ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮರನಾಥದಲ್ಲಿ ಮೇಘಸ್ಫೋಟ ಸಂಭವಿಸಿಲ್ಲ: ಐಎಂಡಿ ಸ್ಪಷ್ಟನೆ

Last Updated 9 ಜುಲೈ 2022, 10:32 IST
ಅಕ್ಷರ ಗಾತ್ರ

ನವದೆಹಲಿ: ದಕ್ಷಿಣ ಕಾಶ್ಮೀರದ ಪ್ರಸಿದ್ಧ ಅಮರನಾಥ ಗುಹಾ ದೇವಾಲಯದ ಸಮೀಪ ಶುಕ್ರವಾರದಂದು ಮೇಘಸ್ಫೋಟ ಸಂಭವಿಸಿಲ್ಲ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಶನಿವಾರ ಸ್ಪಷ್ಟನೆ ನೀಡಿದೆ.

ಸ್ಥಳೀಯವಾಗಿ ಸುರಿದ ಧಾರಾಕಾರ ಮಳೆಯಿಂದಾಗಿ ಬೆಟ್ಟದ ತಪ್ಪಲಿನಲ್ಲಿ ದಿಢೀರ್ ಪ್ರವಾಹದ ಸ್ಥಿತಿ ಉಂಟಾಗಿದೆ ಎಂದು ಐಎಂಡಿ ವಿವರಣೆ ನೀಡಿದೆ.

ಈ ಮೊದಲು ಅಮರನಾಥದಲ್ಲಿ ಮೇಘಸ್ಫೋಟವಾಗಿದೆ ಎಂದು ಏಜೆನ್ಸಿಗಳು ವರದಿ ಮಾಡಿದ್ದವು. ಘಟನೆಯಲ್ಲಿ 16 ಮಂದಿ ಮೃತಪಟ್ಟಿದ್ದು, ಹಲವರು ನಾಪತ್ತೆಯಾಗಿದ್ದಾರೆ.

ಹವಾಮಾನ ತಜ್ಞರ ಪ್ರಕಾರ, ಶುಕ್ರವಾರ ಸಂಜೆ 4.30ರಿಂದ 6.30ರ ನಡುವೆ ಅಮರನಾಥದಲ್ಲಿ 31 ಮಿ.ಮೀ ಮಳೆಯಾಗಿದೆ. ಹಾಗಾಗಿ ಇದನ್ನು ಮೇಘಸ್ಫೋಟ ಎಂದು ವರ್ಗೀಕರಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಅಮರನಾಥ ಗುಹಾ ದೇವಾಲಯದ ಸಮೀಪದಲ್ಲಿರುವ ಪರ್ವತ ಶ್ರೇಣಿಯಲ್ಲಿ ಸುರಿದ ಮಳೆಯಿಂದಾಗಿ ಹಠಾತ್ ಪ್ರವಾಹ ಉಂಟಾಗಿರಬಹುದು ಎಂದು ಐಎಂಡಿ ಮಹಾನಿರ್ದೇಶಕ ಮೃತ್ಯುಂಜಯ್ ಮೊಹಾಪಾತ್ರ ತಿಳಿಸಿದ್ದಾರೆ.

ಐಎಂಡಿ ಪ್ರಕಾರ, ಒಂದು ಗಂಟೆಯೊಳಗೆ 100 ಮಿ.ಮೀ (10 ಸೆಂ.ಮೀ.) ಮಳೆಯಾದರೆ ಅದನ್ನು ಮೇಘ ಸ್ಪೋಟವೆಂದು ಪರಿಗಣಿಸಲಾಗುತ್ತದೆ.

ಅಮರನಾಥದಲ್ಲಿರುವ ಆಟೋಮ್ಯಾಟಿಕ್ ಹವಾಮಾನ ಸ್ಟೇಷನ್, ತೀರ್ಥಯಾತ್ರೆಯ ಸಂದರ್ಭದಲ್ಲಿ ಹವಾಮಾನ ಮುನ್ಸೂಚನೆಯನ್ನು ಒದಗಿಸುತ್ತದೆ. ಆದರೆ ದುರ್ಗಮವಾದ ಸುತ್ತುಮುತ್ತಲಿನ ಪರ್ವತ ಶ್ರೇಣಿಯಲ್ಲಿ ಹವಾಮಾನ ನಿಗಾ ಕೇಂದ್ರವನ್ನು ಹೊಂದಿಲ್ಲ.

ಇದು ಅಮರನಾಥ ಗುಹೆಯ ಮೇಲೆ ಮಾತ್ರ ಆವರಿಸಿದ ಮೋಡವಾಗಿತ್ತು. ಈ ವರ್ಷದ ಆರಂಭದಲ್ಲೂ ಅಂತಹ ಮಳೆ ಸುರಿದಿದೆ ಎಂದು ಶ್ರೀನಗರ ಪ್ರಾದೇಶಿಕ ಹವಾಮಾನ ಕೇಂದ್ರದ ನಿರ್ದೇಶಕಿ ಸೋನಮ್ ಲೋಟಸ್ ಮಾಹಿತಿ ನೀಡಿದ್ದಾರೆ.

ಇದರ ಮೇಲೆ ನಿಗಾ ವಹಿಸಲು ರಾಡಾರ್ ನೆಟ್‌ವರ್ಕ್ ಹಾಗೂ ಹೈ ರೆಸೊಲ್ಯೂಷನ್ ಹವಾಮಾನ ಮುನ್ಸೂಚನೆ ಮಾಡೆಲ್ ಅಗತ್ಯವಿದೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT