ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಲಸ್ಟರ್‌ ವಿ.ವಿ ಸ್ಥಾಪನೆ: ಬಿಜೆಪಿ ಸದಸ್ಯರಿಂದಲೇ ಆಕ್ಷೇಪ

Last Updated 25 ಸೆಪ್ಟೆಂಬರ್ 2020, 22:05 IST
ಅಕ್ಷರ ಗಾತ್ರ

ಬೆಂಗಳೂರು: ಮೂರು ಹೊಸ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸುವ ಉದ್ದೇಶ ಹೊಂದಿರುವ ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ಹಾಗೂ ಕೆಲವು ಇತರ ಕಾನೂನು ತಿದ್ದುಪಡಿ ಮಸೂದೆಗೆ ಬಿಜೆಪಿ ಸದಸ್ಯರಿಂದಲೇ ತೀವ್ರ ಆಕ್ಷೇಪ ವ್ಯಕ್ತವಾಯಿತು.

ಬೆಂಗಳೂರು ವಿಜ್ಞಾನ ಕಾಲೇಜನ್ನು ನೃಪತುಂಗ ವಿಶ್ವವಿದ್ಯಾಲಯವನ್ನಾಗಿ, ಮಹಾರಾಣಿ ಕಾಲೇಜನ್ನು ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯವನ್ನಾಗಿ ಹಾಗೂ ಮಂಡ್ಯ ಸರ್ಕಾರಿ ಕಾಲೇಜನ್ನು ಮಂಡ್ಯ ವಿಶ್ವವಿದ್ಯಾಲಯವನ್ನಾಗಿ ಪರಿವರ್ತಿಸುವ ಉದ್ದೇಶವನ್ನು ಈ ಮಸೂದೆ ಹೊಂದಿದೆ ಎಂದು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಪ್ರಸ್ತಾಪಿಸಿದರು.

ಕಾಂಗ್ರೆಸ್‌ನ ರಾಮಲಿಂಗಾ ರೆಡ್ಡಿ, ’ವಿಜ್ಞಾನ ಕಾಲೇಜನ್ನಷ್ಟೇ ವಿಶ್ವವಿದ್ಯಾಲಯವನ್ನಾಗಿ ಮಾಡುವುದು ಸರಿಯಲ್ಲ. ಸರ್ಕಾರಿ ಕಲಾ ಕಾಲೇಜು ಹಾಗೂ ಆರ್‌.ಸಿ.ಕಾಲೇಜನ್ನು ಸೇರಿಸಿ ವಿವಿ ಸ್ಥಾಪನೆ ಮಾಡಬೇಕು‘ ಎಂದರು.

ಕಾಂಗ್ರೆಸ್‌ನ ಕೃಷ್ಣ ಬೈರೇಗೌಡ, ’ವಿಶ್ವವಿದ್ಯಾಲಯಗಳ ಸ್ಥಾಪನೆಗೆ ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ಒಂದು ಸಲ ₹50 ಕೋಟಿ ಅನುದಾನ ನೀಡುತ್ತದೆ. ಈ ಕಾರಣಕ್ಕೆ ಈ ಮಸೂದೆ ತರಲಾಗಿದೆ. ವಿವಿಗಳ ಸ್ಥಾಪನೆಗೆ ನೂರಾರು ಕೋಟಿ ಬೇಕು. ಮೂಲಸೌಕರ್ಯ ಕಲ್ಪಿಸಬೇಕು. ₹50 ಕೋಟಿ ಆಸೆಗಾಗಿ ವಿಶ್ವವಿದ್ಯಾಲಯ ಸ್ಥಾಪಿಸುವುದು ಸರಿಯಲ್ಲ‘ ಎಂದು ಅಭಿಪ್ರಾಯಪಟ್ಟರು.

’ಬೆಂಗಳೂರಿನಲ್ಲಿ ಸದ್ಯ ಮೂರು ಸರ್ಕಾರಿ ವಿಶ್ವವಿದ್ಯಾಲಯಗಳಿವೆ. ಇನ್ನೆರಡು ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಿದರೆ ಸರ್ಕಾರಕ್ಕೆ ಮತ್ತಷ್ಟು ಆರ್ಥಿಕ ಹೊರೆಯಾಗಲಿದೆ‘ ಎಂದರು.

ಬಿಜೆಪಿಯ ವೀರಣ್ಣ ಚರಂತಿಮಠ, ’ಈಗ ಹೊಸ ಶಿಕ್ಷಣ ನೀತಿ ಬಂದಿದೆ. ಬದಲಾವಣೆಯ ಕಾಲದಲ್ಲಿದ್ದೇವೆ. ರೂಸಾ ಯೋಜನೆಯಡಿ ₹50 ಕೋಟಿ ಅನುದಾನ ನೀಡುವುದಾಗಿ ಯುಜಿಸಿ ಎರಡು ವರ್ಷಗಳ ಹಿಂದೆ ಹೇಳಿತ್ತು. ₹50 ಕೋಟಿ ಸಿಗುತ್ತದೆ ಎಂಬ ಕಾರಣಕ್ಕೆ ವಿವಿ ಸ್ಥಾಪಿಸುವುದು ಬೇಡ. ಇರುವ ವಿಶ್ವವಿದ್ಯಾಲಯಗಳಲ್ಲೇ ಶೇ 59ರಷ್ಟು ಹುದ್ದೆಗಳು ಖಾಲಿ ಇವೆ‘ ಎಂದರು.

ಬಿಜೆಪಿಯ ಅರವಿಂದ ಲಿಂಬಾವಳಿ, ’ಬೆಂಗಳೂರಿನ ಮೂರು ಸರ್ಕಾರಿ ವಿಶ್ವವಿದ್ಯಾಲಯಗಳಿಗೆ ಮೂಲಸೌಕರ್ಯ ಕಲ್ಪಿಸಲು ಸಾಧ್ಯವಾಗಿಲ್ಲ. ಈಗ ಮತ್ತೆರಡು ವಿಶ್ವವಿದ್ಯಾಲಯ ಸ್ಥಾಪಿಸುವುದು ಸರಿಯಲ್ಲ‘ ಎಂದರು.

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ’ವಿಶ್ವವಿದ್ಯಾಲಯಗಳ ಸ್ಥಾಪಿಸಿದರೆ ಅನಗತ್ಯ ವೆಚ್ಚವಾಗುತ್ತದೆ. ಗುಣಮಟ್ಟದ ಶಿಕ್ಷಣ ಸಿಗುವುದಿಲ್ಲ. ಈ ಮಸೂದೆಯನ್ನು ವಾಪಸ್‌ ಪಡೆಯಿರಿ‘ ಎಂದು ಸಲಹೆ ನೀಡಿದರು.

ಜೆ.ಸಿ.ಮಾಧುಸ್ವಾಮಿ, ’ಹೊಸ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಲು ನಿಮ್ಮ ಕಾಲದಲ್ಲೇ ವಿಶೇಷಾಧಿಕಾರಿಗಳನ್ನು ನೇಮಿಸಲಾಗಿತ್ತು‘ ಎಂದು ನೆನಪಿಸಿದರು. ’ನಾವು ನೇಮಕ ಮಾಡಿದ್ದೇವೆ ಎಂಬ ಕಾರಣಕ್ಕೆ ಮಸೂದೆಗೆ ಒಪ್ಪಿಗೆ ನೀಡಬೇಕು ಎಂದೇನಿಲ್ಲ‘ ಎಂದು ಸಿದ್ದರಾಮಯ್ಯ ತಿರುಗೇಟು ನೀಡಿದರು.

ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ’ಉನ್ನತ ಶಿಕ್ಷಣ ಸಚಿವರು ಈಗ ಸದನದಲ್ಲಿ ಇಲ್ಲ. ಮಸೂದೆ ಬಗ್ಗೆ ಈಗಲೇ ತೀರ್ಮಾನ ತೆಗೆದುಕೊಳ್ಳುವುದು ಬೇಡ‘ ಎಂದು ಸಲಹೆ ನೀಡಿದರು. ಅದಕ್ಕೆ ಸದಸ್ಯರು ಒಪ್ಪಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT