ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ ತಲೆತಗ್ಗಿಸಲು ಮೋದಿಯೇ ಕಾರಣ: ವಿರೋಧ ಪಕ್ಷಗಳ ಟೀಕೆ

ದ್ವೇಷ ರಾಜಕಾರಣಕ್ಕೆ ಪ್ರಧಾನಿಯ ಪೋಷಣೆ
Last Updated 6 ಜೂನ್ 2022, 19:31 IST
ಅಕ್ಷರ ಗಾತ್ರ

ನವದೆಹಲಿ/ಮುಂಬೈ: ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಹಿರಿಯ ನಾಯಕರು ದ್ವೇಷ ರಾಜಕಾರಣವನ್ನು ಪೋಷಿಸಿದ ಕಾರಣದಿಂದಲೇ, ಭಾರತವು ಇಂದು ಜಾಗತಿಕ ಸಮುದಾಯದ ಎದುರು ತಲೆಬಗ್ಗಿಸುವಂತಾಗಿದೆ ಎಂದು ವಿರೋಧ ಪಕ್ಷಗಳು ಟೀಕಿಸಿವೆ. ಪ್ರವಾದಿ ಮಹಮ್ಮದರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ಬಿಜೆಪಿ ನಾಯಕರನ್ನು ತಕ್ಷಣವೇ ಬಂಧಿಸಬೇಕು ಎಂದು ವಿರೋಧ ಪಕ್ಷಗಳು ಒತ್ತಾಯಿಸಿವೆ.

‘ದ್ವೇಷ ಭಾಷಣವನ್ನು ಬಿಜೆಪಿ ಪ್ರೋತ್ಸಾಹಿಸಿದೆ. ಬಿಜೆಪಿ ಮುಖಂಡರು ಇಂತಹ ಹೇಳಿಕೆ ನೀಡಿದಾಗ ಪ್ರಧಾನಿ ನರೇಂದ್ರ ಮೋದಿ ಅವರು ಸುಮ್ಮನೆ ಇರುತ್ತಿದ್ದರು. ಈ ಕಾರಣದಿಂದಲೇ ಬಿಜೆಪಿ ಮುಖಂಡರು ಇಂದು ಇಂತಹ ಹೇಳಿಕೆ ನೀಡಿದ್ದಾರೆ. ಇದರಿಂದಲೇ ಭಾರತವು ಇಂದು ವಿಶ್ವದ ಎದುರು ತಲೆ ತಗ್ಗಿಸಿ ನಿಂತಿದೆ’ ಎಂದು ಎಎಪಿ ಸಂಸದ ಸಂಜಯ್ ಸಿಂಗ್ ಟೀಕಿಸಿದ್ದಾರೆ.

ಇದೇ ರೀತಿಯ ಹೇಳಿಕೆ ನೀಡಿರುವ ಕಾಂಗ್ರೆಸ್‌ ಮುಖಂಡ ಪಿ.ಚಿದಂಬರಂ, ‘ನೂಪುರ್ ಆಗಲೀ ನವೀನ್‌ ಆಗಲೀ ಈ ರೀತಿಯ ಹೇಳಿಕೆ ನೀಡಿದ ಮೊದಲಿಗರಲ್ಲ. ಬದಲಿಗೆ ಅವರು ಇಂತಹ ಹೇಳಿಕೆ ನೀಡುವ ಮೂಲಕ ತಮ್ಮ ರಾಜನಿಗೆ ನಿಷ್ಠರಾಗಿರಲು ಯತ್ನಿಸಿದ್ದಾರೆ’ ಎಂದು ಲೇವಡಿ ಮಾಡಿದ್ದಾರೆ.

‘ಮಧ್ಯಪ್ರದೇಶದಲ್ಲಿ ಬಿಜೆಪಿ ಸಂಸದರೊಬ್ಬರು ಗಾಂಧೀಜಿ ಹಂತಕ ನಾಥೂರಾಮ್‌ ಗೋಡ್ಸೆಯನ್ನು ಹೊಗಳಿದರು. ಆಗ ಪ್ರಧಾನಿ ನರೇಂದ್ರ ಮೋದಿ ಮೌನವಾಗಿದ್ದರು. ಅದರಿಂದ ನಮಗೆ ತೀವ್ರ ಆಘಾತವಾಗಿತ್ತು. ನೀವು ಏನು ಮಾಡಲು ಅನುಮತಿ ನೀಡಿರುತ್ತೀರೋ ಅದನ್ನೇ ಪ್ರೋತ್ಸಾಹಿಸುತ್ತೀರಿ ಎಂದು ಮೋದಿ ಅವರಿಗೆ ಹೇಳಲು ಬಯಸುತ್ತೇನೆ’ ಎಂದು ಟಿಆರ್‌ಎಸ್‌ ಕಾರ್ಯಾಧ್ಯಕ್ಷ ಕೆ.ಟಿ.ರಾಮರಾವ್ ಟೀಕಿಸಿದ್ದಾರೆ.

‘ಆಂತರಿಕವಾಗಿ ವಿಭಜನೆಯಾಗಿರುವ ಭಾರತವು ವಿಶ್ವದ ಎದುರು ದುರ್ಬಲವಾಗಿದೆ. ಬಿಜೆಪಿಯ ನಾಚಿಕೆಗೇಡಿನ ದ್ವೇಷರಾಜಕಾರಣದಿಂದ ನಾವು ಜಾಗತಿಕ ಸಮುದಾಯದಲ್ಲಿ ಒಂಟಿಯಾಗಿದ್ದು ಮಾತ್ರವಲ್ಲ, ಭಾರತದ ಸ್ಥಾನಕ್ಕೂ ಧಕ್ಕೆಯಾಗಿದೆ’ ಎಂದು ಕಾಂಗ್ರೆಸ್‌ ಮುಖಂಡ ರಾಹುಲ್ ಗಾಂಧಿ ಟ್ವೀಟ್‌ ಮಾಡಿದ್ದಾರೆ.

‘ದೇಶದೊಳಗೆ ವ್ಯಕ್ತವಾದ ವಿರೋಧ ಪರಿಗಣಿಸಿ ತನ್ನ ಇಬ್ಬರು ಮುಖಂಡರ ವಿರುದ್ಧ ಬಿಜೆಪಿ ಕ್ರಮ ತೆಗದುಕೊಂಡಿಲ್ಲ.ಬಿಜೆಪಿಯು ನಿಲುವು ಕೂಡ ಈ ಕ್ರಮಕ್ಕೆ ಕಾರಣ ಅಲ್ಲ. ಬದಲಿಗೆ ಜಾಗತಿಕ ಒತ್ತಡಕ್ಕೆ ಮಣಿದು ಈ ಕ್ರಮ ತೆಗದುಕೊಂಡಿದೆ’ ಎಂದು ಸಿಪಿಎಂ ಟೀಕಿಸಿದೆ.

ನೂಪುರ್ ಶರ್ಮಾ ಮತ್ತು ನವೀನ್ ಜಿಂದಾಲ್‌ ಅವರನ್ನು ಮೂಲಭೂತವಾದಿಗಳು ಎಂದು ಕರೆದ ಬಿಜೆಪಿಯ ನಡೆಯನ್ನೂ ವಿರೋಧ ಪಕ್ಷಗಳು ಪ್ರಶ್ನಿಸಿವೆ.‘ನೂಪುರ್ ಶರ್ಮಾ ಮತ್ತು ನವೀನ್ ಜಿಂದಾಲ್‌ ಅವರನ್ನು ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಬಿಜೆಪಿಯ ಪ್ರಮುಖ ನಾಯಕರೆಲ್ಲರೂ ಟ್ವಿಟರ್‌ನಲ್ಲಿ ಅನುಸರಿಸುತ್ತಿದ್ದಾರೆ. ಆದರೆ ಈಗ ಇವರಿಬ್ಬರನ್ನು ಬಿಜೆಪಿ ಸರ್ಕಾರವೇ ‘ಮೂಲಭೂತವಾದಿಗಳು’ ಎಂದು ಕರೆದಿದೆ. ಪಕ್ಷದ ಅಧಿಕೃತ ಹುದ್ದೆಗಳಲ್ಲಿ ಇರುವವರನ್ನೇ ಬಿಜೆಪಿ ‘ಮೂಲಭೂತವಾದಿಗಳು’ ಎಂದು ಕರೆಯಲು ಹೇಗೆ ಸಾಧ್ಯ’ ಎಂದು ಸಿಪಿಎಂ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಪ್ರಶ್ನಿಸಿದ್ದಾರೆ.

‘ಆರ್‌ಎಸ್‌ಎಸ್‌ ಇದೇ ರೀತಿಯ ಹೇಳಿಕೆ ನೀಡುತ್ತಿರುತ್ತದೆ. ಬಿಜೆಪಿ ನಾಯಕರೂ ಇದೇ ರೀತಿಯ ಹೇಳಿಕೆ ನೀಡಿದ್ದಾರೆ. ಹಾಗಿದ್ದರೆ, ಆರ್‌ಎಸ್‌ಎಸ್‌ ಸಹ ಮೂಲಭೂತವಾದಿ ಸಂಘಟನೆಯೇ?ಬಿಜೆಪಿ ಇಂಥದ್ದನ್ನೆಲ್ಲಾ ನಿಲ್ಲಿಸಬೇಕು. ಧರ್ಮನಿಂದನೆಯನ್ನು ನಿಲ್ಲಿಸಬೇಕು. ಸಂವಿಧಾನದ ಮೌಲ್ಯಗಳನ್ನು ಎತ್ತಿ ಹಿಡಿಯಬೇಕು’ ಎಂದು ಅವರು ಒತ್ತಾಯಿಸಿದ್ದಾರೆ.

*
ಬಿಜೆಪಿ ನಾಯಕರು ಎಸಗಿದ ತಪ್ಪಿಗೆ ಭಾರತವೇಕೆ ಜಾಗತಿಕ ಸಮುದಾಯದ ಕ್ಷಮೆ ಕೇಳಬೇಕು? ಕ್ಷಮೆ ಕೇಳಬೇಕಾಗಿದ್ದು ಬಿಜೆಪಿ, ಭಾರತವಲ್ಲ
-ಕೆ.ಟಿ.ರಾಮರಾವ್, ಟಿಆರ್‌ಎಸ್‌ ಕಾರ್ಯಾಧ್ಯಕ್ಷ

*
ಈ ಹೇಳಿಕೆಗಳು ಧಾರ್ಮಿಕ ವ್ಯಕ್ತಿತ್ವಗಳು, ಪವಿತ್ರ ಚಿಹ್ನೆಗಳಿಗೆ ಮಾಡಿದ ಅವಮಾನ. ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು
-ಮೌಲಾನಾ ಖಾಲಿದ್ ಸೈಫ್‌ಉಲ್ಲಾ ರಹಮಾನಿ, ಎಐಎಂಪಿಎಲ್‌ಬಿ ಕಾರ್ಯದರ್ಶಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT