ಭಾನುವಾರ, ಸೆಪ್ಟೆಂಬರ್ 19, 2021
28 °C
ಷಿಕಾಗೊ ವಿಶ್ವವಿದ್ಯಾಲಯದಿಂದ ಅಧ್ಯಯನ

ವಾಯುಮಾಲಿನ್ಯ: ಕೆಲ ರಾಜ್ಯಗಳಲ್ಲಿ ವ್ಯಕ್ತಿಯ ಆಯುಷ್ಯದಲ್ಲಿ 2.5 ವರ್ಷ ಇಳಿಕೆ ಸಂಭವ!

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ದೇಶದಲ್ಲಿ ವಾಯು ಮಾಲಿನ್ಯ ಪ್ರಮಾಣ ಭೌಗೋಳಿಕವಾಗಿ ವಿಸ್ತರಿಸಿದೆ. ಇದು ಉತ್ತರ ಭಾರತದ ಕೆಲ ರಾಜ್ಯಗಳಲ್ಲಿ ವ್ಯಕ್ತಿಯ ಜೀವಿತಾವಧಿ ಕಡಿಮೆಯಾಗಲು ಕಾರಣವಾಗಿದೆ ಎಂದು ಹೊಸ ಅಧ್ಯಯನ ಹೇಳಿದೆ.

ಷಿಕಾಗೊ ವಿಶ್ವವಿದ್ಯಾಲಯದ ಎನರ್ಜಿ ಪಾಲಿಸಿ ಇನ್ಸ್‌ಟಿಟ್ಯೂಟ್‌ ಸಿದ್ಧಪಡಿಸಿರುವ ‘ಏರ್‌ ಕ್ವಾಲಿಟಿ ಲೈಫ್‌ ಇಂಡೆಕ್ಸ್‌’ (ಎಕ್ಯೂಎಲ್‌ಐ) ಎಂಬ ಅಧ್ಯಯನ ವರದಿಯಲ್ಲಿ ಈ ಕಳವಳಕಾರಿ ಅಂಶಗಳಿವೆ.

ಶುದ್ಧ ಗಾಳಿಯನ್ನು ಉಸಿರಾಡುವ ವ್ಯಕ್ತಿಯ ಆಯುಷ್ಯ ಎಷ್ಟಿರಲಿದೆ ಎಂಬ ಬಗ್ಗೆ ವಿಶ್ವವಿದ್ಯಾಲಯ ಅಧ್ಯಯನ ಕೈಗೊಂಡಿತ್ತು.

ಮಹಾರಾಷ್ಟ್ರ ಹಾಗೂ ಮಧ್ಯಪ್ರದೇಶ ರಾಜ್ಯಗಳಲ್ಲಿ ವಾಯುಮಾಲಿನ್ಯ ಪ್ರಮಾಣದಲ್ಲಿ ವಿಪರೀತ ಹೆಚ್ಚಳ ಕಂಡುಬಂದಿದೆ. ಈ ಎರಡು ರಾಜ್ಯಗಳಲ್ಲಿನ ವ್ಯಕ್ತಿಯ ಸರಾಸರಿ ಆಯಸ್ಸು 2.5 ರಿಂದ 2.9 ವರ್ಷಗಳಷ್ಟು ಕಡಿಮೆಯಾಗಲು ವಾಯುಮಾಲಿನ್ಯ ಕಾರಣವಾಗಿದೆ ಎಂದು ಈ ಅಧ್ಯಯನ ಹೇಳಿದೆ.

‘ಗಂಗಾ ನದಿ ಪಾತ್ರದಲ್ಲಿ ದೇಶದ ಒಟ್ಟು ಜನಸಂಖ್ಯೆಯ ಶೇ 40ರಷ್ಟು ಜನರು ವಾಸ ಮಾಡುತ್ತಿದ್ದಾರೆ. ವಿಶ್ವದ ಇತರ ಯಾವುದೇ ಪ್ರದೇಶಕ್ಕೆ ಹೋಲಿಸಿದರೂ, ಈ ಪ್ರದೇಶದಲ್ಲಿ ಮಾಲಿನ್ಯದ ಪ್ರಮಾಣವೂ ಅಧಿಕ’ ಎಂದು ವರದಿಯಲ್ಲಿ ವಿವರಿಸಲಾಗಿದೆ.

‘ಉತ್ತರ ಭಾರತದಲ್ಲಿ 2019ರಲ್ಲಿ ದಾಖಲಾಗಿದ್ದ ಮಾಲಿನ್ಯದ ಮಟ್ಟ ಅದೇ ಪ್ರಮಾಣದಲ್ಲಿಯೇ ಮುಂದುವರಿದರೆ, ಆ ಭಾಗದ ಜನರು ತಮ್ಮ ಆಯುಷ್ಯದಲ್ಲಿ 9ಕ್ಕೂ ಹೆಚ್ಚು ವರ್ಷಗಳನ್ನು ಕಳೆದುಕೊಳ್ಳುವರು’ ಎಂದು ಈ ಅಧ್ಯಯನ ನಡೆಸಿರುವ ತಜ್ಞರು ಎಚ್ಚರಿಸಿದ್ದಾರೆ.

‘ವಿಶ್ವ ಆರೋಗ್ಯ ಸಂಸ್ಥೆಯ ಮಾರ್ಗಸೂಚಿಗಳಲ್ಲಿ ನಿಗದಿಪಡಿಸಿರುವ ಪ್ರಕಾರ ಮಾಲಿನ್ಯದ ಪ್ರಮಾಣವನ್ನು ಕಡಿಮೆ ಮಾಡಿದರೆ, ಭಾರತ, ಬಾಂಗ್ಲಾದೇಶ, ನೇಪಾಳ ಹಾಗೂ ಪಾಕಿಸ್ತಾನಗಳಲ್ಲಿ ವಾಸಿಸುವ ವ್ಯಕ್ತಿ 5.6 ವರ್ಷಗಳಷ್ಟು ಹೆಚ್ಚು ಅವಧಿಗೆ ಜೀವಿಸಲು ಸಾಧ್ಯ’ ಎಂದೂ ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು