ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರೋಪಿ ಪತ್ತೆಗಾಗಿ ಮುಂಬೈಗೆ ತೆರಳಿದ ದೆಹಲಿ ಪೊಲೀಸರ ತಂಡಗಳು

ಏರ್‌ ಇಂಡಿಯಾ ವಿಮಾನದಲ್ಲಿ ಮಹಿಳೆ ಮೇಲೆ ಮೂತ್ರವಿಸರ್ಜನೆ ಪ್ರಕರಣ
Last Updated 5 ಜನವರಿ 2023, 15:20 IST
ಅಕ್ಷರ ಗಾತ್ರ

ನವದೆಹಲಿ: ಏರ್‌ ಇಂಡಿಯಾ ವಿಮಾನದಲ್ಲಿ ಮಹಿಳಾ ಪ್ರಯಾಣಿಕರೊಬ್ಬರ ಮೇಲೆ ಮೂತ್ರ ವಿಸರ್ಜನೆ ಮಾಡಿದ ಆರೋಪಿ ಶಂಕರ್‌ ಮಿಶ್ರಾ ಪತ್ತೆಗಾಗಿ ದೆಹಲಿ ಪೊಲೀಸರು ಹಲವು ತಂಡಗಳನ್ನು ಮುಂಬೈಗೆ ಕಳಿಸಿದ್ದಾರೆ ಎಂದು ಅಧಿಕಾರಿಗಳು ಗುರುವಾರ ಹೇಳಿದ್ದಾರೆ.

ಸಂತ್ರಸ್ತೆ ನೀಡಿದ ದೂರಿನನ್ವಯ, ಮಿಶ್ರಾ ವಿರುದ್ಧ ದೆಹಲಿ ಪೊಲೀಸರು ಬುಧವಾರ ಎಫ್‌ಐಆರ್‌ ದಾಖಲಿಸಿದ್ದು, ಆತನ ಪತ್ತೆಗಾಗಿ ಹಲವು ತಂಡಗಳನ್ನು ರಚಿಸಿದ್ದಾರೆ.

‘ಆರೋಪಿ ಶಂಕರ್‌ ಮಿಶ್ರಾ, ಹಣಕಾಸು ಸೇವೆಗಳನ್ನು ಒದಗಿಸುವ ಅಮೆರಿಕ ಮೂಲದ ಬಹುರಾಷ್ಟ್ರೀಯ ಕಂಪನಿಯ ಭಾರತ ಶಾಖೆಯ ಉಪಾಧ್ಯಕ್ಷ. ಈ ಕಂಪನಿಯ ಕೇಂದ್ರ ಕಚೇರಿ ಕ್ಯಾಲಿಫೋರ್ನಿಯಾದಲ್ಲಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

‘ಮಿಶ್ರಾ, ಮುಂಬೈ ನಿವಾಸಿಯಾಗಿದ್ದು ಸದ್ಯ ತಲೆಮರೆಸಿಕೊಂಡಿದ್ದಾರೆ. ಅವರ ಪತ್ತೆಗಾಗಿ ಪೊಲೀಸ್‌ ತಂಡಗಳನ್ನು ಕಳುಹಿಸಲಾಗಿದೆ’ ಎಂದಿದ್ದಾರೆ.

ಕಳೆದ ವರ್ಷ ನ. 26 ರಂದು ನ್ಯೂಯಾರ್ಕ್‌ನಿಂದ ದೆಹಲಿಗೆ ಸಂಚರಿಸುತ್ತಿದ್ದ ಏರ್‌ ಇಂಡಿಯಾ ವಿಮಾನದಲ್ಲಿ ಈ ಘಟನೆ ನಡೆದಿತ್ತು.

ಡಿಜಿಸಿಎದಿಂದ ಶೋಕಾಸ್‌ ನೋಟಿಸ್: ಮಹಿಳಾ ಪ್ರಯಾಣಿಕರೊಬ್ಬರ ವ್ಯಕ್ತಿಯೊಬ್ಬ ಮೂತ್ರವಿಸರ್ಜನೆ ಮಾಡಿದ ಘಟನೆಗೆ ಸಂಬಂಧಿಸಿ ನಾಗರಿಕ ವಿಮಾನಯಾನ ನಿರ್ದೇಶನಾಲಯವು (ಡಿಜಿಸಿಎ) ಏರ್‌ ಇಂಡಿಯಾ ಅಧಿಕಾರಿಗಳು ಹಾಗೂ ನ್ಯೂಯಾರ್ಕ್‌–ದೆಹಲಿ ವಿಮಾನದ ಸಿಬ್ಬಂದಿಗೆ ಗುರುವಾರ ಶೋಕಾಸ್‌ ನೋಟಿಸ್‌ ಜಾರಿ ಮಾಡಿದೆ.

ಏರ್‌ ಇಂಡಿಯಾದ ಅಕೌಂಟೇಬಲ್ ಮ್ಯಾನೇಜರ್, ನಿರ್ದೇಶಕ (ಸೇವೆಗಳು), ಎಲ್ಲ ಪೈಲಟ್‌ಗಳು ಹಾಗೂ ಸಿಬ್ಬಂದಿಗೆ ನೋಟಿಸ್‌ ಜಾರಿ ಮಾಡಲಾಗಿದೆ.

‘ಕಳೆದ ವರ್ಷ ನವೆಂಬರ್‌ 26ರಂದು ನಡೆದ ಈ ಘಟನೆಗೆ ಸಂಬಂಧಿಸಿ ಕರ್ತವ್ಯಲೋಪ ಎಸಗಿದ ಆರೋಪದಡಿ ತಮ್ಮ ವಿರುದ್ಧ ಏಕೆ ಕ್ರಮ ಜರುಗಿಸಬಾರದು’ ಎಂದು ನೋಟಿಸ್‌ನಲ್ಲಿ ಕೇಳಲಾಗಿದೆ ಎಂದು ಡಿಜಿಸಿಎ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT