ಬಂಡಾಯ ಶಾಸಕರು ಬಾಳಾಸಾಹೇಬ್ ಬದಲು ಅವರಪ್ಪನ ಹೆಸರಲ್ಲಿ ಚುನಾವಣೆ ಎದುರಿಸಲಿ: ಉದ್ಧವ್

ಮುಂಬೈ: ಮಹಾ ವಿಕಾಸ್ ಅಘಾಡಿ ನೇತೃತ್ವದ ಮಹಾರಾಷ್ಟ್ರ ಸರ್ಕಾರದ ವಿರುದ್ಧ ಬಂಡಾಯವೆದ್ದಿರುವ ಶಿವಸೇನಾದ ಯಾವುದೇ ಶಾಸಕನಿಗೂ ಸಂಸ್ಥಾಪಕ ಬಾಳಾಸಾಹೇಬ್ ಠಾಕ್ರೆ ಹೆಸರನ್ನು ಬಳಸಲು ಬಿಡುವುದಿಲ್ಲ ಎಂದು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹೇಳಿದ್ದಾರೆ.
‘ಚುನಾವಣೆಯಲ್ಲಿ ಮತ ಪಡೆಯಲು ಇಚ್ಛಿಸಿದರೆ ಈ ಶಾಸಕರು ತಮ್ಮ ತಂದೆಯ ಹೆಸರನ್ನು ಹೇಳಿಕೊಂಡು ಹೋಗಲಿ. ಶಿವಸೇನಾದ ಸಂಸ್ಥಾಪಕ ಬಾಳಾಸಾಹೇಬ್ ಠಾಕ್ರೆ ಹೆಸರನ್ನು ಬಳಸಬಾರದು’ ಎಂದು ಮುಂಬೈನ ಶಿವಸೇನಾ ಭವನದಲ್ಲಿ ನಡೆದ ಪಕ್ಷದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಉದ್ಧವ್ ಠಾಕ್ರೆ ಹೇಳಿರುವುದಾಗಿ ಪ್ರಧಾನ ವಕ್ತಾರ ಸಂಜಯ್ ರಾವುತ್ ಹೇಳಿದ್ದಾರೆ.
ಸಭೆಯಲ್ಲಿ ಬಂಡಾಯ ಶಾಸಕರ ವಿರುದ್ಧ ಕ್ರಮಕ್ಕೆ ಉದ್ಧವ್ ಠಾಕ್ರೆಗೆ ಅಧಿಕಾರ ಸೇರಿದಂತೆ ಕೆಲವು ಪ್ರಮುಖ ನಿರ್ಣಯಗಳನ್ನು ಅವಿರೋಧವಾಗಿ ಕೈಗೊಳ್ಳಲಾಗಿದೆ.
ತಮ್ಮ ಸ್ವಾರ್ಥ ರಾಜಕಾರಣಕ್ಕಾಗಿ ಬಾಳಾ ಸಾಹೇಬ್ ಠಾಕ್ರೆ ಹೆಸರು ಬಳಸಿಕೊಂಡವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತೇವೆ. ಪಕ್ಷ ಬಿಟ್ಟವರು ನಮ್ಮ ಪೂರ್ವಜರ ಹೆಸರು ಬಳಸುವಂತಿಲ್ಲ. ಬಂಡಾಯ ಶಾಸಕರ ವಿರುದ್ಧ ಯಾವ ಕ್ರಮ ಆಗಲಿದೆ ಎಂಬುದನ್ನು ಜನ ಸಂಜೆ ವೇಳೆಗೆ ನೋಡಲಿದ್ದಾರೆ ಎಂದು ರಾವುತ್ ಹೇಳಿದ್ದಾರೆ.
ಬಾಳಾಸಾಹೇಬ್ ಠಾಕ್ರೆ ಅವರ ಹಿಂದುತ್ವ ಸಿದ್ಧಾಂತ ಅನುಸರಣೆ, ಮಹಾರಾಷ್ಟ್ರದ ಏಕತೆಯಲ್ಲಿ ಯಾವುದೇ ರಾಜಿ ಮಾಡಿಕೊಳ್ಳದಿರುವುದು ಸೇರಿದಂತೆ 6 ನಿರ್ಣಯಗಳನ್ನು ಅಂಗೀಕರಿಸಲಾಗಿದೆ ಎಂದೂ ಅವರು ಹೇಳಿದ್ದಾರೆ.
ಇದನ್ನೂ ಓದಿ.. ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಗೊಳಿಸಿ: ಸಂಸದೆ ನವನೀತ್ ರಾಣಾ ಮನವಿ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.