ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವರುಗಳು ಮೇಲ್ಜಾತಿಯವರಲ್ಲ, ಶಿವನೂ ಪರಿಶಿಷ್ಟನೇ: ಜೆಎನ್‌ಯು ಕುಲಪತಿ ಶಾಂತಿಶ್ರೀ

Last Updated 22 ಆಗಸ್ಟ್ 2022, 14:27 IST
ಅಕ್ಷರ ಗಾತ್ರ

ನವದೆಹಲಿ: ಮಾನವಶಾಸ್ತ್ರದ ಪ್ರಕಾರ ದೇವರುಗಳು ಮೇಲ್ಜಾತಿಗೆ ಸೇರಿದವರಲ್ಲ. ಶಿವನೂ ಕೂಡ ಪರಿಶಿಷ್ಟ ಜಾತಿ ಅಥವಾ ಬುಡಕಟ್ಟಿನವನಾಗಿರಬಹುದು ಎಂದು ದೆಹಲಿಯ ಜವಾಹರಲಾಲ್‌ ನೆಹರೂ ವಿಶ್ವವಿದ್ಯಾಲಯದ (ಜೆಎನ್‌ಯು)ನ ಕುಲಪತಿ ಶಾಂತಿಶ್ರೀ ಧೂಳಿಪುಡಿ ಪಂಡಿತ್‌ ಅವರು ಸೋಮವಾರ ಅಭಿಪ್ರಾಯಪಟ್ಟಿದ್ದಾರೆ.

ಡಾ. ಬಿ ಆರ್ ಅಂಬೇಡ್ಕರ್ ಉಪನ್ಯಾಸ ಸರಣಿಯ ಅಂಗವಾಗಿ ಆಯೋಜಿಸಿದ್ದ ‘ಲಿಂಗ ನ್ಯಾಯದ ಕುರಿತು ಡಾ. ಬಿ. ಆರ್. ಅಂಬೇಡ್ಕರ್ ಅವರ ಚಿಂತನೆಗಳು: ಏಕರೂಪ ನಾಗರಿಕ ಸಂಹಿತೆಯ ವಿಶ್ಲೇಷಣೆ' ಎಂಬ ವಿಷಯದ ಕುರಿತು ಅವರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.

‘ಮನುಸ್ಮೃತಿಯ ಪ್ರಕಾರ ಎಲ್ಲಾ ಸ್ತ್ರೀಯರು ಶೂದ್ರರು. ಆದ್ದರಿಂದ ಯಾವುದೇ ಮಹಿಳೆ ತಾನು ಬ್ರಾಹ್ಮಣ ಅಥವಾ ಇನ್ನಿತರೆ ಎಂದು ಯಾವುದನ್ನಾದರೂ ಒಂದನ್ನು ಹೇಳಿಕೊಳ್ಳಲು ಸಾಧ್ಯವಿಲ್ಲ. ಮದುವೆಯ ಮೂಲಕ ಗಂಡನಿಂದ ಅಥವಾ ತಂದೆಯಿಂದ ಮಾತ್ರ ಅವರಿಗೆ ಜಾತಿ ಎಂಬುದು ಸಿಗುತ್ತದೆ. ಇದು ಅಸಾಧಾರಣವಾದ ಕಡೆಗಣನೆ ಎಂದು ನಾನು ಭಾವಿಸುತ್ತೇನೆ’ ಎಂದು ಅವರು ಹೇಳಿದರು.

ರಾಜಸ್ಥಾನದಲ್ಲಿ ಒಂಬತ್ತು ವರ್ಷದ ದಲಿತ ಬಾಲಕನನ್ನು ಹೊಡೆದು ಕೊಂದ ಇತ್ತೀಚಿನ ಜಾತಿ ಸಂಬಂಧಿತ ಕ್ರೌರ್ಯದ ಕುರಿತು ಮಾತನಾಡಿದ ಅವರು, ‘ಯಾವುದೇ ದೇವರುಗಳೂ ಮೇಲ್ಜಾತಿಗೆ ಸೇರಿಲ್ಲ’ ಎಂದು ಅಭಿಪ್ರಾಯಪಟ್ಟರು.

‘ನಮ್ಮ ದೇವರುಗಳ ಮೂಲವನ್ನು ಮಾನವಶಾಸ್ತ್ರೀಯವಾಗಿ ತಿಳಿದುಕೊಳ್ಳಬೇಕು. ಯಾವುದೇ ದೇವರು ಬ್ರಾಹ್ಮಣರಲ್ಲ. ಕ್ಷತ್ರಿಯರಲ್ಲ. ಶಿವನು ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡದವನಾಗಿರಬೇಕು. ಏಕೆಂದರೆ ಶಿವ ಹಾವಿನೊಂದಿಗೆ ಸ್ಮಶಾನದಲ್ಲಿ ಬದುಕುತ್ತಾನೆ. ಕಡಿಮೆ ಬಟ್ಟೆ ತೊಡುತ್ತಾನೆ. ಬ್ರಾಹ್ಮಣರು ಸ್ಮಶಾನದಲ್ಲಿ ಕುಳಿತುಕೊಳ್ಳುತ್ತಾರೆ ಎಂದು ನಾನು ಭಾವಿಸುವುದಿಲ್ಲ’ ಎಂದು ಅವರು ಹೇಳಿದರು.

‘ಮಾನವಶಾಸ್ತ್ರೀಯವಾಗಿ ಹೇಳುವುದಾದರೆ, ಲಕ್ಷ್ಮಿ, ಆಧಿಶಕ್ತಿ ಅಥವಾ ಜಗನ್ನಾಥ ಸೇರಿದಂತೆ ಯಾವ ದೇವರುಗಳು ಮೇಲ್ಜಾತಿಯಿಂದ ಬಂದವರಲ್ಲ. ವಾಸ್ತವವಾಗಿ ಜಗನ್ನಾಥನು ಬುಡಕಟ್ಟು ಮೂಲದವ’ ಎಂದು ಅವರು ತಮ್ಮ ಅಭಿಪ್ರಾಯ ಹಂಚಿಕೊಂಡರು.

‘ಹಾಗಾದರೆ ನಾವು ಇನ್ನೂ ಈ ತಾರತಮ್ಯವನ್ನು ಏಕೆ ಅನುಸರಿಸುತ್ತಿದ್ದೇವೆ. ಅದು ಅತ್ಯಂತ ಅಮಾನವೀಯ. ಬಾಬಾಸಾಹೇಬರ ಚಿಂತನೆಗಳನ್ನು ನಾವು ಪುನರ್‌ಚಿಂತನೆ ಮಾಡುವುದು, ಅಳವಡಿಸಿಕೊಳ್ಳುವುದು ಬಹಳ ಮುಖ್ಯ. ಆಧುನಿಕ ಭಾರತದಲ್ಲಿ ಅಂತಹ ಶ್ರೇಷ್ಠ ಚಿಂತಕ ಇನ್ನೊಬ್ಬರಿಲ್ಲ’ ಎಂದು ಅವರು ಪ್ರತಿಪಾದಿಸಿದರು.

‘ಹಿಂದೂ ಧರ್ಮ ಒಂದು ಧರ್ಮವಲ್ಲ ಅದು ಜೀವನ ವಿಧಾನ. ಅದು ಜೀವನ ವಿಧಾನವಾಗಿದ್ದರೆ ನಾವು ಟೀಕೆಗಳಿಗೆ ಏಕೆ ಹೆದರುತ್ತೇವೆ’ ಎಂದು ಅವರು ಪ್ರಶ್ನಿಸಿದರು.

‘ನಮ್ಮ ಸಮಾಜದಲ್ಲಿ ಹುದುಗಿರುವ, ರಚನೆಯಾಗಿರುವ ತಾರತಮ್ಯಗಳ ಬಗ್ಗೆ ನಮ್ಮನ್ನು ಮೊದಲು ಎಚ್ಚರಿಸಿದವರಲ್ಲಿ ಗೌತಮ ಬುದ್ಧ ಕೂಡ ಒಬ್ಬರು’ ಎಂದು ಅವರು ತಿಳಿಸಿದರು.

ಇದನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT