ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ ಎಣಿಕೆಗೆ ಕೇರಳ, ತಮಿಳುನಾಡು, ಪುದುಚೇರಿ ಸಿದ್ಧ: ಫಲಿತಾಂಶಕ್ಕೆ ಕಾತರ

Last Updated 1 ಮೇ 2021, 14:00 IST
ಅಕ್ಷರ ಗಾತ್ರ

ತಿರುವನಂತಪುರ/ಚೆನ್ನೈ: ಕೋವಿಡ್‌–19 ಮಾರ್ಗಸೂಚಿಗೆ ಅನುಗುಣವಾಗಿ ಮತ ಎಣಿಕೆ ಮಾಡಲು ಕೇರಳ, ತಮಿಳುನಾಡು ಹಾಗೂ ಪುದುಚೇರಿಯಲ್ಲಿ ಎಲ್ಲ ಸಿದ್ಧತೆ ಮಾಡಲಾಗಿದ್ದು, ರಾಜಕೀಯ ಪಕ್ಷಗಳು ಫಲಿತಾಂಶವನ್ನು ಕುತೂಹಲದಿಂದ ಎದುರುನೋಡುತ್ತಿವೆ.

ಈ ರಾಜ್ಯಗಳಲ್ಲಿ ಏಪ್ರಿಲ್ 6ರಂದು ಒಂದೇ ಹಂತದಲ್ಲಿ ಮತದಾನ ನಡೆದಿತ್ತು.

ಕೇರಳದಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸೇರಿದಂತೆ 957 ಅಭ್ಯರ್ಥಿಗಳು ಕಣದಲ್ಲಿದ್ದಾರೆ. 11 ಮಂದಿ ಸಚಿವರೂ ಅಭ್ಯರ್ಥಿಗಳಾಗಿದ್ದಾರೆ. ಪ್ರತಿಪಕ್ಷ ನಾಯಕ ರಮೇಶ್ ಚೆನ್ನಿತಲ, ಕಾಂಗ್ರೆಸ್‌ನ ಹಿರಿಯ ನಾಯಕ ಊಮನ್ ಚಾಂಡಿ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ.ಸುರೇಂದ್ರನ್, ‘ಮೆಟ್ರೊಮ್ಯಾನ್’ ಖ್ಯಾತಿಯ ಇ.ಶ್ರೀಧರನ್, ಕೇಂದ್ರದ ಮಾಜಿ ಸಚಿವ ಕೆ.ಜೆ.ಅಲ್ಫೊನ್ಸ್ ಸೇರಿದಂತೆ ಪ್ರಮುಖ ರಾಜಕೀಯ ನಾಯಕರ ಭವಿಷ್ಯ ನಾಳೆ ನಿರ್ಧಾರವಾಗಲಿದೆ. ಕೇರಳದಲ್ಲಿ ಒಟ್ಟು 140 ವಿಧಾನಸಭಾ ಕ್ಷೇತ್ರಗಳಿವೆ.

ಆಡಳಿತಾರೂಢ ಎಲ್‌ಡಿಎಫ್‌ಗೆ ಜಯವಾಗಲಿದೆ ಎಂದು ಮತಗಟ್ಟೆ ಸಮೀಕ್ಷೆಗಳು ಭವಿಷ್ಯ ನುಡಿದಿವೆ.

ತಮಿಳುನಾಡಿನಲ್ಲಿ ಎಐಎಡಿಎಂಕೆ, ಡಿಎಂಕೆ ಸೇರಿದಂತೆ ಹಲವು ಪಕ್ಷಗಳ ಪ್ರಮುಖ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಎಂ.ಕೆ. ಸ್ಟಾಲಿನ್‌ ನೇತೃತ್ವದ ಡಿಎಂಕೆ ಪಕ್ಷ ಅಧಿಕಾರಕ್ಕೆ ಬರಲಿದೆ ಎಂದು ಮತಗಟ್ಟೆ ಸಮೀಕ್ಷೆಗಳು ಹೇಳಿವೆ.

ತಮಿಳುನಾಡಿನಲ್ಲಿ ಸುಮಾರು 4,000 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಮುಖ್ಯಮಂತ್ರಿ ಕೆ.ಪಳನಿಸ್ವಾಮಿ, ಉಪ ಮುಖ್ಯಮಂತ್ರಿ ಒ.ಪನ್ನೀರ್‌ಸೆಲ್ವಂ, ಡಿಎಂಕೆ ಅಧ್ಯಕ್ಷ ಎಂ.ಕೆ.ಸ್ಟಾಲಿನ್, ಇವರ ಪುತ್ರ ಉದಯನಿಧಿ ಸ್ಟಾಲಿನ್, ಎಎಂಎಂಕೆಯ ಟಿಟಿವಿ ದಿನಕರನ್, ಮಕ್ಕಳ್ ನೀಧಿ ಮಯಂನ ಕಮಲ ಹಾಸನ್ ಸೆರಿದಂತೆ ಪ‍್ರಮುಖರ ರಾಜಕೀಯ ಭವಿಷ್ಯ ನಿರ್ಧಾರವಾಗಲಿದೆ.

234 ವಿಧಾನಸಭಾ ಕ್ಷೇತ್ರಗಳ ಜತೆ ಕನ್ಯಾಕುಮಾರಿ ಲೋಕಸಭಾ ಕ್ಷೇತ್ರಕ್ಕೆ ಉಪಚುನಾವಣೆ ನಡೆದಿದೆ. ಕಾಂಗ್ರೆಸ್‌ನ ವಿಜಯ್ ವಸಂತ್ ಮತ್ತು ಬಿಜೆಪಿಯ ಪೊನ್ ರಾಧಾಕೃಷ್ಣನ್ ಇಲ್ಲಿ ಪ್ರಮುಖ ಅಭ್ಯರ್ಥಿಗಳಾಗಿದ್ದಾರೆ.

ಪುದುಚೇರಿ ಕೇಂದ್ರಾಡಳಿತ ಪ್ರದೇಶದಲ್ಲಿ ಮಾಜಿ ಮುಖ್ಯಮಂತ್ರಿ ಎನ್‌.ರಂಗಸ್ವಾಮಿ ನೇತೃತ್ವದ ಎಐಎನ್‌ಆರ್‌ ಕಾಂಗ್ರೆಸ್– ಬಿಜೆಪಿ ಮೈತ್ರಿಕೂಟ ಮತ್ತು ಕಾಂಗ್ರೆಸ್–ಡಿಎಂಕೆ ಮೈತ್ರಿಕೂಟದ ನಡುವೆ ಪ್ರಬಲ ಪೈಪೋಟಿ ಇದೆ. 30 ಕ್ಷೇತ್ರಗಳ ಪುದುಚೇರಿ ವಿಧಾನಸಭೆ ಚುನಾವಣೆಯ ಫಲಿತಾಂಶ ಬಿಜೆಪಿ ಪರ ಇರಲಿದೆ ಎಂದು ಮತಗಟ್ಟೆ ಸಮೀಕ್ಷೆಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT