ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಮಾಚಲ ಪ್ರದೇಶ: ಪಕ್ಷದ ಪರ ಪ್ರಚಾರಕ್ಕೆ ರಾಹುಲ್‌ ಗಾಂಧಿ ಗೈರು

48 ಗಂಟೆಗಳಲ್ಲಿ ಪ್ರಚಾರಕ್ಕೆ ತೆರೆ
Last Updated 8 ನವೆಂಬರ್ 2022, 19:32 IST
ಅಕ್ಷರ ಗಾತ್ರ

ನವದೆಹಲಿ: ಹಿಮಾಚಲ ಪ್ರದೇಶದಲ್ಲಿಮುಂದಿನ 48 ಗಂಟೆಗಳಲ್ಲಿ ಚುನಾವಣಾ ಪ್ರಚಾರಕ್ಕೆ ತೆರೆ ಬೀಳಲಿದೆ. ಆದರೆ ಇದೇ ಮೊದಲ ಬಾರಿಗೆ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಪರ ಪ್ರಚಾರದಿಂದ ಕಾಂಗ್ರೆಸ್ ನಾಯಕ ರಾಹುಲ್‌ ಗಾಂಧಿ ಅವರು ಹೊರಗುಳಿದಿದ್ದಾರೆ.

ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಮತ್ತೊಮ್ಮೆ ಸೋಲುವ ಭೀತಿ ಮತ್ತು ಸೋಲಿನ ಹೊಣೆಹೊತ್ತುಕೊಳ್ಳುವುದರಿಂದ ತಪ್ಪಿಸಿಕೊಳ್ಳುವ ಸಲುವಾಗಿ ರಾಹುಲ್‌ ಗಾಂಧಿ ಚುನಾವಣಾ ಪ್ರಚಾರದಿಂದ ದೂರ ಉಳಿದಿದ್ದಾರೆ ಎಂದು ಬಿಜೆಪಿ ವ್ಯಂಗ್ಯವಾಡಿದೆ. ಇದ್ಯಾವುದಕ್ಕೂ ಕಿವಿಗೊಡದ ರಾಹುಲ್‌, ತಮ್ಮ ಪಾಡಿಗೆ ತಾವು‘ಭಾರತ ಜೋಡೊ’ ಯಾತ್ರೆಯಲ್ಲಿ ನಿರತರಾಗಿದ್ದಾರೆ.

ಈ ಮಧ್ಯೆ ಬಿಜೆಪಿ ಆರೋಪವನ್ನು ಕಾಂಗ್ರೆಸ್‌ ಅಲ್ಲಗಳೆದಿದೆ. ‘ರಾಜ್ಯವನ್ನು ಪಕ್ಷ ಅನಾಥವಾಗಿ ಬಿಟ್ಟಿಲ್ಲ, ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರು ಸಕ್ರಿಯವಾಗಿ ಪ್ರಚಾರದಲ್ಲಿ ಭಾಗಿಯಾಗಿದ್ದಾರೆ. ಛತ್ತೀಸಗಡ ಮುಖ್ಯಮಂತ್ರಿ ಭೂಪೇಶ್ ಬಘೆಲ್, ರಾಜಸ್ಥಾನ ಮಾಜಿ ಉಪ ಮುಖ್ಯಮಂತ್ರಿ ಸಚಿನ್‌ ಪೈಲಟ್‌ ಸೇರಿ ಅನೇಕ ಹಿರಿಯ ನಾಯಕರು ಪ್ರಚಾರದಲ್ಲಿ ತೊಡಗಿದ್ದಾರೆ. ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕೊನೆಯ ಎರಡು ದಿನ ಪ್ರಚಾರದಲ್ಲಿ ಭಾಗಿಯಾಗಲಿದ್ದಾರೆ’ ಎಂದು ಹೇಳಿದೆ.

‘ಚುನಾವಣೆಗಳು ಬರುತ್ತವೆ, ಹೋಗುತ್ತವೆ. ಆದರೆ ಭಾರತ ಜೋಡೊದಂಥ ಕಾರ್ಯಕ್ರಮಗಳು ಜೀವಮಾನದಲ್ಲಿ ಒಮ್ಮೆ ಮಾತ್ರ ಬರುತ್ತವೆ’ ಎಂದು ರಾಹುಲ್‌ ಗೈರು ಹಾಜರಿಯನ್ನು ಕಾಂಗ್ರೆಸ್‌ ಮುಖಂಡರು ಸಮರ್ಥಿಸಿಕೊಂಡಿದ್ದಾರೆ.

ಹಿಮಾಚಲ ಪ್ರದೇಶಕ್ಕೆ ಖರ್ಗೆ:ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಮಂಗಳವಾರ ಶಿಮ್ಲಾಕ್ಕೆ ತೆರಳಿ, ಪಕ್ಷದ ಉನ್ನತ ನಾಯಕರೊಂದಿಗೆ ಸಭೆ ನಡೆಸಿದರು.ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹಲೋತ್‌ ಸಹ ಸಭೆಯಲ್ಲಿ ಭಾಗಿಯಾಗಿದ್ದು, ಚುನಾವಣೆಯಲ್ಲಿ ಪಕ್ಷದ ಕಾರ್ಯತಂತ್ರಗಳ ಬಗ್ಗೆ ಚರ್ಚೆ ನಡೆಸಲಾಯಿತು ಎಂದು ಮೂಲಗಳು ತಿಳಿಸಿವೆ.

‘ಕಾಂಗ್ರೆಸ್‌ ಪ್ರಣಾಳಿಕೆಯನ್ನು ಗಂಭೀರವಾಗಿ ಪರಿಗಣಿಸಬೇಡಿ’
‘ಹಿಮಾಚಲ ಪ್ರದೇಶದಲ್ಲಿ ರಾಜ್ಯಮಟ್ಟದಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು ಜಾರಿ ಮಾಡಲಾಗುತ್ತದೆ. ಪಕ್ಷವು ಚುನಾವಣಾ ಭರವಸೆಗಳನ್ನು ಖಂಡಿತ ಈಡೇರಿಸುತ್ತದೆ, ಬೇರೆ ಪಕ್ಷಗಳಂತಲ್ಲ’ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಮಂಗಳವಾರ ಹೇಳಿದರು.

ಪಿಟಿಐ ಸಂದರ್ಶನದಲ್ಲಿ ಮಾತನಾಡಿದ ಅವರು, ‘ ಬಿಜೆಪಿ ಹಳೆಯ ಪಿಂಚಣಿ ವ್ಯವಸ್ಥೆಯನ್ನು ಕೂಲಂಕುಷವಾಗಿ ಪರಿಶೀಲಿಸಿ ಈ ಸಂಬಂಧಿತ ಸಮಸ್ಯೆಯನ್ನು ಪರಿಹರಿಸಲಿದೆ. ಹಿಮಾಚಲ ಪ್ರದೇಶದ ಜನರು ಕಾಂಗ್ರೆಸ್‌ ನೀಡಿರುವ ಭರವಸೆಗಳನ್ನು ಗಂಭೀರವಾಗಿ ತೆಗೆದುಕೊಳ್ಳಬೇಕಿಲ್ಲ’ ಎಂದು ಹೇಳಿದರು.

ಬಿಜೆಪಿ ಸೇರಿದ ಕಾಂಗ್ರೆಸ್‌ನ 26 ನಾಯಕರು: ಚುನಾವಣೆ ಸಮೀ‍ಪಿಸುತ್ತಿದ್ದಂತೆಯೇ ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್‌ಗೆ ಆಘಾತ ಉಂಟಾಗಿದೆ. ಪ್ರದೇಶ ಕಾಂಗ್ರೆಸ್‌ ಸಮಿತಿಯ ಮಾಜಿ ಕಾರ್ಯದರ್ಶಿ ಸೇರಿ ಒಟ್ಟು 26 ಮಂದಿ ನಾಯಕರು ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರ್ಪಡೆ ಆಗಿದ್ದಾರೆ.

‘ಡಬಲ್‌ ಎಂಜಿನ್‌’ ಬರೀ ಬಡಾಯಿ’
ಅಹಮದಾಬಾದ್‌:
ಗುಜರಾತ್ ಸರ್ಕಾರವು ದೆಹಲಿಯಿಂದ ಕಾರ್ಯನಿರ್ವಹಿಸುತ್ತಿದೆ. ಹೀಗಾಗಿಯೇ ಕಳೆದ ಆರು ವರ್ಷಗಳಲ್ಲಿ ರಾಜ್ಯವು ಮೂವರು ಮುಖ್ಯಮಂತ್ರಿಗಳನ್ನು ಕಂಡಿದೆ ಎಂದು ಕಾಂಗ್ರೆಸ್‌ ಹಿರಿಯ ನಾಯಕ ಪಿ.ಚಿದಂಬರಂ ಆರೋಪಿಸಿದರು. ಇದೇ ವೇಳೆ ‘ಡಬಲ್‌ ಎಂಜಿನ್‌’ ಸರ್ಕಾರ ಎಂಬುದು ಬರೀ ಬಡಾಯಿ ಅಷ್ಟೇ ಎಂದು ಲೇವಡಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘135 ಮಂದಿಯನ್ನು ಬಲಿ ಪಡೆದ ಗುಜರಾತ್‌ ಮೊರ್ಬಿ ತೂಗು ಸೇತುವೆ ಕುಸಿತ ದುರಂತಕ್ಕೆ ಯಾರೊಬ್ಬರೂ ಕ್ಷಮೆ ಯಾಚಿಸಿಲ್ಲ ಅಥವಾ ಘಟನೆಯ ಹೊಣೆ ಹೊತ್ತು ರಾಜೀನಾಮೆ ಘೋಷಿಸಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT