ಮಂಗಳವಾರ, ಆಗಸ್ಟ್ 16, 2022
30 °C
ಬಾಂಗ್ಲಾ ಜತೆಗೆ ಏಳು ಒಪ್ಪಂದ

ಮೋದಿ–ಹಸೀನಾ ಸಭೆ: ದ್ವಿಪಕ್ಷೀಯ ಸಂಬಂಧ ಗಟ್ಟಿಗೊಳಿಸಲು ಹಲವು ಕ್ರಮ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಬಾಂಗ್ಲಾ ದೇಶದ ಜತೆಗಿನ ಸಂಬಂಧವನ್ನು ಭಾರತವು ಇನ್ನಷ್ಟು ಗಟ್ಟಿಗೊಳಿಸಿದೆ. ದಕ್ಷಿಣ ಏಷ್ಯಾದಲ್ಲಿ ಚೀನಾವು ಪ್ರಾಬಲ್ಯ ಹೆಚ್ಚಿಸಲು ಹವಣಿಸುತ್ತಿರುವ ಈ ಹೊತ್ತಿನಲ್ಲಿ ಇದು ಮಹತ್ವದ ನಡೆಯಾಗಿದೆ. ಎರಡೂ ದೇಶಗಳ ನಡುವಣ ಸಹಕಾರ ಬಲಪಡಿಸುವುದಕ್ಕಾಗಿ ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿ ಏಳು ಒಪ್ಪಂದಗಳಿಗೆ ಸಹಿ ಹಾಕಲಾಗಿದೆ. 1965ರ ಭಾರತ–ಪಾಕಿಸ್ತಾನ ಯುದ್ಧದ ಸಂದರ್ಭದಲ್ಲಿ ಸ್ಥಗಿತಗೊಳಿಸಲಾದ ಭಾರತ–ಬಾಂಗ್ಲಾ ರೈಲು ಮಾರ್ಗಕ್ಕೆ ಪುನಶ್ಚೇತನ ನೀಡಲಾಗಿದೆ.

ಭಾರತದ ‘ನೆರೆಹೊರೆ ಮೊದಲು’ ನೀತಿಯ ‘ಪ್ರಮುಖ ಸ್ತಂಭ’ ಬಾಂಗ್ಲಾದೇಶ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಬಾಂಗ್ಲಾ ದೇಶದ ಪ್ರಧಾನಿ ಶೇಖ್ ಹಸೀನಾ ಜತೆಗೆ ಗುರುವಾರ ನಡೆಸಿದ ವರ್ಚುವಲ್‌ ಶೃಂಗ ಸಭೆಯಲ್ಲಿ ಅವರು ಮಾತನಾಡಿದರು. ಭಾರತವು ಬಾಂಗ್ಲಾದ ‍‘ನಿಜವಾದ ಗೆಳೆಯ’ ಎಂದು ಹಸೀನಾ ಬಣ್ಣಿಸಿದರು. 

ಭಯೋತ್ಪಾದನೆಯ ಭೀತಿ, ಕೋವಿಡ್‌ ಒಡ್ಡಿರುವ ಸವಾಲುಗಳು, ಭಾರತ–ಬಾಂಗ್ಲಾ ಗಡಿ ನಿರ್ವಹಣೆ, ಪ್ರಾದೇಶಿಕ ಸಂಪರ್ಕ, ವ್ಯಾಪಾರ ವೃದ್ಧಿಗೆ ಸಂಬಂಧಿಸಿದ ವಿಚಾರಗಳನ್ನು ಇಬ್ಬರು ನಾಯಕರು ಚರ್ಚಿಸಿದರು. 

ಮನು, ಮುಹುರಿ, ಖೋವೈ, ಗುಮ್ಟಿ, ಧಾರ್ಲ ಮತ್ತು ದೂಧ್‌ಕುಮರ್‌ ನದಿಗಳ ನೀರು ಹಂಚಿಕೆಯ ಮಧ್ಯಂತರ ಒಪ್ಪಂದಕ್ಕೆ ಸಂಬಂಧಿಸಿದ ಚೌಕಟ್ಟನ್ನು ಆದಷ್ಟು ಬೇಗನೆ ರೂಪಿಸಬೇಕು ಎಂಬುದನ್ನು ನಾಯಕರಿಬ್ಬರೂ ಒಪ್ಪಿ ಕೊಂಡರು. ದ್ವಿಪಕ್ಷೀಯವಾದ ಸಮಗ್ರ ಆರ್ಥಿಕ ಸಹಭಾಗಿತ್ವ ಒಪ್ಪಂದದ ಬಗೆಗಿನ ಜಂಟಿ ಅಧ್ಯಯನವನ್ನು ತ್ವರಿತವಾಗಿ ಪೂರ್ಣಗೊಳಿಸಲು ನಿರ್ದೇಶನ ನೀಡಿದರು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. 

ತೀಸ್ತಾ ನದಿ ನೀರು ಹಂಚಿಕೆಯ ಮಧ್ಯಂತರ ಒಪ್ಪಂದವನ್ನು ಎರಡೂ ಸರ್ಕಾರಗಳು 2011ರಲ್ಲಿ ಒಪ್ಪಿಕೊಂಡಿ ರುವ ರೀತಿಯಲ್ಲಿ ಜಾರಿಗೆ ತರಬೇಕು ಎಂದು ಹಸೀನಾ ಒತ್ತಾಯಿಸಿದರು. ಭಾರತವು ಇದಕ್ಕೆ ಬದ್ಧವಾಗಿದೆ ಎಂದು ಮೋದಿ ಅವರು ಭರವಸೆ ನೀಡಿದರು. 

ಬಾಕಿ ಇರುವ ವಲಯಗಳಲ್ಲಿ ಗಡಿ ಬೇಲಿ ನಿರ್ಮಾಣವನ್ನು ಶೀಘ್ರವೇ ಪೂರ್ಣಗೊಳಿಸುವುದಕ್ಕೂ ಒಪ್ಪಿಗೆ ನೀಡಲಾಗಿದೆ. ತ್ರಿಪುರಾದಿಂದ ಇದು ಆರಂಭವಾಗಲಿದೆ. ಸಂಯೋಜಿತ ಗಡಿ ನಿರ್ವಹಣಾ ಯೋಜನೆಯ ಪೂರ್ಣ ಜಾರಿಯ ಬಗ್ಗೆಯೂ ಮಾತುಕತೆ ನಡೆಸಲಾಗಿದೆ. 

‘ವಿಜಯ ದಿನ’ದ ಮರುದಿನವೇ ಈ ಸಭೆ ನಡೆದಿರುವುದು ಮಹತ್ವಪೂರ್ಣ ಎಂದು ಮೋದಿ ಹೇಳಿದರು. 

ಪಾಕಿಸ್ತಾನ ವಿರುದ್ಧದ ಯುದ್ಧದಲ್ಲಿ 1971ರ ಡಿಸೆಂಬರ್‌ 16ರಂದು ಗೆಲುವು ಪಡೆದುದರ ಸ್ಮರಣೆಗೆ ಭಾರತವು ಬುಧವಾರ ‘ವಿಜಯ ದಿನ’ ಆಚರಿಸಿತ್ತು. ಆ ದಿನ, ಪಾಕಿಸ್ತಾನದ 93 ಸಾವಿರ ಸೈನಿಕರು ಭಾರತದ ಸೇನೆ ಮತ್ತು ಬಾಂಗ್ಲಾ ಹೋರಾಟದ ‘ಮುಕ್ತಿಬಾಹಿನಿ’ ಪಡೆಗೆ ಶರಣಾಗಿದ್ದರು. ಈ ಯುದ್ಧದಿಂದಾಗಿ ಬಾಂಗ್ಲಾ ದೇಶದ ಉದಯವಾಗಿತ್ತು. ಬಾಂಗ್ಲಾ ಕೂಡ ಈ ದಿನವನ್ನು ‘ವಿಜಯ ದಿವಸ’ವಾಗಿ ಆಚರಿಸುತ್ತಿದೆ. 

ಬಾಂಗ್ಲಾ ದೇಶದ ಉದಯದಲ್ಲಿ ಭಾರತದ ಪಾತ್ರವನ್ನು ಹಸೀನಾ ನೆನಪಿಸಿಕೊಂಡರು. ತಮ್ಮ ತಾಯಿ, ಸಹೋದರ ಮತ್ತು ಸಹೋದರಿಯನ್ನು ಪಾಕಿಸ್ತಾನದ ಸೇನೆಯ ಕೈಯಿಂದ ಮೇಜರ್‌ ಅಶೋಕ್‌ ತಾರಾ ಅವರು ರಕ್ಷಿಸಿದ ಘಟನೆಯನ್ನೂ ಅವರು ಸ್ಮರಿಸಿದರು. 

‘ಮುಕ್ತ ಸಂಚಾರ’ ಒಪ್ಪಂದ
ಪ್ರಾದೇಶಿಕ ಸಂಪರ್ಕವೇ ದ್ವಿಪಕ್ಷೀಯ ಶೃಂಗಸಭೆಯ ಚರ್ಚೆಯ ಮುಖ್ಯ ವಿಷಯವಾಗಿತ್ತು. ಬಿಬಿಐಎನ್‌ (ಬಾಂಗ್ಲಾದೇಶ, ಭೂತಾನ್‌, ಭಾರತ ಮತ್ತು ನೇಪಾಳ) ಮೋಟಾರು ವಾಹನ ಒಪ್ಪಂದವನ್ನು ಆದಷ್ಟು ಬೇಗನೆ ಕಾರ್ಯರೂಪಕ್ಕೆ ತರಬೇಕು ಎಂಬುದನ್ನು ಮೋದಿ ಮತ್ತು ಹಸೀನಾ ಒಪ್ಪಿಕೊಂಡರು. ಈ ಒಪ್ಪಂದಕ್ಕೆ ಭೂತಾನ್‌ ಸೇರ್ಪಡೆಯನ್ನು ಮುಂದಿನ ಹಂತಕ್ಕೆ ಇರಿಸಿಕೊಳ್ಳಬಹುದು ಎಂಬ ವಿಚಾರದಲ್ಲಿ ಮೋದಿ ಮತ್ತು ಹಸೀನಾ ಒಮ್ಮತಕ್ಕೆ ಬಂದಿದ್ದಾರೆ. 

ನಾಲ್ಕು ದೇಶಗಳ ನಡುವೆ ಜನಸಂಚಾರ ಮತ್ತು ಸರಕು ಸಾಗಾಟದ ತೊಡಕು ಮುಕ್ತಗೊಳಿಸುವ ಉದ್ದೇಶದ ಈ ಒಪ್ಪಂದಕ್ಕೆ ಸಹಿ ಹಾಕಲು ಭೂತಾನ್‌ ಹಿಂದೇಟು ಹಾಕುತ್ತಿದೆ. ಹಾಗಾಗಿ, ಈ ಒಪ್ಪಂದ ಜಾರಿಗೆ ಬರುವುದು ತಡವಾಗುತ್ತಿದೆ. 

ರೈಲು ಸಂಪರ್ಕ ಮರುಸ್ಥಾಪನೆ
ಚಿಲಾಹಾಟಿ–ಹಲ್ದಿಬಾಡಿ ಮಾರ್ಗವು 1965ರವರೆಗೆ ಭಾರತ–ಬಾಂಗ್ಲಾ ನಡುವಣ ಪ್ರಮುಖ ರೈಲು ಸಂಪ‍ರ್ಕವಾಗಿತ್ತು. ಕೋಲ್ಕತ್ತ–ಸಿಲಿಗುರಿ ಬ್ರಾಡ್‌ಗೇಜ್‌ ಮಾರ್ಗದ ಭಾಗವಾಗಿತ್ತು. ಆದರೆ, 1965ರ ಯುದ್ಧದಿಂದಾಗಿ ಈ ಮಾರ್ಗವನ್ನು ಸ್ಥಗಿತಗೊಳಿಸಲಾಗಿತ್ತು. ಈಗ ಅದನ್ನು ಮರುಸ್ಥಾಪಿಸಲಾಗಿದೆ. ಸದ್ಯಕ್ಕೆ ಸರಕು ಸಾಗಾಟಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಎರಡೂ ಭಾಗಗಳಲ್ಲಿ ಅಗತ್ಯ ಮೂಲಸೌಕರ್ಯ ನಿರ್ಮಾಣದ ಬಳಿಕ ಜನಸಂಚಾರಕ್ಕೆ ಅವಕಾಶ ದೊರೆಯಲಿದೆ. 1965ರಲ್ಲಿ ಸ್ಥಗಿತಗೊಳಿಸಲಾದ ಇನ್ನೂ ನಾಲ್ಕು ರೈಲು ಮಾರ್ಗಗಳನ್ನು ಈಗಾಗಲೇ ಪುನರಾರಂಭಿಸಲಾಗಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು