ಶನಿವಾರ, ಜುಲೈ 24, 2021
22 °C

62 ಸಾವಿರಕ್ಕೂ ಹೆಚ್ಚು ಕ್ಯಾನ್ಸರ್‌ ಪ್ರಕರಣಗಳಿಗೆ ಆಲ್ಕೋಹಾಲ್‌ ಸೇವನೆ ಕಾರಣ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ (ಪಿಟಿಐ): ಭಾರತದಲ್ಲಿ ಕಳೆದ ವರ್ಷ ಹೊಸದಾಗಿ ಪತ್ತೆಯಾದ ಕ್ಯಾನ್ಸರ್ ಪ್ರಕರಣಗಳಲ್ಲಿ 62,100 (ಶೇ 5ರಷ್ಟು) ಪ್ರಕರಣಗಳು ಆಲ್ಕೋಹಾಲ್‌ ಸೇವನೆಗೆ ಸಂಬಂಧಿಸಿವೆ ಎಂದು ದಿ ಲ್ಯಾನ್ಸೆಟ್ ಆಂಕಾಲಜಿ  ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನದಿಂದ ತಿಳಿದುಬಂದಿದೆ.

ದೇಶದಲ್ಲಿ ಆಲ್ಕೋಹಾಲ್‌ ಬಳಕೆ ಹೆಚ್ಚಾಗುತ್ತಿರುವುದನ್ನು ಈ ಸಂಶೋಧನಾ ವರದಿ ಸೂಚಿಸುತ್ತದೆ ಎಂದು ವಿಶ್ಲೇಷಿಸಲಾಗಿದೆ.

ಜಾಗತಿಕವಾಗಿ 2020ರಲ್ಲಿ 7.40 ಲಕ್ಷ (ಶೇ 4) ಹೊಸ ಕ್ಯಾನ್ಸರ್‌ ಪ್ರಕರಣಗಳು ಆಲ್ಕೋಹಾಲ್‌ ಸೇವನೆಯಿಂದ ಆಗಿರಬಹುದು ಎಂದು ಸಂಶೋಧಕರು ಕಂಡುಕೊಂಡಿದ್ದಾರೆ. ಇದರಲ್ಲಿ ಶೇ 77ರಷ್ಟು (5.78 ಲಕ್ಷ) ಪುರುಷರಾಗಿದ್ದರೆ, ಶೇ 23ರಷ್ಟು (1.72 ಲಕ್ಷ) ಮಹಿಳೆಯರಾಗಿದ್ದಾರೆ ಎಂದು ಅಂದಾಜಿಸಲಾಗಿದೆ. ಪ್ರಮುಖವಾಗಿ ಅನ್ನನಾಳ, ಯಕೃತ್ತು ಮತ್ತು ಸ್ತನದ ಕ್ಯಾನ್ಸರ್‌ಗಳು ‌ಹೆಚ್ಚಿನ ಜನರನ್ನು ಕಾಡುತ್ತಿವೆ.

ಹಿಂದಿನ ವರ್ಷಗಳ ದತ್ತಾಂಶಗಳನ್ನು ಆಧರಿಸಿ ಪರಿಶೀಲಿಸಿದಾಗ, 2020ರಲ್ಲಿ ಬಾಯಿ, ಗಂಟಲು, ಧ್ವನಿ ಪೆಟ್ಟಿಗೆ ಅನ್ನನಾಳ, ಕರುಳು, ಗುದನಾಳ, ಯಕೃತ್ತು ಮತ್ತು ಸ್ತನ ಕ್ಯಾನ್ಸರ್ ಪ್ರಕರಣಗಳು 63 ಲಕ್ಷಕ್ಕೂ ಹೆಚ್ಚಿದ್ದವು. ಇವುಗಳಲ್ಲಿ ಬಹುತೇಕವು ಆಲ್ಕೋಹಾಲ್‌ ಸೇವನೆಯೊಂದಿಗಿನ ಸಂಬಂಧಗಳನ್ನು ಹೊಂದಿವೆ ಎಂದು ಅಧ್ಯಯನ ತಿಳಿಸಿದೆ.

ಯುರೋಪಿನ ಅನೇಕ ದೇಶಗಳಲ್ಲಿ ಆಲ್ಕೋಹಾಲ್‌ ಸೇವನೆಯ ಪ್ರಮಾಣ ಕಡಿಮೆಯಾಗುತ್ತಿದ್ದರೂ, ಏಷ್ಯಾದ ದೇಶಗಳಾದ ಚೀನಾ, ಭಾರತದ ಮತ್ತು ಆಫ್ರಿಕಾ ದೇಶಗಳಲ್ಲಿ ಆಲ್ಕೋಹಾಲ್‌ ಬಳಕೆ ಹೆಚ್ಚುತ್ತಿದೆ ಎಂದು ಕ್ಯಾನ್ಸರ್‌ ಸಂಶೋಧನೆ ಕುರಿತ ಇಂಟರ್‌ನ್ಯಾಷನಲ್‌ ಏಜೆನ್ಸಿ (ಐಎಆರ್‌ಸಿ) ಸಂಶೋಧಕ ಹ್ಯಾರಿಯೆಟ್ ರುಮ್ಗೆ ಹೇಳಿದ್ದಾರೆ.

ಕೋವಿಡ್‌ ಪಿಡುಗು ಕೆಲವು ದೇಶಗಳಲ್ಲಿ ಮದ್ಯಪಾನದ ಪ್ರಮಾಣವನ್ನು ಹೆಚ್ಚಿಸಿದೆ ಎಂಬುದಕ್ಕೆ ಪುರಾವೆಗಳಿವೆ ಎಂದು ರುಮ್ಗೆ ತಿಳಿಸಿದ್ದಾರೆ.

ಆಲ್ಕೋಹಾಲ್‌ ಮತ್ತು ಕ್ಯಾನ್ಸರ್ ನಡುವಿನ ಸಂಬಂಧದ ಬಗ್ಗೆ ಸಾರ್ವಜನಿಕರಲ್ಲಿ ಹೆಚ್ಚಿನ ಅರಿವು ಮೂಡಿಸಬೇಕಾದ ಅಗತ್ಯವಿದೆ. ಈ ನಿಟ್ಟಿನಲ್ಲಿ ಸರ್ಕಾರ ಪ್ರಮುಖ ಪಾತ್ರವಹಿಸಬೇಕು ಎಂದು ಅವರು ಕೋರಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು