ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ಅಭ್ಯರ್ಥಿ ಪತ್ನಿ ಕಾರಿನಲ್ಲಿ ಮತಯಂತ್ರ: ಮರುಮತದಾನಕ್ಕೆ ಆಯೋಗ ಆದೇಶ

ಅಸ್ಸಾಂ: ಒಂದು ಮತಗಟ್ಟೆಯಲ್ಲಿ ಮರುಮತದಾನಕ್ಕೆ ಆಯೋಗ ಆದೇಶ
Last Updated 2 ಏಪ್ರಿಲ್ 2021, 19:20 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಅಸ್ಸಾಂನ ರತಬಾಡಿ ವಿಧಾನಸಭಾಕ್ಷೇತ್ರದ ಮತಗಟ್ಟೆಯೊಂದರ ಚುನಾವಣಾಧಿಕಾರಿಯುಮತದಾನದ ಬಳಿಕ ಮತಯಂತ್ರವನ್ನು ಬಿಜೆಪಿ ಅಭ್ಯರ್ಥಿಯ ಪತ್ನಿಯ ಕಾರಿನಲ್ಲಿ ಸಾಗಿಸಿದ್ದು ಪತ್ತೆಯಾಗಿದೆ. ಹೀಗಾಗಿ ಈ ಮತಗಟ್ಟೆಯಲ್ಲಿ ಮರುಮತದಾನಕ್ಕೆ ಚುನಾವಣಾ ಆಯೋಗವು ಆದೇಶ ನೀಡಿದೆ.

ಚುನಾವಣಾಧಿಕಾರಿ ಮತ್ತು ಇತರ ಮೂವರು ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ ಎಂದು ಆಯೋಗವು ಹೇಳಿದೆ.ಮತಯಂತ್ರದ ಮೊಹರು ಒಡೆದಿಲ್ಲ. ಹಾಗಿದ್ದರೂ 149ನೇ ಸಂಖ್ಯೆಯ ಮತಗಟ್ಟೆಯಲ್ಲಿ ಮರುಮತದಾನ ನಡೆಸಲು ನಿರ್ಧರಿಸಲಾಗಿದೆ. ಈ ಬಾರಿ ಇನ್ನಷ್ಟು ಎಚ್ಚರವಹಿಸಲಾಗುವುದು ಎಂದು ಆಯೋಗವು ತಿಳಿಸಿದೆ. ಮತಯಂತ್ರ ಸಾಗಾಟ
ಕ್ಕೆ ಸಂಬಂಧಿಸಿ ವರದಿ ನೀಡುವಂತೆ ವಿಶೇಷ ವೀಕ್ಷಕರಿಗೆ ಸೂಚಿಸಲಾಗಿದೆ.

ಆಯೋಗ ನೀಡಿದ ಮಾಹಿತಿ:ರತಬಾಡಿ ಕ್ಷೇತ್ರದ 149ನೇ ಮತಗಟ್ಟೆಯಲ್ಲಿ ಮತದಾನದ ಬಳಿಕ ಆರು ಗಂಟೆಗೆ ಚುನಾವಣಾಧಿಕಾರಿ ಮತ್ತು ಇತರ ಮೂವರು ಸಿಬ್ಬಂದಿ ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲಾಗಿದ್ದ ವಾಹನದಲ್ಲಿ ಹೊರಟಿದ್ದಾರೆ.

ಒಬ್ಬ ಕಾನ್‌ಸ್ಟೆಬಲ್‌ ಮತ್ತು ಒಬ್ಬ ಹೋಮ್‌ಗಾರ್ಡ್‌ ಇದ್ದ ಬೆಂಗಾವಲು ವಾಹನವೂ ಜತೆಗಿತ್ತು. ಈ ಸಂದರ್ಭದಲ್ಲಿ ಭಾರಿ ಮಳೆ ಸುರಿಯುತ್ತಿತ್ತು. ಮತಯಂತ್ರ ಇದ್ದ ವಾಹನದಲ್ಲಿ ತೊಂದರೆ ಕಾಣಿಸಿಕೊಂಡಿತು. ಸಂಚಾರ ದಟ್ಟಣೆ ಮತ್ತು ಮಳೆಯಿಂದಾಗಿ ಮತಯಂತ್ರ ಇದ್ದ ಕಾರು ಮತ್ತು ಬೆಂಗಾವಲು ವಾಹನ ಪ್ರತ್ಯೇಕಗೊಂಡವು.

ಚುನಾವಣಾ ಅಧಿಕಾರಿಯು ವಲಯ ಅಧಿಕಾರಿಗೆ ಕರೆ ಮಾಡಿ ಹೊಸ ವಾಹನ ಕಳುಹಿಸಿಕೊಡಲು ಕೋರಿದ್ದಾರೆ. ಆದರೆ, ಮತಯಂತ್ರ ತಲುಪಿಸಬೇಕಿರುವ ಕೇಂದ್ರಕ್ಕೆ ಬೇಗನೆ ತಲುಪುವುದಕ್ಕಾಗಿ ರಸ್ತೆಯಲ್ಲಿ ಬಂದ ವಾಹನವೊಂದನ್ನು ಏರಿಕೊಂಡು ಅಧಿಕಾರಿ ಗಳು ಹೋಗಿದ್ದಾರೆ. ಮತಯಂತ್ರವನ್ನು ಆ ವಾಹನದಲ್ಲಿ ಇರಿಸಿದ್ದಾರೆ. ಆ ಕಾರಿನ ಮಾಲೀಕರು ಯಾರು ಎಂಬುದನ್ನು ಆ ಸಂದರ್ಭದಲ್ಲಿ ಅಧಿಕಾರಿಗಳು ಖಚಿತಪಡಿಸಿಕೊಂಡಿಲ್ಲ ಎಂದು ಆಯೋಗವು ಹೇಳಿದೆ.

ಕರೀಮ್‌ಗಂಜ್‌ನತ್ತ ಸಾಗುತ್ತಿದ್ದ ವಾಹನವು ವಾಹನದಟ್ಟಣೆಯಿಂದಾಗಿ ನಿಧಾನವಾಗಿತ್ತು. ಈ ಸಂದರ್ಭದಲ್ಲಿ ಸುಮಾರು 50 ಜನರಿದ್ದ ಗುಂಪು ವಾಹನ ವನ್ನು ಸುತ್ತುವರಿದು, ಕಲ್ಲು ತೂರಾಟ ನಡೆಸಿದೆ. ಇದು ಪಕ್ಕದ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೃಷ್ಣೇಂದು ಪಾಲ್‌ ಅವರ ಕಾರು. ತಿರುಚುವುದಕ್ಕಾಗಿಯೇ ಮತಯಂತ್ರವನ್ನು ಈ ಕಾರಿನಲ್ಲಿ ಒಯ್ಯಲಾಗುತ್ತಿದೆ ಎಂದು ಗುಂಪು ಆರೋಪಿಸಿದೆ. ದಾಖಲೆಗಳನ್ನು ಪರಿಶೀಲಿಸಿದಾಗ ವಾಹನವು ಕೃಷ್ಣೇಂದು ಅವರ ಪತ್ನಿ ಮಧುಮಿತಾ ಹೆಸರಿನಲ್ಲಿ ಇರುವುದು ಗೊತ್ತಾಗಿದೆ ಎಂದು ಅಧಿಕಾರಿ ಗಳು ಹೇಳಿದ್ದಾರೆ.

ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿದ ಸ್ಥಳೀಯರು ಅವರನ್ನು ಒತ್ತೆ ಇರಿಸಿಕೊಂಡರು. ಬಳಿಕ ಪೊಲೀಸರು ಸ್ಥಳಕ್ಕೆ ಧಾವಿಸಿ, ಅಧಿಕಾರಿಗಳನ್ನು ರಕ್ಷಿಸಿದರು.

ಮತಯಂತ್ರ– ಮರುಚಿಂತನೆ ಅಗತ್ಯ: ಪ್ರಿಯಾಂಕಾ

ಮತಯಂತ್ರ ಬಳಕೆಯ ಬಗ್ಗೆ ‘ಗಂಭೀರ ಮರುಚಿಂತನೆ’ ನಡೆಸಬೇಕಾದ ಅಗತ್ಯ ಇದೆ ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಹೇಳಿದ್ದಾರೆ.

‘ಇಂತಹ ದೂರುಗಳು ಬಂದಾಗ ಆಯೋಗವು ಕಟ್ಟಿನಿಟ್ಟಿನ ಕ್ರಮ ಕೈಗೊಳ್ಳಬೇಕು. ಮತಯಂತ್ರ ಬಳಕೆ ಬಗ್ಗೆ ಎಲ್ಲ ರಾಷ್ಟ್ರೀಯ ಪಕ್ಷಗಳು ಗಂಭೀರ ಮರು ಮೌಲ್ಯಮಾಪನ ನಡೆಸಬೇಕು’ ಎಂದಿದ್ದಾರೆ.

‘ಪ್ರತಿ ಬಾರಿ ಚುನಾವಣೆ ನಡೆದಾಗಲೂ ಖಾಸಗಿ ವಾಹನದಲ್ಲಿ ಮತಯಂತ್ರ ಸಿಗುತ್ತದೆ. ಎಲ್ಲ ಪ್ರಕರಣಗಳಲ್ಲಿಯೂ ಒಂದು ವಿಚಾರ ಸಾಮಾನ್ಯವಾಗಿರುವುದು ಆಶ್ಚರ್ಯಕರವೇನೂ ಅಲ್ಲ, ಮತಯಂತ್ರ ಸಿಕ್ಕ ವಾಹನವು ಬಿಜೆಪಿ ಅಭ್ಯರ್ಥಿಯದ್ದು ಅಥವಾ ಅವರ ಸಹವರ್ತಿಗಳದ್ದು ಆಗಿರುತ್ತದೆ’ ಎಂದು ಪ್ರಿಯಾಂಕಾ ಹೇಳಿದ್ದಾರೆ.

ಇಂತಹ ವಿಡಿಯೊಗಳು ಬಹಿರಂಗವಾದಾಗ, ಇದೊಂದು ಅಪವಾದವಷ್ಟೇ ಎಂದು ಆಯೋಗ ಹೇಳುತ್ತದೆ. ಬಿಜೆಪಿ ತನ್ನ ಮಾಧ್ಯಮ ಬಲವನ್ನು ಬಳಸಿಕೊಂಡು ವಿಡಿಯೊ ಬಹಿರಂಗ ಮಾಡಿದವರು ಬಾಯಿ ಮುಚ್ಚುವಂತೆ ಮಾಡುತ್ತದೆ.

ಇಂತಹ ಹಲವು ಪ್ರಕರಣಗಳು ವರದಿಯಾಗಿದ್ದರೂ ಈ ಬಗ್ಗೆ ಕೈಗೊಂಡಿರುವ ಕ್ರಮಗಳು ಅತ್ಯಲ್ಪ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT