ಡೆಹ್ರಾಡೂನ್: ಜೋಶಿಮಠದಲ್ಲಿ ಭೂಕುಸಿತದಿಂದ ಸಂತ್ರಸ್ತ ಕುಟುಂಬಗಳು ಮತ್ತು ವ್ಯಕ್ತಿಗಳಿಗೆ ಆರು ತಿಂಗಳ ಕಾಲ ವಿದ್ಯುತ್ ಮತ್ತು ನೀರಿನ ಬಿಲ್‌ಗಳ ಮನ್ನಾ ಸೇರಿದಂತೆ ಅನೇಕ ಪರಿಹಾರ ಕ್ರಮಗಳಿಗೆ ಉತ್ತರಾಖಂಡ ಸರ್ಕಾರ ಮುಂದಾಗಿದೆ.
ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಕಣಿವೆ ರಾಜ್ಯದ ಎಲ್ಲಾ ಪಟ್ಟಣಗಳ ವಾಹಕ ಸಾಮರ್ಥ್ಯದ ಬಗ್ಗೆ ಅಧ್ಯಯನ ನಡೆಸಲು ನಿರ್ಧರಿಸಲಾಗಿದೆ.
ಕೋಟಿ ಫಾರ್ಮ್, ಪಿಪಲಕೋಟಿ, ಗೌಚಾರ್ ಮೊದಲಾದೆಡೆ ಗುರುತಿಸಲಾದ ಸ್ಥಳಗಳಲ್ಲಿ ಜೋಶಿಮಠದ ಸಂತ್ರಸ್ತರಿಗೆ ತಾತ್ಕಾಲಿಕ ಪುನರ್ವಸತಿ ಕಲ್ಪಿಸಲು ಸಂಪುಟ ತಾತ್ವಿಕ ಅನುಮೋದನೆ ನೀಡಿತು.
ಒಂದು ವರ್ಷದವರೆಗೆ ಸಂತ್ರಸ್ತರ ಬ್ಯಾಂಕ್ ಸಾಲ ಮರುಪಾವತಿ ತಡೆಗೆ ಸರ್ಕಾರ ನಿರ್ಧರಿಸಿದೆ. ಸಹಕಾರಿ ಬ್ಯಾಂಕ್‌ಗಳ ಸಾಲ ಮರುಪಾವತಿಗೆ ಈ ನಿರ್ಧಾರ ತಕ್ಷಣದಿಂದಲೇ ಅನ್ವಯವಾಗಲಿದೆ. ವಾಣಿಜ್ಯ ಬ್ಯಾಂಕ್‌ಗಳು ಕೂಡ ಇದೇ ರೀತಿ ಒಂದು ವರ್ಷ ಕಾಲಾವಕಾಶ ನೀಡುವಂತೆ ರಾಜ್ಯ ಸರ್ಕಾರ ಕೇಂದ್ರಕ್ಕೆ ಮನವಿ ಮಾಡಲಿದೆ ಎಂದು ಮುಖ್ಯ ಕಾರ್ಯದರ್ಶಿ ಎಸ್.ಎಸ್. ಸಂಧು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಂತ್ರಸ್ತ ಕುಟುಂಬಗಳಿಗೆ ಮಾಸಿಕ ಬಾಡಿಗೆ ಪಾವತಿಸಲು ರಾಜ್ಯ ಸರ್ಕಾರ ನೀಡುತ್ತಿರುವ ಮೊತ್ತವನ್ನು ತಿಂಗಳಿಗೆ ₹4,000 ನಿಂದ ₹5,000 ಕ್ಕೆ ಹೆಚ್ಚಿಸಲು ಸಂಪುಟ ನಿರ್ಧರಿಸಿದೆ. ಜಿಲ್ಲಾಧಿಕಾರಿಗಳ ಶಿಫಾರಸಿನ ಮೇರೆಗೆ ಮುಖ್ಯಮಂತ್ರಿಗಳು ಈ ಮೊತ್ತ ಇನ್ನಷ್ಟು ಹೆಚ್ಚಿಸಲು ಸಭೆ ಅನುಮೋದನೆ ನೀಡಿದೆ.
ಹೋಟೆಲ್‌ಗಳು ಮತ್ತು ವಸತಿ ಘಟಕಗಳಲ್ಲಿ ನಿರ್ಮಿಸಲಾದ ತಾತ್ಕಾಲಿಕ ಪರಿಹಾರ ಶಿಬಿರಗಳಲ್ಲಿ ತಂಗಿರುವ ಪ್ರತಿ ಸಂತ್ರಸ್ತ ಕುಟುಂಬಕ್ಕೆ ವಾಸ್ತವ್ಯಕ್ಕಾಗಿ ದಿನಕ್ಕೆ ₹950 ಮತ್ತು ವೆಚ್ಚಕ್ಕಾಗಿ ತಲಾ ₹450 ನೀಡಲಾಗುವುದು ಎಂದು ಸಂಧು ತಿಳಿಸಿದ್ದಾರೆ.
ಕೇಂದ್ರ ಸರ್ಕಾರ ಪರಿಹಾರ ಧನ ಲಭಿಸುವವರೆಗೆ ರಾಜ್ಯ ಸರ್ಕಾರದ ಸ್ವಂತ ಸಂಪನ್ಮೂಲಗಳಿಂದ ದೀರ್ಘ ಮತ್ತು ಅಲ್ಪಾವಧಿಯ ಪರಿಹಾರ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಸಂಧು ಹೇಳಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.