆತನ ಕಚೇರಿಗೆ ಹೋಗಿ ವಿಚಾರಿಸಿದಾಗ ಆತ ಎರಡನೇ ಮದುವೆ ಆಗಿರುವ ವಿಚಾರ ಬೆಳಕಿಗೆ ಬಂದಿದೆ.

ಬಳಿಕ ಮಹಿಳೆಯು ಗ್ವಾಲಿಯರ್‌ನ ಕೌಟುಂಬಿಕ ನ್ಯಾಯಾಲಯದ ಮೆಟ್ಟಿಲೇರಿದ್ದಳು. ಮೊದಲ ಪತ್ನಿ ಜೊತೆಯೇ ಸಂಸಾರ ನಡೆಸುವಂತೆ ಆತನಿಗೆ ನ್ಯಾಯಾಲಯದಲ್ಲಿ ಮನವೊಲಿಸಲು ಯತ್ನಿಸಿದ ಬಳಿಕವೂ ಆತ ತಾನು ಎರಡನೇ ಪತ್ನಿಯನ್ನು ತೊರೆಯುವುದಿಲ್ಲ ಎಂದು ಹಠ ಹಿಡಿದನು. ಬಳಿಕ ಇಬ್ಬರು ಮಹಿಳೆಯರನ್ನೂ ಸಮಾಲೋಚನೆಗೆ ಒಳಪಡಿಸಲಾಯಿತು. ಆದರೆ ಇಬ್ಬರೂ ತಮ್ಮ ಪತಿಯನ್ನು ಬಿಟ್ಟುಕೊಡಲು ತಯಾರಿರಲಿಲ್ಲ. ಹೀಗಾಗಿ ಮೂವರೂ ಒಟ್ಟಿಗೇ ಬಾಳುವ ಒಪ್ಪಂದಕ್ಕೆ ಬಂದರು ಎಂದು ದಿವಾನ್‌ ಹೇಳಿದ್ದಾರೆ.

ಇಬ್ಬರು ಮಹಿಳೆಯರಿಗೂ ಆತ ಗುರುಗ್ರಾಮದಲ್ಲಿ ಪ್ರತ್ಯೇಕ ಫ್ಲಾಟ್‌ಗಳನ್ನು ನೀಡಿದ್ದಾನೆ. ಒಪ್ಪಂದದ ಪ್ರಕಾರ ಆತನ ವೇತನವನ್ನು ಇಬ್ಬರು ಮಹಿಳೆಯರಿಗೆ ಸಮಾನವಾಗಿ ಹಂಚಲು ಒಪ್ಪಿದ್ದಾನೆ ಎಂದು ಅವರು ಹೇಳಿದರು.

ಈ ಒಪ್ಪಂದಕ್ಕೆ ಕಾನೂನಿನ ಮಾನ್ಯತೆ ಇದೆಯೇ ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ದಿವಾನ್‌, ‘ಮೂವರೂ ಪರಸ್ಪರ ಒಪ್ಪಿಗೆ ಮೇಲೆ ಈ ಒಪ್ಪಂದಕ್ಕೆ ಬಂದಿದ್ದಾರೆ. ಇದರಲ್ಲಿ ಕೌಟುಂಬಿಕ ನ್ಯಾಯಾಲಯ ಮತ್ತು ವಕೀಲರ ಪಾತ್ರವಿಲ್ಲ. ಅವರು ಮೂವರೂ ತಾವು ಹಿಂದೂ ಎಂದು ಹೇಳಿಕೊಂಡಿದ್ದಾರೆ. ಹಿಂದೂ ಕಾನೂನಿನ ಪ್ರಕಾರ ಈ ಒಪ್ಪಂದವು ನ್ಯಾಯಬದ್ಧವಲ್ಲ. ಹಿಂದೂ ಕಾನೂನಿನ ಪ್ರಕಾರ ಯಾವುದೇ ವ್ಯಕ್ತಿಯು ಕಾನೂನುಬದ್ಧವಾಗಿ ವಿಚ್ಚೇದನೆ ನೀಡದೇ ಮತ್ತೊಂದು ಮದುವೆಯಾಗುವಂತಿಲ್ಲ. ಆದರೆ ಅವರು ಮೂವರೂ ತಾವು ಮಾಡಿಕೊಂಡಿರುವ ಒಪ್ಪಂದದ ಪ್ರಕಾರ ಬಾಳುವಂತೆ ನಿರ್ಧರಿಸಿದರು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT