ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

BBC ಸಾಕ್ಷ್ಯಚಿತ್ರ ಪ್ರದರ್ಶನಕ್ಕೆ ಯತ್ನ: 24 ವಿದ್ಯಾರ್ಥಿಗಳು ಪೊಲೀಸ್‌ ವಶಕ್ಕೆ

ದೆಹಲಿ ವಿ.ವಿ: ಬಿಬಿಸಿ ಸಾಕ್ಷ್ಯಚಿತ್ರ ಪ್ರದರ್ಶನಕ್ಕೆ ಯತ್ನ
Last Updated 27 ಜನವರಿ 2023, 22:18 IST
ಅಕ್ಷರ ಗಾತ್ರ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಕುರಿತು ಬಿಬಿಸಿ ನಿರ್ಮಿಸಿರುವ ಸಾಕ್ಷ್ಯಚಿತ್ರವನ್ನು ದೆಹಲಿ ವಿಶ್ವವಿದ್ಯಾಲಯದ ಆವರಣದಲ್ಲಿ ಪ್ರದರ್ಶಿಸಲು ಮುಂದಾದ ವಿದ್ಯಾರ್ಥಿ ಗಳಲ್ಲಿ 24 ಮಂದಿಯನ್ನು ದೆಹಲಿ ಪೊಲೀಸರು ಶುಕ್ರವಾರ ವಶಕ್ಕೆ ಪಡೆದಿದ್ದಾರೆ. ವಿಶ್ವವಿದ್ಯಾಲಯ ನೀಡಿದ ದೂರಿನ ಆಧಾರದಲ್ಲೇ ಕ್ರಮ ತೆಗೆದುಕೊಂಡಿದ್ದೇವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಬಿಬಿಸಿಯ ‘ಇಂಡಿಯಾ: ದಿ ಮೋದಿ ಕ್ವೆಶ್ಚನ್‌’ ಸಾಕ್ಷ್ಯಚಿತ್ರವನ್ನು ದೆಹಲಿ ವಿಶ್ವವಿದ್ಯಾಲಯದ ಕಲಾ ವಿಭಾಗದ ಬಳಿ ಶುಕ್ರವಾರ ಸಂಜೆ 5ಕ್ಕೆ ಪ್ರದರ್ಶಿಸುವುದಾಗಿ ಭೀಮ್‌ ಆರ್ಮಿ ಸಂಘಟನೆಯ ವಿದ್ಯಾರ್ಥಿ ಸದಸ್ಯರು ಘೋಷಿಸಿದ್ದರು.

ಜತೆಗೆ ವಿಶ್ವವಿದ್ಯಾಲಯದ ನಾರ್ತ್‌ ಕ್ಯಾಂಪಸ್‌ನಲ್ಲಿ ಸಂಜೆ 4ಕ್ಕೆ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸುವುದಾಗಿ ವಿದ್ಯಾರ್ಥಿ ಸಂಘಟನೆ ಎನ್‌ಎಸ್‌ಯುಐ ಘೋಷಿಸಿತ್ತು.

ಆದರೆ, ಸಾಕ್ಷ್ಯಚಿತ್ರ ಪ್ರದರ್ಶನಕ್ಕೂ ಮುನ್ನವೇ ದೆಹಲಿ ‍ಪೊಲೀಸರು ವಿ.ವಿಯ ಆವರಣದಲ್ಲಿ ಸೇರಿದ್ದರು. ಎರಡೂ ಸ್ಥಳಗಳಲ್ಲಿ ಸಾಕ್ಷ್ಯಚಿತ್ರ ವೀಕ್ಷಣೆಗೆ ಸೇರಿದ ವಿದ್ಯಾರ್ಥಿಗಳನ್ನು ತೆರವು ಮಾಡಲು ಪೊಲೀಸರು ಮುಂದಾದರು.

ಪೊಲೀಸರ ಕ್ರಮವನ್ನು ಖಂಡಿಸಿ, ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.

ವಿದ್ಯಾರ್ಥಿಗಳನ್ನು ಪೊಲೀಸರು ಎಳೆದೊಯ್ದರು. ವಿದ್ಯಾರ್ಥಿಗಳನ್ನು ಪೊಲೀಸರು ಎಳೆದೊಯ್ಯುತ್ತಿರುವ ಚಿತ್ರ ಮತ್ತು ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ಸಾಕ್ಷ್ಯಚಿತ್ರ ಪ್ರದರ್ಶನಕ್ಕೆ ಮುಂದಾದವರು ವಿದ್ಯಾರ್ಥಿಗಳಲ್ಲ, ಹೊರಗಿನವರು. ಈ ಬಗ್ಗೆ ನಾವು ದೂರು ನೀಡಿದ್ದರಿಂದಲೇ ಪೊಲೀಸರು ಕ್ರಮ ತೆಗೆದುಕೊಂಡಿದ್ದಾರೆ ಎಂದು ವಿ.ವಿಯ ಕುಲಸಚಿವ ವಿಕಾಸ್‌ ಗುಪ್ತಾ ಹೇಳಿದ್ದಾರೆ. ಆದರೆ, ವಶಕ್ಕೆ ಪಡೆದ 24 ಮಂದಿಯೂ ವಿದ್ಯಾರ್ಥಿಗಳು ಎಂದು ಉತ್ತರ ದೆಹಲಿ ಡಿಸಿಪಿ ಸಾಗರ್‌ ಸಿಂಗ್ ಕಲ್ಸಿ ದೃಢಪಡಿಸಿದ್ದಾರೆ.

‘ಅನುಮತಿ ಪಡೆದಿರಲಿಲ್ಲ’

‘ಸಾಕ್ಷ್ಯಚಿತ್ರ ಪ್ರದರ್ಶನಕ್ಕೆ ವಿದ್ಯಾರ್ಥಿಗಳು ಅನುಮತಿ ಪಡೆದಿರಲಿಲ್ಲ. ಜತೆಗೆ ವಿ.ವಿಯಲ್ಲಿನ ಶಾಂತ ವಾತಾವರಣವನ್ನು ಹದಗೆಡಿಸಲು ಯತ್ನಿಸಿದ ಕಾರಣ ಪೊಲೀಸರಿಗೆ ದೂರು ನೀಡಲಾಗಿತ್ತು’ ಎಂದು ದೆಹಲಿ ವಿಶ್ವವಿದ್ಯಾಲಯದ ಮುಖ್ಯ ಮೇಲ್ವಿಚಾರಕರಾದ ರಜನಿ ಅಬ್ಬಿ ಹೇಳಿದ್ದಾರೆ. ‘ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದಿರುವುದು ನಿಜ. ಸೆಕ್ಷನ್‌ 144 ಅಡಿಯಲ್ಲಿ ವಿಶ್ವವಿದ್ಯಾಲಯದ ಆವರಣದಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದೆ. ಹೀಗಿದ್ದೂ ವಿದ್ಯಾರ್ಥಿಗಳು ಅಲ್ಲಿ ಸೇರಿದ್ದು ಏಕೆ’ ಎಂದು ಅವರು ಪ್ರಶ್ನಿಸಿದ್ದಾರೆ ಎಂದು ಎನ್‌ಡಿ ಟಿ.ವಿ ವರದಿ ಮಾಡಿದೆ.

‘ವಿಶ್ವವಿದ್ಯಾಲಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ 2022ರ ಡಿಸೆಂಬರ್‌ನಿಂದ ಫೆಬ್ರುವರಿ 28ರವರೆಗೆ ನಿಷೇಧಾಜ್ಞೆ ಜಾರಿ ಮಾಡಲಾಗಿದೆ’ ಎಂದು ವಿಶ್ವವಿದ್ಯಾಲಯದ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT