ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬಿಜೆಪಿಯನ್ನು ಸೋಲಿಸುವುದು ಸಾಧ್ಯ’: ಅಖಿಲೇಶ್ ಯಾದವ್

ಆಡಳಿತಾರೂಢ ಪಕ್ಷ ಗೆದ್ದ ಕ್ಷೇತ್ರಗಳ ಸಂಖ್ಯೆ ಕುಸಿದಿದೆ, ಇನ್ನಷ್ಟು ಕುಸಿಯಲಿದೆ: ಅಖಿಲೇಶ್ ಯಾದವ್
Last Updated 11 ಮಾರ್ಚ್ 2022, 20:22 IST
ಅಕ್ಷರ ಗಾತ್ರ

ಲಖನೌ: ‘ಬಿಜೆಪಿಯನ್ನು ಸೋಲಿಸಬಹುದು ಎಂಬುದನ್ನು ತೋರಿಸಿಕೊಟ್ಟಿದ್ದೇವೆ. ಆ ಪಕ್ಷವು ಗೆದ್ದ ಕ್ಷೇತ್ರಗಳ ಸಂಖ್ಯೆ ಕಡಿಮೆ ಆಗಿದೆ. ಅದು ಇನ್ನೂ ಕಡಿಮೆ ಆಗಲಿದೆ. ನಾವು ಈಗಾಗಲೇ ಅರ್ಧದಾರಿ ಕ್ರಮಿಸಿದ್ದೇವೆ. ಮುಂದಿನ ದಿನಗಳಲ್ಲಿ ಉಳಿದದ್ದನ್ನೂ ಸಾಧಿಸುತ್ತೇವೆ’ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಹೇಳಿದ್ದಾರೆ.

ಉತ್ತರ ಪ್ರದೇಶ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ 111 ಸ್ಥಾನಗಳನ್ನು ಗೆದ್ದಿರುವ ಎಸ್‌ಪಿ, ಅತಿಹೆಚ್ಚು ಸ್ಥಾನಗಳನ್ನು ಗೆದ್ದ ಎರಡನೇ ಪಕ್ಷ ಎನಿಸಿದೆ. 255 ಕ್ಷೇತ್ರಗಳಲ್ಲಿ ಆರಿಸಿಬಂದಿರುವ ಬಿಜೆಪಿ ಹೊಸ ಸರ್ಕಾರ ರಚಿಸಲಿದೆ.

ಈ ಚುನಾವಣೆಯಲ್ಲಿ ಅಖಿಲೇಶ್ ಅವರ ಸಮಾಜವಾದಿ ಪಕ್ಷವು, ಜಯಂತ್ ಚೌಧರಿ ಅವರ ಆರ್‌ಎಲ್‌ಡಿ ಮತ್ತು ಓಂ ಪ್ರಕಾಶ್ ರಾಜಭರ್ ಅವರ ಎಸ್‌ಬಿಎಸ್‌ಪಿ ಪಕ್ಷಗಳ ಜತೆ ಮೈತ್ರಿ ಮಾಡಿಕೊಂಡಿತ್ತು. ಬಿಜೆಪಿ ವಿರುದ್ಧ ರೈತರ ಆಕ್ರೋಶ ತೀವ್ರವಾಗಿದ್ದ ರಾಜ್ಯದ ಪಶ್ಚಿಮಾಂಚಲ ಪ್ರಾಂತ್ಯದಲ್ಲಿ ಈ ಮೈತ್ರಿಕೂಟವು ನಿರೀಕ್ಷಿತ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿಲ್ಲ. ಹೀಗಾಗಿ ಬಿಜೆಪಿ ಸರ್ಕಾರವನ್ನು ಉರುಳಿಸುವ ಪ್ರಯತ್ನಕ್ಕೆ ಯಶಸ್ಸು ದೊರೆಯಲಿಲ್ಲ.

ಈ ಬಾರಿ ಸರ್ಕಾರ ರಚಿಸಲು ಸಾಧ್ಯವಾಗದೇ ಇದ್ದರೂ, ಜನರ ಸಮಸ್ಯೆಗಳ ಪರಿಹಾರಕ್ಕಾಗಿ ಹೋರಾಡುವುದನ್ನು ಮುಂದುವರಿಸಬೇಕು ಎಂದು ಅಖಿಲೇಶ್ ತಮ್ಮ ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.‘ಬಿಜೆಪಿ ಸರ್ಕಾರದ ಜನವಿರೋಧಿ ನೀತಿಗಳ ವಿರುದ್ಧದ ಹೋರಾಟವನ್ನು ನಾವು ಮುಂದುವರಿಸುತ್ತೇವೆ. ಯಶಸ್ಸು ದೊರೆಯುವವರೆಗೂ ನಾವು ಹೋರಾಡುತ್ತೇವೆ’ ಎಂದು ಅವರು ಹೇಳಿದ್ದಾರೆ.

‘ಆಜಂಗಡ ಲೋಕಸಭಾ ಕ್ಷೇತ್ರದ ಸಂಸದರೂ ಆಗಿರುವ ಅಖಿಲೇಶ್, ಈ ಚುನಾವಣೆಯಲ್ಲಿ ಕರ್ಹಾಲ್ ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಚುನಾಯಿತರಾಗಿದ್ದಾರೆ. ಅವರು ಸಂಸದನ ಸ್ಥಾನಕ್ಕೆ ರಾಜೀನಾಮೆ ನೀಡಿ, ಶಾಸಕನಾಗಿ ಮುಂದುವರಿಯಲಿದ್ದಾರೆ. ಉತ್ತರ ಪ್ರದೇಶ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕನಾಗಿ ಅಖಿಲೇಶ್ ಅವರು ಬಿಜೆಪಿ ವಿರುದ್ಧ ಹೋರಾಡಲಿದ್ದಾರೆ’ ಎಂದು ಸಮಾಜವಾದಿ ಪಕ್ಷದ ನಾಯಕರೊಬ್ಬರು ಮಾಹಿತಿ ನೀಡಿದ್ದಾರೆ.

----

ಕೋಲ್ಕತ್ತ (ಪಿಟಿಐ): ‘ಬಿಜೆಪಿಗೆ ದೊರೆತಿರುವ ಗೆಲುವು ನಿಜವಾದ ಜನಾದೇಶವಲ್ಲ. ಬದಲಿಗೆ ಆಡಳಿತಯಂತ್ರವನ್ನು ಬಳಸಿಕೊಂಡು ಮತಗಳನ್ನು ಲೂಟಿ ಮಾಡಿದ್ದರಿಂದ ದೊರೆತ ಗೆಲುವು’ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಆರೋಪಿಸಿದ್ದಾರೆ.

‘ಜನರು ಮತ ಹಾಕದೇ ಇದ್ದ ಕಾರಣಕ್ಕೆ ಅಖಿಲೇಶ್ ಯಾದವ್ ಅವರ ಪಕ್ಷ ಸೋತಿಲ್ಲ. ಬದಲಿಗೆ ಅವರ ಪಕ್ಷಕ್ಕೆ ಬಂದ ಮತಗಳನ್ನು ಲೂಟಿ ಮಾಡಲಾಗಿದೆ. ಈ ಮೂಲಕ ಅವರು ಸೋಲುವಂತೆ ಮಾಡಲಾಗಿದೆ’ ಎಂದು ಮಮತಾ ಆರೋಪಿಸಿದ್ದಾರೆ.

‘ವಾರಾಣಸಿಯಲ್ಲಿ ಮತಯಂತ್ರಗಳನ್ನು ಸಾಗಿಸುವಾಗ ಲೋಪ ಎಸಗಿದ ಅಧಿಕಾರಿಯನ್ನು ಚುನಾವಣಾ ಕರ್ತವ್ಯದಿಂದ ಬಿಡುಗಡೆ ಮಾಡಲಾಗಿದೆ. ಅಷ್ಟು ಮಾಡಿದರೆ ಸಾಲದು. ಅಲ್ಲಿ ಬಳಕೆಯಾಗಿದ್ದ ಎಲ್ಲಾ ಮತಯಂತ್ರಗಳನ್ನು ವಿಧಿವಿಜ್ಞಾನ ಪರೀಕ್ಷೆಗೆ ಒಳಪಡಿಸಬೇಕು. ಜನರು ಮತ ಒತ್ತಿದ್ದ ಯಂತ್ರಗಳೇ, ಎಣಿಕೆ ಕೇಂದ್ರಕ್ಕೆ ಬಂದಿವೆ ಎಂಬುದನ್ನು ಖಾತರಿ ಮಾಡಿಕೊಳ್ಳಬೇಕು’ ಎಂದು ಅವರು ಆಗ್ರಹಿಸಿದ್ದಾರೆ.

‘ನಾಲ್ಕು ರಾಜ್ಯಗಳಲ್ಲಿ ದೊರೆತ ಗೆಲುವು, ಇಡೀ ದೇಶದ ಆಯ್ಕೆಯನ್ನು ಹೇಳುತ್ತದೆ ಎಂದು ಬಿಜೆಪಿ ನಾಯಕರು ಹೇಳುತ್ತಿದ್ದಾರೆ. ಅವರು ಹಗಲುಗನಸು ಕಾಣುವುದನ್ನು ಬಿಡಬೇಕು’ ಎಂದು ಮಮತಾ ಲೇವಡಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT