ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಎನ್‌ಎಸ್‌ ವಿರಾಟ್‌ ಯಾನ ಅಂತ್ಯಕ್ಕೆ ದಿನಗಣನೆ

Last Updated 10 ಸೆಪ್ಟೆಂಬರ್ 2020, 6:16 IST
ಅಕ್ಷರ ಗಾತ್ರ

ಮುಂಬೈ: ಭಾರತೀಯ ನೌಕಾಪಡೆಯಲ್ಲಿ ಸುದೀರ್ಘ 30 ವರ್ಷಗಳ ಸೇವೆ ಸಲ್ಲಿಸಿದ್ದ ಐಎನ್‌ಎಸ್‌ ವಿರಾಟ್‌ ಯಾನ ಅಂತ್ಯವಾಗಲಿದ್ದು, ದಿನಗಣನೆ ಆರಂಭವಾಗಿದೆ.

ತಿಂಗಳಾಂತ್ಯಕ್ಕೆ ಮುಂಬೈನಿಂದ ಗುಜರಾತ್‌ನ ಭಾವನಗರ ಜಿಲ್ಲೆಯ ಅಲಂಗ್‌ಗೆ ವಿರಾಟ್ ‌ಅನ್ನು ಒಯ್ಯಲಾಗುವುದು. ನೌಕೆಗಳನ್ನು ಕಳಚಿ, ಗುಜರಿಯಾಗಿಸುವ ವ್ಯವಸ್ಥೆ ಅಲಂಗ್‌ನಲ್ಲಿದ್ದು, ಇಂತಹ ಸೌಲಭ್ಯ ಇರುವ ಜಗತ್ತಿನ ಬೃಹತ್‌ ಹಡಗುಕಟ್ಟೆ ಎಂಬ ಹೆಗ್ಗಳಿಕೆಯನ್ನೂ ಹೊಂದಿದೆ.

ಈ ಯುದ್ಧನೌಕೆಯನ್ನು ಮ್ಯೂಸಿಯಂ ಆಗಿ ಪರಿವರ್ತಿಸುವ ಯತ್ನಗಳು ವಿಫಲಗೊಂಡ ನಂತರ, ಅದನ್ನು ಹರಾಜು ಹಾಕಲು ತೀರ್ಮಾನಿಸಲಾಯಿತು.‘ಮೆಟಲ್ ಸ್ಕ್ರ್ಯಾಪ್ ಟ್ರೇಡ್ ಕಾರ್ಪೊರೇಷನ್ ಲಿಮಿಟೆಡ್’ ನಡೆಸಿದ ಹರಾಜಿನಲ್ಲಿ ಶ್ರೀರಾಮ್‌ ಗ್ರೂಪ್‌ ಎಂಬ ಸಂಸ್ಥೆ ₹ 38 ಕೋಟಿಗೆ ಖರೀದಿಸಿದೆ.

ಮ್ಯೂಸಿಯಂ ಆಗಿ ಪರಿವರ್ತಿಸಿ, ಪ್ರವಾಸೋದ್ಯಮದ ಭಾಗವಾಗಿ ಬಳಸಲು ಮಹಾರಾಷ್ಟ್ರ, ಆಂಧ್ರಪ್ರದೇಶ ಹಾಗೂ ಗೋವಾ ರಾಜ್ಯಗಳು ಆಸಕ್ತಿ ತೋರಿದ್ದವು. ಕೊನೆ ಗಳಿಗೆಯಲ್ಲಿ ಈ ರಾಜ್ಯಗಳು ಈ ಯೋಜನೆಯಿಂದ ಹಿಂದೆ ಸರಿದವು.

ಭಾರತದಲ್ಲಿ ಗುಜರಿಗೆ ಸೇರುತ್ತಿರುವ ಎರಡನೇ ಯುದ್ಧ ನೌಕೆ ವಿರಾಟ್‌ ಆಗಿದೆ. ಇದಕ್ಕೂ ಮೊದಲು ಐಎನ್‌ಎಸ್ ವಿಕ್ರಾಂತ್‌ ಅನ್ನೂ ಕಳಚಿ ಗುಜರಿಗೆ ಹಾಕಲಾಗಿತ್ತು.

ಐಎನ್‌ಎಸ್‌ ವಿರಾಟ್‌ ಜಗತ್ತಿನಲ್ಲೇ ದೀರ್ಘಾವಧಿಯ ಸೇವೆ ಸಲ್ಲಿಸಿದ ಯುದ್ಧ ನೌಕೆ. ಭಾರತಕ್ಕೆ ಮಾರಾಟವಾಗುವುದಕ್ಕೂ ಮೊದಲು 1959ರಿಂದ 1986ರ ವರೆಗೆ ಬ್ರಿಟನ್‌ನ ‘ರಾಯಲ್‌ ನೇವಿ’ಯಲ್ಲಿ ಅದು ಸೇವೆ ಸಲ್ಲಿಸಿತ್ತು. 1986ರಲ್ಲಿ ಭಾರತೀಯ ನೌಕಾಪಡೆಗೆ 65 ದಶಲಕ್ಷ ಡಾಲರ್‌ಗೆ ಮಾರಾಟವಾಗಿದ್ದ ವಿರಾಟ್‌, 1987ರಿಂದ ಸೇವೆ ಆರಂಭಿಸಿತ್ತು. 2017ರಲ್ಲಿ ನಿವೃತ್ತಿ ಹೊಂದಿತ್ತು. ಹೆಚ್ಚು ಕಡಿಮೆ 60 ವರ್ಷಗಳ ಕಾಲ ವಿರಾಟ್‌ ಬ್ರಿಟನ್‌ ಮತ್ತು ಭಾರತೀಯ ಸೇನೆಯಲ್ಲಿ ಕಾರ್ಯ ನಿರ್ವಹಿಸಿದೆ. ಅಲ್ಲದೆ, ಹಲವು ಮಹತ್ತರ ಕಾರ್ಯಾಚರಣೆಯಲ್ಲಿ, ಯುದ್ಧಗಳಲ್ಲೂ ಭಾಗವಹಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT