ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಮಾನ ಪ್ರಯಾಣದ ವೇಳೆ ಕುಡಿದ ಅಮಲಿನಲ್ಲಿ ಸಹ ಪ್ರಯಾಣಿಕನ ಮೇಲೆ ಮೂತ್ರ ವಿಸರ್ಜನೆ

Last Updated 5 ಮಾರ್ಚ್ 2023, 6:05 IST
ಅಕ್ಷರ ಗಾತ್ರ

ನವದೆಹಲಿ: ನ್ಯೂಯಾರ್ಕ್-ದೆಹಲಿ ನಡುವಿನ ‘ಅಮೆರಿಕನ್ ಏರ್‌ಲೈನ್ಸ್’ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ವಿದ್ಯಾರ್ಥಿಯೊಬ್ಬ ಕುಡಿದ ಅಮಲಿನಲ್ಲಿ ಸಹ ಪ್ರಯಾಣಿಕನ ಮೇಲೆ ಮೂತ್ರ ವಿಸರ್ಜನೆ ಮಾಡಿರುವುದು ಬಹಿರಂಗವಾಗಿದೆ.

ಶುಕ್ರವಾರ ರಾತ್ರಿ 9:16 ಕ್ಕೆ ನ್ಯೂಯಾರ್ಕ್‌ನಿಂದ ಹೊರಟ ಎಎ292 ವಿಮಾನದಲ್ಲಿ ಈ ಘಟನೆ ನಡೆದಿದೆ. 14 ಗಂಟೆ 26 ನಿಮಿಷಗಳ ಹಾರಾಟದ ನಂತರ ಶನಿವಾರ ರಾತ್ರಿ 10:12 ಕ್ಕೆ ದೆಹಲಿಯ ‘ಇಂದಿರಾಗಾಂಧಿ ಅಂತರರಾಷ್ಟ್ರೀಯ (ಐಜಿಐ) ವಿಮಾನ ನಿಲ್ದಾಣ’ದಲ್ಲಿ ವಿಮಾನ ಲ್ಯಾಂಡ್ ಆಗಿತ್ತು.

‘ಆರೋಪಿಯು ಅಮೆರಿಕದ ವಿಶ್ವವಿದ್ಯಾಲಯವೊಂದರ ವಿದ್ಯಾರ್ಥಿಯಾಗಿದ್ದು, ಕುಡಿತದ ಅಮಲಿನಲ್ಲಿ, ನಿದ್ರಾಸ್ಥಿತಿಯಲ್ಲಿರುವಾಗ ಮೂತ್ರ ವಿಸರ್ಜನೆ ಮಾಡಿದ್ದಾನೆ. ಈ ಬಗ್ಗೆ ಸಹ ಪ್ರಯಾಣಿಕ ವಿಮಾನ ಸಿಬ್ಬಂದಿಗೆ ದೂರಿದ್ದಾರೆ’ ಎಂದು ವಿಮಾನ ನಿಲ್ದಾಣದ ಮೂಲಗಳು ತಿಳಿಸಿವೆ.

ಮೂತ್ರ ವಿಸರ್ಜನೆ ಮಾಡಿದ್ದಕ್ಕೆ ವಿದ್ಯಾರ್ಥಿಯು ಸಹಪ್ರಯಾಣಿಕನ ಕ್ಷಮೆಯಾಚಿಸಿದ್ದಾನೆ. ಹೀಗಾಗಿ ಘಟನೆ ಬಗ್ಗೆ ಪೊಲೀಸರಿಗೆ ದೂರು ನೀಡಲು ಅವರು ಮನಸ್ಸು ಮಾಡಿಲಿಲ್ಲ. ದೂರು ನೀಡಿದರೆ, ವಿದ್ಯಾರ್ಥಿಯ ಭವಿಷ್ಯಕ್ಕೆ ತೊಂದರೆಯಾಗಬಹುದು ಎಂದು ಅವರು ಭಾವಿಸಿದ್ದರು. ಆದರೆ, ವಿಮಾನಯಾನ ಸಂಸ್ಥೆ ಇದನ್ನು ಗಂಭೀರವಾಗಿ ಪರಿಗಣಿಸಿದ್ದು, ಐಜಿಐ ವಿಮಾನ ನಿಲ್ದಾಣದ ಏರ್ ಟ್ರಾಫಿಕ್ ಕಂಟ್ರೋಲ್ (ಎಟಿಸಿ)ಗೆ ವರದಿ ಮಾಡಿದೆ.

ವಿಮಾನದಲ್ಲಿ ನಡೆದ ಘಟನೆಯ ಬಗ್ಗೆ ಸಿಬ್ಬಂದಿ ಪೈಲಟ್‌ಗೆ ಮಾಹಿತಿ ನೀಡಿದ್ದರು. ಪೈಲಟ್‌ ಎಟಿಸಿಗೆ ವಿಷಯ ಮುಟ್ಟಿಸಿದ್ದರು. ಹೀಗಾಗಿ ವಿಮಾನ ಲ್ಯಾಂಡ್‌ ಆಗುತ್ತಲೇ ವಿದ್ಯಾರ್ಥಿಯನ್ನು ದೆಹಲಿ ಪೊಲೀಸರಿಗೆ ಒಪ್ಪಿಸಲಾಯಿತು.

‘ಪೊಲೀಸರು ಸಂಬಂಧಪಟ್ಟ ವ್ಯಕ್ತಿಗಳ ಹೇಳಿಕೆಗಳನ್ನು ದಾಖಲಿಸಿಕೊಳ್ಳುತ್ತಿದ್ದಾರೆ’ ಎಂದು ವಿಮಾನ ನಿಲ್ದಾಣದ ಮತ್ತೊಂದು ಮೂಲ ಪಿಟಿಐಗೆ ಮಾಹಿತಿ ನೀಡಿದೆ.

ನಾಗರಿಕ ವಿಮಾನಯಾನ ನಿಯಮಗಳ ಪ್ರಕಾರ, ಪ್ರಯಾಣಿಕರು ಅಶಿಸ್ತಿನ ವರ್ತನೆ ತೋರಿದರೆ ಕ್ರಿಮಿನಲ್ ಕಾನೂನಿನಡಿಯಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ. ಅಪರಾಧ ಕೃತ್ಯದ ಆಧಾರದ ಮೇಲೆ ನಿರ್ದಿಷ್ಟ ಅವಧಿಗೆ ವಿಮಾನ ಪ್ರಯಾಣಕ್ಕೆ ನಿಷೇಧ ಹೇರಲಾಗುತ್ತದೆ.

ಇತ್ತೀಚಿನ ಕೆಲ ತಿಂಗಳಲ್ಲಿ, ಸಹಪ್ರಯಾಣಿಕರ ಮೇಲೆ ಮೂತ್ರ ವಿಸರ್ಜನೆ ಮಾಡಿದ ಎರಡನೇ ಪ್ರಕರಣ ಇದಾಗಿದೆ.

ನವೆಂಬರ್ 26 ರಂದು ನ್ಯೂಯಾರ್ಕ್-ದೆಹಲಿ ನಡುವಿನ ಏರ್ ಇಂಡಿಯಾ ವಿಮಾನದಲ್ಲಿ ಇದೇ ರೀತಿಯ ಘಟನೆ ನಡೆದಿತ್ತು. ಶಂಕರ್ ಮಿಶ್ರಾ ಎಂಬ ವ್ಯಕ್ತಿ ಕುಡಿದ ಅಮಲಿನಲ್ಲಿ ವೃದ್ಧೆಯೊಬ್ಬರ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದರು.

ಇದನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT