ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಿರಂಗ ಅಭಿಯಾನಕ್ಕೆ ವೇಗ: ಧ್ವಜದ ಗೌರವಯುತ ವಿಲೇವಾರಿಯೇ ದೊಡ್ಡ ಪ್ರಶ್ನೆ

Last Updated 13 ಆಗಸ್ಟ್ 2022, 15:45 IST
ಅಕ್ಷರ ಗಾತ್ರ

ನವದೆಹಲಿ: 'ತಿರಂಗ ಅಭಿಯಾನ' ಅಭಿಯಾನವು ವೇಗ ಪಡೆದುಕೊಳ್ಳುತ್ತಿರುವ ನಡುವೆಯೇ, ಧ್ವಜದ ಗೌರವಯುತ ವಿಲೇವಾರಿಯು ಆತಂಕಕ್ಕೆ ಕಾರಣವಾಗಿದ್ದು, ಸವಾಲಾಗಿ ಪರಿಣಮಿಸಿದೆ.

ಇದಕ್ಕಾಗಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ‘ನಿವಾಸಿಗಳ ಕಲ್ಯಾಣ ಸಂಘ (ಆರ್‌ಡಬ್ಲ್ಯುಎಸ್‌)’ ಧ್ವಜಗಳನ್ನು ಗೌರವಯುತವಾಗಿ ವಿಲೇವಾರಿ ಮಾಡುವುದರತ್ತ ಶ್ರಮಿಸುತ್ತಿದೆ.

ರಾಷ್ಟ್ರಧ್ವಜಕ್ಕೆ ಆಗಬಹುದಾದ ಅಗೌರವವನ್ನು ತಪ್ಪಿಸಲು ಹೊಸ ಆಲೋಚನೆ, ಚಿಂತನೆಗಳನ್ನು ಆರ್‌ಡಬ್ಲ್ಯುಎಸ್‌ ಮಾಡುತ್ತಿದೆ. ಧ್ವಜದ ಗೌರವಯುತ ವಿಲೇವಾರಿಗೆ ಅನುಸರಿಸಬೇಕಾದ ನಿಯಮಗಳ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ಜಾಗೃತಿ ಅಭಿಯಾನಗಳನ್ನು ನಡೆಸುತ್ತಿದೆ. ಸಂಘದ ಕೆಲ ಮಂದಿ ಮನೆ ಮನೆಗಳಿಗೆ ತೆರಳಿ ಧ್ವಜಗಳನ್ನು ಸಂಗ್ರಹಿಸಿ ಮತ್ತು ಅವುಗಳನ್ನು ಗೌರವಯುತವಾಗಿ ವಿಲೇವಾರಿ ಮಾಡಲು ಅಭಿಯಾನಗಳನ್ನು ಪ್ರಾರಂಭಿಸಲಿದ್ದಾರೆ.

ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಡಿ ‘ಮನೆ ಮನೆಗಳಲ್ಲಿ ತಿರಂಗ (ಹರ್‌ ಘರ್‌ ತಿರಂಗ)’ ಅಭಿಯಾನಕ್ಕೆ ಶನಿವಾರ ಚಾಲನೆ ದೊರೆತಿದೆ. ಭಾರತದ ಸ್ವಾತಂತ್ರ್ಯದ 75 ನೇ ವಾರ್ಷಿಕೋತ್ಸವದ ಅಂಗವಾಗಿ ಆಗಸ್ಟ್ 13 ರಿಂದ 15 ರವರೆಗೆ ಎಲ್ಲರೂ ತಮ್ಮ ಮನೆಗಳಲ್ಲಿ ತ್ರಿವರ್ಣ ಧ್ವಜಗಳನ್ನು ಹಾರಿಸಲು ಅಥವಾ ಪ್ರದರ್ಶಿಸಲು ಕೇಂದ್ರ ಸರ್ಕಾರ ಜನರಿಗೆ ಕರೆ ನೀಡಿದೆ.

ಧ್ವಜಗಳ ಗೌರವಯುತ ವಿಲೇವಾರಿ ಕುರಿತು ಗಮನಹರಿಸಿರುವ ‘ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ (ಎಂಸಿಡಿ)’ ಹಾನಿಗೀಡಾದ, ಮಣ್ಣಾದ ಧ್ವಜಗಳನ್ನು ಪ್ರತ್ಯೇಕವಾಗಿ ಸಂಗ್ರಹಿಸಲು ತನ್ನ ಸಫಾಯಿ ಸೈನಿಕರಿಗೆ ವಿಶೇಷ ಸೂಚನೆಗಳನ್ನು ನೀಡಿದೆ.

‘ಎಂಸಿಡಿ ರಾಷ್ಟ್ರಧ್ವಜಕ್ಕೆ ಹೆಚ್ಚಿನ ಪ್ರಾಮುಖ್ಯತೆ ಮತ್ತು ಗೌರವ ನೀಡುತ್ತದೆ. ಹಾನಿಗೀಡಾಗಿರುವ ಅಥವಾ ಮಣ್ಣಾದ ಧ್ವಜಗಳನ್ನು ಪ್ರತ್ಯೇಕವಾಗಿ ಸಂಗ್ರಹಿಸಿ, ಆಯಾ ವಲಯದ ನಿಯಂತ್ರಣ ಕೊಠಡಿಯಲ್ಲಿ ಕಲೆ ಹಾಕಲು ಸಫಾಯಿ ಸೈನಿಕರಿಗೆ ವಿಶೇಷ ಸೂಚನೆಗಳನ್ನು ನೀಡಲಾಗಿದೆ’ ಎಂದು ಎಂಸಿಡಿ ನಿರ್ದೇಶಕ (ಪತ್ರಿಕಾ ಮತ್ತು ಮಾಹಿತಿ ) ಅಮಿತ್ ಕುಮಾರ್ ಪಿಟಿಐಗೆ ತಿಳಿಸಿದರು.

‘ಧ್ವಜ ಸಂಹಿತೆಯಲ್ಲಿ ಸೂಚಿಸಲಾದ ಸೂಚನೆಗಳ ಪ್ರಕಾರ ಈ ಧ್ವಜಗಳನ್ನು ಸಕಲ ಗೌರವದಿಂದ ವಿಲೇವಾರಿ ಮಾಡಲಾಗುತ್ತದೆ’ ಎಂದು ಅವರು ಹೇಳಿದರು.

ಧ್ವಜ ಸಂಹಿತೆ–2002 ರ ಪ್ರಕಾರ, ಹಾನಿಗೊಳಗಾದ ಅಥವಾ ಮಣ್ಣಾದ ಧ್ವಜವನ್ನು ಖಾಸಗಿಯಾಗಿ ವಿಲೇವಾರಿ ಮಾಡಬೇಕು. ಸುಡುವ ಮೂಲಕ ಅಥವಾ ಇನ್ನಾವುದೇ ಗೌರವಯುತ ಕ್ರಮಗಳನ್ನು ಅನುಸರಿಸಬೇಕು.

‘ಈ ಸ್ವಾತಂತ್ರ್ಯ ದಿನದಂದು ಲಕ್ಷಗಟ್ಟಲೆ ಧ್ವಜಗಳನ್ನು ಬಳಸಲಾಗುತ್ತದೆ. ಅವುಗಳನ್ನು ಸೂಕ್ತವಾಗಿ ವಿಲೇವಾರಿ ಮಾಡಬೇಕು ಎಂದು’ ದೆಹಲಿಯ ಯುನೈಟೆಡ್ ರೆಸಿಡೆಂಟ್ಸ್ ಜಾಯಿಂಟ್ ಆಕ್ಷನ್ (ಯುಆರ್‌ಜೆಎ)’ ಮುಖ್ಯಸ್ಥರಾದ ಅತುಲ್ ಗೋಯಲ್ ಹೇಳಿದ್ದಾರೆ.

‘ಧ್ವಜಗಳು ಕಸದಬುಟ್ಟಿಯಲ್ಲಿ ಅಥವಾ ರಸ್ತೆಗಳಲ್ಲಿ ಬೀಳುವುದನ್ನು ನಾವು ಬಯಸುವುದಿಲ್ಲ. ಇದು ನಮ್ಮ ಹೆಮ್ಮೆ. ಧ್ವಜಕ್ಕೆ ಗೌರವವನ್ನು ನೀಡಬೇಕು. ಧ್ವಜಗಳನ್ನು ಸರಿಯಾಗಿ ವಿಲೇವಾರಿ ಮಾಡುವುದನ್ನು ಖಚಿತಪಡಿಸಿಕೊಳ್ಳುವುದು ಅಧಿಕಾರಿಗಳು ಮತ್ತು ನಮ್ಮ ಮುಂದಿರುವ ಪ್ರಮುಖ ಸವಾಲು’ ಎಂದು ಅವರು ಹೇಳಿದರು.

‘ಧ್ವಜಗಳನ್ನು ಸಂಗ್ರಹಿಸಿ ಗೊತ್ತುಪಡಿಸಿದ ಸ್ಥಳದಲ್ಲಿ ಕಲೆ ಹಾಕಲು ಯುಆರ್‌ಜೆಎ ತನ್ನ ಸದಸ್ಯರಿಗೆ ಸುತ್ತೋಲೆ ಹೊರಡಿಸಿದೆ. ನಂತರ ಧ್ವಜಗಳನ್ನು ಗೌರವಯುತವಾಗಿ ವಿಲೇವಾರಿ ಮಾಡಲಾಗುತ್ತದೆ’ ಎಂದು ಗೋಯಲ್ ಹೇಳಿದರು.

ಆರ್‌ಡಬ್ಲ್ಯುಎನ ಪೂರ್ವ ದೆಹಲಿಯ ಜಂಟಿ ಅಧ್ಯಕ್ಷ ಬಿ ಎಸ್ ವೋಹ್ರಾ ಅವರು ಧ್ವಜ ವಿಲೇವಾರಿ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.

‘ಧ್ವಜಕ್ಕೆ ಆಗಬಹುದಾದ ಯಾವುದೇ ಅಗೌರವವನ್ನು ತಪ್ಪಿಸಲು, ನಾವು ಸಾಮಾಜಿಕ ಮಾಧ್ಯಮದಲ್ಲಿ ಪ್ರಚಾರವನ್ನು ನಡೆಸುತ್ತಿದ್ದೇವೆ. ಧ್ವಜದ ಸೂಕ್ತ ವಿಲೇವಾರಿಗೆ ಅನುಸರಿಸಬೇಕಾದ ನಿಯಮಗಳ ಬಗ್ಗೆ ಜನರಿಗೆ ತಿಳಿಸುತ್ತಿದ್ದೇವೆ. ಸ್ವಾತಂತ್ರ್ಯ ದಿನಾಚರಣೆಯ ನಂತರ ನಾವು ಜನವಸತಿ ಪ್ರದೇಶಗಳಿಗೆ ಭೇಟಿ ನೀಡುತ್ತೇವೆ. ಧ್ವಜಗಳನ್ನು ಸಂಗ್ರಹಿಸುತ್ತೇವೆ’ ಎಂದು ಅವರು ಹೇಳಿದರು.

ಇವುಗಳನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT