ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಲಗಾಂವ್‌: ಆರ್‌ಎಸ್‌ಎಸ್‌ನಿಂದ ಬಂಜಾರ ಮಹಾಕುಂಭ

ಮಹಾರಾಷ್ಟ್ರದ ಜಲಗಾಂವ್‌ ಜಿಲ್ಲೆಯ ಗೋದ್ರಿ ಗ್ರಾಮದಲ್ಲಿ ನಡೆಯಲಿರುವ ಮಹಾಕುಂಭ
Last Updated 25 ಜನವರಿ 2023, 15:48 IST
ಅಕ್ಷರ ಗಾತ್ರ

ನವದೆಹಲಿ: 2024ರ ಲೋಕಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಮಹಾರಾಷ್ಟ್ರದ ಜಲಗಾಂವ್‌ ಜಿಲ್ಲೆಯಲ್ಲಿ ಅಲೆಮಾರಿ ಜಾತಿಗಳಿಗಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘವು (ಆರ್‌ಎಸ್‌ಎಸ್‌) ಬುಧವಾರದಿಂದ ಆರು ದಿನಗಳ ‘ಬಂಜಾರ ಮಹಾಕುಂಭ’ವನ್ನು ಆಯೋಜಿಸಿದ್ದು, ಸುಮಾರು 10 ಲಕ್ಷ ಜನ ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು ಆರ್‌ಎಸ್‌ಎಸ್‌ನ ಪದಾಧಿಕಾರಿಯೊಬ್ಬರು ಹೇಳಿದ್ದಾರೆ.

ಜಲಗಾಂವ್‌ ಜಿಲ್ಲೆಯ ಗೋದ್ರಿ ಗ್ರಾಮದ 500 ಎಕರೆ ಭೂಮಿಯಲ್ಲಿ ‘ಬಂಜಾರ ಮಹಾಕುಂಭ’ ನಡೆಯಲಿದ್ದು, ಆರ್‌ಎಸ್‌ಎಸ್‌ನ ಹಿರಿಯ ಸದಸ್ಯ ಸುರೇಶ್ ‘ಭೈಯ್ಯಾಜಿ’ ಜೋಷಿ, ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ ಶಿಂದೆ, ಉಪಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಅವರು ಮಹಾಕುಂಭದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದೂ ಅವರು ತಿಳಿಸಿದ್ದಾರೆ.

‘ಸಮಾಜ ವಿರೋಧಿ ಶಕ್ತಿಗಳು ಬಂಜಾರರ ಇತಿಹಾಸ, ಸಂಸ್ಕೃತಿ, ಧರ್ಮ ಮತ್ತು ಸಂಪ್ರದಾಯಗಳ ಬಗ್ಗೆ ಅಪಪ್ರಚಾರ ಮತ್ತು ಸುಳ್ಳುಗಳನ್ನು ಹರಡಲು ನಿರಂತರವಾಗಿ ಪ್ರಯತ್ನಿಸುತ್ತಿವೆ. ಅವುಗಳನ್ನು ಪರಿಶೀಲಿಸಿ ಮತ್ತು ಅವರು ಹಿಂದೂ ಸಮಾಜದ ಅವಿಭಾಜ್ಯ ಅಂಗವಾಗಿ ಉಳಿಯುವುದನ್ನು ಖಚಿತಪಡಿಸಿಕೊಳ್ಳಲು ಈ ಮಹಾಕುಂಭವನ್ನು ಆಯೋಜಿಸಲಾಗಿದೆ. ಕ್ರೈಸ್ತ ಮಿಷನರಿಗಳಿಂದ ಬಂಜಾರ ಸಮುದಾಯದಲ್ಲಿ ಮತಾಂತರ ಪ್ರಕರಣಗಳು ಹೆಚ್ಚುತ್ತಿರುವ ಕುರಿತು ಜಾಗೃತಿ ಕಾರ್ಯಕ್ರಮ ನಡೆಸಲಾಗುವುದು’ ಎಂದು ಪದಾಧಿಕಾರಿ ಅವರು ಹೇಳಿದ್ದಾರೆ.

‘ಕರ್ನಾಟಕ, ಮಧ್ಯಪ್ರದೇಶ ಹಾಗೂ ತೆಲಂಗಾಣದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಈ ಅಭಿಯಾನವು ಮಹತ್ವ ಪಡೆದುಕೊಂಡಿದೆ ಎಂದೂ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

‘ಗೋರ್ ಬಂಜಾರ, ಲಂಬಾಣಿ, ನಾಯ್ಕಡ ಹೀಗೆ ವಿವಿಧ ಹೆಸರಿನಿಂದ ಕರೆಯಲಾಗುವ ಅಲೆಮಾರಿ ಜಾತಿಗಳ ಸುಮಾರು 10 ಲಕ್ಷಕ್ಕೂ ಹೆಚ್ಚು ಜನರು ‘ಮಹಾಕುಂಭ’ದಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ ಎನ್ನಲಾಗಿದೆ. ಮಹಾರಾಷ್ಟ್ರ, ಗೋವಾದಲ್ಲಿರುವ ಈ ಜಾತಿಗಳಿಗೆ ಸೇರಿದ ಜನರೂ ಭಾಗವಹಿಸುವರು’ ಎಂದು ಸಂಘದ ಹಿರಿಯ ಸದಸ್ಯರೊಬ್ಬರು ಮಾಹಿತಿ ನೀಡಿದ್ದಾರೆ.

ಅಲೆಮಾರಿ ಜಾತಿಗಳ ಸಾಧು–ಸಂತರು, ಧಾರ್ಮಿಕ ಮುಖಂಡರು, ಸಾಮಾಜಿಕವಾಗಿ ಮಾನ್ಯತೆ ಗಳಿಸಿರುವ ಗಣ್ಯವ್ಯಕ್ತಿಗಳು ಈಗಾಗಲೇ ಹಲವಾರು ತಾಂಡಾಗಳಿಗೆ ಭೇಟಿ ನೀಡಿ ‘ಮಹಾಕುಂಭ’ಕ್ಕೆ ಆಹ್ವಾನ ನೀಡಿದ್ದಾರೆ. ‘ಬಂಜಾರ ಮಹಾಕುಂಭ’ಕ್ಕೆ ಆಗಮಿಸುವವರಿಗೆ ವಸತಿ ವ್ಯವಸ್ಥೆಯನ್ನೂ ಮಾಡಲಾಗಿದೆ.

‌ಆರ್‌ಎಸ್‌ಎಸ್‌ನಿಂದ ತನ್ನ ಸೈದ್ಧಾಂತಿಕ ಮೂಲ ಹೊಂದಿರುವ ಬಿಜೆಪಿಯು ಕರ್ನಾಟಕ ಮತ್ತು ಮಧ್ಯಪ್ರದೇಶದಲ್ಲಿ ಅಧಿಕಾರದಲ್ಲಿದ್ದು, ತೆಲಂಗಾಣದಲ್ಲಿ ಪರ್ಯಾಯಶಕ್ತಿಯಾಗಿ ಹೊರಹೊಮ್ಮಲು ಶ್ರಮಿಸುತ್ತಿದೆ. 2024ರ ಲೋಕಸಭಾ ಚುನಾವಣೆಯ ದೃಷ್ಟಿಯಿಂದ ಕೇಂದ್ರದಲ್ಲಿ ಆಡಳಿತ ನಡೆಸುವ ಪಕ್ಷಕ್ಕೆ ಈ ಮೂರು ರಾಜ್ಯಗಳ ಫಲಿತಾಂಶವು ನಿರ್ಣಾಯಕವಾಗಲಿದೆ ಎಂದು ವಿಶ್ಲೇಷಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT