ನಿಖಿಲ್ ಜೈನ್ ಜತೆಗಿನ ಮದುವೆ ಕಾನೂನುಬದ್ಧವಲ್ಲ: ನಟಿ, ಸಂಸದೆ ನುಸ್ರತ್ ಜಹಾನ್

ಕೋಲ್ಕತ್ತ: ಉದ್ಯಮಿ ನಿಖಿಲ್ ಜೈನ್ ಜತೆಗಿನ ಮದುವೆ ಕಾನೂನುಬದ್ಧವಲ್ಲ. ಅವರ ಜತೆ ಲಿವ್–ಇನ್ ಸಂಬಂಧ ಹೊಂದಿದ್ದೆ ಎಂದು ಖ್ಯಾತ ನಟಿ, ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದೆ ನುಸ್ರತ್ ಜಹಾನ್ ಹೇಳಿದ್ದಾರೆ.
ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಅವರು, ಜೈನ್ ಜತೆಗಿನ ವಿವಾಹ ಸಮಾರಂಭವು ಟರ್ಕಿಯ ಕಾನೂನಿಗೆ ಅನುಸಾರವಾಗಿ ನಡೆದಿರುವ ಕಾರಣ ಭಾರತದಲ್ಲಿ ಆ ಮದುವೆ ಅಮಾನ್ಯವಾಗಿದೆ ಎಂದು ಹೇಳಿದ್ದಾರೆ.
‘ಅಂತರ್ ಧರ್ಮದ ವಿವಾಹವಾಗಿದ್ದರಿಂದ ಅದಕ್ಕೆ ಭಾರತದಲ್ಲಿ ವಿಶೇಷ ವಿವಾಹ ಕಾಯ್ದೆ ಅಡಿಯಲ್ಲಿ ಮಾನ್ಯತೆ ದೊರೆಯಬೇಕಿದೆ. ಅದಾಗಿಲ್ಲ. ಕಾನೂನಿನ ಪ್ರಕಾರ ಅದು ಮದುವೆಯಲ್ಲ, ಆದರೆ ಲಿವ್–ಇನ್ ಸಂಬಂಧವಷ್ಟೆ’ ಎಂದು ನುಸ್ರತ್ ಜಹಾನ್ ಹೇಳಿದ್ದಾರೆ.
ಓದಿ: ಆಸ್ಪತ್ರೆಯಿಂದ ಬಿಡುಗಡೆಯಾದ ನಟಿ, ಸಂಸದೆ ನುಸ್ರತ್, ವದಂತಿ ಅಲ್ಲಗಳೆದ ಕುಟುಂಬ
ಜಹಾನ್ ಅವರಿಂದ ವಿಚ್ಛೇದನ ಕೋರಿದ್ದೇನೆ ಎಂದು ಜೈನ್ ಅವರು ಈಚೆಗೆ ಮಾಧ್ಯಮಗಳಿಗೆ ತಿಳಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಜಹಾನ್, ಮೇಲೆ ತಿಳಿಸಿರುವ ಕಾರಣಗಳಿಂದಾಗಿ ಇಲ್ಲಿ ವಿಚ್ಛೇದನದ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಹೇಳಿದ್ದಾರೆ.
ಜಹಾನ್ 2019ರಲ್ಲಿ ಟರ್ಕಿಯಲ್ಲಿ ಜೈನ್ ಜತೆ ವಿವಾಹವಾಗಿದ್ದರು. ಲೋಕಸಭಾ ಚುನಾವಣೆಯಲ್ಲಿ ಜಯಗಳಿಸಿದ ಬಳಿಕ ಕೋಲ್ಕತ್ತದ ಪಂಚತಾರಾ ಹೋಟೆಲ್ನಲ್ಲಿ ವಿವಾಹದ ಪ್ರಯುಕ್ತ ಸಮಾರಂಭವನ್ನೂ ಏರ್ಪಡಿಸಿದ್ದರು. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೇರಿದಂತೆ ಅನೇಕ ಗಣ್ಯರೂ ಸಮಾರಂಭಕ್ಕೆ ಸಾಕ್ಷಿಯಾಗಿದ್ದರು.
ಓದಿ: ಎಲ್ಲರನ್ನೊಳಗೊಂಡ ಭಾರತವನ್ನು ನಾನು ಪ್ರತಿನಿಧಿಸುತ್ತಿದ್ದೇನೆ: ನುಸ್ರತ್ ಜಹಾನ್
ಜಹಾನ್ ಹೇಳಿಕೆ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಜೈನ್ ಅವರು, ‘ನಾನೇನೂ ಹೇಳಲು ಬಯಸುವುದಿಲ್ಲ. ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದೆ. ಎಲ್ಲವನ್ನೂ ನ್ಯಾಯಾಲಯ ನಿರ್ಧರಿಸಲಿದೆ’ ಎಂದು ಹೇಳಿದ್ದಾರೆ.
ಜಹಾನ್ ಅವರು ನಟ, ವಿಧಾನಸಭಾ ಚುನಾವಣಾ ಅಭ್ಯರ್ಥಿ ಯಶ್ ದಾಸ್ಗುಪ್ತಾ ಅವರೊಂದಿಗೆ ಡೇಟಿಂಗ್ ಮಾಡುತ್ತಿರುವ ಬಗ್ಗೆ ಈಚೆಗೆ ವರದಿಯಾಗಿತ್ತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.