ಶುಕ್ರವಾರ, ಮಾರ್ಚ್ 31, 2023
22 °C
ಹಣ ಅಕ್ರಮ ವರ್ಗಾವಣೆ ಪ್ರಕರಣ

ಐಷಾರಾಮಿ ಜೀವನ ಶೈಲಿಗಾಗಿ ದೇಣಿಗೆ ಹಣ ಖರ್ಚು: ರಾಣಾ ವಿರುದ್ಧ ಇ.ಡಿ. ವಾದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಕೊಳೆಗೇರಿ ನಿವಾಸಿಗಳಿಗಾಗಿ, ಕೋವಿಡ್‌ ಸಂತ್ರಸ್ತರಿಗಾಗಿ ಹಾಗೂ ಅಸ್ಸಾಂನಲ್ಲಿ ಕೆಲವು ಕೆಲಸಗಳನ್ನು ಮಾಡುವುದಕ್ಕಾಗಿ ಪತ್ರಕರ್ತೆ ರಾಣಾ ಆಯ್ಯೂಬ್‌ ಅವರು ದೇಣಿಗೆ ಸಂಗ್ರಹ ಅಭಿಯಾನ ನಡೆಸಿದ್ದಾರೆ. ಹೀಗೆ ಸಂಗ್ರಹ ಮಾಡಿದ ಹಣವನ್ನು ತಮ್ಮ ವೈಯಕ್ತಿಕ ಸಂತೋಷಕ್ಕಾಗಿ, ಐಷಾರಾಮಿ ಜೀವನ ಶೈಲಿ ನಡೆಸುವುದಕ್ಕಾಗಿ’ ಬಳಸಿಕೊಂಡಿದ್ದಾರೆ ಎಂದು ಜಾರಿ ನಿರ್ದೇಶನಾಲಯವು (ಇ.ಡಿ) ಮಂಗಳವಾರ ಸುಪ್ರೀಂ ಕೋರ್ಟ್‌ನಲ್ಲಿ ವಾದಿಸಿದೆ.

ಹಣ ಅಕ್ರಮ ವರ್ಗಾವಣೆ ಕಾಯ್ದೆ (ಪಿಎಂಎಲ್‌ಎ) ಪ್ರಕರಣ ಸಂಬಂಧ ಗಾಜಿಯಾಬಾದ್‌ ನ್ಯಾಯಾಲಯವು ರಾಣಾ ಆಯ್ಯೂಬ್‌ ಅವರಿಗೆ ನೀಡಿರುವ ಸಮನ್ಸ್‌ ಅನ್ನು ಪ್ರಶ್ನಿಸಿ ಪತ್ರಕರ್ತೆ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ವಿ. ರಾಮಸುಬ್ರಮಣಿಯನ್‌ ಹಾಗೂ ಜೆ.ಬಿ. ಪಾರ್ದೀವಾಲಾ ಅವರಿದ್ದ ಪೀಠವು ನಡೆಸಿತು. ಅರ್ಜಿಯ ಕುರಿತ ತೀರ್ಪನ್ನು ನ್ಯಾಯಾಲಯವು ಕಾಯ್ದಿರಿಸಿದೆ.

ಇ.ಡಿ ಪರವಾಗಿ ಸಾಲಿಸಿಟರಿ ಜನರಲ್‌ ತುಷಾರ್‌ ಮೆಹ್ತಾ ಅವರು ವಾದಿಸಿ, ‘ಸುಮಾರು ಒಂದು ಕೋಟಿಯಷ್ಟು ಹಣವನ್ನು ರಾಣಾ ಆಯ್ಯೂಬ್‌ ಅವರು ಸಂಗ್ರಹಿಸಿದ್ದಾರೆ. ಇದರಲ್ಲಿ ₹ 50 ಲಕ್ಷವನ್ನು ನಿಶ್ಚಿತ ಠೇವಣಿ ಮಾಡಿಸಿದ್ದಾರೆ. ಆಯ್ಯೂಬ್‌ ದೇಣಿಗೆ ಸಂಗ್ರಹಣೆಯ ಮೊದಲ ಹಂತ ಪೂರ್ಣಗೊಂಡ ಬಳಿಕವೂ ಹಣದ ಹರಿವು ನಿಲ್ಲಲಿಲ್ಲ’ ಎಂದರು.

‘ಹೀಗೆ ನಿರಂತರವಾಗಿ ಬರುತ್ತಿದ್ದ ಹಣವನ್ನು ರಾಣಾ ಆಯ್ಯೂಬ್‌ ಅವರು ಐಷಾರಾಮಿ ಜೀವನ ನಡೆಸಲು ಬಳಸಿಕೊಂಡಿದ್ದಾರೆ. ತಮ್ಮ ಹಣವು ಎಲ್ಲಿ ಹೋಗುತ್ತಿದೆ ಎಂದು ತಿಳಿಯದೇ ಜನರು ಅವರಿಗೆ ದೇಣಿಗೆ ನೀಡಿದ್ದಾರೆ’ ಎಂದರು.

‘ಹಣ ಖರ್ಚಾಗಿರುವುದಕ್ಕೆ ನಕಲಿ ರಶೀದಿಗಳನ್ನು ಸೃಷ್ಟಿಸಲಾಗಿದೆ. ದಿನಸಿ ಖರೀದಿಯೂ ಇದರಲ್ಲಿ ಸೇರಿದೆ. ಜೊತೆಗೆ ಐಷಾರಾಮಿ ವಸ್ತುಗಳನ್ನು ಖರೀದಿಸಿದ್ದಾರೆ’ ಎಂದರು.

ಎಲ್ಲಿ ವಿಚಾರಣೆ?: ವಾದ–ಪ್ರತಿವಾದ

‘ಮುಂಬೈನಲ್ಲಿರುವ ರಾಣಾ ಅವರ ಬ್ಯಾಂಕ್‌ನ ಖಾತೆಯಲ್ಲಿ ಹಣ ಸಿಕ್ಕಿರುವ ಕುರಿತು ಇ.ಡಿ ವಾದಿಸುತ್ತಿದೆ. ಖಾತೆಯು ಮುಂಬೈನಲ್ಲಿದೆ ಮತ್ತು ರಾಣಾ ಆಯ್ಯೂಬ್‌ ಅವರೂ ಮುಂಬೈನಲ್ಲಿಯೇ ನೆಲೆಸಿದ್ದಾರೆ. ಆದರೆ, ಗಾಜಿಯಾಬಾ‌ದ್‌ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಲಾಗುತ್ತಿದೆ. ಇದಕ್ಕೆ ಕಾನೂನಿನಲ್ಲಿ ಅವಕಾಶವಿಲ್ಲ’ ಎಂದು ರಾಣಾ ಆಯ್ಯೂಬ್‌ ಪರ ವಕೀಲೆ ವೃಂದಾ ಗ್ರೋವರ್‌ ವಾದಿಸಿದರು.

‘ಈ ರೀತಿ ಮಾಡುವ ಮೂಲಕ ರಾಣಾ ಆಯೂಬ್‌ ಅವರ ವೈಯಕ್ತಿಕ ಸ್ವಾತಂತ್ರವನ್ನು ಹತ್ತಿಕ್ಕಲಾಗುತ್ತಿದೆ. ರಾಣಾ ಅವರು ಯಾವತ್ತೂ ಕಾನೂನು ಪ್ರಕ್ರಿಯೆಗೆ ಬೆನ್ನು ತೋರಿಸಿದವರಲ್ಲ’ ಎಂದು ವಾದಿಸಿದರು.

‘ಗಾಜಿಯಾಬಾದ್‌ನ ಹಲವು ಮಂದಿ ಈ ದೇಣಿಗೆ ಅಭಿಯಾನದಲ್ಲಿ ಹಣ ನೀಡಿದ್ದಾರೆ. ಆದ್ದರಿಂದ ಗಾಜಿಯಾಬಾದ್‌ ನ್ಯಾಯಾಲಯದಲ್ಲಿ ಇ.ಡಿ ಪ್ರಕರಣ ದಾಖಲಿಸಿದೆ’ ಎಂದು ಇ.ಡಿ. ಪರ ವಕೀಲ ಸಾಲಿಸಿಟರಿ ಜನರಲ್‌ ತುಷಾರ್‌ ಮೆಹ್ತಾ ವಾದಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು