ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣೆ ಹೊಸ್ತಿಲಲ್ಲಿ ಪ್ರಶಸ್ತಿ ಘೋಷಣೆ

Last Updated 1 ಏಪ್ರಿಲ್ 2021, 19:38 IST
ಅಕ್ಷರ ಗಾತ್ರ

ನವದೆಹಲಿ: ತಮಿಳು ಸಿನಿಮಾದ ಅನಭಿಷಿಕ್ತ ದೊರೆ ರಜನಿಕಾಂತ್‌ ಅವರಿಗೆ ದೇಶದ ಅತ್ಯುನ್ನತ ಸಿನಿಮಾ ಗೌರವ ದಾದಾಸಾಹೇಬ್‌ ಫಾಲ್ಕೆ ಪ್ರಶಸ್ತಿ ಘೋಷಿಸಿದ ಸಮಯದ ಬಗ್ಗೆ ಪ್ರಶ್ನೆಗಳು ಹುಟ್ಟಿಕೊಂಡಿವೆ.

ತಮಿಳುನಾಡು ವಿಧಾನಸಭೆ ಚುನಾವಣಾ ಗೆಲುವಿಗಾಗಿ ಎಐಎಡಿಎಂಕೆ–ಬಿಜೆಪಿ ಮೈತ್ರಿಕೂಟ ಮತ್ತು ಡಿಎಂಕೆ ಮೈತ್ರಿಕೂಟದ ನಡುವೆ ತೀವ್ರ ಹಣಾಹಣಿ ನಡೆಯುತ್ತಿರುವ ಸಂದರ್ಭದಲ್ಲಿ ಪ್ರಶಸ್ತಿ ಘೋಷಿಸಲಾಗಿದೆ. ಅಲ್ಲಿ ಮತದಾನಕ್ಕೆ ಇನ್ನೇನು ಐದು ದಿನಗಳಷ್ಟೇ ಇರುವಾಗ ತಮಿಳುನಾಡಿನ ಅತ್ಯಂತ ಜನಪ್ರಿಯ ವ್ಯಕ್ತಿಗೆ ಪ್ರಶಸ್ತಿ ನೀಡುವುದಾಗಿ ಪ್ರಕಟಿಸಲಾಗಿದೆ.

ರಜನಿಕಾಂತ್‌ ಅವರು ರಾಜಕೀಯದಿಂದ ದೂರವೇ ಇರುವ ವ್ಯಕ್ತಿ ಅಲ್ಲ. ಸಕ್ರಿಯ ರಾಜಕಾರಣಕ್ಕೆ ಬರುವುದಾಗಿ ಕೆಲವು ವರ್ಷಗಳಲ್ಲಿ ಹಲವು ಬಾರಿ ಅವರು ಘೋಷಿಸಿದ್ದರು. ತಮ್ಮದೇ ಪಕ್ಷ ಕಟ್ಟುವ ಲೆಕ್ಕಾಚಾರವನ್ನೂ ಹೊಂದಿದ್ದರು. ಆದರೆ, ಕಳೆದ ಡಿಸೆಂಬರ್‌ನಲ್ಲಿ ಅನಾರೋಗ್ಯಕ್ಕೆ ಒಳಗಾದ ಬಳಿಕ ರಾಜಕೀಯದಿಂದ ಹಿಂದೆ ಸರಿಯುವುದಾಗಿ ಅವರು ಘೋಷಿಸಿದ್ದರು.

ರಾಜಕೀಯ ಪ್ರವೇಶದ ಬಗ್ಗೆ ದ್ವಂದ್ವದಲ್ಲಿ ಇದ್ದಾಗಲೂ ರಜನಿ ಅವರು ಬಿಜೆಪಿ ಜತೆಗೆ ಮೈತ್ರಿ ಮಾಡಿಕೊಳ್ಳಬಹುದು ಎಂಬ ವದಂತಿಗಳು ಹರಿದಾಡಿದ್ದವು. ರಜನಿ ಅವರು ಎಐಎಡಿಎಂಕೆ ನೇತೃತ್ವದ ಮೈತ್ರಿಕೂಟವನ್ನು ಬೆಂಬಲಿಸುವಂತೆ ಮಾಡಲು ಬಿಜೆಪಿ ಭಾರಿ ಪ್ರಯತ್ನವನ್ನೂ ನಡೆಸಿತ್ತು.

ಚುನಾವಣೆ ಸಂದರ್ಭದಲ್ಲಿ ಈ ಪ್ರಶಸ್ತಿ ಘೋಷಣೆ ಸರಿಯಾದ ಕ್ರಮವೇ ಎಂಬ ಪ‍್ರಶ್ನೆಗೆ ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವ ಪ್ರಕಾಶ್‌ ಜಾವಡೇಕರ್‌ ಅವರು ಮಾಧ್ಯಮಗೋಷ್ಠಿಯಲ್ಲಿ ಸಿಡಿಮಿಡಿಗೊಂಡರು. ‘ಇದು ಸಿನಿಮಾ ಕ್ಷೇತ್ರಕ್ಕೆ ಸಂಬಂಧಿಸಿದ ಪ್ರಶಸ್ತಿ. ರಜನಿಕಾಂತ್‌ ಅವರು 50 ವರ್ಷಗಳಿಂದ ಸಿನಿಮಾ ರಂಗದಲ್ಲಿ ಇರುವವರು... ಪ್ರಶ್ನೆ ಕೇಳುವವರು ಸರಿಯಾದ ಪ್ರಶ್ನೆ ಕೇಳಬೇಕು’ ಎಂದಿದ್ದಾರೆ.

ರಜನಿಕಾಂತ್‌ ಅವರ ಅಳಿಯ ಧನುಷ್‌ ಅವರಿಗೆ ‘ಅಸುರನ್‌’ ಸಿನಿಮಾದ ನಟನೆಗಾಗಿ ಅತ್ಯುತ್ತಮ ನಟ ರಾಷ್ಟ್ರ ಪ್ರಶಸ್ತಿಯನ್ನು ಇತ್ತೀಚೆಗೆ ಘೋಷಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT