ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಕೀಯ ಒತ್ತಡಕ್ಕೆ ಮೆಹ್ತಾ ರಾಜೀನಾಮೆ: ಶಿಕ್ಷಣ ತಜ್ಞರಿಂದ ಬಹಿರಂಗ ಪತ್ರ

Last Updated 20 ಮಾರ್ಚ್ 2021, 14:37 IST
ಅಕ್ಷರ ಗಾತ್ರ

ನವದೆಹಲಿ: ಹರಿಯಾಣದ ಸೋನಿಪತ್‌ನ ಅಶೋಕ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಹುದ್ದೆಗೆ ಪ್ರತಾಪ್‌ ಭಾನು ಮೆಹ್ತಾ ಅವರು ರಾಜೀನಾಮೆ ನೀಡಿರುವುದಕ್ಕೆ ಜಗತ್ತಿನ ಹಲವು ಪ್ರತಿಷ್ಠಿತ ವಿಶ್ವವಿದ್ಯಾಲಯಗಳ ಶಿಕ್ಷಣ ತಜ್ಞರು ಆಕ್ಷೇಪ ವ್ಯಕ್ತಪಡಿಸಿ ಬಹಿರಂಗ ಪತ್ರ ಬರೆದಿದ್ದಾರೆ.

ರಾಜಕೀಯ ಒತ್ತಡಗಳಿಗಾಗಿ ಮೆಹ್ತಾ ಅವರ ರಾಜೀನಾಮೆ ಪಡೆಯಲಾಗಿದೆ ಎಂದು ಉಲ್ಲೇಖಿಸಿ ಹಾರ್ವರ್ಡ್‌, ಯಾಲೆ, ಕೊಲಂಬಿಯಾ, ಎಂಐಟಿ, ಲಂಡನ್‌ ಸ್ಕೂಲ್ ಆಫ್‌ ಎಕನಾಮಿಕ್ಸ್‌, ನ್ಯೂಯಾರ್ಕ್‌ ಯುನಿವರ್ಸಿಟಿ, ಯುನಿವರ್ಸಿಟಿ ಆಫ್‌ ಆಕ್ಸಫರ್ಡ್‌, ಸ್ಯಾನ್‌ಫೋರ್ಡ್‌ ಯುನಿವರ್ಸಿಟಿ ಸೇರಿದಂತೆ ಸುಮಾರು 150 ವಿಶ್ವವಿದ್ಯಾಲಯಗಳ ಶಿಕ್ಷಣ ತಜ್ಞರು ಅಶೋಕ ವಿಶ್ವವಿದ್ಯಾಲಯ ಟ್ರಸ್ಟಿಗಳಿಗೆ ಪತ್ರ ಬರೆದಿದ್ದಾರೆ.

‘ಅಕಾಡೆಮಿಕ್‌ ಸ್ವಾತಂತ್ರ್ಯದ ಮೇಲೆ ಅಪಾಯಕಾರಿ ದಾಳಿ’ ಎನ್ನುವ ಶೀರ್ಷಿಕೆ ಅಡಿಯಲ್ಲಿ ಈ ಪತ್ರ ಬರೆಯಲಾಗಿದೆ.

’ರಾಜಕೀಯ ಒತ್ತಡದ ಕಾರಣಗಳಿಗೆ ಅಶೋಕ ವಿಶ್ವವಿದ್ಯಾಲಯಕ್ಕೆ ಪ್ರತಾಪ್‌ ಭಾನು ಮೆಹ್ತಾ ಅವರು ರಾಜೀನಾಮೆ ನೀಡಿದ್ದಾರೆ. ಇದು ನೋವಿನ ಸಂಗತಿ. ಈಗಿನ ಭಾರತ ಸರ್ಕಾರದ ಪ್ರಮುಖ ಟೀಕಾಕಾರರಾಗಿದ್ದ ಮೆಹ್ತಾ ಅವರು ಮುಕ್ತ ಶೈಕ್ಷಣಿಕ ವಾತಾವರಣ ಪ್ರತಿಪಾದಿಸುತ್ತಿದ್ದರು. ಅಶೋಕ ವಿಶ್ವವಿದ್ಯಾಲಯದ ಟ್ರಸ್ಟಿಗಳು ಮೆಹ್ತಾ ಅವರನ್ನು ಸಮರ್ಥಿಸಿಕೊಳ್ಳುವ ಬದಲು ರಾಜೀನಾಮೆ ನೀಡುವಂತೆ ಒತ್ತಡ ಹೇರಿದ್ದಾರೆ’ ಎಂದು ಶಿಕ್ಷಣ ತಜ್ಞರು ಬಹಿರಂಗ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

‘ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಪ್ರತಿಪಾದನೆ ಮಾಡುವವರ ಮೇಲೆ ಈ ರೀತಿ ಪ್ರಹಾರ ಮಾಡುವುದು ನಾಚಿಕೆಗೇಡಿತನದ ಸಂಗತಿ. ಉನ್ನತ ಮೌಲ್ಯಗಳನ್ನು ಪ್ರತಿಪಾದಿಸುತ್ತಿರುವ ಮೆಹ್ತಾ ಅವರಿಗೆ ನಾವು ಬೆಂಬಲಿಸುತ್ತೇವೆ’ ಎಂದು ತಿಳಿಸಿದ್ದಾರೆ.

ರಾಜಕೀಯ ವಿಶ್ಲೇಷಕರೂ ಆಗಿರುವ ಮೆಹ್ತಾ ಅವರು ಎರಡು ವರ್ಷಗಳ ಹಿಂದೆ ಕುಲಪತಿ ಹುದ್ದೆಗೆ ರಾಜೀನಾಮೆ ನೀಡಿದ್ದರು. ನಂತರ, ಪ್ರಾಧ್ಯಾಪಕ ಹುದ್ದೆಗೆ ಇತ್ತೀಚೆಗೆ ರಾಜೀನಾಮೆ ನೀಡಿದ್ದರು. ಮೆಹ್ತಾ ಅವರಿಗೆ ಬೆಂಬಲ ಸೂಚಿಸಿ ನರೇಂದ್ರ ಮೋದಿ ಸರ್ಕಾರದ ಮಾಜಿ ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ್‌ ಸುಬ್ರಮಣಿಯನ್‌ ಸಹ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಹುದ್ದೆಗೆ ಎರಡು ದಿನಗಳ ಹಿಂದೆ ರಾಜೀನಾಮೆ ನೀಡಿದ್ದರು.

ಈ ಬೆಳವಣಿಗೆಗಳ ಬಗ್ಗೆ ಅಶೋಕ ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಪ್ರತಿಭಟನೆ

ಮೆಹ್ತಾ ಅವರ ರಾಜೀನಾಮೆ ಬಗ್ಗೆ ವಿಶ್ವವಿದ್ಯಾಲಯ ಉತ್ತರ ನೀಡಬೇಕು ಎಂದು ಒತ್ತಾಯಿಸಿ ವಿದ್ಯಾರ್ಥಿಗಳು, ಹಳೆಯ ವಿದ್ಯಾರ್ಥಿಗಳು ಮತ್ತು ಪ್ರಾಧ್ಯಾಪಕರು ಪ್ರತಿಭಟನೆ ನಡೆಸುತ್ತಿದ್ದಾರೆ.

ಸರ್ಕಾರದ ನೀತಿಗಳನ್ನು ಟೀಕಿಸಿದ್ದಕ್ಕಾಗಿ ರಾಜೀನಾಮೆ ಪಡೆಯಲಾಗಿದೆಯೇ ಎನ್ನುವ ಬಗ್ಗೆ ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಉತ್ತರ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

‘ಭಾರತದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಅಪಾಯದಲ್ಲಿದೆ’

‘ಪ್ರತಾಪ್‌ ಭಾನು ಮೆಹ್ತಾ ಮತ್ತು ಸುಬ್ರಮಣಿಯನ್‌ ಅವರ ರಾಜೀನಾಮೆ ಪ್ರಕರಣಗಳು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆಯಾಗಿರುವುದಕ್ಕೆ ಉದಾಹರಣೆಗಳಾಗಿವೆ. ಅಭಿವ್ಯಕ್ತಿ ಸ್ವಾತಂತ್ರ್ಯ ಶ್ರೇಷ್ಠ ವಿಶ್ವವಿದ್ಯಾಲಯದ ಆತ್ಮ. ಆದರೆ, ಸಂಸ್ಥಾಪಕರು ಈ ವಿಷಯದಲ್ಲಿ ರಾಜಿ ಮಾಡಿಕೊಳ್ಳುವ ಮೂಲಕ ವಿಶ್ವವಿದ್ಯಾಲಯದ ಆತ್ಮವನ್ನೇ ಬದಲಾಯಿಸಿಕೊಂಡಿದ್ದಾರೆ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ನ ಗವರ್ನರ್‌ ರಘುರಾಂ ರಾಜನ್‌ ಪ್ರತಿಕ್ರಿಯಿಸಿದ್ದಾರೆ.

‘ಪ್ರಾಧ್ಯಾಪಕ ಮೆಹ್ತಾ ಆಡಳಿತ ಮಂಡಳಿಗೆ ಮುಳ್ಳಾಗಿದ್ದು ವಾಸ್ತವ ಸಂಗತಿ. ಸರ್ಕಾರದಲ್ಲಿನ ಮತ್ತು ಸುಪ್ರೀಂ ಕೋರ್ಟ್‌ನಂತಹ ಉನ್ನತ ಸಂಸ್ಥೆಗಳಲ್ಲಿರುವವರನ್ನು ಮೆಹ್ತಾ ಪರಿಣಾಮಕಾರಿಯಾಗಿ ಟೀಕಿಸುತ್ತಿದ್ದರು’ ಎಂದು ಹೇಳಿದ್ದಾರೆ.

ಸುಬ್ರಮಣಿಯನ್‌ ಅವರ ರಾಜೀನಾಮೆ ಪತ್ರದಲ್ಲಿ ಕೆಲವು ಸಾಲುಗಳನ್ನು ಉಲ್ಲೇಖಿಸಿರುವ ಅವರು, ‘ಖಾಸಗಿ ಸ್ಥಾನಮಾನ ಮತ್ತು ಖಾಸಗಿ ಬಂಡವಾಳ ಹೊಂದಿರುವ ಅಶೋಕ ವಿಶ್ವವಿದ್ಯಾಲಯ ಸಹ ಮುಕ್ತ ಶೈಕ್ಷಣಿಕ ವಾತಾವರಣಕ್ಕೆ ಮತ್ತು ಅಭಿಪ್ರಾಯಗಳನ್ನು ಹಂಚಿಕೊಳ್ಳಲು ಅವಕಾಶ ಒದಗಿಸದಿರುವುದು ನಿಜಕ್ಕೂ ವಿಷಾದಕರ’ ಎಂದು ಹೇಳಿದ್ದಾರೆ.

‘ಮೆಹ್ತಾ ಅವರು ವಿರೋಧ ಪಕ್ಷಗಳ ಪರವಾಗಿಯೂ ಇರಲಿಲ್ಲ. ನಿಜವಾದ ಅಕಾಡೆಮಿಕ್‌ ಆಗಿದ್ದ ಅವರು, ತಪ್ಪು ನೀತಿಗಳು ಮತ್ತು ನಿರ್ಧಾರಗಳನ್ನು ಕೈಗೊಳ್ಳುವ ಎಲ್ಲರನ್ನೂ ಸಮಾನವಾಗಿ ಟೀಕಿಸುತ್ತಿದ್ದರು’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT