ಗುರುವಾರ , ಫೆಬ್ರವರಿ 25, 2021
28 °C

ಮತ್ತೊಬ್ಬರ ನೋವು ತಿಳಿಯದ ಸಿ.ಎಂ ನಿಜವಾದ ಯೋಗಿ ಅಲ್ಲ: ಅಖಿಲೇಶ್ ಯಾದವ್ ವಾಗ್ದಾಳಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಲಖನೌ: ‘ಇತರರ ನೋವನ್ನು ಅರ್ಥ ಮಾಡಿಕೊಳ್ಳದ ಉತ್ತರ ಪ್ರದೇಶದ ಮುಖ್ಯಮಂತ್ರಿ ನಿಜವಾದ ಯೋಗಿಯಲ್ಲ’ ಎಂದು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಮಂಗಳವಾರ ಯೋಗಿ ಆದಿತ್ಯನಾಥ್ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

‘ಇಟಾವಾ ಜಿಲ್ಲೆಯ ಸೈಫೈ ಪಟ್ಟಣದಲ್ಲಿ ನಡೆದ ಗಣರಾಜ್ಯೋತ್ಸವ ದಿನ ಕಾರ್ಯಕ್ರಮದಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಯಾದವ್, ‘ಮುಖ್ಯಮಂತ್ರಿಯ ಕೆಲಸಗಳನ್ನು ನೋಡಿದರೆ ಅವರು ನಿಜವಾದ ಯೋಗಿ ಅಲ್ಲ ಎಂದು ನಮಗೆ ಅನಿಸುತ್ತದೆ. ನೀವು ಭಗವಾನ್ ಕೃಷ್ಣ, ಗುರುನಾನಕ್‌ ಮತ್ತು ಇತರರ ಬೋಧನೆಗಳನ್ನು ಓದಿದರೆ ನಿಜವಾದ ಯೋಗಿಯ ವ್ಯಾಖ್ಯಾನವೇನು ಎಂಬುದನ್ನು ಅರ್ಥಮಾಡಿಕೊಳ್ಳುತ್ತೀರಿ. ಮತ್ತೊಬ್ಬರ ನೋವನ್ನು ಅರ್ಥಮಾಡಿಕೊಳ್ಳುವವನೇ ನಿಜವಾದ ಯೋಗಿ. ಆದಿತ್ಯನಾಥ್ ಅವರಿಗೆ ಯುವಜನರ, ರೈತರ ಮತ್ತು ಇತರರ ನೋವು ಅರ್ಥವಾಗಿದೆಯೇ... ಅವರು ನಿಜವಾದ ಯೋಗಿಯಲ್ಲ’ ಎಂದು ಟೀಕಿಸಿದ್ದಾರೆ.

‘ಕೊರೊನಾ ಕಾರಣದಿಂದಾಗಿ ಪ್ರತಿಯೊಬ್ಬರು ಮುಖಗವಸು ಬಳಸಿ ಬಾಯಿ ಮತ್ತು ಮೂಗನ್ನು ಮುಚ್ಚಿಕೊಂಡಿದ್ದಾರೆ. ಆದರೆ,ಕಣ್ಣು ಮತ್ತು ಕಿವಿಯನ್ನು ಮುಚ್ಚಿಕೊಂಡಿರುವ ಬಿಜೆಪಿಗೆ ಯಾವ ಕಾಯಿಲೆ ಬಂದಿದೆ ಎಂಬುದೇ ತಿಳಿಯುತ್ತಿಲ್ಲ. ಆ ಪಕ್ಷಕ್ಕೆ ರೈತರ ನೋವುಗಳಾಗಲೀ, ಜನಸಾಮಾನ್ಯರ ಸಮಸ್ಯೆಗಳಾಗಲೀ ಕೇಳಿಸುತ್ತಿಲ್ಲ’ ಎಂದು ಅಖಿಲೇಶ್ ವ್ಯಂಗ್ಯವಾಡಿದರು.

‘ಅಮೆರಿಕದಲ್ಲಿ ಜನರು ದ್ವೇಷ ಮತ್ತು ಸುಳ್ಳಿನ ರಾಜಕೀಯವನ್ನು ಸೋಲಿಸಿದಂತೆ, ಭಾರತದಲ್ಲಿಯೂ ಜನರು ಅಂಥ ಪಕ್ಷವನ್ನು ಸೋಲಿಸುತ್ತಾರೆ. ಬಿಜೆಪಿಯು ಬೆದರಿಕೆಯ ರಾಜಕಾರಣವನ್ನು ಮಾಡುತ್ತಿದೆ’ ಎಂದೂ ಆರೋಪಿಸಿದರು.

ಪಕ್ಷದ ಕಾರ್ಯಕರ್ತರು ಸೈಫೈ ಪಟ್ಟಣದಲ್ಲಿ ದೆಹಲಿಯಲ್ಲಿನ ರೈತರ ಪ್ರತಿಭಟನೆಗೆ ಬೆಂಬಲಿಸಿ ಟ್ರ್ಯಾಕ್ಟರ್ ಷೋ ನಡೆಸಿದರು. ಇದೇ ವೇಳೆ ಅಖಿಲೇಶ್, ‘ಹಿರಿಯರ ಆಶೀರ್ವಾದದೊಂದಿಗೆ, ಯುವಕರ ಬೆಂಬಲದೊಂದಿಗೆ ಎಸ್‌ಪಿ ಹೊಸದಾಗಿದೆ’ ಎಂದು ಘೋಷಿಸಿದರು.

ನೂತನ ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿಯಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆಗೆ ಬೆಂಬಲಿಸಿ ಸಮಾಜವಾದಿ ಪಕ್ಷವು ಉತ್ತರ ಪ್ರದೇಶ ಎಲ್ಲಾ ಜಿಲ್ಲೆಗಳಲ್ಲೂ ಕಿಸಾನ್ ರ‍್ಯಾಲಿಯನ್ನು ಆಯೋಜಿಸಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು