ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನವದೆಹಲಿ| ಕಡು ಭ್ರಷ್ಟರೆಲ್ಲಾ ಒಗ್ಗೂಡಿದ್ದಾರೆ: ಮೋದಿ

Last Updated 29 ಮಾರ್ಚ್ 2023, 6:25 IST
ಅಕ್ಷರ ಗಾತ್ರ

ನವದೆಹಲಿ: ‘ಬಿಜೆಪಿಯು ಭ್ರಷ್ಟಾಚಾರದ ಬೇರುಗಳನ್ನು ಅಲುಗಾಡಿಸಿದೆ. ನಮ್ಮ ವಿರುದ್ಧ ಪ್ರತಿಪಕ್ಷಗಳು ನಡೆಸುತ್ತಿರುವ ರ‍್ಯಾಲಿಯು ‘ಭ್ರಷ್ಟಾಚಾರ ಉಳಿಸಿ ಅಭಿಯಾನ’ದ ಭಾಗದಂತೆ ಭಾಸವಾಗುತ್ತಿದೆ. ಈ ರ‍್ಯಾಲಿಯ ಮೂಲಕ ವಿರೋಧ ಪಕ್ಷಗಳಲ್ಲಿರುವ ಕಡು ಭ್ರಷ್ಟ ನಾಯಕರೆಲ್ಲಾ ಇನ್ನಷ್ಟು ಹತ್ತಿರವಾಗಿದ್ದಾರೆ’ ಎಂದು ಪ್ರಧಾನಿ ನರೇಂದ್ರ ಮೋದಿ ವ್ಯಂಗ್ಯವಾಡಿದ್ದಾರೆ.

ಬಿಜೆಪಿ ಕೇಂದ್ರ ಕಚೇರಿ ಬಳಿ ನಿರ್ಮಿಸಲಾಗಿರುವ ನೂತನ ಕಟ್ಟಡದ ಉದ್ಘಾಟನೆ ಕಾರ್ಯಕ್ರಮದಲ್ಲಿ ಪಕ್ಷದ ನಾಯಕರು ಹಾಗೂ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಕೇಂದ್ರೀಯ ತನಿಖಾ ಸಂಸ್ಥೆಗಳಾದ ಸಿಬಿಐ ಹಾಗೂ ಜಾರಿ ನಿರ್ದೇಶನಾಲಯವು ವಿರೋಧ ಪಕ್ಷಗಳ ನಾಯಕರನ್ನು ಗುರಿಯಾಗಿಸಿಕೊಂಡು ನಡೆಸುತ್ತಿರುವ ದಾಳಿಯನ್ನು ಸಮರ್ಥಿಸಿಕೊಂಡಿದ್ದಾರೆ.

‘ದೇಶದೊಳಗೆ ಹಾಗೂ ಹೊರಗೆ ಇರುವ ಭಾರತ ವಿರೋಧಿ ಪಡೆಗಳು ಈಗ ಒಗ್ಗೂಡಿವೆ. ದೇಶದ ಸಾಂವಿಧಾನಿಕ ಸಂಸ್ಥೆಗಳು ವಿರೋಧ ಪಕ್ಷಗಳ ವಾಗ್ದಾಳಿಗೆ ಗುರಿಯಾಗುತ್ತಿವೆ. ತನಿಖಾ ಸಂಸ್ಥೆಗಳು ಭ್ರಷ್ಟಾಚಾರಿಗಳ ವಿರುದ್ಧ ಕ್ರಮ ಕೈಗೊಂಡರೆ ಅವುಗಳನ್ನು ದೂಷಿಸಲಾಗುತ್ತದೆ. ನ್ಯಾಯಾಲಯಗಳ ತೀರ್ಪನ್ನೂ ಪ್ರಶ್ನಿಸಲಾಗುತ್ತಿದೆ. ‘ಭ್ರಷ್ಟಾಚಾರಿಗಳನ್ನು ಉಳಿಸಿ ಅಭಿಯಾನ’ ಕೈಗೊಳ್ಳುವುದಕ್ಕಾಗಿಯೇ ಕೆಲ ಪಕ್ಷಗಳು ಕೈಜೋಡಿಸಿವೆ’ ಎಂದು ಪ್ರತಿಪಕ್ಷಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

‘ಕಾಂಗ್ರೆಸ್‌ ನೇತೃತ್ವದ ಯುಪಿಎ ಸರ್ಕಾರದ 10 ವರ್ಷಗಳ ಆಡಳಿತಾವಧಿಯಲ್ಲಿ ₹5,000 ಕೋಟಿ ಮೌಲ್ಯದ ಸ್ವತ್ತುಗಳನ್ನಷ್ಟೇ ಜಪ್ತಿ ಮಾಡಲಾಗಿತ್ತು. ಆದರೆ ನಮ್ಮ ಸರ್ಕಾರದ 9 ವರ್ಷಗಳ ಆಡಳಿತದಲ್ಲಿ ₹ 1ಲಕ್ಷ ಕೋಟಿ ಮೌಲ್ಯದ ಸ್ವತ್ತುಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT