ಭಾನುವಾರ, ಜನವರಿ 16, 2022
28 °C

ಹೈದರ್‌ ಪೋರಾ ಎನ್‌ಕೌಂಟರ್ ಪ್ರಕರಣ: ನ್ಯಾಯಾಂಗ ತನಿಖೆಗೆ ಆಜಾದ್ ಒತ್ತಾಯ

ಪಿಟಿಐ Updated:

ಅಕ್ಷರ ಗಾತ್ರ : | |

ಶ್ರೀನಗರ: ಹೈದರ್‌ ಪೋರಾ ಎನ್‌ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ತನಿಖೆ ನಡೆಸುವಂತೆ ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಗುಲಾಮ್ ನಬಿ ಆಜಾದ್ ಒತ್ತಾಯಿಸಿದ್ದಾರೆ.

ನವೆಂಬರ್ 16ರಂದು ನಡೆದ ಎನ್‌ಕೌಂಟರ್‌ನಲ್ಲಿ ಇಬ್ಬರು ಭಯೋತ್ಪಾದಕರು ಮತ್ತು ಇಬ್ಬರು ಭಯೋತ್ಪಾದಕರ ಸಹಚರರನ್ನು ಕೊಂದಿರುವುದಾಗಿ ಪೊಲೀಸರು ಹೇಳಿದ್ದಾರೆ. ಆದರೆ, ಮೃತಪಟ್ಟ ಇಬ್ಬರು ಸರ್ಕಾರಿ ಅಧಿಕಾರಿಗಳು ಅಮಾಯಕರೆಂಬುದು ಕುಟುಂಬದ ವಾದವಾಗಿದೆ. ಹೀಗಾಗಿ, ಮ್ಯಾಜಿಸ್ಟ್ರೇಟ್ ತನಿಖೆಗೆ ನಿನ್ನೆ ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಆದೇಶಿಸಿದ್ದರು.

‘ಅಮಾಯಕ ಜನರನ್ನು ಏಕೆ ಗುಂಡಿಕ್ಕಿ ಹತ್ಯೆ ಮಾಡಲಾಯಿತು ಎಂಬ ಸತ್ಯ ತಿಳಿಯಲು ಹೈದರ್ ಪೋರಾ ಎನ್‌ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ತನಿಖೆಗೆ ನಾನು ಒತ್ತಾಯಿಸುತ್ತೇನೆ. ಇದು ಪೊಲೀಸರಿಗೆ ಸಂಬಂಧಿಸಿದ ಪ್ರಕರಣವೇ ಹೊರತು ಸೇನೆಯದ್ದಲ್ಲ. ಹೀಗಾಗಿ, ಹೈಕೋರ್ಟ್ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ತನಿಖೆ ನಡೆಯಬೇಕು’ಎಂದು ಅವರು ಒತ್ತಾಯಿಸಿದ್ದಾರೆ.

ಪೊಲೀಸರ ಮೇಲಿನ ಪ್ರಕರಣದ ಬಗ್ಗೆ ಪೊಲೀಸರೇ ಹೇಗೆ ತನಿಖೆ ನಡೆಸಲು ಸಾಧ್ಯ ಎಂದು ಅವರು ಪ್ರಶ್ನಿಸಿದ್ದಾರೆ.

ಪೊಲೀಸರು, ಸೇನೆ ಮತ್ತು ಭದ್ರತಾ ಪಡೆ ಬಗ್ಗೆ ಗೌರವವಿದೆ. ಆ ರೀತಿಯ ಘಟನೆಗಳು ನಡೆಯದಂತೆ ಎಚ್ಚರವಹಿಸಬೇಕಿದೆ. ಅದರಲ್ಲೂ ಶ್ರೀನಗರದಂತಹ ನಗರದಲ್ಲಿ ನಡೆಯಲೇಬಾರದು ಎಂದು ಆಜಾದ್ ಹೇಳಿದ್ದಾರೆ.

ಕಳೆದ ವರ್ಷ ನಡೆದ ಶೋಪಿಯಾನ್ ಎನ್‌ಕೌಂಟರ್ ಪ್ರಕರಣದ ತನಿಖೆ ಬಗ್ಗೆ ಪ್ರಸ್ತಾಪಿಸಿದ ಅವರು, ಇಲ್ಲಿ ಸಂತ್ರಸ್ತರಿಗೆ ಸೇನೆ ನ್ಯಾಯ ಒದಗಿಸಿತ್ತು ಎಂದು ಹೇಳಿದ್ದಾರೆ.

ತಾವು ಮುಖ್ಯಮಂತ್ರಿಯಾಗಿದ್ದಾಗ ನಡೆದಿದ್ದ ನಕಲಿ ಎನ್‌ಕೌಂಟರ್‌ ಪ್ರಕರಣದಲ್ಲಿ ಸಾವಿಗೀಡಾದ ಮೂವರು ಕೂಲಿ ಕಾರ್ಮಿಕರಿಗೆ ನ್ಯಾಯ ಒದಗಿಸಿದ್ದೆವು. ಪೊಲೀಸರಿಗೆ 13 ವರ್ಷ ಶಿಕ್ಷೆಯಾಗಿತ್ತು ಎಂದು ಅವರು ಹೇಳಿದ್ದಾರೆ.

ಇದು ಪೊಲೀಸರು ನ್ಯಾಯ ಒದಗಿಸುವ ಸಮಯ ಎಂದಿದ್ದಾರೆ.

‘ಕಳೆದ 20 ದಿನಗಳಿಂದ 6–8 ಹತ್ಯೆಗಳು ನಡೆದಿವೆ. ಈ ಬಗ್ಗೆ ತನಿಖೆ ನಡೆಯಬೇಕು. ಇದರ ಹಿಂದೆ ಯಾರಿದ್ದಾರೋ ಅವರನ್ನು ಬಂಧಿಸಬೇಕು’ಎಂದು ಆಜಾದ್ ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು