ಚಂಡೀಗಢ: ಸಿಖ್ ಮೂಲಭೂತವಾದಿ ಧರ್ಮಪ್ರಚಾರಕ ಅಮೃತಪಾಲ್ ಸಿಂಗ್ ಮತ್ತು ಆತನ ಸಹಾಯಕ ಪಾಪಲ್‌ಪ್ರೀತ್ ಸಿಂಗ್ ಜತೆಗಿರುವ ವಿಡಿಯೊವೊಂದು ಮಂಗಳವಾರ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದು, ಸಿಖ್ ಪೇಟ ತೊಡದ ಹಾಗೂ ಮಾಸ್ಕ್ ಧರಿಸಿರುವ ಅಮೃತಪಾಲ್ ಸಿಂಗ್ ಸಿಸಿಟಿವಿಯ ದೃಶ್ಯಾವಳಿಯಲ್ಲಿ ಕಾಣಿಸಿಕೊಂಡಿದ್ದಾರೆ.
ದಿನಾಂಕ ನಮೂದಾಗದ ಸಿಸಿಟಿವಿಯ ದೃಶ್ಯವೊಂದರಲ್ಲಿ ಅಮೃತಪಾಲ್ ಸಿಂಗ್ ಕಣ್ಣಿಗೆ ತಂಪು ಕನ್ನಡಕ ಹಾಕಿಕೊಂಡು ದೆಹಲಿಯ ಮಾರುಕಟ್ಟೆಯೊಂದರಲ್ಲಿ ನಡೆದುಕೊಂಡು ಹೋಗುತ್ತಿದ್ದು, ಆತನ ಹಿಂದೆ ಪಾಪಲ್‌ಪ್ರೀತ್ ಸಿಂಗ್ ಹೆಗಲಿಗೆ ಬ್ಯಾಗ್ ಹಾಕಿಕೊಂಡು ಹೋಗುತ್ತಿರುವುದು ಸೆರೆಯಾಗಿದೆ.
ಈ ತಾಜಾ ದೃಶ್ಯಗಳ ಕುರಿತು ಪಂಜಾಬ್ ಪೊಲೀಸರಿಂದ ಇದುವರೆಗೆ ಅಧಿಕೃತವಾಗಿ ಯಾವುದೇ ಹೇಳಿಕೆ ಬಂದಿಲ್ಲ.
ಅಮೃತಪಾಲ್ ಸಿಂಗ್ ಮತ್ತು ಪಾಪಲ್ ಪ್ರೀತ್ ಸಿಂಗ್ ಅವರ ಚಿತ್ರಗಳು ಸಾಮಾಜಿಕ ಮಾಧ್ಯಮಗಳಲ್ಲಿ ಬಿತ್ತರವಾದ ಒಂದು ದಿನದ ಬಳಿಕ ಹೊಸ ವಿಡಿಯೊವು ಬೆಳಕಿಗೆ ಬಂದಿದೆ. ಈ ವಿಡಿಯೊದಲ್ಲಿ ಅಮೃತಪಾಲ್ ಮತ್ತು ಪಾಪಲ್ ಇಬ್ಬರೂ ಆರಾಮವಾಗಿ ನಡೆದುಕೊಂಡು ಹೋಗುತ್ತಿದ್ದಾರೆ. ಅಮೃತಪಾಲ್ ಕೈಯಲ್ಲಿ ಪಾನೀಯದ ಡಬ್ಬಿಯೊಂದನ್ನು ಹಿಡಿದಿರುವುದೂ ಕಾಣಿಸುತ್ತದೆ.
ಪಾಪಲ್‌ಪ್ರೀತ್, ಅಮೃತಪಾಲ್ ಸಿಂಗ್‌ನ ಮಾರ್ಗದರ್ಶಕ ಎನ್ನಲಾಗುತ್ತಿದ್ದು, ಈತ ಪಾಕಿಸ್ತಾನದ ಬೇಹುಗಾರಿಕಾ ಸಂಸ್ಥೆ ಐಎಸ್‌ಐ ಜತೆಗೆ ನಂಟು ಹೊಂದಿದ್ದ ಎನ್ನುವ ಆರೋಪವೂ ಇದೆ.
‘ವಾರಿಸ್ ಪಂಜಾಬ್ ದೇ’ ಸಂಘಟನೆಯ ಮುಖ್ಯಸ್ಥನಾಗಿರುವ ಅಮೃತಪಾಲ್ ಸಿಂಗ್ ಮತ್ತು ಆತನ ಸಹಚರರನ್ನು ಪಂಜಾಬ್ ಪೊಲೀಸರು ಮಾರ್ಚ್ 18ರಿಂದ ಹುಡುಕಾಟ ನಡೆಸುತ್ತಿದ್ದಾರೆ. ಅಂದಿನಿಂದ ಅಮೃತಪಾಲ್‌ನ ಅನೇಕ ಫೋಟೊಗಳು ಮತ್ತು ವಿಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ಕಾಣಿಸಿಕೊಂಡಿವೆ.
ತೀವ್ರ ಹುಡುಕಾಟದ ಪ್ರಯತ್ನದ ನಡುವೆಯೇ ಜಲಂಧರ್‌ನಲ್ಲಿ ಪೊಲೀಸರಿಂದ ತಪ್ಪಿಸಿಕೊಳ್ಳುವಲ್ಲಿ ಅಮೃತಪಾಲ್ ಯಶಸ್ವಿಯಾಗಿದ್ದ. ಹಲವು ಬಾರಿ ತನ್ನ ವೇಷಭೂಷಣ ಬದಲಾಯಿಸಿಕೊಂಡ ವಿವಿಧ ವಾಹನಗಳಲ್ಲಿ ಆತ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಾರ್ಚ್ 19ರಂದು ಹರಿಯಾಣದ ಕುರುಕ್ಷೇತ್ರ ಜಿಲ್ಲೆಯ ಶಹಾಬಾದ್‌ನಲ್ಲಿ ಮಹಿಳೆಯೊಬ್ಬರು ತಮ್ಮ ಮನೆಯಲ್ಲಿ ಅಮೃತಪಾಲ್ ಹಾಗೂ ಪಾಪಲ್ ಪ್ರೀತ್ ಅವರಿಗೆ ಆಶ್ರಯ ನೀಡಿದ್ದರು. ಮಾರ್ಚ್ 25ರಂದು ಅಮೃತಪಾಲ್ ಮೊಬೈಲ್‌ನಲ್ಲಿ ಮಾತನಾಡುತ್ತಿರುವ ವಿಡಿಯೊವೊಂದು ಬಿತ್ತರವಾಗಿತ್ತು ಎಂದೂ ಪೊಲೀಸರು ಮಾಹಿತಿ ನೀಡಿದ್ದಾರೆ.
ಬಂಧಿತ ವ್ಯಕ್ತಿಯೊಬ್ಬರ ಬಿಡುಗಡೆಗಾಗಿ ಅಮೃತಪಾಲ್ ಮತ್ತು ಆತನ ಬೆಂಬಲಿಗರು ಅಮೃತಸರ ಬಳಿಯ ಅಜ್ನಾಲಾ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿದ್ದರು. ಈ ವೇಳೆ ನಡೆದ ಘರ್ಷಣೆಯಲ್ಲಿ ಆರು ಮಂದಿ ಪೊಲೀಸರು ಗಾಯಗೊಂಡಿದ್ದರು. ಇದಾದ ಮೂರು ವಾರಗಳ ಬಳಿಕ ಪೊಲೀಸರು ಅಮೃತಪಾಲ್ ವಿರುದ್ಧ ಕ್ರಮಕ್ಕೆ ಮುಂದಾದರು.
ಕೊಲೆ, ದಾಳಿಯ ಯತ್ನ ಮತ್ತು ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಪ್ರಕರಣ ಸೇರಿದಂತೆ ಇತರ ಅಪರಾಧ ಪ್ರಕರಣಗಳ ಅಡಿಯಲ್ಲಿ ಅಮೃತಪಾಲ್‌ನ ಹಲವು ಸಹಚರರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಲ್ಲಿ ಕೆಲವರ ವಿರುದ್ಧ ಪೊಲೀಸರು ರಾಷ್ಟ್ರೀಯ ಭದ್ರತೆಗೆ ಧಕ್ಕೆ ತಂದ ಪ್ರಕರಣಗಳನ್ನೂ ದಾಖಲಿಸಿದ್ದಾರೆ.
ಬಂಧಿತ 353 ಜನರ ಪೈಕಿ ಭಾನುವಾರ ಪಂಜಾಬ್ ಪೊಲೀಸರು 197 ಜನರನ್ನು ಬಿಡುಗಡೆ ಮಾಡಿದ್ದಾರೆ.
ಅಮೃತಪಾಲ್ ಸಿಂಗ್ ಬಂಧನಕ್ಕೆ ಕ್ರಮ: ಪಂಜಾಬ್
ಚಂಡೀಗಢ: ‘ಸಿಖ್ ಮೂಲಭೂತವಾದಿ ಧರ್ಮಪ್ರಚಾರಕ ಅಮೃತಪಾಲ್ ಸಿಂಗ್ ಬಂಧನಕ್ಕಾಗಿ ಹಲವು ತನಿಖಾ ಸಂಸ್ಥೆಗಳೊಂದಿಗೆ ಸಮನ್ವಯ ಸಾಧಿಸಲಾಗುತ್ತಿದೆ’ ಎಂದು ಪಂಜಾಬ್ ಸರ್ಕಾರವು, ಇಲ್ಲಿನ ಹೈಕೋರ್ಟ್‌ಗೆ ಮಂಗಳವಾರ ತಿಳಿಸಿದೆ.
ವಕೀಲ ಇಮಾನ್ ಸಿಂಗ್ ಖಾರಾ ಅವರು ಸಲ್ಲಿಸಿದ ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ಮಂಗಳವಾರ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ವಿಚಾರಣೆ ನಡೆಸಿತು. ಅಮೃತಪಾಲ್ ಸಿಂಗ್ ಅವರು ಪೊಲೀಸರ ಅಕ್ರಮ ಬಂಧನದಲ್ಲಿದ್ದಾರೆ ಎಂದು ಖಾರಾ ಅರ್ಜಿಯಲ್ಲಿ ಆರೋಪಿಸಿದ್ದಾರೆ.
ಪಂಜಾಬ್ ಅಡ್ವೊಕೇಟ್ ಜನರಲ್ ವಿನೋದ್ ಘಾಯ್ ಅವರು, ‘ಅಮೃತಪಾಲ್ ಸಿಂಗ್ ಅವರನ್ನು ಇನ್ನೂ ಬಂಧಿಸಲಾಗಿಲ್ಲ ಮತ್ತು ಅವರ ಬಂಧನಕ್ಕಾಗಿ ತನಿಖಾ ಸಂಸ್ಥೆಗಳೊಂದಿಗೆ ಸಮನ್ವಯ ಸಾಧಿಸಲಾಗುತ್ತಿದೆ’ ಎಂದು ನ್ಯಾಯಾಲಯಕ್ಕೆ ಮಾಹಿತಿ ನೀಡಿದರು.
ಬಳಿಕ ಅರ್ಜಿದಾರ ಖಾರಾ ಸುದ್ದಿಗಾರರದೊಂದಿಗೆ ಮಾತನಾಡಿ, ‘ಅಮೃತಪಾಲ್ ಸಿಂಗ್ ಅವರನ್ನು ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಅಡ್ವೋಕೇಟ್ ಜನರಲ್ ಅವರು ನ್ಯಾಯಾಲಯದಲ್ಲಿ ಹೇಳಿದ್ದಾರೆ’ ಎಂದು ತಿಳಿಸಿದರು.
ನ್ಯಾಯಮೂರ್ತಿ ಎನ್.ಎಸ್. ಶೇಖಾವತ್ ಅವರು, ‘ಅಮೃತಪಾಲ್ ಸಿಂಗ್ ಅವರನ್ನು ಇನ್ನೂ ಬಂಧಿಸಿಲ್ಲ ಎಂದು ಪಂಜಾಬ್ ಸರ್ಕಾರ ತಿಳಿಸಿದೆ. ಅವರು ಪೊಲೀಸರ ಅಕ್ರಮ ಬಂಧನದಲ್ಲಿದ್ದಾರೆ ಎಂದು ಸಾಬೀತುಪಡಿಸಲು ಸಾಕ್ಷ್ಯವನ್ನು ಒದಗಿಸಿದಲ್ಲಿ ವಾರಂಟ್ ಅಧಿಕಾರಿಯನ್ನು ನೇಮಿಸಲಾಗುವುದು’ ಎಂದು ಅರ್ಜಿದಾರ ಇಮಾನ್ ಸಿಂಗ್ ಖಾರಾ ಅವರಿಗೆ ಸೂಚಿಸಿದರು.
ಮಾರ್ಚ್ 21ರಂದು ಅಮೃತಪಾಲ್ ಸಿಂಗ್ ಪೊಲೀಸರಿಂದ ತಪ್ಪಿಸಿಕೊಂಡಿದ್ದು, ಇದರಲ್ಲಿ ಗುಪ್ತಚರ ಇಲಾಖೆಯ ವೈಫಲ್ಯವಿದೆ ಎಂದು ಪಂಜಾಬ್ ಸರ್ಕಾರವನ್ನು ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿತು.
ಪ್ರಕರಣದ ಮುಂದಿನ ವಿಚಾರಣೆಯನ್ನು ಮಾರ್ಚ್ 29ರಂದು ನಡೆಸಲಾಗವುದು ಎಂದೂ ನ್ಯಾಯಾಲಯವು ತಿಳಿಸಿತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.